ಜಿಲ್ಲಾ ಆಡಳಿತದಲ್ಲಿ ಸಾ.ರಾ ಹಸ್ತಕ್ಷೇಪ: ಜಿ.ಟಿ ಅಸಮಾಧಾನ

7
ಮೈಸೂರು ಜೆಡಿಎಸ್‌ನಲ್ಲಿ ಮುಸುಕಿನ ಗುದ್ದಾಟ

ಜಿಲ್ಲಾ ಆಡಳಿತದಲ್ಲಿ ಸಾ.ರಾ ಹಸ್ತಕ್ಷೇಪ: ಜಿ.ಟಿ ಅಸಮಾಧಾನ

Published:
Updated:

ಬೆಂಗಳೂರು: ದಸರಾ ಸಿದ್ಧತೆಯೂ ಸೇರಿ ಮೈಸೂರು ಜಿಲ್ಲೆಯ ಆಡಳಿತಾತ್ಮಕ ವಿಷಯಗಳಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಮತ್ತು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ಹಸ್ತಕ್ಷೇಪದಿಂದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ತೀವ್ರ ಅಸಮಾಧಾನಗೊಂಡಿದ್ದಾರೆ.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರ ಆಪ್ತ ವಲಯದಲ್ಲಿರುವ ಪ್ರಭಾವಿ ಸಚಿವ ಸಾ.ರಾ.ಮಹೇಶ್‌ ತಮ್ಮ ವ್ಯಾಪ್ತಿಯನ್ನು ಮೀರಿ ಮೈಸೂರು ಜಿಲ್ಲೆಗೆ ಸಂಬಂಧಿಸಿದ ಕಡತಗಳ ಪರಿಶೀಲನೆ, ಸಭೆ ನಡೆಸುವುದರ ಜೊತೆಗೆ ಆದೇಶಗಳನ್ನು ನೀಡುತ್ತಿದ್ದಾರೆ. ಅಧಿಕಾರಿಗಳೂ ಸಾ.ರಾ.ಮಹೇಶ್‌ ಆದೇಶಗಳನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದಾರೆ. ಇದರಿಂದ ಜಿ.ಟಿ.ಯವರಲ್ಲಿ ತಾವು ಮೂಲೆಗುಂಪಾಗುತ್ತಿದ್ದೇನೆ ಎಂಬ ಭಾವನೆ ಮೂಡಿದೆ ಎಂದು ಜಿ.ಟಿ.ದೇವೇಗೌಡರ ಆಪ್ತ ಮೂಲಗಳು ತಿಳಿಸಿವೆ.

ಉನ್ನತ ಶಿಕ್ಷಣ ಇಲಾಖೆ ಮಹತ್ವದ ಖಾತೆ ಆಗಿರುವುದರಿಂದ ದೇವೇಗೌಡ ಅವರು ಬೆಂಗಳೂರಿನಲ್ಲೇ ಹೆಚ್ಚಿನ ಸಮಯ ಉಳಿಯಬೇಕಾಗುತ್ತದೆ. ಇದರ ಲಾಭ ಪಡೆದ ಸಾ.ರಾ.ಮಹೇಶ್‌ ಜಿಲ್ಲೆಯ ಆಡಳಿತವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಜಿಲ್ಲಾ ರಾಜಕೀಯದಲ್ಲೂ ಪ್ರಾಬಲ್ಯ ಸಾಧಿಸುವತ್ತ ದಾಪುಗಾಲಿಟ್ಟಿದ್ದಾರೆ ಎಂದು ಮೂಲಗಳು ಹೇಳಿವೆ.

‘ಮೈಸೂರು ದಸರಾ ಸಿದ್ಧತೆಗೆ ಸಂಬಂಧಿಸಿದ ಸಭೆಗಳಲ್ಲಿ ಮಹತ್ವದ ನಿರ್ಣಯಗಳನ್ನು ಸಾ.ರಾ ಅವರೇ ತೆಗೆದುಕೊಂಡಿದ್ದಾರೆ. ಅಲ್ಲಿ ದೇವೇಗೌಡರ ಮಾತುಗಳಿಗೆ ಹೆಚ್ಚಿನ ಮಾನ್ಯತೆ ಸಿಗಲಿಲ್ಲ ಮತ್ತು ದಸರಾಗೆ ಸಂಬಂಧಿಸಿದ ಕೆಲವು ಪೋಸ್ಟರ್‌ಗಳಲ್ಲಿ ಗೌಡರ ಚಿತ್ರ ಹಾಕದಿರುವುದು ಅವರ ಅಭಿಮಾನಿಗಳಲ್ಲಿ ಬೇಸರ ಉಂಟು ಮಾಡಿದೆ’.

‘ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಿ ಪಕ್ಷಕ್ಕೆ ಆತ್ಮಸ್ಥೈರ್ಯ ತುಂಬಿದ ಜಿ.ಟಿ.ದೇವೇಗೌಡ ಈಗ ಏಕಾಂಗಿ ಆಗಬೇಕಾದ ಸ್ಥಿತಿ ಉದ್ಭವಿಸಿದೆ. ಆರಂಭದಲ್ಲೇ ಈ ಸಮಸ್ಯೆಯನ್ನು ಸರಿಪಡಿಸಬೇಕು. ಇಲ್ಲವಾದರೆ, ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಹಾನಿ ಆಗುವುದು ಖಚಿತ. ಕುಮಾರಸ್ವಾಮಿ ಮತ್ತು ಎಚ್‌.ಡಿ.ದೇವೇಗೌಡರು ಗಮನಹರಿಸುವುದು ಸೂಕ್ತ’ ಎಂದು ಜಿ.ಟಿ ಆಪ್ತ ವಲಯ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !