ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆ ಹೇಳಿದ ಅಜ್ಜಿಯರು; ರಾಗಿ ಬೀಸಿದ ಚಿಣ್ಣರು

‘ಮಕ್ಕಳ ಹಬ್ಬ’ದಲ್ಲಿ ಗ್ರಾಮೀಣ ಸೊಗಡಿನ ಆಟ ಆಡಿ ನಲಿದ ಮಕ್ಕಳು
Last Updated 10 ನವೆಂಬರ್ 2018, 19:51 IST
ಅಕ್ಷರ ಗಾತ್ರ

ಬೆಂಗಳೂರು: ‘ಒಂದೂರಲ್ಲಿ ಒಬ್ಬ ರಾಜಕುಮಾರ ಇದ್ದ, ಅವನಿಗೆ ಮೂರು ಮಕ್ಕಳು ಇದ್ದರು...’

- ಅಜ್ಜಿ ಹೀಗೆ ಕಥೆಗೆ ಪೀಠಿಕೆ ಹಾಕುತ್ತಿದ್ದಂತೆಯೇ ಸುತ್ತುವರಿದ ಹತ್ತಾರು ಮಕ್ಕಳು, ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದ್ದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಯೋಜಿಸಿದ್ದ, ‘ಮಕ್ಕಳ ಹಬ್ಬ’ದಲ್ಲಿ ಶನಿವಾರ ಹಳ್ಳಿ ಮನೆಗಳ ಪಡಸಾಲೆಯಲ್ಲಿ ಹಿಂದೆ ಕಾಣಸಿಗುತ್ತಿದ್ದ ವಾತಾವರಣವೇ ಸೃಷ್ಟಿಯಾಗಿತ್ತು.

‘ರಾಗಿ ಬೀಸಿ, ಹೊಲ ಉತ್ತುವಾಗ ಕಲಿತ ಪದಗಳನ್ನು ಈಗ ಕಥೆ ರೂಪದಲ್ಲಿ ಮಕ್ಕಳಿಗೆ ಹೇಳುವುದರಲ್ಲಿ ಸಂತೃಪ್ತಿ ಪಡುತ್ತಿದ್ದೇನೆ. ಊರಲ್ಲೂ ಒಳ್ಳೆ ಕಾರ್ಯಗಳಾದಾಗ ನನ್ನನ್ನು ಕರೆದು ಹಾಡಿಸುತ್ತಾರೆ. ದೂರದರ್ಶನ, ಆಕಾಶವಾಣಿಯಲ್ಲೂ ಹಾಡಿದ್ದೇನೆ’ ಎಂದು ‘ಕಥೆ ಹೇಳುವ ಅಜ್ಜಿ‘ ಕುಣಿಗಲ್‌ನ ರಂಗಹುಚ್ಚಮ್ಮ ಹೇಳಿದರು.

ಒಂದೆಡೆ ಕೆಲವರು ಅಜ್ಜಿಯಿಂದ ಹೂ ಕಟ್ಟುವುದನ್ನು ಕಲಿತುಕೊಳ್ಳುತ್ತಿದ್ದರೆ, ಇನ್ನೊಂದೆಡೆ ಹಲವರು ಎತ್ತಿನ ಗಾಡಿ ಏರಿದರು. ಪಗಡೆ, ಎತ್ತು ಕಲ್ಲು, ಹುಲಿ–ದಡ... ಹೀಗೆ ಹಳ್ಳಿ ಆಟಗಳನ್ನು ಸ್ಥಳದಲ್ಲೇ ಕಲಿತು ಆಡಿದರು. ಅಪ್ಪ, ಅಮ್ಮಂದಿರು ಸಹ ಸ್ನೇಹಿತರ ಜತೆ ಸೇರಿಕೊಂಡು ತಮ್ಮ ಬಾಲ್ಯವನ್ನು ಮರುಸೃಷ್ಟಿ ಮಾಡಿಕೊಳ್ಳುವ ಅವಕಾಶವನ್ನು ಬಿಡಲಿಲ್ಲ. ಕುಂಟೆಬಿಲ್ಲೆ, ಬುಗರಿ ಆಟಗಳನ್ನು ಅವರೂ ಆಡಿ ಸಂಭ್ರಮಿಸಿದರು. ಬೀಸುವಕಲ್ಲಿನ ಮುಂದೆ ಕುಳಿತು ಬೀಸಿದರು, ಮಣ್ಣು ಹಿಡಿದು ಮಡಿಕೆ ತಯಾರಿಸಿದರು. ಚುಕ್ಕಿ ಇಟ್ಟು ರಂಗೋಲಿಯನ್ನೂ ಬಿಡಿಸಿದರು.

ಮಕ್ಕಳ ಮೆರವಣಿಗೆ: ಕಾರ್ಯಕ್ರಮದ ಉದ್ಘಾಟನೆಗೂ ಮೊದಲು ಮಕ್ಕಳಿಂದ ನಡೆದ ಹಾವೇರಿಯ ಪುರವಂತಿಕೆ, ಗದಗದ ಮೈಲಾರ ಕುಣಿತ, ಕೊಡಗಿನ ಬೋಳತಾಟ್‌, ಚಿತ್ರದುರ್ಗದ ಕಾಸೆ ಬೇಡರ ಪಡೆಯ ವರಸೆ, ಬೆಳಗಾವಿಯ ಕರ್ಬಲ್‌ ಕುಣಿತ, ಡೊಳ್ಳಿನ ಕೈಪಟ್ಟು, ಕೋಲಾಟ, ಧಾರವಾಡ ತಂಡದ ಜಗ್ಗಲಿಗೆ ನೃತ್ಯಗಳು ಗಮನಸೆಳೆದವು.

ಎತ್ತಿನಗಾಡಿಯಲ್ಲಿ ಮಕ್ಕಳು: ಬಾಲಭವನದ ಆರಂಭದಲ್ಲಿಯೇ ಮಕ್ಕಳನ್ನು ಆಕರ್ಷಿಸಿದ್ದು ಹಳ್ಳಿಯ ಎತ್ತಿನಗಾಡಿ. ಪ್ಲಾಸ್ಟಿಕ್‌ ಎತ್ತು ಹಾಗೂ ಗಾಡಿಯನ್ನು ಹತ್ತಿ, ಹೈ, ಹೈ, ಹೋಗು ಮುಂದೆ ಎನ್ನುತ್ತಿದ್ದ ಪುಟಾಣಿಗಳು ಅಲ್ಲಿಯೇ ಕೂತು ಒಂದಿಷ್ಟು ಕಾಲ ಕ್ಯಾಮೆರಾಕ್ಕೆ ಪೋಸ್‌ ಕೊಟ್ಟರು.

ಗೋಲಿ ಆಟದ ತಾಣದ ಸುತ್ತ ಮಕ್ಕಳು ಸೇರಿಕೊಂಡಿದ್ದರು. ನಗರದ ಮಕ್ಕಳು, ಗ್ರಾಮೀಣ ಪ್ರದೇಶದ ಮಕ್ಕಳಿಂದ ಗೋಲಿ ಪಡೆದು ಆಡುವುದನ್ನು ಕಲಿತು ತಕ್ಕ ಪೈಪೋಟಿ ನೀಡಿದರು.

ತೆಂಗಿನ ಗರಿಯಲ್ಲಿ ವಾಚ್‌, ಪೀಪಿಗಳನ್ನು ಮಾಡಿ ಮಕ್ಕಳನ್ನು ಸೆಳೆಯಲಾಯಿತು. ಕುಂಟೆಬಿಲ್ಲೆ, ಹಗ್ಗಜಿಗಿತ ಆಟಗಳನ್ನು ಹೆಣ್ಣುಮಕ್ಕಳು ಹೆಚ್ಚು ಆಡಿದರು. ಡೋಲು, ನಗಾರಿಯ ಶಬ್ದಕ್ಕೆ ಮಕ್ಕಳೊಂದಿಗೆ ದೊಡ್ಡವರೂ ಕುಣಿದಿದ್ದರಿಂದ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು.

ಫಲಪುಪ್ಪ ಪ್ರದರ್ಶನ: ತರಕಾರಿ, ಹೂವು, ಹಣ್ಣುಗಳಿಂದ ಅಲಂಕೃತಗೊಂಡಿದ್ದ ಅಂಗನವಾಡಿ, ಡೈರಿ ಡೇ, ಹಸು–ಕರು, ಗಡಿಯಾರ ಮಾದರಿಯ ಫಲಪುಪ್ಪ ಪ್ರದರ್ಶನ ಗಮನಸೆಳೆಯಿತು. ಸೆಲ್ಫಿ ಪ್ರೇಮಿಗಳು ಇಲ್ಲಿಗೂ ಲಗ್ಗೆಯಿಟ್ಟರು.

ಭಾರತೀಯ ಸೇನೆಯಿಂದ ಹಾಕಿದ್ದ ಮಳಿಗೆಯಲ್ಲಿ ಮಕ್ಕಳು ಗನ್‌ಗಳನ್ನು ಹಿಡಿದು ಪುಳಕಗೊಂಡರು.

**

ಬ್ಯಾಂಡ್‌ ಸ್ಟ್ಯಾಂಡ್‌ಗೆ ನೂರರ ಸಂಭ್ರಮ

ಕಬ್ಬನ್‌ ಪಾರ್ಕ್‌ನಲ್ಲಿರುವ ಬ್ಯಾಂಡ್‌ ಸ್ಟ್ಯಾಂಡ್‌ಗೆ ನೂರು ವರ್ಷದ ಇತಿಹಾಸ ಇದೆ. ಇದರ ನೆನಪಿಗಾಗಿ ತೋಟಗಾರಿಕೆ ಇಲಾಖೆ ವತಿಯಿಂದ ಪುಪ್ಪ ನಮನ ಸಲ್ಲಿಸಲಾಗಿದೆ.

ಹೂವಿನಿಂದ ಅಲಂಕೃತಗೊಂಡಿದ್ದ ಬ್ಯಾಂಡ್‌ ಸ್ಟ್ಯಾಂಡ್ ನೋಡುಗರ ಮನಸ್ಸನ್ನು ಮುದಗೊಳಿಸಿತು.

**

ಶಂಕರ್‌ನಾಗ್‌ಗೆ ‘ಹಸಿರು ನಮನ’!

ಕಬ್ಬನ್‌ ಉದ್ಯಾನವು ಶಂಕರ್‌ ನಾಗ್‌ ನೆನಪನ್ನು ಹಚ್ಚ ಹಸಿರಾಗಿಸಿದೆ. ಕನ್ನಡ ನಾಡು ಕಂಡ ಅಪರೂಪದ ನಟನಿಗೆ ಹಸಿರು ರೂಪ ನೀಡಿದ್ದು ಕೋರಮಂಗಲದ ಕಲಾವಿದ ಮಂಜುನಾಥ್‌.

ಉದ್ಯಾನದ ಕೇಂದ್ರ ಗ್ರಂಥಾಲಯದ ಸಮೀಪದಲ್ಲಿ ಅವರು ರಾಗಿಯ ಹುಲ್ಲು ಬೆಳೆಸಿ ಅದರಲ್ಲೇ ಶಂಕರ್‌ನಾಗ್‌ (ಎವರ್‌ಗ್ರೀನ್‌, ನೆವರ್‌ಸೀನ್‌ ಶಂಕರ್‌ನಾಗ್‌) ಬಿಂಬವನ್ನು ರೂಪಿಸಿದ್ದಾರೆ.

‘80 ಕೆ.ಜಿ ರಾಗಿಯನ್ನು ಬಳಸಿದ್ದೇನೆ. ಈ ಕಲಾಕೃತಿ ಮೂರ್ತ ರೂಪ ‍ಪಡೆಯುವುದರ ಹಿಂದೆ ಸತತ 45 ದಿನಗಳ ಪರಿಶ್ರಮ ಅಡಗಿದೆ. ಸುಮಾರು 50 ಅಡಿ ಎತ್ತರ ಹಾಗೂ 35 ಅಡಿ ಅಗಲದ ಜಾಗದಲ್ಲಿ ಶಂಕರ್‌ನಾಗ್‌ ಅವರನ್ನು ಚಿತ್ರಿಸಲಾಗಿದೆ. ಅವರ ಜನ್ಮದಿನ (ನ.9)ದ ಸವಿನೆನಪಿಗಾಗಿ ಕಲಾ ನಮನ ಅರ್ಪಿಸುವ ಸಣ್ಣ ಪ್ರಯತ್ನ ಇದು’ ಎಂದು ಮಂಜುನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

**

ಬಸ್‌ ಮಾದರಿಗಳ ಪ್ರದರ್ಶನ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಮಕ್ಕಳ ಹಬ್ಬದಲ್ಲಿ ಸಂಸ್ಥೆಯ ವಿವಿಧ ಬಸ್‌ಗಳ ಮಾದರಿಯನ್ನು ಪ್ರದರ್ಶಿಸಿತು. ಬಸ್‌ಗಳ ಕುರಿತು ಪ್ರಶ್ನೆಗಳನ್ನು ಕೇಳಿ ಮಕ್ಕಳು ಮಾಹಿತಿ ಪಡೆದುಕೊಂಡರು.

**

ರಾಜ್ಯದೆಲ್ಲೆಡೆ ಆಚರಿಸುವ ಕನಸು

‘ರಾಜ್ಯದ ಇತರ ಜಿಲ್ಲೆಗಳಲ್ಲೂ ಮಕ್ಕಳ ಹಬ್ಬ ಆಚರಿಸುವ ಕನಸಿದೆ. ಬೆಂಗಳೂರಿಗೆ ಮಾತ್ರ ಸೀಮಿತವಾಗಿರುವ ಹಬ್ಬವನ್ನು ಎಲ್ಲೆಡೆ ಆಚರಿಸುವಂತೆ ಆಗಬೇಕು. 47 ಇಲಾಖೆಗಳು ಸಹಕಾರ ಕೊಟ್ಟಿದ್ದಕ್ಕೆ ಅದ್ಧೂರಿಯಾಗಿ ಹಬ್ಬ ಆಯೋಜಿಸುವ ಅವಕಾಶ ದೊರೆಯಿತು’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಜಯಮಾಲಾ ಹೇಳಿದರು.

‘ಇಂದಿನ ಮಕ್ಕಳಿಗೆ ಕೃತಕ ಆಟಿಕೆಗಳೇ ಸಂಗಾತಿಗಳಾಗಿವೆ. ಹಳ್ಳಿ ಸೊಗಡಿನ ಹಬ್ಬ, ಆಚರಣೆ, ಆಟಗಳು ಕಣ್ಮರೆಯಾಗಿವೆ. ಇದಕ್ಕೆ ಉತ್ತೇಜನ ನೀಡುವ ಕೆಲಸ ಈ ಹಬ್ಬದ ಮೂಲಕ ಆಗಲಿದೆ’ ಎಂದು ಆಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT