ಭಾನುವಾರ, ಡಿಸೆಂಬರ್ 15, 2019
25 °C

ಮಕ್ಕಳಿಗೆ ಶೌರ್ಯ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ‘ವಡೇರಹಟ್ಟಿ ಊರಿನ ಇಂದ್ರವೇಣಿ ಹಳ್ಳದಲ್ಲಿರುವ ದೇವಸ್ಥಾನಕ್ಕೆ ಮೇ ತಿಂಗಳಿನಲ್ಲಿ ಹೋಗಿದ್ದೆವು. ಹಳ್ಳದಲ್ಲಿ ನೀರು ಹರಿಯುತ್ತಿತ್ತು. ನಮ್ಮ ಜತೆಗಿದ್ದ ನವೀನ್‌ ಮತ್ತು ಮನೋಜ್‌ ಎಂಬ ಹುಡುಗರು ಅಚಾನಕ್ಕಾಗಿ ಹಳ್ಳಕ್ಕೆ ಬಿದ್ದರು. ಅವರ ಕೂಗಾಟ ನಮಗೆ ಕೇಳಿಸಿತು. ನಮಗೆ ಈಜು ಗೊತ್ತಿತ್ತು. ಹಳ್ಳಕ್ಕೆ ಹಾರಿ, ಕೊಚ್ಚಿಹೋಗುತ್ತಿದ್ದ ಅವರಿಬ್ಬರನ್ನು ರಕ್ಷಿಸಿದೆವು’

-ಬೆಳಗಾವಿಯ ಸಿದ್ದಪ್ಪ ಕೆಂಪಣ್ಣ ಹೊಸಟ್ಟಿ (14 ವರ್ಷ) ಮತ್ತು ಶಿವಾನಂದ ಹೊಸಟ್ಟಿ (10) ಅವರು ಹೀಗೆ ಹೇಳುವಾಗ ಮೊಗದಲ್ಲಿ ಆತ್ಮವಿಶ್ವಾಸ ಮಿನುಗುತ್ತಿತ್ತು.

ಹೀಗೆ ತಮ್ಮ ಜೀವದ ಹಂಗನ್ನು ತೊರೆದು ಮತ್ತೊಬ್ಬರ ಜೀವ ಉಳಿಸಿದ ಮಕ್ಕಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ನೀಡಿ ಬುಧವಾರ ಸನ್ಮಾನಿಸಿತು. ಕಬ್ಬನ್‌ ಉದ್ಯಾನದ ಬಾಲಭವನದಲ್ಲಿ ಆಯೋಜಿಸಿದ್ದ ‘ಮಕ್ಕಳ ದಿನಾಚರಣೆ’ ಸನ್ಮಾನಕ್ಕೆ ವೇದಿಕೆಯಾಯಿತು.

‘ಒಂದಿನ ನನ್ನ ಸ್ನೇಹಿತನ ಜತೆಗೂಡಿ ಶಾಲೆಯಿಂದ ಮನೆಗೆ ಹೋಗುತ್ತಿದ್ದೆ. ದಾರಿಯಲ್ಲಿ ಅಡಿಕೆ ಮರದಿಂದ ನಿರ್ಮಿಸಿದ ಸಂಕ ದಾಟಬೇಕಿತ್ತು. ಅದರಡಿ ಆಳವಾದ ಕಂದಕ ಇತ್ತು. ಸಂಕದ ಮೇಲೆ ಹೋಗುವಾಗ ಸ್ನೇಹಿತನ ಕಾಲು ಜಾರಿತು. ಅವನು ಇನ್ನೇನು ಬೀಳಬೇಕು ಎನ್ನುವಷ್ಟರಲ್ಲಿ, ಅವನ ಕಾಲನ್ನು ಬಿಗಿಯಾಗಿ ಹಿಡಿದುಕೊಂಡೆ. ಜೋರಾಗಿ ಕಿರುಚಿದೆ. ಹತ್ತಿರದ ಮನೆಯವರು ಬಂದು ನಮ್ಮಿಬ್ಬರನ್ನು ಸಂಕದಿಂದ ದಾಟಿಸಿದರು’ ಎಂದು ದಕ್ಷಿಣ ಕನ್ನಡ ಜಿಲ್ಲೆಯ 10 ವರ್ಷದ ಬಾಲಕ ಸುಜಯ್‌ ತನ್ನ ಸಾಹಸ ಕತೆ ಹೇಳಿದ.

‘2 ವರ್ಷದವನಾದ ನನ್ನ ತಮ್ಮ ಅಂಗಳದಲ್ಲಿ ಆಟವಾಡುತ್ತಿದ್ದ. ಹೋರಿಯೊಂದು ಏಕಾಏಕಿಯಾಗಿ ಬಂದು ತಿವಿಯಲು ಮುಂದಾಯಿತು. ಆ ಸಂದರ್ಭದಲ್ಲಿ ನಾನು ಹೆದರಲಿಲ್ಲ. ಹೋರಿಯನ್ನು ಓಡಿಸಿ, ತಮ್ಮನನ್ನು ಬದುಕಿಸಿಕೊಂಡೆ’ ಎಂದು 9 ವರ್ಷದ ಆರತಿ ಕಿರಣ್‌ ಸೇಠ್‌ ತಾನು ಸಾಹಸ ಮೆರೆದ ಪ್ರಸಂಗ ನೆನಪಿಸಿಕೊಂಡಳು.

ಪ್ರಶಸ್ತಿ ಪುರಸ್ಕೃತ ಮಕ್ಕಳು: ನಿಖಿಲ್‌ ದಯಾನಂದ (ಬೆಳಗಾವಿ), ಶಿವಾನಂದ ಹೊಸಟ್ಟಿ–ಸಿದ್ದಪ್ಪ ಕೆಂಪಣ್ಣ ಹೊಸಟ್ಟಿ (ಬೆಳಗಾವಿ), ಜೆ.ಪ್ರಮಿತ್ ರಾಜ್ (ದಕ್ಷಿಣ ಕನ್ನಡ), ಎಸ್.ಎಂ. ಹೇಮಂತ್(ಮೃತಪಟ್ಟಿದ್ದಾನೆ–ಕಾರವಾರ), ಆರತಿ ಕಿರಣ್ ಸೇಠ್‌ (ಉತ್ತರ ಕನ್ನಡ), ಎಸ್.ಎನ್.ಮೌರ್ಯ (ಮೈಸೂರು) ಮತ್ತು ಸುಜಯ್‌ (ದಕ್ಷಿಣ ಕನ್ನಡ). ಪ್ರಶಸ್ತಿಯು ತಲಾ ₹ 10 ಸಾವಿರ ಮತ್ತು ಸ್ಮರಣಿಕೆ ಒಳಗೊಂಡಿದೆ. 

ಮಕ್ಕಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ 4 ಸಂಸ್ಥೆಗಳು ಮತ್ತು ನಾಲ್ವರನ್ನು ಸನ್ಮಾನಿಸಲಾಯಿತು.

ಮಕ್ಕಳ ಕಲ್ಯಾಣ ಪ್ರಶಸ್ತಿ(ಸಂಸ್ಥೆಗಳು): ಸುರಭಿ ಟ್ರಸ್ಟ್‌ (ಬೆಂಗಳೂರು), ಚೆಶೈರ್ ಹೋಮ್ಸ್ ಇಂಡಿಯಾ (ಕೊಡಗು), ನಂದನ ಮಕ್ಕಳ ಧಾಮ (ಬೆಳಗಾವಿ), ಡಾನ್ ಬಾಸ್ಕೊ ಸೊಸೈಟಿ (ಕಲಬುರ್ಗಿ). ಈ ಪ್ರಶಸ್ತಿ ತಲಾ ₹ 1 ಲಕ್ಷ ಹೊಂದಿದೆ.

ಮಕ್ಕಳ ಕಲ್ಯಾಣ ಪ್ರಶಸ್ತಿ(ವೈಯಕ್ತಿಕ): ಅನ್ನಪೂರ್ಣ ವೆಂಕಟನಂಜಪ್ಪ (ತುಮಕೂರು), ಜಯಶ್ರೀ ಭಟ್ (ಉಡುಪಿ) ಜಿ. ಉಮೇಶ ಕಲಘಟಗಿ (ಬೆಳಗಾವಿ), ಎಚ್.ಸಿ. ರಾಘವೇಂದ್ರ (ಬಳ್ಳಾರಿ). ಈ ಪ್ರಶಸ್ತಿ ತಲಾ ₹ 25,000 ಒಳಗೊಂಡಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು