ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜದ ಹಿತದೃಷ್ಟಿಯಿಂದ ಲಾಕ್‌ಡೌನ್‌ ಸಹಿಸಿಕೊಳ್ಳಿ: ಸೋಮಣ್ಣ

ವಿಡಿಯೊ ಕಾನ್ಫರೆನ್ಸ್‌ನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್‌ ಹೇಳಿಕೆ
Last Updated 30 ಮಾರ್ಚ್ 2020, 17:00 IST
ಅಕ್ಷರ ಗಾತ್ರ

ಮೈಸೂರು: ‘ಪ್ರಸಕ್ತ ಸನ್ನಿವೇಶವನ್ನು ಗಂಭೀರವಾಗಿ ಪರಿಗಣಿಸದೆ, ಲಾಕ್‌ಡೌನ್‌ ಉದ್ದೇಶವನ್ನೇ ಗಾಳಿಗೆ ತೂರಿ ಓಡಾಡುತ್ತಿರುವವರ ವಿರುದ್ಧವಷ್ಟೇ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ತಿ.ನರಸೀಪುರ ಶಾಸಕ ಅಶ್ವಿನ್‌ಕುಮಾರ್‌ಗೆ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮೈಸೂರು ಜಿಲ್ಲಾ ಪಂಚಾಯಿತಿಯಲ್ಲಿ ಸೋಮವಾರ ಜಿಲ್ಲೆಯ ಎಲ್ಲ ತಾಲ್ಲೂಕು ಆಡಳಿತದ ಜತೆ ನಡೆಸಿದ ವಿಡಿಯೊ ಕಾನ್ಫರೆನ್ಸ್‌ನಲ್ಲಿ, ಶಾಸಕ ಅಶ್ವಿನ್‌ಕುಮಾರ್‌ ‘ಪೊಲೀಸರು ಬೈಕ್‌ನಲ್ಲಿ ಸಂಚರಿಸುತ್ತಿರುವವರನ್ನು ಹಿಡಿದು ಕಾನೂನು ಕ್ರಮ ಜರುಗಿಸುತ್ತಿದ್ದಾರೆ’ ಎಂದು ಸಚಿವರಿಗೆ ತಿಳಿಸುತ್ತಿದ್ದಂತೆ, ಎಸ್‌ಪಿ ಮೇಲಿನಂತೆ ಉತ್ತರಿಸಿದರು.

‘ಸಮಾಜದ ಹಿತದೃಷ್ಟಿಯಿಂದ ಕೆಲವು ದಿನ ಈ ಕ್ರಮವನ್ನು ಸಹಿಸಿಕೊಳ್ಳಲೇಬೇಕಿದೆ’ ಎಂದು ರಿಷ್ಯಂತ್ ಹೇಳಿದ್ದಕ್ಕೆ, ಸಚಿವರು ಸಹ ಸಮ್ಮತಿ ವ್ಯಕ್ತಪಡಿಸಿದರು ಎಂಬುದು ತಿಳಿದು ಬಂದಿದೆ.

ನಂಜನಗೂಡು ಶಾಸಕ ಹರ್ಷವರ್ಧನ್‌, ‘ನಂಜನಗೂಡಿನಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೃಷಿ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಒದಗಿಸಿಕೊಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿ’ ಎಂದು ಸಚಿವ ವಿ.ಸೋಮಣ್ಣ ಅವರನ್ನು ಕೋರಿದರು. ತಕ್ಷಣವೇ ಬದಿಯಲ್ಲಿದ್ದ ಜಿಲ್ಲಾಧಿಕಾರಿ ರೈತರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಎಚ್‌.ಡಿ.ಕೋಟೆ ಶಾಸಕ ಸಿ.ಅನಿಲ್‌ಕುಮಾರ್, ‘ಕ್ಷೇತ್ರಕ್ಕೆ ಹೊಂದಿಕೊಂಡಂತಿರುವ ನೆರೆಯ ಕೇರಳದ ಸಂಪರ್ಕವಿರುವ ಗಡಿ ಭಾಗವನ್ನು ಸಂಪೂರ್ಣ ಮುಚ್ಚುವ ಮೂಲಕ ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಿ’ ಎಂದು ಸಚಿವರಿಗೆ ಮನವಿ ಮಾಡಿದರು.

ಹುಣಸೂರು ಶಾಸಕ ಎಚ್‌.ಪಿ.ಮಂಜುನಾಥ್ ತಾಲ್ಲೂಕು ಆಡಳಿತ ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುತ್ತಿದೆ ಎಂದು ಸಚಿವರಿಗೆ ಮಾಹಿತಿ ನೀಡಿದರು. ಈ ನಾಲ್ವರು ಶಾಸಕರು ತಮ್ಮ ತಾಲ್ಲೂಕು ಆಡಳಿತದ ಜತೆಯಲ್ಲೇ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಭಾಗಿಯಾಗಿದ್ದರು.

ಶಾಸಕರಾದ ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್, ಕೆ.ಮಹದೇವ್, ಯತೀಂದ್ರ ಸಿದ್ದರಾಮಯ್ಯ, ಸಂಸದ ಪ್ರತಾಪ್ ಸಿಂಹ ಸಚಿವ ಸೋಮಣ್ಣ ಜತೆಯಲ್ಲೇ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT