ಟಿಇಟಿ ಪ್ರಶ್ನೆ ಪತ್ರಿಕೆ ಸೋರಿಕೆ ?

7
ದೂರು ಬಂದಿಲ್ಲ, ಮಾಹಿತಿಯೂ ಇಲ್ಲ ಎಂದ ಡಿಡಿಪಿಐ

ಟಿಇಟಿ ಪ್ರಶ್ನೆ ಪತ್ರಿಕೆ ಸೋರಿಕೆ ?

Published:
Updated:

ಧಾರವಾಡ: ರಾಜ್ಯದಾದ್ಯಂತ ಭಾನುವಾರ (ಫೆ.3) ನಡೆದ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ- ಬಿ.ಇಡಿ) ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಕುರಿತು ಅಭ್ಯರ್ಥಿಗಳು ಬಲವಾದ ಶಂಕೆ ವ್ಯಕ್ತಪಡಿಸಿದ್ದಾರೆ.

ಇದಕ್ಕಾಗಿ, ಅಭ್ಯರ್ಥಿಗಳ ಮೊಬೈಲ್‌ಗಳನ್ನೇ ಸಾಧನವನ್ನಾಗಿ ಬಳಸಿಕೊಳ್ಳಲಾಗಿದೆ ಎಂಬ ದೂರುಗಳು ಕೇಳಿಬಂದಿವೆ. ಇದಕ್ಕೆ ಪೂರಕವಾಗಿ, ಪ್ರಶ್ನೆ ಪತ್ರಿಕೆಯಲ್ಲಿದ್ದ ಪ್ರಶ್ನೆಗಳಿಗೆ ನಿಖರ ಉತ್ತರಗಳು ಧಾರವಾಡದ ಕಲ್ಯಾಣ ನಗರದ ಭಾಗದಲ್ಲಿ ಹರಿದಾಡಿವೆ ಎಂಬ ಕೆಲ ಅಭ್ಯರ್ಥಿಗಳ ಅನುಮಾನ ಇದನ್ನು ಮತ್ತಷ್ಟು ಬಲಗೊಳಿಸಿದೆ.

ಭಾನುವಾರ, ಪರೀಕ್ಷೆಯ ಕೆಲವೇ ಗಂಟೆ ಮೊದಲ ₹5 ಸಾವಿರದಿಂದ ₹ 6 ಸಾವಿರಕ್ಕೆ ಪ್ರಶ್ನೆ ಪತ್ರಿಕೆಗಳು ಮಾರಾಟವಾಗಿವೆ.  ಮನೋವಿಜ್ಞಾನ, ಇಂಗ್ಲಿಷ್, ಇತಿಹಾಸ, ಕನ್ನಡ ವಿಷಯ ಕುರಿತಂತೆ ಒಟ್ಟು 150 ಅಂಕಗಳಿಗೆ ಮಧ್ಯಾಹ್ನ ಪರೀಕ್ಷೆ ನಡೆದಿತ್ತು. ಅದಕ್ಕೆ ಸಂಬಂಧಿಸಿದ ಪ್ರಶ್ನೆ ಪತ್ರಿಕೆಯನ್ನು ಮೊಬೈಲ್‌ನಲ್ಲೇ ತೋರಿಸಿ ಹಣ ಪಡೆಯಲಾಗಿದೆ ಎಂದೂ ಕೆಲ ಅಭ್ಯರ್ಥಿಗಳು ತಿಳಿಸಿದ್ದಾರೆ.

ಈ ಕುರಿತಂತೆ ಪ್ರತಿಕ್ರಿಯಿಸಿದ ಅಭ್ಯರ್ಥಿ ಅಮ್ಮಿನಭಾವಿಯ ಷಣ್ಮುಖ ಅವರು, ‘ಪ್ರಶ್ನೆ ಪತ್ರಿಕೆಗೆ ಹಣ ನೀಡಿದವರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಗಿದೆ. ಅಲ್ಲಿ ಅವರ ಮೊಬೈಲ್ ಪಡೆದು, ಸಿಮ್‌ ತೆಗೆದು ಚಿಪ್ ಅಳವಡಿಸಲಾಗಿದೆ. ಅದರೊಳಗಿರುವ ಪ್ರಶ್ನೆಪತ್ರಿಕೆಯ ಪ್ರತಿಯನ್ನು ತೋರಿಸಲಾಗಿದೆ. ಅದನ್ನು ನೋಡಿ ಬಂದವರಲ್ಲಿ ಹಲವರು ತಿಳಿಸಿದ್ದಾರೆ’ ಎಂದು ಹೇಳಿದರು.

‘ನಾವು ಸಾಲ ಮಾಡಿ, ಧಾರವಾಡದಲ್ಲಿ ರೂಂ ಮಾಡಿಕೊಂಡು ಉಳಿದು, ಹಗಲಿರುಳೂ ಓದಿದ್ದೇವೆ. ಕಷ್ಟಪಟ್ಟು ಓದಿದವರ ಎದುರು, ₹5ರಿಂದ ₹6 ಸಾವಿರ ನೀಡಿ ಪರೀಕ್ಷೆ ಪಾಸಾದರೆ ನಮ್ಮಂಥವರ ಪಾಡೇನು? ಹೀಗೆ ಪಾಸಾಗಿ ಮುಂದೆ ಕೆಲಸಕ್ಕೆ ಸೇರುವ ಇವರಿಂದ ಕಲಿಯುವ ಮಕ್ಕಳ ಭವಿಷ್ಯವೇನು? ಹೀಗಾಗಿ ಈ ಪರೀಕ್ಷೆಯನ್ನು ರದ್ದುಗೊಳಿಸಿ ಮತ್ತೊಮ್ಮೆ ಕಟ್ಟುನಿಟ್ಟಾಗಿ ಪರೀಕ್ಷೆ ನಡೆಸಬೇಕು’ ಎಂದು ಅವರು ಆಗ್ರಹಿಸಿದರು.

ಈ ಕುರಿತಂತೆ ಪ್ರತಿಕ್ರಿಯಿಸಿದ ಡಿಡಿಪಿಐ ಆರ್.ಎಸ್.ಮುಳ್ಳೂರ, ‘ನಮ್ಮ ಜಿಲ್ಲೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿಲ್ಲ. ಅಂಥ ಯಾವುದೇ ದೂರುಗಳು ನಮ್ಮ ಬಳಿ ಬಂದಿಲ್ಲ. ಅಂದು ಬೆಳಿಗ್ಗೆ ನಡೆದ ಪತ್ರಿಕೆ–1ಕ್ಕೆ ನೋಂದಾಯಿಸಿಕೊಂಡ 3,572 ವಿದ್ಯಾರ್ಥಿಗಳಲ್ಲಿ 3,237 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಮಧ್ಯಾಹ್ನದ ಪರೀಕ್ಷೆಗೆ 8,728 ಅಭ್ಯರ್ಥಿಗಳು ನೋಂದಣಿ ಮಾಡಿಸಿ, 8,147 ಮಂದಿ ಪರೀಕ್ಷೆ ಎದುರಿಸಿದ್ದರು. ಈವರೆಗೂ ಯಾರಿಂದಲೂ ಪತ್ರಿಕೆ ಸೋರಿಕೆಯ ಮಾಹಿತಿಯಾಗಲೀ ಅಥವಾ ದೂರಾಗಲೀ ಬಂದಿಲ್ಲ’ ಎಂದು ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 6

  Happy
 • 4

  Amused
 • 0

  Sad
 • 1

  Frustrated
 • 7

  Angry

Comments:

0 comments

Write the first review for this !