ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕ್ಕರೆ ಕಾರ್ಖಾನೆ ಮಾಲೀಕರ ಕೈಚಳಕ; ರೈತರ ಹೆಸರಿನಲ್ಲಿ ವಂಚನೆ

₹ 80 ಕೋಟಿ ಗುಳುಂ
Last Updated 18 ಅಕ್ಟೋಬರ್ 2019, 19:51 IST
ಅಕ್ಷರ ಗಾತ್ರ

ಚಡಚಣ (ವಿಜಯಪುರ ಜಿಲ್ಲೆ): ಸಮೀಪದ ಇಂಡಿಯನ್ ಸಕ್ಕರೆ ಕಾರ್ಖಾನೆ ಮಾಲೀಕ ಹಾಗೂ ಆಡಳಿತ ಮಂಡಳಿಯ ಮೂವರು ಸದಸ್ಯರು ಈ ಭಾಗದ ವಿವಿಧ ಗ್ರಾಮಗಳ 2,832 ರೈತರ ಹೆಸರಿನಲ್ಲಿ ಅವರಿಗೆ ಗೊತ್ತಿಲ್ಲದೇ ₹80 ಕೋಟಿ ಸಾಲ ಪಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ.

ಕಾರ್ಖಾನೆ ಮಾಲೀಕ ಬಬಲರಾವ್ ಸಿಂಧೆ, ಅವರ ಪುತ್ರ, ವ್ಯವಸ್ಥಾಪಕ ನಿರ್ದೇಶಕ ರಂಜಿತ್ ಸಿಂಧೆ, ಅವರ ಪತ್ನಿ ಪ್ರಣತಿ ಸಿಂಧೆ ಹಾಗೂ ಇನ್ನೊಬ್ಬ ನಿರ್ದೇಶಕ ವೀರಣ್ಣ ಸಿದ್ದರಾಯ ಪತ್ತಾರ ಅವರು ರೈತರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ, 2017ರಲ್ಲಿ ಮಹಾರಾಷ್ಟ್ರದ ಯಳನಿಂಬರಗಿ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಿಂದ ಸಾಲ ಪಡೆದಿದ್ದಾರೆ. ಇವರು ಸಾಲ ಮರು ಪಾವತಿಸದೇ ಇರುವುದರಿಂದ ಬ್ಯಾಂಕ್‌, ರೈತರಿಗೆ ನೋಟಿಸ್ ಕೊಟ್ಟಿದ್ದು, ಇದನ್ನು ನೋಡಿ ರೈತರು ಆಘಾತಕ್ಕೆ ಒಳಗಾಗಿದ್ದಾರೆ.

ಈ ಕುರಿತು ಸಾಮಾಜಿಕ ಕಾರ್ಯಕರ್ತ ಶಿವಶಂಕರ್ ಡೋಣಜಮಠ ಅವರು ಸಂಬಂಧಿಸಿದ ಬ್ಯಾಂಕಿನ ಮುಖ್ಯ ಕಚೇರಿಗೆ ನೀಡಿದ ದೂರನ್ನು ಆಧರಿಸಿ ಶುಕ್ರವಾರ ಮುಂಬೈ ಕಚೇರಿ ಅಧಿಕಾರಿಗಳಾದ ಡಿ.ಬೋಬಾಡೆ, ಬಿ.ಆರ್.ಹರಿಶ್ಚಂದ್ರನ್ ಹಾಗೂ ಯಳನಿಂಬರಗಿ ಶಾಖಾ ವ್ಯವಸ್ಥಾಪಕ ಮಲ್ಲಿಕಾರ್ಜುನ ಶರ್ಮಾ ನೇತೃತ್ವದ ತನಿಖಾ ತಂಡವು ಚಡಚಣ ಸೇರಿದಂತೆ ಸುತ್ತಲಿನ ಗ್ರಾಮಗಳಿಗೆ ಶುಕ್ರವಾರ ಭೇಟಿ ನೀಡಿ ರೈತರಿಂದ ಮಾಹಿತಿ ಪಡೆಯಿತು.

ಸುದ್ದಿಗಾರರೊಂದಿಗೆ ಮಾತನಾಡಿದ ಅಧಿಕಾರಿಗಳು, ‘ಕಾರ್ಖಾನೆ ಮಾಲೀಕರು, ಆಡಳಿತ ಮಂಡಳಿ ಸದಸ್ಯರು ರೈತರ ಹೆಸರಿನಲ್ಲಿ ಸಾಲ ಪಡೆದು ವಂಚಿಸಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಈ ಬಗ್ಗೆ ರೈತರು ದೂರು ನೀಡಬಹುದು’ ಎಂದರು.

**

ಬೆಳೆ ಪರಿಹಾರ, ಸಬ್ಸಿಡಿ ಬ್ಯಾಂಕ್‌ ಖಾತೆಗೆ ಜಮೆಯಾಗಿದೆ. ಕಾರ್ಖಾನೆಯವರು ನನ್ನ ಹೆಸರಿನಲ್ಲಿ ಸಾಲ ಪಡೆದಿರುವುದರಿಂದ ನನಗೆ ಬ್ಯಾಂಕ್‌ಗಳು ಸಾಲ ಕೊಡುತ್ತಿಲ್ಲ.
- ರಾಮ ಝಡ್ಪೇಕರ ರೈತ, ಚಡಚಣ

**

ನಾನು ಈ ಕಾರ್ಖಾನೆಗೆ ಕಬ್ಬು ಕಳುಹಿಸಿಲ್ಲ. ಅವರೊಂದಿಗೆ ಯಾವುದೇ ವ್ಯವಹಾರವನ್ನೂ ಹೊಂದಿಲ್ಲ. ಆದರೂ ನನ್ನ ಜಮೀನಿನ ಮೇಲೆ ₹2 ಲಕ್ಷ ಸಾಲ ಪಡೆದಿದ್ದಾರೆ
– ಪ್ರಮೋದ ಮಠ,ರೈತ, ಗೋಡಿಹಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT