ಬುಧವಾರ, ನವೆಂಬರ್ 20, 2019
26 °C
ಪೇರೂರು ಗ್ರಾಮದ ಸುತ್ತಮುತ್ತ ಜಲಸ್ಫೋಟದ ಆತಂಕ

ಭೂಮಿಯೊಳಗೆ ಜಲಪಾತ ಧುಮ್ಮಿಕ್ಕುವಂತೆ ಸದ್ದು: ಕೊಡಗಿನಲ್ಲಿ ಆತಂಕ!

Published:
Updated:
Prajavani

ಮಡಿಕೇರಿ: ಕೊಡಗಿನಲ್ಲಿ ನಾಲ್ಕೈದು ದಿನಗಳಿಂದ ಮಳೆ ಬಿಡುವು ನೀಡಿದ್ದರೂ ಜಿಲ್ಲೆಯ ಜನರಿಗೆ ಆತಂಕ ಮಾತ್ರ ತಪ್ಪಿಲ್ಲ. ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೇರೂರು ಗ್ರಾಮದ ಪಾಡಿ ಇಗ್ಗುತ್ತಪ್ಪ ಬೆಟ್ಟದಲ್ಲಿ ನಿಗೂಢ ಶಬ್ದ ಕೇಳಿಬರುತ್ತಿದ್ದು ಜನರು ಭೀತಿಗೊಂಡಿದ್ದಾರೆ.

ಬೆಟ್ಟದಲ್ಲಿ ನೀರು ಹರಿಯುವಂತೆ ಶಬ್ದ ಕೇಳಿಸುತ್ತಿದ್ದು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ರಾತ್ರಿವೇಳೆ ಭೂಮಿಯ ಒಳಗೆ ಜಲಪಾತ ಧುಮ್ಮಿಕ್ಕುವಂತೆ ಶಬ್ದವಾಗುತ್ತಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. 

ಬೆಟ್ಟದ ತಪ್ಪಲಿನಲ್ಲಿ 20ಕ್ಕೂ ಹೆಚ್ಚು ಕುಟುಂಬಗಳು ನೆಲೆಸಿವೆ. ಒಂದುವೇಳೆ ಭೂಕುಸಿತದಂಥ ದುರಂತ ಸಂಭವಿಸಿದರೆ ಸಾಕಷ್ಟು ಅನಾಹುತವಾಗುವ ಸಾಧ್ಯತೆಯಿದ್ದು ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.

2018ರ ಆಗಸ್ಟ್‌ ನಲ್ಲೂ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಜಲಸ್ಫೋಟ ಸಂಭವಿಸಿತ್ತು. ಈ ವರ್ಷವೂ ನೆರೆ ಹಾಗೂ ಭೂಕುಸಿತದಿಂದ ಜೀವಹಾನಿ, ಆಸ್ತಿಪಾಸ್ತಿ ನಷ್ಟವಾಗಿದೆ. ಈ ಕಹಿ ಘಟನೆ ಮಾಸುವ ಮುನ್ನವೇ ಭೂಮಿ ಒಳಗೆ ವಿಚಿತ್ರ ಶಬ್ದ ಕೇಳಿಸುತ್ತಿದ್ದು ಜಲಸ್ಫೋಟದ ಆತಂಕ ಎದುರಾಗಿದೆ.

ಅ.27ರಂದು ಭಾಗಮಂಡಲ ಹಾಗೂ ಅಯ್ಯಂಗೇರಿ ಗ್ರಾಮದಲ್ಲೂ ಇದೇ ರೀತಿಯ ಶಬ್ದ ಕೇಳಿಬಂದಿತ್ತು. ರಾತ್ರೋರಾತ್ರಿ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದರು. ಈಗ ಪೇರೂರು ಸುತ್ತಮುತ್ತ ಶಬ್ದವಾಗುತ್ತಿದೆ.

ನಾಲ್ಕು ದಿನಗಳಿಂದ ಈ ರೀತಿಯ ಶಬ್ದ ಕೇಳಿಸುತ್ತಿದೆ. ಮಂಗಳವಾರ ಮಧ್ಯಾಹ್ನದ ಬಳಿಕ ಶಬ್ದ ಮತ್ತಷ್ಟು ಜೋರಾಗಿದೆ. ಕಳೆದ ವರ್ಷ ಮಡಿಕೇರಿ ಸುತ್ತಮುತ್ತ ಇದೇ ರೀತಿಯ ಶಬ್ದವಾಗಿತ್ತು. ನಂತರ, ಭೂಕುಸಿತದ ದುರಂತ ನಡೆದಿತ್ತು. ಹೀಗಾಗಿ, ಆತಂಕವಿದೆ. ಗ್ರಾಮಕ್ಕೆ ಭೂಮಿ ವಿಜ್ಞಾನಿಗಳು ಖುದ್ದು ಭೇಟಿ ನೀಡಿ ಪರಿಶೀಲಿಸಲಿ’ ಎಂದು ಗ್ರಾಮಸ್ಥರು ಕೋರಿದ್ದಾರೆ.

ಆತಂಕ ಬೇಡ: ಜಿಲ್ಲೆಯ ಬ್ರಹ್ಮಗಿರಿ ವ್ಯಾಪ್ತಿಯಲ್ಲಿ ವಾಡಿಕೆಗೂ ಮೀರಿ ಮಳೆ ಸುರಿದಿದ್ದು ಅಂತರ್ಜಲ ಹೆಚ್ಚಾಗಿದೆ. ಭೂಪದರದಲ್ಲಿ ನೀರು ಹರಿಯುತ್ತಿರುವ ಶಬ್ದ ಕೇಳಿಸುತ್ತಿದೆ. ನೀರಿನ ಹರಿವಿಗೆ ಅಡ್ಡಿಯಾದರೆ ಅದು ಪಥ ಬದಲಾವಣೆ ಮಾಡಲಿದೆ. ರಾತ್ರಿಯಲ್ಲಿ ಪ್ರಶಾಂತ ವಾತಾವರಣವಿರುವ ಕಾರಣಕ್ಕೆ ಶಬ್ದ ಇನ್ನಷ್ಟು ಜೋರಾಗಿ ಕೇಳಿಸಲಿದೆ. ಈ ಶಬ್ದದಿಂದ ಜನರು ಭಯಗೊಂಡಿರುವ ಸಾಧ್ಯತೆಯಿದೆ. ಇದು ಪ್ರಕೃತಿಯ ಸಹಜ ಪ್ರಕ್ರಿಯೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ’ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ವರದಿ ನೀಡಲು ಸೂಚನೆ: ಜಿಲ್ಲಾಧಿಕಾರಿ
‘ಗ್ರಾಮಸ್ಥರ ಮಾಹಿತಿ ಮೇರೆಗೆ ಕಂದಾಯ ಇಲಾಖೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಮಂಗಳವಾರ ಸಂಜೆಯೇ ಪೇರೂರು ಗ್ರಾಮಕ್ಕೆ ಭೇಟಿ ನೀಡಿದ್ದರು. ಅರಣ್ಯ ಪ್ರದೇಶದಲ್ಲಿ ಕಾಡಾನೆ ಹಾವಳಿಯಿದ್ದು ಶಬ್ದ ಬರುತ್ತಿರುವ ಸ್ಥಳ ತಲುಪಲು ಅಧಿಕಾರಿಗಳ ತಂಡಕ್ಕೆ ಸಾಧ್ಯವಾಗಿಲ್ಲ. ಬುಧವಾರ ಬೆಳಿಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ನೆರವು ಪಡೆದು ಸ್ಥಳಕ್ಕೆ ತೆರಳಿ ವರದಿ ನೀಡಲು ಸೂಚಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)