ಬುಧವಾರ, ಫೆಬ್ರವರಿ 26, 2020
19 °C
ಮುಂಬೈ, ಕೇರಳ, ಆಂಧ್ರ ಪ್ರದೇಶ, ತಮಿಳುನಾಡಿನಿಂದ ಬಂದವರು ಬೆಂಗಳೂರಿನಲ್ಲಿ ಕನ್ನಡ ಕಲಿತ ಕಥೆ

ತಮಿಳು ಯುವಕನ ಕನ್ನಡ ಕಲಿಕೆಗೆ ಪ್ರೇರಣೆಯಾಯ್ತು 'ಮುಂಗಾರು ಮಳೆ' ಹಾಡು

ನರೇಂದ್ರ ಕಶ್ಯಪ Updated:

ಅಕ್ಷರ ಗಾತ್ರ : | |

ಮುಂಗಾರು ಮಳೆ ಸಿನಿಮಾದಲ್ಲಿನ ದೃಶ್ಯದಲ್ಲಿ ನಟ ಗಣೇಶ್‌ ಮತ್ತು ನಟಿ ಪೂಜಾಗಾಂಧಿ

ವೈಟ್‌ಫೀಲ್ಡ್‌, ಐಟಿಪಿಎಲ್ ವಲಯದಲ್ಲಿ ಮೂಲ ಬೆಂಗಳೂರಿಗರು ಮನೆ ಮಾಡಿ ಇರಬಯಸುವುದಿಲ್ಲ. ಕಾರಣ ಅಲ್ಲಿ ಕನ್ನಡ ವಾತಾವರಣವಿಲ್ಲ! ಹೀಗಿರುವಾಗ, ಅಂಥ ಸ್ಥಳಗಳಲ್ಲಿ ನೆಲೆಸಿರುವ ವಲಸಿಗರು ಕನ್ನಡ ಹೇಗೆ ಹಾಗೂ ಏಕೆ ಕಲಿಯಬೇಕು? ಕನ್ನಡಿಗರಲ್ಲಿ ಶೂನ್ಯ ಭಾವ ಮೂಡಿಸುವ ಇಂಥ ಪರಿಸ್ಥಿತಿಯಲ್ಲೂ ಕನ್ನಡ ಕಲಿಕೆಯ, ಬಳಕೆಯ ಕೆಲ ಹೊಳಹುಗಳು ಭಾಷೆ ಬೆಳವಣಿಗೆಯ ಭರವಸೆಯನ್ನು ಉಳಿಸಿದೆ. ಇಲ್ಲೇ ಹುಟ್ಟಿ ಬೆಳೆದರೂ ಕನ್ನಡ ಮಾತನಾಡಲು ಹಮ್ಮು ಬಿಮ್ಮು ತೋರುವವರ ಮುಂದೆ ಕನ್ನಡದಲ್ಲೇ ಮಾತಾಡಿ ಹೆಮ್ಮೆ ಪಡುವ ಹೊರಗಿನವರೂ ಇಲ್ಲಿದ್ದಾರೆ. 

ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು ಕಡೆಗೆ ನೌಕರಿಗಾಗಿ ಇನ್ನೆಲ್ಲೋ ನೆಲೆನಿಲ್ಲುವುದು ಕೈಗಾರೀಕರಣದ ಫಲವಾಗಿ ಜಗತ್ತಿನೆಲ್ಲೆಡೆ ಕಾಣಸಿಗುವ ಸಹಜ ವಿದ್ಯಮಾನ. ಜಾಗತೀಕರಣದ ನಂತರವಂತೂ ದೇಶ, ಖಂಡಗಳ ಎಲ್ಲೆಮೀರಿ ಈ ಬೆಳವಣಿಗೆ ಪಸರಿಸಿದೆ. ಆಸ್ಟ್ರೇಲಿಯಾ, ಅಮೆರಿಕ, ಕೆನಡಾಗಳಲ್ಲಿ ಇಂಗ್ಲಿಷ್‌ ಭಾಷೆ ಇಂಥ ಸ್ಥಳಾಂತರಗಳಿಗೆ ಅನುಕೂಲ ಮಾಡಿಕೊಟ್ಟರೆ; ಹಲವು ಐರೋಪ್ಯ ರಾಷ್ಟ್ರಗಳಿಗೆ ವಲಸೆ ಹೋದ ಆಫ್ರಿಕನ್ನರು, ಏಷ್ಯಾ ಮೂಲದವರು ಅಲ್ಲಿನ ಭಾಷೆ, ಆಚಾರ-ವಿಚಾರಗಳನ್ನು ಒಪ್ಪಿ ಅಲ್ಲಿನವರೇ ಆಗಿ ಬೆರತು ಹೋಗಿದ್ದಾರೆ. ಇನ್ನೂ ಐ.ಟಿ. ರೆವಲ್ಯೂಷನ್ ಬಳಿಕ ಉದ್ಯೋಗ ಹುಡುಕುತ್ತ ಭಾರತ, ಅದರಲ್ಲೂ ಬೆಂಗಳೂರಿಗೆ ದೇಶ, ವಿದೇಶದ ನಾನಾ ಭಾಗಗಳಿಂದ ಲಕ್ಷಾಂತರ ಜನರು ಬಂದು ನೆಲೆಸಿದ್ದಾರೆ.

ಇಂಥಾ ಬೆಂಗಳೂರು ಅವರಿಗೆ ನೆಮ್ಮದಿಯ ತಾಣವಾಗಿದೆ ನಿಜ, ಆದರೆ ಹಾಗೆ ಬಂದವರು ಇಲ್ಲಿನ ನೆಲ, ಜಲದ ಜೊತೆಗೆ ಇಲ್ಲಿನ ಭಾಷೆ, ಸಾಂಸ್ಕೃತಿಕ ಸೊಗಡನ್ನು ನಮ್ಮದಾಗಿಸಿಕೊಂಡಿದ್ದಾರೆಯೆ? ಹಾಗೆ ಮಾಡಲು, ಇಲ್ಲಿನವರ ಜೊತೆ ಒಂದಾಗಲು ಅವರಿಗೆ ಇರುವ ಅನುಕೂಲಗಳಾದರೂ ಏನು? ಅಡೆ–ತಡೆಗಳಾದರೂ ಎಂಥವು? ನಾವು ಬೆಂಗಳೂರಿನ ಕನ್ನಡಿಗರು ಇಲ್ಲಿಗೆ ವಲಸೆ ಬಂದವರಿಗೆ ಹೇಗೆ ಕನ್ನಡ ಕಲಿಯುವ ವಾತಾವರಣ ನಿರ್ಮಿಸಿಕೊಡಬಹುದು ಎಂದೆಲ್ಲಾ ಆಲೋಚಿಸಬೇಕಿದೆ. ಇಂದು ವೈಟ್‌ಫೀಲ್ಡ್‌, ಐಟಿಪಿಎಲ್ ವಲಯದಲ್ಲಿ ಮೂಲ ಬೆಂಗಳೂರಿಗರು ಮನೆ ಮಾಡಿ ಇರಬಯಸುವುದಿಲ್ಲ. ಕಾರಣ ಅಲ್ಲಿ ಕನ್ನಡ ವಾತಾವರಣವಿಲ್ಲ! ಹೀಗಿರುವಾಗ, ಅಂಥ ಸ್ಥಳಗಳಲ್ಲಿ ನೆಲೆಸಿರುವ ವಲಸಿಗರು ಕನ್ನಡ ಹೇಗೆ ಹಾಗೂ ಏಕೆ ಕಲಿಯಬೇಕು?

ಇಂಥಾ ಪರಿಸ್ಥಿತಿಯಲ್ಲಿಯೇ ಹಲವು ಉತ್ತಮ ಉದಾಹರಣೆಗಳೂ ಸಿಗುತ್ತವೆ. ಇಲ್ಲಿನ ಜನರೊಡನೆ ಬೆರೆತು, ಸ್ನೇಹಿತರ ಸಹಾಯ, ಪ್ರೋತ್ಸಾಹದಿಂದ, ಕಚೇರಿಯಲ್ಲಿ ಸೂಕ್ತ ವಾತಾವರಣದ ಸಹಕಾರದಿಂದ ಹಲವು ವಲಸಿಗರು ಕನ್ನಡ ಕಲಿತು ಇಲ್ಲಿಯವರೇ ಆಗಲು ಪ್ರಯತ್ನಿಸುತ್ತಿದ್ದಾರೆ. ನಾನು ಕಂಡ ಅಂಥ ಕೆಲವು ಉದಾಹರಣೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ–

ಕನ್ನಡ ಕಲಿಕೆ ಪ್ರೇರಣೆಯಾದ ಮುಂಗಾರು ಮಳೆ

ತಮಿಳುನಾಡಿನಿಂದ ಹತ್ತು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದ ಹರಿಶಂಕರ್‌ಗೆ ಆಕಸ್ಮಿಕವಾಗಿ ಮುಂಗಾರು ಮಳೆ ಸಿನಿಮಾದ ಹಾಡುಗಳು ಕೇಳುವಂತಾಯಿತು. ಕಿವಿಗೆ ಬಿದ್ದ ಹಾಡುಗಳು ಕನ್ನಡ ಭಾಷೆಯ ಬಗೆಗೆ ಮನಸಿನಲ್ಲಿ ಪ್ರೀತಿ ಚಿಗುರಿಸಿತ್ತು. ಸ್ವಲ್ಪವೂ ಕನ್ನಡ ತಿಳಿಯದ ಹರಿಶಂಕರ್‌ ಕನ್ನಡ ಭಾಷೆಯ ಬಗ್ಗೆ ಒಲವು ಬೆಳೆಸಿಕೊಂಡು ಕಲಿಕೆಯತ್ತ ಮುನ್ನಡೆದರು. ಆ ಹಾಡಿನ ಸಾಹಿತ್ಯದ ಅರ್ಥವನ್ನು ತಿಳಿದು ಸವಿಯಲು ಮುಂದಾದರು. ಅಲ್ಲಿಂದ ಮುಂದೆ ಕನ್ನಡ ನಾಡುನುಡಿಯ ಸಾಂಗತ್ಯ ಬೆಳೆಯುತ್ತ ಸಾಗಿದೆ. ಕನ್ನಡ ಕಲಿಕೆ ಪ್ರೇರೇಪಿಸಲು ಪ್ರೇರಣೆಯಾದ ಮುಂಗಾರು ಮಳೆ ಹಾಡುಗಳನ್ನು ಕೊಟ್ಟ ಯೋಗರಾಜ್ ಭಟ್‌, ಜಯಂತ್‌ ಕಾಯ್ಕಿಣಿ ಹಾಗೂ ಮನೋಮೂರ್ತಿ ಸೇರಿ ಹಲವರಿಗೆ ಇಲ್ಲಿ ಧನ್ಯವಾದ ಹೇಳಲೇಬೇಕು. ಸಿನಿಮಾಗಳಿಂದ ಕನ್ನಡದ ಬಗ್ಗೆ ಆಸಕ್ತಿ ಬೆಳೆಸಲು ಇರುವ ಸಾಧ್ಯತೆಗಳನ್ನು ಗಮನಿಸಬೇಕಿದೆ. ಸಿನಿಮಾಗಳಿಂದಲೇ ತಾನೇ ಅಣ್ಣಾವ್ರು(ಡಾ.ರಾಜ್‌ಕುಮಾರ್‌), ಪುಟ್ಟಣ್ಣ, ಪಂತುಲು ಮುಂತಾದವರು ಕನ್ನಡ ಮತ್ತು ಕನ್ನಡ ಭಾಷೆಯ ಬಗ್ಗೆ ಪ್ರೀತಿ ಬೆಳೆಸುವ ಮೂಲಕ ಅಮರರಾಗಿರುವುದು.

ಕೇರಳದಿಂದ ಬಂದು ಕನ್ನಡ ಸಾಹಿತ್ಯ ಪ್ರೀತಿ ಬೆಳೆಸಿಕೊಂಡವರು

ಡಾ.ವಿಜೀಶ್ ವಿಜಯನ್, ತಮಿಳುನಾಡಿನಲ್ಲಿ ಹುಟ್ಟಿದ ಮಲಯಾಳಂ ಮನೆಮಾತಾಗಿರುವ ಕುಟುಂಬದವರು. ಐಐಟಿ ದೆಹಲಿಯಲ್ಲಿ ಡಾಕ್ಟರೇಟ್ ಪದವಿ ಪಡೆದು ಬೆಂಗಳೂರಿನಲ್ಲಿ ಏಳಕ್ಕೂ ಹೆಚ್ಚು ವರ್ಷದಿಂದ ಇದ್ದಾರೆ. ಪುಟ್ಟ ಮಗನ ಜೊತೆ ತಾನೂ ಕನ್ನಡ ಕಲಿಯುತ್ತಿರುವುದು ಇವರಿಗೆ ಅತ್ಯಂತ ಹೆಮ್ಮೆಯ ಸಂಗತಿ. ಈಗ ಗೆಳೆಯನೊಬ್ಬನ ಆಣತಿಯಂತೆ 'ಮೂಕಜ್ಜಿಯ ಕನಸುಗಳು' ಓದತೊಡಗಿದ್ದಾರೆ. ಕನ್ನಡ ಬರೆಯಲೂ ಕಲಿತಿದ್ದಾರೆ.

ತಿದ್ದಿ, ಸರಿಪಡಿಸಿ ಕಲಿಸಿ..

ಮುಂಬೈ ಮೂಲದ ತೇಜಸ್ ಕೇಸರ್ಕರ್ ಅಲ್ಲಿನ ಪ್ರತಿಷ್ಠಿತ ಐಐಟಿ ಅಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಮೂರು ವರ್ಷದಿಂದ ಬೆಂಗಳೂರಿನಲ್ಲಿ ನೆಲೆಸಿರುವ ಇವರು ಕಚೇರಿಯಲ್ಲಿರುವ ಕನ್ನಡ ವಾತಾವರಣ, ಸಹೋದ್ಯೋಗಿಗಳ ಸಹಾಯದಿಂದ ಕನ್ನಡ ಕಲಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಇವರು ನಿತ್ಯ ಅಂಗಡಿ, ಆಟೋ-ಟ್ಯಾಕ್ಸಿಯವರ ಜೊತೆ ಆದಷ್ಟು ಕನ್ನಡದಲ್ಲೇ ವ್ಯವಹರಿಸುತ್ತಾರೆ. ದೂರದ ಊರಿನಿಂದ ಬಂದ ಇಂಥವರು ಕನ್ನಡದಲ್ಲಿ ವ್ಯವಹಿಸಲು ಪ್ರಯತ್ನಿಸುವುದು ನಿಜಕ್ಕೂ ಉತ್ತಮ ಬೆಳವಣಿಗೆಯಲ್ಲವೇ? ಇವರು ಕಲಿಕೆಯ ಹಂತದಲ್ಲಿ ತಪ್ಪು ಮಾಡಿದರೆ ಅದನ್ನು ತಿದ್ದಿ ಸರಿಪಡಿಸುವುದು ನಮ್ಮದೇ ಕೆಲಸ ತಾನೇ? ಸೂಕ್ತ ವಾತಾವರಣ ನಿರ್ಮಿಸಿಕೊಟ್ಟು ಕನ್ನಡ ಕಲಿಸಲು ನಾವೂ ಕೈಜೋಡಿಸೋಣ.

ಎರಡೇ ವರ್ಷದಲ್ಲಿ ಕನ್ನಡ ಕಲಿಕೆ

ಮಧ್ಯ ಪ್ರದೇಶವರಾದರೂ ಎರಡೇ ವರ್ಷದಲ್ಲಿ ಕನ್ನಡ ಮಾತನಾಡಲು, ಓದಲು, ಬರೆಯಲು ಕಲಿತಿದ್ದಾರೆ. ಮಾತು ತಡವರಿಸಿದರೂ ಹೊಸ ಭಾಷೆ ಕಲಿಕೆ ಮೇಲಿನ ಅವರ ಆಸಕ್ತಿ ಪೂರ್ವ ಅವರನ್ನು ಮುನ್ನಡೆಸುತ್ತಿದೆ. ಸಂಸ್ಥೆಯಲ್ಲಿ ಜತೆಯಾಗಿರುವ ಸ್ನೇಹಿತೆಯೇ ಸದ್ಯಕ್ಕೆ 'ಕನ್ನಡ ಶಿಕ್ಷಕಿ'. ಗೆಳೆತನ ಕನ್ನಡ ಕಲಿಕೆಗೆ ನೆರೆವಾಗಿರುವುದಕ್ಕೆ ಇದೊಂದು ತಾಜಾ ಉದಾಹರಣೆ. 

ಕೇಳಿ ತಿಳಿಯುತ್ತ ಕಲಿತವರು

ಗೊತ್ತಿಲ್ಲದನ್ನು ಕೇಳಿ ಕೇಳಿ ತಿಳಿದು ಕಲಿಯುತ್ತ ಕನ್ನಡಿಗರಲ್ಲಿ ಒಂದಾದವರು ತಿರುಪತಿಯ ಸುರೇಶ್‌ ಕುಮಾರ್‌. ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವಾಗ ಸ್ಥಳೀಯರೊಂದಿಗೆ ಬೆರೆಯುವುದರಿಂದ ಮಾಡುವ ಕೆಲಸವೂ ಹೆಚ್ಚು ಉತ್ಸಾಹದಿಂದ ಕೂಡಿರುತ್ತದೆ ಹಾಗೂ ಸುಲಭವೂ ಆಗುತ್ತದೆ ಎಂಬುದನ್ನು ಮನಗಂಡರು. ಈಗಂತೂ ಸ್ನೇಹಿತರು, ಸಹೋದ್ಯೋಗಿಗಳೊಂದಿಗೆ ಕನ್ನಡದಲ್ಲೇ ಮಾತು–ಕತೆ. 

ಇವರನ್ನೆಲ್ಲಾ ಗಮನಿಸಿದಾಗ ಕಂಡುಬರುವ ಸಮಾನ ಅಂಶಗಳೆಂದರೆ ಕನ್ನಡ ಕಲಿಯುವ ವಾತಾವರಣ ನಿರ್ಮಿಸಿಕೊಟ್ಟರೆ, ಉತ್ತೇಜಿಸಿದರೆ ಖಂಡಿತ ಆಸಕ್ತಿಯುಳ್ಳವರಾದರೂ ಕಲಿಯುತ್ತಾರೆ. ಹಣತೆಯಿಂದ ಹಣತೆ ಬೆಳಗಿದಂತೆ, ಕನ್ನಡ ಬೆಳಗುತ್ತದೆ. ಕಲಿಯುವವರನ್ನು ಅವಮಾನಿಸದೆ, ಮುಜುಗರಕ್ಕೆ ಒಳಗಾಗುವಂತೆ ಮಾಡದೆ ಕಲಿಯಲು ಪ್ರೇರೇಪಿಸೋಣ. ಕನ್ನಡ ಬೆಳೆಸೋಣ, ಲಕ್ಷಾಂತರ ವಲಸಿಗರ ಮನಸ್ಸಲ್ಲಿ ಕನ್ನಡ ಬಿತ್ತಿ ಬೆಳೆಸುವ ಅವಕಾಶ ನಮಗಿದೆ; ಕನ್ನಡದ ಬೆಳೆಯ ಸವಿಯನ್ನು ಉಣಬಡಿಸಲು ಇಂದೇ ಕೈಜೋಡಿಸೋಣ. 

(ಲೇಖಕ ಬೆಂಗಳೂರಿನಲ್ಲಿ ಐ.ಟಿ ಉದ್ಯೋಗಿ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು