ಶನಿವಾರ, ಜನವರಿ 18, 2020
19 °C

ಮಸೀದಿ, ಮಂದಿರ ಮೈಕ್‌ಗೆ ಕಣ್ಣು?: ಮುಖ್ಯ ನ್ಯಾಯಮೂರ್ತಿ ಬೊಬಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಮಸೀದಿ ಮತ್ತು ಮಂದಿರಗಳಲ್ಲಿ ಧ್ವನಿವರ್ಧಕ ಬಳಕೆ ಮಾಡುವುದನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ನೆರಳಿನಲ್ಲಿ ರಕ್ಷಣೆ ನೀಡಿ ಪೋಷಿಸಬಹುದೇ ಇಲ್ಲವೇ ಎಂಬುದನ್ನು ಪರಿಶೀಲಿಸಬೇಕಾದ ಸೂಕ್ಷ್ಮ ಸನ್ನಿವೇಶದಲ್ಲಿ ದೇಶದ ನ್ಯಾಯಾಂಗವಿದೆ’ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಶರದ್‌ ಅರವಿಂದ ಬೊಬಡೆ ವಿಶ್ಲೇಷಿಸಿದರು.

ಶನಿವಾರ ಇಲ್ಲಿ ಆರಂಭವಾದ ನ್ಯಾಯಾಂಗ ಅಧಿಕಾರಿಗಳ ರಾಜ್ಯಮಟ್ಟದ 19ನೇ ದ್ವೈವಾರ್ಷಿಕ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ‘ಜೋರು ದನಿಯಲ್ಲಿ ಕೇಳುವಂತೆ ಮದುವೆ ಪೆಂಡಾಲ್‌ ಮತ್ತು ಧಾರ್ಮಿಕ ಸಮಾರಂಭಗಳಲ್ಲಿ ಮ್ಯೂಸಿಕ್‌ ಸೌಂಡ್‌ ಸಿಸ್ಟಂ ಬಳಕೆ ಮಾಡುವುದಕ್ಕೆ ಸಾಂವಿಧಾನಿಕ ರಕ್ಷಣೆ ನೀಡಬೇಕೆ ಬೇಡವೇ ಎಂಬುದರ ಗಂಭೀರ ಮಂಥನ ನಡೆಸಬೇಕಾದ ಅವಶ್ಯಕತೆ ಎಂದಿಗಿಂತ ಇಂದು ಹೆಚ್ಚಿದೆ’ ಎಂದರು.

‘ಮಾನವ ಹಕ್ಕುಗಳನ್ನು ಹೊಸ ಮಾನದಂಡದಲ್ಲಿ ನೋಡಲು ಯಥೋಚಿತ ವಿಚಾರಣಾ ಕೌಶಲ ಸಂಪಾದಿಸಬೇಕಿದೆ’ ಎಂದು ಪ್ರತಿಪಾದಿಸಿದರು. ರಾಜ್ಯ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್‌.ಓಕಾ ಮಾತನಾಡಿ, ‘ಅಧೀನ ನ್ಯಾಯಾಲಯಗಳು ಎಂಬ ಪದ ಬಳಕೆ ಎಷ್ಟರ ಮಟ್ಟಿಗೆ ಸೂಕ್ತ’ ಎಂದು ಪ್ರಶ್ನಿಸಿದರು.

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಮೋಹನ ಎಂ.ಶಾಂತನಗೌಡರ, ಎಸ್‌.ಅಬ್ದುಲ್‌ ನಜೀರ್, ಎ.ಎಸ್‌.ಬೋಪಣ್ಣ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಾತನಾಡಿದರು.

‘ಶ್ರೀಮಂತರ ಪಲಾಯನ ಪಾಠವಾಗಲಿ’
‘ಪಾಸ್‌ಪೋರ್ಟ್‌ ಪ್ರಕರಣಗಳಲ್ಲಿ ನ್ಯಾಯಾಧೀಶರು ಉದಾರ ಆದೇಶಗಳನ್ನು ನೀಡುವ ಮುನ್ನ; ಸಾವಿರಾರು ಕೋಟಿ ಬ್ಯಾಂಕ್‌ ಸಾಲ ಪಡೆದವರು ದೇಶ ಬಿಟ್ಟು ಹೋಗಿರುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು’ ಎಂದು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್ ಎಚ್ಚರಿಸಿದರು.

‘ಆರ್ಥಿಕ ಕ್ಷಮತೆಯ ಮೇಲೆ ನ್ಯಾಯಾಂಗದ ಪ್ರಭಾವ’ ಎಂಬ ವಿಷಯ ಮಂಡಿಸಿದ ಅವರು, ‘ಹಕ್ಕುಸ್ವಾಮ್ಯದ ಪ್ರಕರಣಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಘನತೆ ಹೆಚ್ಚಿಸುವ ಸಾಮರ್ಥ್ಯ ಹೊಂದಿರುತ್ತವೆ’ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು