ಶುಕ್ರವಾರ, ಜುಲೈ 30, 2021
28 °C
ಕಲಬುರ್ಗಿ ಜಿಲ್ಲೆ ಮರಮಂಚಿ ತಾಂಡಾದ ಸೋಂಕಿತರನ್ನು ಕರೆತರಲು ಹೋದಾಗ ಘಟನೆ

ಕಲ್ಲು ತೂರಾಟ: ಮೂರು ವಾಹನ ಜಖಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಮಲಾಪುರ (ಕಲಬುರ್ಗಿ ಜಿಲ್ಲೆ): ಕೋವಿಡ್ ಸೊಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯಲು ತಾಲ್ಲೂಕಿನ ಮರಮುಂಚಿ ತಾಂಡಾಕ್ಕೆ ತೆರಳಿದ್ದ ಆರೋಗ್ಯ ಇಲಾಖೆ ಸಿಬ್ಬಂದಿ ಮೇಲೆ ಸೋಂಕಿತರ ಕಡೆಯವರು ಹಲ್ಲೆಗೆ ಮುಂದಾಗಿ ಕಲ್ಲು ತೂರಾಟ ನಡೆಸಿದರು. ಇದರಿಂದ ಆಂಬುಲೆನ್ಸ್ ಸೇರಿದಂತೆ ಮೂರು ವಾಹನಗಳ ಗಾಜು ಒಡೆದು ಹೋಗಿವೆ.

ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಜಿಲ್ಲಾ ಪೊಲೀಸ್‌‌ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರು ಹೆಚ್ಚುವರಿ ಪೊಲೀಸರೊಂದಿಗೆ ತಾಂಡಾಕ್ಕೆ ತೆರಳಿ ಎಲ್ಲ 14 ಜನ ಸೋಂಕಿತರನ್ನು ಕಲಬುರ್ಗಿಯ ಆಸ್ಪತ್ರೆಗೆ ಕರೆತಂದರು.

ಘಟನೆ ವಿವರ: ಮುಂಬೈನಿಂದ ಬಂದ ಬಳಿಕ ಸರ್ಕಾರಿ ಕ್ವಾರಂಟೈನ್‌ನಲ್ಲಿದ್ದು ನಂತರ ತಾಂಡಾಕ್ಕೆ ಮರಳಿದ್ದ 14 ಜನರಲ್ಲಿ ಸೋಂಕು ತಗುಲಿರುವುದು ಭಾನುವಾರ ಸಂಜೆ ದೃಢಪಟ್ಟಿದೆ. ಸೋಮವಾರ ಬೆಳಿಗ್ಗೆ ಅವರನ್ನು ಕರೆತರಲು ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಆಂಬುಲೆನ್ಸ್‌ನೊಂದಿಗೆ ತೆರಳಿದ್ದರು.

‘ನಾವು ತಾಂಡಾಕ್ಕೆ ಬಂದು ವಾರ ಕಳೆಯಿತು. ಈಗ ಹೇಗೆ ನಮಗೆ ಸೊಂಕು ತಗುಲುತ್ತದೆ? ನಮ್ಮ ಹೆಸರೆಲ್ಲಿದೆ?’ ಎಂದು ಸೋಂಕಿತರು ತಗಾದೆ ತೆಗೆದರು. ಅಧಿಕಾರಿಗಳು ಮನವೊಲಿಸಿ 9 ಜನರನ್ನು ಕರೆತಂದರು. ನಂತರ ಬಂದ ಮತ್ತೊಬ್ಬ ಸೋಂಕಿತ, ‘ನನ್ನ ಹೆಸರೆಲ್ಲಿದೆ ತೋರಿಸಿ, ಸುಮ್ಮನೆ ನನ್ನನ್ನು ಕರೆದೊಯ್ಯುತ್ತಿದ್ದೀರಿ’ ಎಂದು ಗದರಿಸುತ್ತ ಸಿಬ್ಬಂದಿ ಬಳಿಗೆ ತೆರಳುತ್ತಿದ್ದಾಗ ಆತನನ್ನು ತಡೆಯಲು ಪೊಲೀಸರು ಲಾಠಿ ಬೀಸಿದ್ದಾರೆ. ಇಷ್ಟಾಗುತ್ತಿದ್ದಂತೆ ತಾಂಡಾದ ಕೆಲವರು, ಸಿಬ್ಬಂದಿ ಹಾಗೂ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿ ಕಲ್ಲು ತೂರಲು ಆರಂಭಿಸಿದರು. ಸಿಬ್ಬಂದಿ ಅಲ್ಲಿಂದ ಓಡಿ ಹೋಗಿ ಬಚಾವಾಗಿದ್ದಾರೆ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳದಲ್ಲಿದ್ದ ಅಂಬುಲೆನ್ಸ್, ವೈದ್ಯಾಧಿಕಾರಿ ವಾಹನ ಹಾಗೂ ಪೊಲೀಸ್ ವಾಹನಗಳ ಮೇಲೆ ಕಲ್ಲು ತೂರಿ ಗಾಜು ಪುಡಿ ಮಾಡಿದರು ಎಂದು ಮೂಲಗಳು ತಿಳಿಸಿವೆ.

‘ಸುದ್ದಿ ತಿಳಿಯುತ್ತಿದ್ದಂತೆ ತಹಶೀಲ್ದಾರ್‌ ಅಂಜುಮ್ ತಬಸುಮ್, ಸಿಪಿಐ ರಾಘವೇಂದ್ರ ಭಜಂತ್ರಿ, ತಾಲ್ಲೂಕು ಆರೋಗ್ಯಾಧಿಕಾರಿ ಶರಣಬಸಪ್ಪ ಕ್ಯಾತನಾಳ ಅಲ್ಲಿಗೆ ತೆರಳಿದರು. ತಾಂಡಾ ನಿವಾಸಿಗಳು ತಾಂಡಾದೊಳಗೆ ಬರದಂತೆ ಕಲ್ಲು ಬೀಸತೊಡಗಿದರು. ಹೀಗಾಗಿ ಸುಮಾರು 2 ಗಂಟೆಗಳ ಕಾಲ ಬಿಗುವಿನ ವಾತಾವರಣ ಇತ್ತು’ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು