ಮಂಗಳವಾರ, ಸೆಪ್ಟೆಂಬರ್ 28, 2021
21 °C
ಮಡಿಕೇರಿ: ಸ್ಪಷ್ಟವಾಗಿ ಗೋಚರಿಸದ ಕಂಕಣ ಸೂರ್ಯಗ್ರಹಣ

ಮಡಿಕೇರಿಯಲ್ಲಿ ಮೋಡ: ಸೂರ್ಯ ಗ್ರಹಣ ವೀಕ್ಷಿಸಲಾಗದೆ ಖಗೋಳಾಸಕ್ತರ ನಿರಾಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣದಿಂದ ವರ್ಷದ ಮೊದಲ ಕಂಕಣ ಸೂರ್ಯ ಗ್ರಹಣ ಸ್ಪಷ್ಟವಾಗಿ ಗೋಚರಿಸಲಿಲ್ಲ. ಇದರಿಂದ ಖಗೋಳಾಸಕ್ತರು ಹಾಗೂ ವಿದ್ಯಾರ್ಥಿಗಳು ನಿರಾಸೆ ಅನುಭವಿಸಿದರು.

ಆದರೆ, ಮಡಿಕೇರಿಯಲ್ಲಿ ಬೆಳಿಗ್ಗೆ 11ರಿಂದ ಮಧ್ಯಾಹ್ನ 12ರ ಒಳಗೆ ಮೋಡಗಳ ಮರೆಯಲ್ಲಿ ಕಂಕಣ ಸೂರ್ಯ ಗ್ರಹಣ ಗೋಚರಿಸಿದ್ದು ವಿಶೇಷ. ಆದರೆ, ಗ್ರಹಣ ನೋಡಲು ಯಾರೂ ಮನೆಯಿಂದ ಹೊರಬರಲಿಲ್ಲ. ಗ್ರಹಣದ ಪರಿಣಾಮವು ವ್ಯಾಪಾರೋದ್ಯಮ ಮೇಲೂ ತಟ್ಟಿತು. ಕೊರೊನಾ ಹಾಗೂ ಗ್ರಹಣವೆಂದು ಯಾರೂ ಮನೆಯಿಂದ ಆಚೆ ಬರುವ ಮನಸ್ಸು ಮಾಡಲಿಲ್ಲ. 

ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ, ಚಂದ್ರನ ನೆರಳು ಭೂಮಿಯ ಮೇಲೆ ಬಿದ್ದು ಸೂರ್ಯ ಹೊಳೆಯುವ ಬಳೆಯಂತೆ ಕಾಣುವ ಸೌರ ವಿದ್ಯಮಾನವನ್ನು ಕೆಲವು ಭಾಗದಲ್ಲಿ ಜನರು ಕಣ್ತುಂಬಿಕೊಂಡು ಸಂತಸಪಟ್ಟರು. 

ತಲಕಾವೇರಿ, ಭಾಗಮಂಡಲ, ಓಂಕಾರೇಶ್ವರ, ಇಗ್ಗುತ್ತಪ್ಪ ದೇವಾಲಯದಲ್ಲಿ ಬೆಳಿಗ್ಗೆ ಪೂಜೆ ಸಲ್ಲಿಸಿ ಬಾಗಿಲು ಮುಚ್ಚಲಾಯಿತು. ಭಕ್ತರಿಗೆ ಪ್ರವೇಶ ನಿರಾಕರಿಸಲಾಗಿತ್ತು. ತಲಕಾವೇರಿ, ಭಾಗಮಂಡಲ ಕ್ಷೇತ್ರ ಹೊರತುಪಡಿಸಿ ಜಿಲ್ಲೆಯ ಇತರ ದೇವಾಲಯಗಳನ್ನು ಸಂಜೆ 5 ಗಂಟೆಯ ನಂತರ ತೆರೆದು ಶುದ್ಧ ಮಾಡಿದರು.

ಕಂಕಣ ಸೂರ್ಯ ಗ್ರಹಣ ಹಿನ್ನೆಲೆ ಹೆಚ್ಚಿನ ಸಂಖ್ಯೆಯ ಜನರು ನಗರ ಪ್ರದೇಶದಲ್ಲಿ ಕಂಡುಬಂದಿಲ್ಲ. ಇದರಿಂದ ವ್ಯಾಪಾರ ಕ್ಷೀಣಿಸಿತ್ತು. ಹೆಚ್ಚಿನ ವಾಹನ ಸಂಚಾರ ಕೂಡ ಇರಲಿಲ್ಲ. ತರಕಾರಿ ಮಾರುಕಟ್ಟೆ, ದಿನಸಿ ಅಂಗಡಿ, ಪ್ರವಾಸಿ ತಾಣಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು.

ಕಳೆದ ವರ್ಷ ಡಿಸೆಂಬರ್‌ 26ರಂದೂ ದೇಶದಲ್ಲಿ ಸೂರ್ಯ ಗ್ರಹಣ ಸಂಭವಿಸಿತ್ತು. ಕುಟ್ಟದಲ್ಲಿ ಸಂಪೂರ್ಣ ಸೂರ್ಯ ಗ್ರಹಣ ಗೋಚರಿಸಲಿದೆ ಎಂಬ ಕಾರಣಕ್ಕೆ ದೇಶದ ಗಮನ ಸೆಳೆದಿತ್ತು. ಆದರೆ, ಬೆಳಿಗ್ಗೆ ಮೋಡಗಳ ಕಣ್ಣಾಮುಚ್ಚಾಲೆಯಿಂದ ಗ್ರಹಣ ಸ್ಪಷ್ಟವಾಗಿ ಕಾಣಿಸಿರಲಿಲ್ಲ. ಅಂದು ಮಡಿಕೇರಿಯಲ್ಲಿ ಸೂರ್ಯ ಗ್ರಹಣ ಗೋಚರಿಸಿತ್ತು.

ಅಲ್ಲಲ್ಲಿ ಮಳೆ:

ಗ್ರಹಣ ಮೋಕ್ಷವಾದ ಮೇಲೆ ಜಿಲ್ಲೆಯ ಹಲವೆಡೆ ಮಳೆ ಸುರಿಯಿತು. ಮಡಿಕೇರಿ, ನಾಪೋಕ್ಲು, ಗೋಣಿಕೊಪ್ಪಲು, ಕುಶಾಲನಗರ, ಸುಂಟಿಕೊಪ್ಪ, ಸೋಮವಾರಪೇಟೆ, ಶನಿವಾರಸಂತೆ ಭಾಗದಲ್ಲಿ ಮಳೆ ಸುರಿಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು