ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ವಿವಿಧೆಡೆ ಧಾರಾಕಾರ ಮಳೆ

Last Updated 23 ಸೆಪ್ಟೆಂಬರ್ 2019, 19:54 IST
ಅಕ್ಷರ ಗಾತ್ರ

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಸೋಮವಾರ ಬೆಳಿಗ್ಗೆ ಧಾರಾಕಾರ ಮಳೆ ಆಗಿದೆ. ಹಳ್ಳ–ಕೊಳ್ಳಗಳು ಭರ್ತಿಯಾಗಿವೆ. ಕೆಲವು ಕಡೆ ಬೆಳೆಗಳು ಜಲಾವೃತಗೊಂಡಿವೆ.

ಬಳ್ಳಾರಿ ತಾಲ್ಲೂಕಿನ ರೂಪನಗುಡಿ ಮತ್ತು ಮೋಕಾ ಹೋಬಳಿಯ 15ಕ್ಕೂ ಹೆಚ್ಚು ಗ್ರಾಮಗಳಲ್ಲಿ ಮಳೆಯಿಂದ 600ಕ್ಕೂ ಹೆಚ್ಚು ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ, ಮೆಣಸಿನಕಾಯಿ ಮತ್ತು ಹತ್ತಿ ಬೆಳೆ ನೀರಿನಿಂದ ಆವೃತವಾಗಿದೆ.

ಬೆಳಗಿನ ಜಾವ 3ರಿಂದ ಮುಂಜಾನೆ 7 ಗಂಟೆವರೆಗೆ ಜೋರು ಮಳೆ ಸುರಿದಿದ್ದು, ಕೆಲವೆಡೆ ಹಳ್ಳಗಳ ಸೇತುವೆಗಳು ಮುಳುಗಿದ್ದವು.

‘ಮಳೆ ನೀರು ಹೊಲದಲ್ಲಿ ನಿಂತಿದ್ದು, ನೀರು ಕಡಿಮೆಯಾದ ಬಳಿಕ ನಷ್ಟದ ಪ್ರಮಾಣ ಅಂದಾಜಿಸಬಹುದು’ ಎಂದು ತಹಶೀಲ್ದಾರ್ ನಾಗರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು. ಶಂಕರಬಂಡೆ ಮತ್ತು ಎತ್ತಿನಬೂದಿ
ಹಾಳ್‌ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಲ್ಲಿ ಬೆಳೆ ನಷ್ಟವಾಗಿದೆ.

ಬಯಲು ಸೀಮೆಯಲ್ಲಿ ಉತ್ತಮ ಮಳೆ: ತುಮಕೂರು ನಗರ ಹಾಗೂ ಜಿಲ್ಲೆಯ ವಿವಿಧ ಭಾಗಗಳಲ್ಲಿ ಉತ್ತಮ ಮಳೆ ಆಗಿದೆ. ಭಾನುವಾರ ರಾತ್ರಿಯಿಂದಲೇ ಆರಂಭವಾದ ಮಳೆ ಸೋಮವಾರ ಬಿರುಸು ಪಡೆಯಿತು.

ತುಮಕೂರಿನಲ್ಲಿ ಸುರಿದ ಧಾರಾಕಾರ ಮಳೆಗೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಶೆಟ್ಟಿಹಳ್ಳಿ ಕೆಳಸೇತುವೆಯಲ್ಲಿ ನೀರು ತುಂಬಿ ಆ ಮಾರ್ಗದ ಸಂಚಾರ ಬಂದ್ ಆಗಿದೆ. ತುರುವೇಕೆರೆ, ಚಿಕ್ಕನಾಯಕನಹಳ್ಳಿ, ಗುಬ್ಬಿ, ತಿಪಟೂರು, ಮಧುಗಿರಿ ತಾಲ್ಲೂಕಿನ ಕೆಲವು ಭಾಗಗಳಲ್ಲಿ ಮಳೆ ಆಗಿದೆ. ತೋಟಗಳಲ್ಲಿ ಹೆಚ್ಚಿನ ಪ್ರಮಾಣದ ನೀರು ನಿಂತಿದೆ.

ಚಿಕ್ಕಬಳ್ಳಾಪುರ ನಗರ ಸೇರಿದಂತೆ ಕೆಲ ತಾಲ್ಲೂಕುಗಳಲ್ಲಿ ಸೋಮವಾರ ಸಂಜೆ ಗುಡುಗು ಸಹಿತ ಜೋರು ಮಳೆ ಸುರಿದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಮಳೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಚಿಕ್ಕಬಳ್ಳಾಪುರ, ಚಿಂತಾಮಣಿ, ಶಿಡ್ಲಘಟ್ಟ ನಗರಗಳಲ್ಲಿ ಹೆದ್ದಾರಿ, ರೈಲ್ವೆ ಕೆಳ ಸೇತುವೆಗಳಲ್ಲಿ ಮಳೆ ನೀರು ನಿಂತಿದ್ದರಿಂದ ವಾಹನ ಸವಾರರು, ಪಾದಚಾರಿಗಳು ಮನೆ ಸೇರಲು ಪರದಾಡಿದರು. ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಕೆಲವು ಹಳ್ಳಿಗಳಲ್ಲಿ ಉತ್ತಮ ಮಳೆ ಆಗಿದೆ.

ಬಿರುಸಿನ ಮಳೆ: ಕಲಬುರ್ಗಿ ಮತ್ತು ಬೀದರ್‌ ಜಿಲ್ಲೆಯ ವಿವಿಧೆಡೆ ಸೋಮವಾರ ಉತ್ತಮ ಮಳೆ ಸುರಿ
ಯಿತು. ಚಿಂಚೋಳಿಯಲ್ಲಿ ಅತ್ಯಧಿಕ, 64.5 ಮಿ. ಮೀ ಹಾಗೂ ಸೇಡಂ, ಚಿತ್ತಾಪುರ, ಕಾಳಗಿ, ಆಳಂದ, ವಾಡಿ,
ಶಹಾಬಾದ್‌ ಹಾಗೂ ಬೀದರ್ ಜಿಲ್ಲೆಯ ಚಿಟಗುಪ್ಪಾ, ಹುಮನಾಬಾದ್‌ನಲ್ಲಿ ಬಿರುಸಿನ ಮಳೆಯಾಯಿತು.

ಉತ್ತಮ ಮಳೆ: ಮೈಸೂರು ಹಾಗೂ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಭಾನುವಾರ ರಾತ್ರಿಯಿಡೀ
ಮಳೆಯಾಗಿದೆ. ಚನ್ನರಾಯಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವೆಡೆ ಸೋಮವಾರವೂ ಉತ್ತಮ ಮಳೆಯಾಗಿದೆ.

ಚಾಮರಾಜನಗರದಲ್ಲಿ ಒಂದು ಗಂಟೆಗಳ ಕಾಲ ಧಾರಾಕಾರವಾಗಿ ಮಳೆ ಸುರಿಯಿತು.

ಕಾಫಿನಾಡಿನ ವಿವಿಧೆಡೆ ಮಳೆ: ಚಿಕ್ಕಮಗಳೂರಿನ ವಿವಿಧೆಡೆ ಸೋಮವಾರ ವರ್ಷಧಾರೆ ಸುರಿದಿದೆ. ಮಲೆನಾಡು ಮತ್ತು ಬಯಲುಸೀಮೆ ಭಾಗದ ಕೆಲವೆಡೆಗಳಲ್ಲಿ ಉತ್ತಮ ಮಳೆಯಾಗಿದೆ. ನಗರದಲ್ಲಿ ನಸುಕಿನಿಂದಲೇ ಮಳೆ ಇತ್ತು. ಸಂಜೆವರೆಗೂ ಆಗಾಗ್ಗೆ ಜೋರಾಗಿ ಸುರಿಯಿತು. ಗಿರಿಶ್ರೇಣಿ ಭಾಗ, ಅಲ್ಲಂಪುರ, ಕೈಮರ, ಅಲ್ದೂರು ಭಾಗಗಳಲ್ಲಿ ಮಳೆಯಾಗಿದೆ.

ಬಯಲುಸೀಮೆಯ ಕಡೂರು, ಬೀರೂರು ಭಾಗದಲ್ಲೂ ಹದಮಳೆಯಾಗಿದೆ. ಮಲೆನಾಡು ಭಾಗದ ಮೂಡಿಗೆರೆ, ಎನ್‌.ಆರ್‌.ಪುರ ಭಾಗದಲ್ಲೂ ಮಳೆ ಸುರಿದಿದೆ.

ದಾವಣಗೆರೆಯಲ್ಲಿ ಮಳೆ: ಬರಪೀಡಿತ ಜಗಳೂರು ತಾಲ್ಲೂಕಿನಲ್ಲಿ ಸೋಮವಾರ ಸಂಜೆ ಸುಮಾರು ಒಂದು ಗಂಟೆ ಕಾಲ ಹದ ಮಳೆಯಾಗಿದೆ.

ದಾವಣಗೆರೆ ನಗರದಲ್ಲೂ ರಾತ್ರಿ ಕೆಲ ಕಾಲ ಗುಡುಗು ಸಹಿತ ಉತ್ತಮವಾಗಿ ಮಳೆ ಸುರಿಯಿತು. ಶಿಕಾರಿಪುರ, ಚಿತ್ರದುರ್ಗ ಹಾಗೂ ಚಳ್ಳಕೆರೆ ತಾಲ್ಲೂಕಿನ ಕೆಲವೆಡೆ ಮಳೆಯಾಗಿದೆ.

ಇಂದು, ನಾಳೆ ಭಾರಿ ಮಳೆ

ಬೆಂಗಳೂರು: ರಾಜ್ಯದ ದಕ್ಷಿಣ ಒಳನಾಡಿಗೆ ನೈರುತ್ಯ ಮುಂಗಾರು ಮಾರುತಗಳು ಪ್ರವೇಶಿಸಿದ್ದು, ಸೆಪ್ಟೆಂಬರ್‌ 24 ಮತ್ತು 25ರಂದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ತುಮಕೂರು, ಮಂಡ್ಯ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಈ ಭಾಗದಲ್ಲಿ ‘ಯೆಲ್ಲೊ ಅಲರ್ಟ್‌’ ಘೋಷಣೆ ಮಾಡಲಾಗಿದೆ. ‘ಉತ್ತರ ಒಳನಾಡಿನ ಬೆಳಗಾವಿ ಹಾಗೂ ಬಾಗಲಕೋಟೆ ಬಿಟ್ಟು, ಉಳಿದೆಲ್ಲಾ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ವ್ಯಾಪಕ ಮಳೆಯಾಗಲಿದ್ದು, ‘ಯೆಲ್ಲೊ ಅಲರ್ಟ್‌’ ಘೋಷಿಸಲಾಗಿದೆ’ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮಳೆಗೆ ತತ್ತರಿಸಿದ ಕುಕ್ಕೆ

ಸುಬ್ರಹ್ಮಣ್ಯ: ಕುಕ್ಕೆಸುಬ್ರಹ್ಮಣ್ಯ ಪರಿಸರದಲ್ಲಿ ಸೋಮವಾರ ಸಂಜೆ ಗುಡುಗು ಸಿಡಿಲಿನಿಂದ ಒಂದೇ ಸಮನೆ ಸುರಿದ ಉತ್ತರಾ ನಕ್ಷತ್ರದ ಮಳೆಗೆ ದರ್ಪಣ ತೀರ್ಥ ನದಿಯು ತುಂಬಿ ಹರಿಯಿತು.

ನದಿಯಲ್ಲಿ ಪ್ರವಾಹ ಬಂದಿದ್ದರಿಂದ ನೀರು ಆದಿ ಸುಬ್ರಹ್ಮಣ್ಯ ದೇವಸ್ಥಾನದ ಹೊರಾಂಗಣವನ್ನು ಪ್ರವೇಶಿಸಿತು. ನದಿ ತಟದಲ್ಲಿ ನಿರ್ಮಿಸಿದ್ದ ಗೋಪುರವು ಮುಕ್ಕಾಲು ಭಾಗ ಮುಳುಗಿತು. ಕುಕ್ಕೆಸುಬ್ರಹ್ಮಣ್ಯದಿಂದ ಆದಿಸುಬ್ರಹ್ಮಣ್ಯ ಸಂಪರ್ಕಿಸುವ ಸೇತುವೆಯು ಮುಳುಗಡೆಯಾಯಿತು. ಎರಡು ಗಂಟೆ ಸುರಿದ ಮಳೆಗೆ ಉಕ್ಕಿ ಹರಿದ ಪ್ರವಾಹ, ಮಳೆ ನಿಂತೊಡನೆ ಇಳಿಕೆಯಾಯಿತು.

ದರ್ಪಣತೀರ್ಥ: ಉತ್ತರಾ ಮಳೆಗೆ ಪ್ರತಿವರ್ಷ ದರ್ಪಣ ತೀರ್ಥ ನದಿಯಲ್ಲಿ ಮಾತ್ರ ನೀರು ತುಂಬಿ ಹರಿಯುತ್ತದೆ. ಪ್ರವಾಹ ಅಧಿಕವಾಗಿ ವಸತಿಗೃಹ, ಮನೆ, ಕೃಷಿ ತೋಟ, ಅಂಗಡಿಗಳಿಗೆ ನೀರು ನುಗ್ಗಿತು. ಅನಿರೀಕ್ಷಿತ ಪ್ರವಾಹ ಜನರಲ್ಲಿ ಆತಂಕ ಮೂಡಿಸಿತು.

ರಸ್ತೆ ಬಂದ್: ಆದಿಸುಬ್ರಹ್ಮಣ್ಯ ರಸ್ತೆಯು ಸಂಪೂರ್ಣ ನೀರಿನಿಂದ ಆವೃತವಾಗಿತ್ತು. ಇಲ್ಲಿನ ಅಂಗಡಿ, ಹೋಟೆಲ್‍ಗಳಿಗೆ ನೀರು ನುಗ್ಗಿತು. ದೇವರಗದ್ದೆ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT