ಗುರುವಾರ , ಮೇ 6, 2021
30 °C
ಮೈಸೂರು– ತಲಶ್ಶೇರಿ ರೈಲು ಯೋಜನೆ ಕಾರ್ಯಗತ ಇಲ್ಲ: ರೈಲ್ವೆ ಸಚಿವರ ಭರವಸೆ

ಪಶ್ಚಿಮಘಟ್ಟದ ಪರಿಸರಕ್ಕೆ ಮಾರಕ ಯೋಜನೆ

ಎಸ್‌.ರವಿಪ್ರಕಾಶ್ Updated:

ಅಕ್ಷರ ಗಾತ್ರ : | |

ಪಶ್ಚಿಮಘಟ್ಟ

ಬೆಂಗಳೂರು: ಪಶ್ಚಿಮಘಟ್ಟದ ಗರ್ಭವನ್ನು ಸೀಳಿಕೊಂಡು ಹೋಗುವ ಕೇರಳದ ಉದ್ದೇಶಿತ ಮೈಸೂರು– ತಲಶ್ಶೇರಿ ರೈಲು ಮಾರ್ಗ ಯೋಜನೆ, ಅಪೂರ್ವ ಸಸ್ಯ ಸಂಪತ್ತು, ಪ್ರಾಣಿ, ಪಕ್ಷಿ, ಜಲ ಮೂಲಗಳ ಅಸ್ತಿತ್ವಕ್ಕೇ ಧಕ್ಕೆ ತರಲಿದೆ.

ಪಶ್ಚಿಮಘಟ್ಟದ ಜೀವ ವೈವಿಧ್ಯಕ್ಕೆ ಆತಂಕಕಾರಿಯಾಗಬಲ್ಲ, ಕೇರಳದ ಈ ಪ್ರಯತ್ನಕ್ಕೆ ಮಾನ್ಯತೆ ನೀಡಬಾರದು ಎಂದು ವೈಲ್ಡ್‌ಲೈಫ್‌ ಫಸ್ಟ್‌ ಮತ್ತು ಕೊಡಗು ಏಕೀಕರಣ ರಂಗ ರೈಲ್ವೆ ಸಚಿವ ಪೀಯೂಷ್‌ ಗೋಯಲ್‌ ಅವರಿಗೆ ಮನವಿ ಮಾಡಿದೆ.

ದೆಹಲಿಯಲ್ಲಿ ರೈಲ್ವೆ ಸಚಿವರನ್ನು ಭೇಟಿ ಮಾಡಿದ ಈ ಸಂಘಟನೆಗಳ ಸದಸ್ಯರು, ಯೋಜನೆಯಿಂದ ಆಗುವ ಪ್ರಾಕೃತಿಕ ಹಾನಿ ಬಗ್ಗೆ ಕೂಲಂಕಷವಾಗಿ ವಿವರಿಸಿ, ಪ್ರಸ್ತಾವವನ್ನು ತಿರಸ್ಕರಿಸುವಂತೆಯೂ ಒತ್ತಾಯಿಸಿದರು.

‘ಪಶ್ಚಿಮಘಟ್ಟದ ಈ ಭಾಗದಲ್ಲಿ ಜಾಗತಿಕವಾಗಿ ಅಳಿವಿನಂಚಿನಲ್ಲಿರುವ 325 ಪ್ರಭೇದಗಳ ಜೀವ ವೈವಿಧ್ಯಗಳು ಇಲ್ಲಿವೆ. ಅವುಗಳಲ್ಲಿ 229 ಸಸ್ಯಗಳು, ಪುಷ್ಪಗಳು ಮತ್ತು ಈವರೆಗೂ ಪತ್ತೆ ಹಚ್ಚಲಾಗದ ಔಷಧೀಯ ಸಸ್ಯಗಳ ಭಂಡಾರವೇ ಇದೆ’.

‘ಅಲ್ಲದೆ, 31 ಜಾತಿಯ ಸಸ್ತನಿಗಳು, 15 ಬಗೆಯ ಪಕ್ಷಿಗಳು, 43 ರೀತಿಯ ಉಭಯಚರಗಳು, 5 ಬಗೆಯ ಸರಿಸೃಪ
ಗಳಿವೆ. ಇದರಲ್ಲಿ 129 ಪ್ರಬೇಧಗಳು ಸಂಕಷ್ಟದಲ್ಲಿವೆ, 145 ಅಳಿವಿನಂಚಿನಲ್ಲೂ, 51 ಗಂಭೀರ ಅಳಿವಿನಂಚಿನಲ್ಲಿವೆ. ಇಂತಹ ಸ್ಥಿತಿಯಲ್ಲಿ ಈ ಪ್ರದೇಶದಲ್ಲಿ ರೈಲ್ವೆ ಮಾರ್ಗದ ಮೂಲಕ ಮಾನವ ಹಸ್ತಕ್ಷೇಪ ಆದರೆ, ಊಹಿಸಲೂ ಆಗದ ಅನಾಹುತವಾಗುತ್ತದೆ’ ಎಂದು ಅವರ ಗಮನಕ್ಕೆ ತಂದಿರುವುದಾಗಿ ‘ವೈಲ್ಡ್‌ಲೈಫ್‌ ಫಸ್ಟ್‌’ನ ಪ್ರವೀಣ್‌ ಭಾರ್ಗವ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಟಲ್‌ ಬಿಹಾರಿ ವಾಜಪೇಯಿ ಪ್ರಧಾನಿ ಆಗಿದ್ದ ಸಂದರ್ಭದಲ್ಲಿ ಅವರ ದೂರದರ್ಶಿತ್ವದ ಫಲವಾಗಿ ಪಶ್ಚಿಮಘಟ್ಟಕ್ಕೆ ಯುನೆಸ್ಕೊದ ವಿಶ್ವ ಪಾರಂಪರಿಕ ತಾಣದ ಮಾನ್ಯತೆ ಸಿಕ್ಕಿತು. ಅಲ್ಲದೆ, ಯುಪಿಎ–2 ಸರ್ಕಾರದ ಅವಧಿಯಲ್ಲಿ ಅಂದಿನ ಪ್ರಧಾನಿ ಡಾ.ಮನಮೋಹನ ಸಿಂಗ್‌ ಅಧ್ಯಕ್ಷತೆಯಲ್ಲಿ ಅರಣ್ಯ ಮಂಡಳಿ ಸಭೆ ನಡೆದ ಸಂದರ್ಭದಲ್ಲಿ ಇಂತಹ ಯೋಜನೆಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದು ಬೇಡ ಎಂದು ಸ್ಪಷ್ಟವಾಗಿ ಸೂಚಿಸಿದ್ದರು’ ಎಂದು ಅವರು ಹೇಳಿದರು.

ಹವಾಮಾನ ಬದಲಾವಣೆ: ರೈಲ್ವೆ ಮಾರ್ಗ ಅಥವಾ ರಸ್ತೆಗಳ ನಿರ್ಮಾಣದಂತಹ ಸಣ್ಣ– ಪುಟ್ಟ ಹಸ್ತಕ್ಷೇಪವೂ ಪಶ್ಚಿಮಘಟ್ಟದ ತಿಳಿಯಾದ ಪರಿಸರ ವ್ಯವಸ್ಥೆಯನ್ನು ಬಗ್ಗಡಗೊಳಿಸಿದಂತಾಗುತ್ತದೆ. ಆದ್ದರಿಂದ, ಪರಿಸರ ಹಾಳುಗೆಡಹುವ ಯಾವುದೇ ಪ್ರಸ್ತಾವಗಳನ್ನೂ ಮಾನ್ಯ ಮಾಡಬಾರದು ಎಂದು ತಿಳಿಸಿದ್ದಾರೆ.

ಉದ್ದೇಶಿತ ರೈಲು ಮಾರ್ಗಕ್ಕಾಗಿ ಕೇರಳ ಗುರುತಿಸಿರುವ ಪ್ರದೇಶವು ಅತ್ಯಂತ ಅಪರೂಪದ ವನ್ಯಜೀವಿಗಳ ಆವಾಸ ಸ್ಥಾನವಾಗಿದೆ. ಕೊಡಗು, ನಾಗರಹೊಳೆ ಮತ್ತು ಬಂಡಿಪುರ ವ್ಯಾಪ್ತಿಯಲ್ಲಿ ಹುಲಿಗಳು ಮತ್ತು ಆನೆಗಳು ಓಡಾಡುವ ವ್ಯಾಪ್ತಿಯೂ ಆಗಿದೆ ಎಂಬುದನ್ನು ಸಚಿವರ ಗಮನಕ್ಕೆ ತಂದಿರುವುದಾಗಿ ಹೇಳಿದರು.

ವನ್ಯಜೀವಿ ವ್ಯವಸ್ಥೆಗೆ ಕೈಹಾಕಿದ್ದೇ ಆದರೆ, ವನ್ಯಜೀವಿಗಳು ಮತ್ತು ಅರಣ್ಯ ಉಳಿಯುವುದೇ ಕಷ್ಟವಾಗುತ್ತದೆ. ನಾಶದ ಅಂದಾಜು ಮಾಡುವುದೇ ಕಷ್ಟವಾಗುತ್ತದೆ. ಮುಖ್ಯವಾಗಿ, ಇದು ಹುಲಿಗಳು ಮತ್ತು ಆನೆಗಳಿಗೂ ಜಲಾಶ್ರಿತ ತಾಣವೂ ಆಗಿದೆ ಎಂದರು.

‘ಯೋಜನೆಗೆ ಒಪ್ಪಿಗೆ ಇಲ್ಲ’

ಮೈಸೂರು– ತಲಶ್ಯೇರಿ ರೈಲು ಮಾರ್ಗ ಯೋಜನೆಯನ್ನು ಶತಾಯಗತಾಯ ಜಾರಿ ಮಾಡಲೇಬೇಕು ಎಂಬ ಧಾವಂತದಲ್ಲಿರುವ ಕೇರಳದ ಉದ್ದೇಶ ಈಡೇರುವ ಸಾಧ್ಯತೆ ಇಲ್ಲ.

ವೈಲ್ಡ್‌ಲೈಫ್‌ ಫಸ್ಟ್‌ ಮತ್ತು ಕೊಡಗು ಏಕೀಕರಣ ಸಮಿತಿಯ ಅಹವಾಲು ಆಲಿಸಿದ ರೈಲ್ವೆ ಸಚಿವರು 1969 ರಿಂದಲೂ ಕೇರಳ ಇದನ್ನು ಪದೇ ಪದೇ ಪ್ರಸ್ತಾಪಿಸುತ್ತಿದೆ. ಆದರೆ, ಇದಕ್ಕೆ ಒಪ್ಪಿಗೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟ ಭರವಸೆ ನೀಡಿದ್ದಾರೆ ಎಂದು ಪ್ರವೀಣ್ ಭಾರ್ಗವ್‌ ತಿಳಿಸಿದ್ದಾರೆ.

ಕೇರಳಕ್ಕಿರುವ ಪರ್ಯಾಯಗಳು

ಈಗಾಗಲೇ ಬೆಂಗಳೂರು–ಮೈಸೂರು– ಮಂಗಳೂರು ಮಾರ್ಗದ ರೈಲು ತಲಶ್ಶೇರಿಗೆ ಹೋಗುತ್ತದೆ. ಸದ್ಯಕ್ಕೆ ಬೆಳಿಗ್ಗೆ ಮತ್ತು ರಾತ್ರಿ ಮಾತ್ರ ಸಂಚರಿಸುತ್ತದೆ. ಅಲ್ಲೇ ಹೆಚ್ಚುವರಿ ರೈಲುಗಳನ್ನು ಹಾಕಬಹುದು.

* ಸುಲ್ತಾನ್‌ ಬತ್ತೇರಿಯಿಂದ ಗುಂಡ್ಲುಪೇಟೆ ಮೂಲಕ ಮೈಸೂರಿಗೆ ರಸ್ತೆ ಇದೆ. ಅದನ್ನು ಬಳಸಿಕೊಳ್ಳಬಹುದು

* ಮೈಸೂರು– ತಲಶ್ಶೇರಿ ಮಾರ್ಗ ಆರ್ಥಿಕವಾಗಿಯೂ ಲಾಭವಲ್ಲದ ಯೋಜನೆ ಎಂದು ಹಿಂದೆ ರೈಲ್ವೆ ಇಲಾಖೆ ನಡೆಸಿದ ಸಮೀಕ್ಷೆ ವರದಿ ಸ್ಪಷ್ಟಪಡಿಸಿದೆ. ಯಾವುದೇ ಮಾರ್ಗ ಹಾಕಿದರೂ ಶೇ 14 ರಷ್ಟು ಹಣ ಹಿಂದಕ್ಕೆ ಬರಬೇಕು. ಆದರೆ ಈ ಮಾರ್ಗದಲ್ಲಿ ಓಡಾಡುವ ಪ್ರಯಾಣಿಕ ಸಂಖ್ಯೆ (–6%) ತೀರಾ ಕಡಿಮೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು