ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ ಗೆಲ್ಲಲು ಮೋಸಂಬಿ ಕೃಷಿ

ಪಾವಗಡ ತಾಲ್ಲೂಕಿನಲ್ಲಿ ತೋಟಗಾರಿಕೆ ಇಲಾಖೆಯಿಂದ ಪ್ರಯೋಗ
Last Updated 19 ಡಿಸೆಂಬರ್ 2018, 7:57 IST
ಅಕ್ಷರ ಗಾತ್ರ

ತುಮಕೂರು: ಬರದ ವಿಚಾರದಲ್ಲಿ ರಾಜ್ಯದಲ್ಲಿಯೇ ಪ್ರಮುಖವಾಗಿ ಗುರುತಿಸುವ ತಾಲ್ಲೂಕು ಪಾವಗಡ. ಬೇಸಿಗೆಯೇ ಆರಂಭವಾಗಿಲ್ಲ. ಈಗಲೇ ಇಲ್ಲಿನ 78 ಗ್ರಾಮಗಳಲ್ಲಿ ನೀರಿನ ಕೊರತೆ ಎದುರಾಗಬಹುದು ಎಂದು ಅಂದಾಜಿಸಿ ಜಿಲ್ಲಾಡಳಿತ ಪಟ್ಟಿ ಸಿದ್ಧಪಡಿಸಿದೆ.

ತಾಲ್ಲೂಕಿನಲ್ಲಿ ಬರ ಗೆಲ್ಲುವ ಉದ್ದೇಶದಿಂದ ತೋಟಗಾರಿಕಾ ಇಲಾಖೆ ಕ್ಲಸ್ಟರ್ (ಘಟಕ) ಬೇಸಾಯ ಪರಿಕಲ್ಪನೆಯಡಿ ರೈತರ ಹೊಲಗಳಲ್ಲಿ ಮೋಸಂಬಿ ಬೆಳೆಸುತ್ತಿದೆ. ಈ ಮೋಸಂಬಿ ಕೃಷಿಯಿಂದ ತಾಲ್ಲೂಕನ್ನು ಬರಮುಕ್ತವಾಗಿಸುವ ಉದ್ದೇಶ ಇದೆ.

ವಳ್ಳೂರು, ತಿರುಮಣಿ ಮತ್ತು ಅನ್ನದಾನಪುರ ಗ್ರಾಮದ 60 ಎಕರೆಯಲ್ಲಿ ಈಗಾಗಲೇ ಸಸಿಗಳನ್ನು ನಾಟಿ ಮಾಡಲಾಗಿದೆ. 40 ಎಕರೆಯಲ್ಲಿ ನಾಟಿ ಕಾರ್ಯಗಳು ನಡೆಯುತ್ತಿವೆ. ಅಲ್ಲದೆ ಮತ್ತಷ್ಟು ಬೇಡಿಕೆಯೂ ಇದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಜಿಲ್ಲೆಯಲ್ಲಿ ಮೋಸಂಬಿ ಬೆಳೆಯುತ್ತಿರುವುದು ಇದೇ ಮೊದಲು. ಬೆಳೆಗೆ ಅಗತ್ಯವಿರುವ ಕೀಟನಾಶಕ, ಗೊಬ್ಬರ ಹಾಗೂ ಅಗತ್ಯ ಸಾಮಗ್ರಿಗಳನ್ನು ಸಗಟು ದರದಲ್ಲಿ ಖರೀದಿಸಲಾಗುತ್ತಿದೆ.

ಪಾವಗಡದ ಹವಾಗುಣವನ್ನೇ ಹೊಂದಿರುವ ನೆರೆಯ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಮೋಸಂಬಿ ಪ್ರಮುಖ ಬೆಳೆ. ಅಲ್ಲಿನ ರೈತರ ಆರ್ಥಿಕ ಸ್ಥಿತಿಗತಿಗಳನ್ನು ಪರಿಶೀಲಿಸಿದ ನಂತರವೇ ಇಲ್ಲಿ ಮೋಸಂಬಿ ನಾಟಿಗೆ ಇಲಾಖೆ ಮುಂದಾಗಿದೆ. ಒಂದೇ ಕಡೆ ಹೆಚ್ಚು ಬೆಳೆಯನ್ನು ನಾಟಿ ಮಾಡುವುದರಿಂದ ಮಾರುಕಟ್ಟೆಗೂ ಅನುಕೂಲವಾಗಲಿದೆ ಎನ್ನುವ ಆಲೋಚನೆ ಇದೆ.

ಮೋಸಂಬಿ ಅಷ್ಟೇ ಅಲ್ಲ, ನೇರಳೆ, ಗೋಡಂಬಿ, ಸೀಬೆ ಸೇರಿದಂತೆ ಬರ ಎದುರಿಸಿ ಸಮರ್ಥವಾಗಿ ಬೆಳೆಯಬಲ್ಲ ಗಿಡಗಳನ್ನು ಪಾವಗಡದ ರೈತರ ಹೊಲಗಳಲ್ಲಿ ನಾಟಿ ಮಾಡಿಸಲು ಯೋಜನೆಗಳು ಸಿದ್ಧಗೊಳ್ಳುತ್ತಿವೆ. ಈ ಮೂಲಕ ‘ಶಾಶ್ವತ ಬರ’ ಎನ್ನುವ ಸ್ಥಿತಿ ಹೊಂದಿರುವ ತಾಲ್ಲೂಕನ್ನು ಬರಮುಕ್ತಗೊಳಿಸುವ ದೂರದೃಷ್ಟಿ ಇದೆ.

ತಿರುಮಣಿಯಲ್ಲಿ ಏಷ್ಯಾದಲ್ಲಿಯೇ ಅತಿ ದೊಡ್ಡದು ಎನ್ನುವ ಹೆಗ್ಗಳಿಕೆ ಹೊಂದಿರುವ ಸೋಲಾರ್ ‍ಪಾರ್ಕ್ ನಿರ್ಮಾಣವಾಗಿದೆ. ಬಹುತೇಕ ರೈತರು ಜಮೀನುಗಳನ್ನು ಪಾರ್ಕ್‌ಗೆ ಗುತ್ತಿಗೆ ನೀಡಿದ್ದಾರೆ. ಕೆಲವು ರೈತರು ಹಿಡುವಳಿಯ ಅರ್ಧ ಜಮೀನನ್ನು ಪಾರ್ಕ್‌ಗೆ ನೀಡಿದ್ದರೆ ಉಳಿದ ಅರ್ಧ ಜಮೀನಿನಲ್ಲಿ ಮೋಸಂಬಿ ಬೆಳೆಯಲು ಮುಂದಾಗಿದ್ದಾರೆ. ಈ ಮೋಸಂಬಿ ಬೆಳೆ ಎಷ್ಟರ ಮಟ್ಟಿಗೆ ಬದಲಾವಣೆ ತಂದಿದೆ ಎಂದರೆ ರೈತರನ್ನು ‘ಉಳಿದ ಜಮೀನನ್ನು ಪಾರ್ಕ್‌ಗೆ ನೀಡುವಿರಾ’ ಎಂದು ಪ್ರಶ್ನಿಸಿದರೆ, ಬೆಳೆ ನಾಟಿ ಮಾಡುವ ಬಗ್ಗೆ ಮಾತನಾಡುವರು.

‘ತಾಲ್ಲೂಕಿನಲ್ಲಿ ನೀರಿನ ಆಶ್ರಯ ಕಡಿಮೆ. ನೀರಾವರಿಯುಳ್ಳ ರೈತರ ಸಂಖ್ಯೆ ಇನ್ನೂ ಕಡಿಮೆ. ಕೊಳವೆಬಾವಿ ಇದ್ದವರು ಕರ್ಬೂಜ, ಟೊಮೆಟೊ, ದಾಳಿಂಬೆ ಹೆಚ್ಚು ಬೆಳೆಯುವರು. ಈ ಭಾಗದಲ್ಲಿ ನೀರನ್ನು ಅತ್ಯಮೂಲ್ಯವಾಗಿ ಬಳಸಬೇಕಾಗಿದೆ. ಆದ್ದರಿಂದ ಕಡಿಮೆ ನೀರು ಕೇಳುವ ಮತ್ತು ರೈತರನ್ನು ಆರ್ಥಿಕ ಸುಸ್ಥಿರಗೊಳಿಸುವ ಬೆಳೆಗಳನ್ನು ಬೆಳೆಸಲು ಮುಂದಾಗಿದ್ದೇವೆ’ ಎನ್ನುವರು ತಾಲ್ಲೂಕು ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸುಧಾಕರ್.

ಆಸಕ್ತ ರೈತರಿಗೆ ಸಹಕಾರ

‘40 ಎಕರೆಯಲ್ಲಿ ಮೋಸಂಬಿ ನಾಟಿ ಸಿದ್ಧತೆ ನಡೆಯುತ್ತಿದೆ. ಎಕರೆಗೆ ಮಿತಿ ಹಾಕಿಕೊಂಡಿಲ್ಲ. ಆಸಕ್ತ ಹಳ್ಳಿಗಳ ರೈತರು ಮುಂದೆ ಬಂದರೆ ಅವರಿಗೆ ಸಹಕಾರ ನೀಡಲಾಗುವುದು’ ಎನ್ನುವರು ಸುಧಾಕರ್.

‘ನರೇಗಾ ಯೋಜನೆಯಡಿ ಉದ್ಯೋಗ ಚೀಟಿ ಮಾಡಿಸಿಕೊಂಡಿರುವ ರೈತರು ತಮ್ಮ ಜಮೀನಿನಲ್ಲಿಯೇ ಮೋಸಂಬಿ ನಾಟಿಯ ಕೆಲಸ ಮಾಡಿ ಒಂದು ಎಕರೆಗೆ ₹ 50 ಸಾವಿರದ ವರೆಗೂ ಕೂಲಿ ಹಣ ಪಡೆದಿದ್ದಾರೆ. ಇದರಿಂದ ರೈತರಿಗೆ ಆರ್ಥಿಕ ಹೊರೆ ಸಹ ತಗ್ಗುತ್ತದೆ’ ಎಂದು ವಿವರಿಸುವರು.

ಬಿಸಿಲಿನ ಬೆಳೆ; ಲಾಭ ಸಾಧ್ಯತೆ

‘7 ಎಕರೆಯಲ್ಲಿ 1080 ಸಸಿ ನಾಟಿ ಮಾಡಿದ್ದೇವೆ. ಆಂಧ್ರಪ್ರದೇಶ ದಲ್ಲಿ ರೈತರ ತೋಟಗಳನ್ನು ನೋಡಿ ಬಂದಿದ್ದೇವೆ. ಬೆಳೆಯ ಸಾಧಕ ಬಾಧಕಗಳನ್ನು ನೋಡಿದ್ದೇವೆ. ಈ ಬೆಳೆಗೆ ಹೆಚ್ಚು ಬಿಸಿಲು ಅಗತ್ಯ. ಬೇರೆ ಬೆಳೆಗಿಂತ ಇದು ನಮಗೆ ಅನುಕೂಲವಾಗುವ ಸಾಧ್ಯತೆ ಇದೆ. ಈ ದೃಷ್ಟಿಯಿಂದ ಮೋಸಂಬಿ ನಾಟಿ ಮಾಡಿದ್ದೇವೆ’ ಎನ್ನುವರು ರೈತ ವಿಜಯಭಾಸ್ಕರ್.

ಹೆಚ್ಚು ಕಾರ್ಮಿಕರ ಅಗತ್ಯ ಇಲ್ಲ

‘10 ಎಕರೆಯಲ್ಲಿ ನಾಟಿ ಮಾಡಿದ್ದೇವೆ. ನಾಲ್ಕರಿಂದ ಐದು ವರ್ಷಕ್ಕೆ ಫಸಲು ಬರುತ್ತದೆ ಎಂದು ಹೇಳಿದ್ದಾರೆ. ಮೋಸಂಬಿ ನಿರ್ವಹಣೆಗೆ ಹೆಚ್ಚು ಕಾರ್ಮಿಕರ ಅಗತ್ಯವೂ ಇಲ್ಲ. ಇದರಿಂದ ಹಣವೂ ಹೆಚ್ಚು ವ್ಯಯವಾಗುವುದಿಲ್ಲ. ಉದ್ಯೋಗ ಖಾತರಿ ಯೋಜನೆಯಿಂದ ಈ ನಾಟಿ ಕಾರ್ಯಕ್ಕೆ ಅನುಕೂಲವಾಗಿದೆ. ಈ ಬೆಳೆ ನಮ್ಮ ಭಾಗದ ಬರವನ್ನು ನೀಗಿಸುವ ಶಕ್ತಿ ಹೊಂದಿದೆ ಎನ್ನುವ ವಿಶ್ವಾಸ ಇದೆ’ ಎನ್ನುವರು ಅಪ್ಪಾಜಿಹಳ್ಳಿಯ ರೈತ ಸುಬ್ರಹ್ಮಣ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT