ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಬಿದ ಮೂರೇ ದಿನಗಳಲ್ಲಿ ನೀರೆಲ್ಲ ಖಾಲಿಯಾಗುವ ಕೆರೆ!

ಮನುಷ್ಯರಿಗಷ್ಟೇ ಅಲ್ಲದೆ ಕಾಡು ಪ್ರಾಣಿಗಳಿಗಳಿಗೂ ಜೀವಸೆಲೆಯಾಗಿರುವ ಈ ಕೆರೆ
Last Updated 10 ಮಾರ್ಚ್ 2020, 8:26 IST
ಅಕ್ಷರ ಗಾತ್ರ

ನಲ್ಲಾಪುರ (ಹೊಸಪೇಟೆ ತಾಲ್ಲೂಕು): ಸಮೀಪದ ‘ಕೆರೆಕೆರೆ ಮೂಲೆ ಕೆರೆ’ ಸಂಪೂರ್ಣವಾಗಿ ತುಂಬಿದ ಮೂರ್ನಾಲ್ಕು ದಿನಗಳಲ್ಲಿಯೇ ಖಾಲಿಯಾಗುತ್ತಿದ್ದು, ಅದಕ್ಕೆ ನಿಖರ ಕಾರಣವೇನು ಎಂಬುದು ನಿಗೂಢವಾಗಿಯೇ ಉಳಿದಿದೆ.

ಇದು ಇತ್ತೀಚಿನ ವರ್ಷಗಳ ಬೆಳವಣಿಗೆಯಲ್ಲ. ಹಲವು ವರ್ಷಗಳಿಂದ ಇದೇ ರೀತಿಯಾಗುತ್ತಿದೆ. ಈ ಕುರಿತು ನಾಲ್ಕು ವರ್ಷಗಳ ಹಿಂದೆ ಗ್ರಾಮಸ್ಥರು ನೀರಾವರಿ ಇಲಾಖೆಯ ಗಮನಕ್ಕೆ ತಂದಿದ್ದರು. ಆಗ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ನೀರು ಬಸಿದು ಹೋಗುವ ಜಾಗ ಪರಿಶೀಲಿಸಿದ್ದರು. ನಂತರ ಅಲ್ಲಿ ಕಾಂಕ್ರೀಟ್‌ ಬೆಡ್‌ ಕೂಡ ಹಾಕಿದ್ದರು. ಆದರೆ, ನೀರು ಬಸಿದು ಹೋಗುವುದು ನಿಂತಿಲ್ಲ.

120 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಕೆರೆ ಭೌಗೋಳಿಕವಾಗಿ ಸೂಕ್ತ ಪ್ರದೇಶದಲ್ಲಿದೆ. ಸುತ್ತಲೂ ಬೆಟ್ಟ ಗುಡ್ಡಗಳಿಂದ ಆವೃತವಾಗಿರುವ ಕೆರೆಯಲ್ಲಿ ಸುಮಾರು 2ರಿಂದ 2.5 ಟಿ.ಎಂ.ಸಿ. ಅಡಿ ನೀರು ಸಂಗ್ರಹವಾಗುತ್ತದೆ. ಮಳೆಗಾಲದಲ್ಲಿ ಉತ್ತಮ ರೀತಿಯಲ್ಲಿ ಮಳೆಯಾಗಿ ಕೆರೆ ತುಂಬಿದರೆ, ತುಂಬಿದ ಮೂರರಿಂದ ನಾಲ್ಕು ದಿನಗಳೊಳಗೆ ಇಡೀ ಕೆರೆ ಖಾಲಿಯಾಗುತ್ತದೆ. ಒಂದು ಹನಿಯೂ ನೀರು ನಿಲ್ಲುವುದಿಲ್ಲ. ಇದೇ ವಿಷಯ ಗ್ರಾಮಸ್ಥರನ್ನು ತಲೆಕೆಡಿಸಿಕೊಳ್ಳುವಂತೆ ಮಾಡಿದೆ.

‘ಕೆರೆಕೆರೆ ಮೂಲೆ ಕೆರೆಗೆ ಸುದೀರ್ಘ ಇತಿಹಾಸವಿದೆ. ಭೌಗೋಳಿಕವಾಗಿ ಸೂಕ್ತ ಪ್ರದೇಶದಲ್ಲಿರುವ ಕಾರಣಕ್ಕಾಗಿಯೇ ಈ ಕೆರೆಯನ್ನು ಬ್ರಿಟಿಷರು ಅಭಿವೃದ್ಧಿ ಪಡಿಸಿದ್ದರು. ಆದರೆ, ಸ್ವಾತಂತ್ರ್ಯ ನಂತರ ಅದರ ಬಗ್ಗೆ ನಿರ್ಲಕ್ಷ್ಯ ತೋರಿರುವುದರಿಂದ ಯಾವುದೇ ಅಭಿವೃದ್ಧಿ ಕಂಡಿಲ್ಲ. ಹೀಗಿದ್ದರೂ ಮಳೆಗಾಲದಲ್ಲಿ ಕೆರೆ ಸಂಪೂರ್ಣ ಭರ್ತಿಯಾಗುತ್ತಿತ್ತು. ಸುತ್ತಮೂತ್ತಲೂ ಅಂತರ್ಜಲ ಹೆಚ್ಚಾಗುತ್ತಿತ್ತು. ಸುಮಾರು ಹತ್ತು ವರ್ಷಗಳ ಹಿಂದಿನಿಂದ ಕೆರೆಯ ನೀರು ಬಸಿದು ಹೋಗುತ್ತಿದೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನಲ್ಲಾಪುರ ಗ್ರಾಮ ಘಟಕದ ಅಧ್ಯಕ್ಷ ಹನುಮಂತಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಕೆರೆಯಲ್ಲಿ ನೀರು ನಿಂತರೆ ನಲ್ಲಾಪುರ, ಚಿನ್ನಾಪುರ, ಉಪ್ಪಾರಹಳ್ಳಿ ಹಾಗೂ ಎನ್‌.ಆರ್‌. ಕ್ಯಾಂಪಿನ ಕೃಷಿ ಜಮೀನಿಗೆ ನೀರು ಹರಿಸಬಹುದು. ಕುಡಿಯುವ ನೀರಿನ ಸಮಸ್ಯೆ ನೀಗಿಸಬಹುದು. ಆದರೆ, ಜನಪ್ರತಿನಿಧಿಗಳು, ಅಧಿಕಾರಿಗಳು ಅದರ ಬಗ್ಗೆ ಗಮನಹರಿಸುತ್ತಿಲ್ಲ’ ಎಂದು ವಿಷಾದದಿಂದ ಹೇಳಿದರು.

‘ನಮ್ಮ ಈಗಿನ ಜನಪ್ರತಿನಿಧಿಗಳಿಗೆ ಹೊಸ ಕೆರೆಗಳನ್ನು ಕಟ್ಟುವ ಇಚ್ಛಾಶಕ್ತಿ, ಮನಸ್ಸು ಎರಡೂ ಇಲ್ಲ. ಇರುವ ಪುರಾತನ ಕೆರೆಗಳನ್ನಾದರೂ ಸಂರಕ್ಷಿಸಬೇಕು. ಹಾಲಿ ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ಅವರಿಗೆ ರೈತರ ಬಗ್ಗೆ ವಿಶೇಷ ಕಾಳಜಿ ಇದೆ. ಅವರು ವಿಶೇಷ ಮುತುವರ್ಜಿ ವಹಿಸಿ, ಪರಿಶೀಲನೆ ನಡೆಸಿ, ಸಮಸ್ಯೆಗೆ ಪರಿಹಾರ ಕಲ್ಪಿಸಿಕೊಡಬೇಕು’ ಎಂದು ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಜೆ. ಕಾರ್ತಿಕ್‌ ಮನವಿ ಮಾಡಿದರು.

‘ಕೆರೆಯಿಂದ ರೈತರಿಗಷ್ಟೇ ಅಲ್ಲ, ಅದರ ಸುತ್ತಮೂತ್ತಲೂ ಚಿರತೆ, ಕರಡಿ, ಕಾಡುಬೆಕ್ಕು, ಕಾಡುಹಂದಿ ಸೇರಿದಂತೆ ದೊಡ್ಡ ಜೀವಜಾಲವೇ ಇದೆ. ಅವುಗಳ ದಾಹ ತಣಿಸಬಹುದು. ಅವುಗಳಿಗೆ ನೀರಿನ ವ್ಯವಸ್ಥೆಯಾದರೆ ಗ್ರಾಮಗಳು ಕಾಡುಪ್ರಾಣಿಗಳು ಲಗ್ಗೆ ಇಡುವುದು ತಪ್ಪುತ್ತದೆ’ ಎಂದರು. ಈ ಕುರಿತು ಜಿಲ್ಲಾಧಿಕಾರಿಯನ್ನು ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT