ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ದಿನ 254 ಶೌಚಾಲಯ ನಿರ್ಮಾಣ

‘ಸ್ವಚ್ಛ ಭಾರತ್ ಮಿಷನ್’: ಮೊಳಕಾಲ್ಮುರಿನಲ್ಲಿ ವಿನೂತನ ಪ್ರಯೋಗ
ಅಕ್ಷರ ಗಾತ್ರ

ಮೊಳಕಾಲ್ಮುರು: ತಾಲ್ಲೂಕಿನ ರಾಂಪುರದಲ್ಲಿ ಬುಧವಾರ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಒಂದೇ ದಿನ 254 ವೈಯಕ್ತಿಕ ಶೌಚಾಲಯ ನಿರ್ಮಿಸುವ ಮೂಲಕ ಸ್ಥಳೀಯ ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ದಾಖಲೆ ನಿರ್ಮಿಸಿದೆ.

ಈ ಮೂಲಕ ಕಳೆದ ವರ್ಷ ದಾವಣಗೆರೆಯಲ್ಲಿ ಒಂದೇ ದಿನ 202 ಶೌಚಾಲಯಗಳನ್ನು ನಿರ್ಮಿಸಿದ್ದ ದಾಖಲೆಯನ್ನು ಹಿಂದಿಕ್ಕಲಾಗಿದೆ. ಜಿಲ್ಲೆಯ ಗಡಿಭಾಗದ ರಾಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂರು ಗ್ರಾಮಗಳಲ್ಲಿ ಬೆಳಗಿನ ಜಾವ 3 ಗಂಟೆಯಿಂದ ಕಾಮಗಾರಿ ಆರಂಭಿಸಲಾಗಿತ್ತು.

ಆನ್‌ಲೈನ್‌ ಮೂಲಕ ಹಣ ಪಾವತಿ: ದಾವಣಗೆರೆಯಲ್ಲಿ ನಡೆದ ಕಾಮಗಾರಿಯ ದಿನದಂದೇ ಫಲಾನುಭವಿಗಳಿಗೆ ಹಣ ಪಾವತಿ ಮಾಡಿರಲಿಲ್ಲ. ಆದರೆ, ಇಲ್ಲಿ ಆನ್‌ಲೈನ್ ಮೂಲಕ ಬುಧವಾರವೇ ಫಲಾನುಭವಿಗಳ ಖಾತೆಗೆ ಹಣ ಪಾವತಿ ಮಾಡಲಾಗುವುದು ಎಂದು ನೇತೃತ್ವ ವಹಿಸಿದ್ದ ಕಾರ್ಯನಿರ್ವಹಣಾಧಿಕಾರಿ ಡಾ. ಶ್ರೀಧರ ಬಾರಿಕೇರ ಮಾಹಿತಿ ನೀಡಿದರು.

‘ಎರಡು ವರ್ಷಗಳಿಂದ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಲಾಗುತ್ತಿತ್ತು. ಇಂದು, ನಾಳೆ ಎಂದು ಸಬೂಬು ಹೇಳುತ್ತಲೇ ಇದ್ದರು. ಸ್ವಚ್ಛ ಭಾರತ್ ಕಾರ್ಯಕ್ರಮ ಜೂನ್ 30ಕ್ಕೆ ಕೊನೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಯಿತು. ಕೊಪ್ಪಳದ ಸುಧನ್ವ ಎಂಟರ್ ಪ್ರೈಸಸ್ ಹಾಗೂ ಹೊಸದುರ್ಗದ ಖುಷಿ ಗಣೇಶ್ ಎಂಟರ್‌ಪ್ರೈಸಸ್ ಸಹಯೋಗದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಎಂಟರ್‌ಪ್ರೈಸಸ್‌ನವರು ಥರ್ಡ್‌ ಪಾರ್ಟಿಯಾಗಿ ಕೆಲಸ ಮಾಡಿದ್ದಾರೆ. ಫಲಾನುಭವಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ನಂತರ ಹಣ ಪಡೆದುಕೊಳ್ಳಲಿದ್ದಾರೆ’ ಎಂದು ಹೇಳಿದರು.

‘ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡೇರಹಳ್ಳಿಯಲ್ಲಿ 22, ಕೆ.ಕೆ.ಪುರದಲ್ಲಿ 18 ಮತ್ತು ರಾಂಪುರದಲ್ಲಿ 214 ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ 194 ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು 60 ಸಾಮಾನ್ಯ ವರ್ಗದ ಫಲಾನುಭವಿಗಳು ಇದ್ದಾರೆ. ತಾಲ್ಲೂಕಿನಲ್ಲಿ ಜೂನ್‌ 30ರೊಳಗಾಗಿ 3,000 ಶೌಚಾಲಯಗಳನ್ನು ನಿರ್ಮಿಸುವ ಗುರಿ ಇದ್ದು, ಕಾಮಗಾರಿ ಪೂರ್ಣ
ಗೊಳಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಈ ಯೋಜನೆಯಡಿ ಸಾಮಾನ್ಯ ಫಲಾನುಭವಿಗಳಿಗೆ 12,000 ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ₹15,000 ಸಹಾಯಧನ ನೀಡಲಾಗುವುದು. ಜಿಲ್ಲಾ ಪಂಚಾಯಿತಿ ಸಿಇಒ ಸತ್ಯಭಾಮ ಮಾರ್ಗದರ್ಶನದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳ
ಲಾಗಿದೆ’ ಎಂದು ಶ್ರೀಧರ ಬಾರಿಕೇರ ತಿಳಿಸಿದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಸುಶೀಲಮ್ಮ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತಾ, ಉಪಾಧ್ಯಕ್ಷ ಜಯಕುಮಾರ್ ಹಾಗೂ ಸದಸ್ಯರು ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT