ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ರಾಜ್ಯೋತ್ಸವ | ಗಡಿಯಲ್ಲಿ ಕನ್ನಡದ ಸ್ಥಿತಿ ಚಿಂತಾಜನಕ

ನಾಡು–ನುಡಿಗೆ ಸಿಗದ ಸ್ಪಂದನೆ, ಮೂಲ ಸೌಕರ್ಯಗಳಿಂದ ವಂಚಿತ ಶಾಲೆಗಳು: ಗಡಿನಾಡ ಗ್ರಾಮಸ್ಥರ ಕಳವಳ
Last Updated 31 ಅಕ್ಟೋಬರ್ 2019, 10:53 IST
ಅಕ್ಷರ ಗಾತ್ರ

ಬೀದರ್‌: ರಾಜ್ಯದ ಮುಕುಟಮಣಿಯಂತಿರುವ ಬೀದರ್‌ ಜಿಲ್ಲೆಯ ಒಂದು ಬದಿಗೆ ತೆಲಂಗಾಣ ಮತ್ತು ಇನ್ನೊಂದು ಬದಿಗೆ ಮಹಾರಾಷ್ಟ್ರ ಇದೆ. ಈ ಪ್ರದೇಶವನ್ನು ಮುಸ್ಲಿಂ ಅರಸರು 500 ವರ್ಷ ಆಳಿದರೂ ಇಲ್ಲಿಯ ಜನ ಕನ್ನಡ ಭಾಷಾ ಆಸ್ಮಿತೆ ಬಿಟ್ಟುಕೊಟ್ಟಿಲ್ಲ. ರಾಜ್ಯ ಸರ್ಕಾರ ಕನ್ನಡ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಆಸಕ್ತಿ ತೋರಿಸದ ಕಾರಣ ಗಡಿಯಲ್ಲಿ ಕನ್ನಡದ ಸ್ಥಿತಿ ಸುಧಾರಣೆ ಕಂಡಿಲ್ಲ.

‘ಚುನಾಯಿತ ಪ್ರತಿನಿಧಿಗಳು ನಾಡು, ನುಡಿಯ ವಿಷಯದಲ್ಲಿ ಗಂಭೀರವಾಗಿಲ್ಲ. ಮತ ಬ್ಯಾಂಕ್‌ ಗಟ್ಟಿಗೊಳಿಸುವುದೊಂದೇ ಅವರ ಗುರಿಯಾಗಿದೆ. ಜಿಲ್ಲೆಯಲ್ಲಿ ನಗರ ಸ್ಥಳೀಯ ಸಂಸ್ಥೆ ಹಾಗೂ ಪಂಚಾಯತ್‌ ರಾಜ್‌ ಸಂಸ್ಥೆಗಳ ಅನೇಕ ಚುನಾಯಿತ ಪ್ರತಿನಿಧಿಗಳಿಗೆ ಸರಿಯಾಗಿ ಕನ್ನಡವೇ ಬರದು’ ಎಂದು ಗಡಿ ಗ್ರಾಮಸ್ಥರು ಹೇಳುತ್ತಾರೆ.

‘ಇಂದಿಗೂ ಗಡಿಯಲ್ಲಿ ಮರಾಠಿ, ತೆಲುಗು ಹಾಗೂ ಉರ್ದು ಭಾಷೆಯ ದಟ್ಟ ಪ್ರಭಾವ ಇದೆ. ಅನೇಕ ಸರ್ಕಾರಗಳು ಬಂದು ಹೋದರೂ ಗಡಿಯಲ್ಲಿ ಕನ್ನಡದ ಬೇರುಗಟ್ಟಿಗೊಳಿಸುವ ಪ್ರಯತ್ನ ನಡೆದಿಲ್ಲ. ಕನ್ನಡದ ಬಗೆಗಿನ ನಿರ್ಲಕ್ಷ್ಯತನದಿಂದ ಗಡಿಯಲ್ಲಿ ಕನ್ನಡದ ಸ್ಥಿತಿ ಚಿಂತಾಜನಕವಾಗಿದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ಗಡಿ ಗ್ರಾಮಗಳಲ್ಲಿ 1980ರವರೆಗೂ ಬಹುತೇಕರು ಪ್ರಾಥಮಿಕ ಶಿಕ್ಷಣ ಮರಾಠಿ, ಪ್ರೌಢಶಿಕ್ಷಣ ಕನ್ನಡ ಹಾಗೂ ಪದವಿಪೂರ್ವ ಶಿಕ್ಷಣವನ್ನು ಮರಾಠಿ ಮಾಧ್ಯಮದಲ್ಲಿ ಪೂರ್ಣಗೊಳಿಸಿದ್ದಾರೆ. ಔರಾದ್, ಬಸವಕಲ್ಯಾಣ, ಬೀದರ್ ಹಾಗೂ ಗಡಿ ಗ್ರಾಮಗಳಲ್ಲಿ ಅನ್ಯಭಾಷೆಗಳ ದಟ್ಟ ಪ್ರಭಾವ ಇದೆ. ಹಿಂದುಳಿದ ಪ್ರದೇಶದಲ್ಲಿ ಇಂಗ್ಲಿಷ್‌ ಶಾಲೆಗಳು ಗರಿ ಬಿಚ್ಚಿಕೊಂಡರೂ ಕನ್ನಡ ಶಾಲೆಗಳು ಯಥಾಸ್ಥಿತಿಯಲ್ಲಿವೆ.

‘ಗಡಿಯಲ್ಲಿರುವ ಬಹುತೇಕ ಪ್ರಾಥಮಿಕ ಶಾಲೆಗಳಿಗೆ ಶಿಕ್ಷಕರು ನಿಯಮಿತವಾಗಿ ಬರುವುದೇ ಇಲ್ಲ. ನಾಲ್ವರು ಶಿಕ್ಷಕರ ಪೈಕಿ ಒಬ್ಬರು ಗೈರಾಗುವುದು ಇಲ್ಲಿ ಸಾಮಾನ್ಯ. ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದ್ದರೂ ಬಿಸಿಯೂಟ ಇರುವ ಕಾರಣ ತಪ್ಪದೇ ಹಾಜರಾಗುತ್ತಾರೆ. ಆದರೆ, ಶಿಕ್ಷಕರಲ್ಲಿ ಮಾತ್ರ ನಿಯತ್ತಿನ ಕೊರತೆ ಇದೆ’ ಎಂದು ಬೀದರ್‌ ತಾಲ್ಲೂಕಿನ ನೇಮತಾಬಾದ್‌ ಹಾಗೂ ಔರಾದ್‌ ತಾಲ್ಲೂಕಿನ ಜಂಬಗಿ ತಾಂಡಾದ ನಿವಾಸಿಗಳು ಹೇಳುತ್ತಾರೆ.

ಬೀದರ್‌ನ ಶಹಾಗಂಜ್‌ನಲ್ಲಿರುವ ಒಂದೇ ಕಟ್ಟಡದಲ್ಲಿ ಕನ್ನಡ, ಮರಾಠಿ ಹಾಗೂ ಉರ್ದು ಶಾಲೆಗಳು ನಡೆಯುತ್ತಿವೆ. ಮೂರೂ ಶಾಲೆಗಳಲ್ಲೂ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ. ಕನ್ನಡ ಶಾಲೆಯ ಸ್ಥಿತಿಯಂತೂ ಶೋಚನೀಯವಾಗಿದೆ. ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರ ಹುದ್ದೆಗಳು ಸೇರಿ ಒಟ್ಟು 712 ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದರೂ ಶಿಕ್ಷಕ ಅಭ್ಯರ್ಥಿಗಳು ಅರ್ಹತಾ ಪರೀಕ್ಷೆಯಲ್ಲೂ ಉತ್ತೀರ್ಣ ಆಗದಿರುವುದು ಅಚ್ಚರಿ ಮೂಡಿಸುತ್ತದೆ.

‘ಸರ್ಕಾರಿ ಶಾಲೆಯಲ್ಲೇ ಮಕ್ಕಳನ್ನು ಓದಿಸಬೇಕೆಂದರೆ ಅಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ. ಶಿಕ್ಷಕರೇ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸಲು ಸಿದ್ಧರಿಲ್ಲ. ಹಳ್ಳಿಗಳಲ್ಲಿ ಇರುವ ಶಾಲೆಗಳಿಗಿಂತಲೂ ನಗರದಲ್ಲಿರುವ ಸರ್ಕಾರಿ ಶಾಲೆಗಳ ಸ್ಥಿತಿ ಕೆಟ್ಟದ್ದಾಗಿದೆ’ ಎಂದು ದೂರುತ್ತಾರೆ ಪಾಲಕರು.

ಖಾಸಗಿಯವರು ಶಾಲಾ ಆವರಣವನ್ನು ಅತಿಕ್ರಮಣ ಮಾಡಿದರೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮೌನವಾಗಿದ್ದಾರೆ. ಬೀದರ್‌ ಹೊರವಲಯದ ಶಹಾಪುರದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಗ್ರಾಮಸ್ಥರು ಮಂದಿರ ನಿರ್ಮಾಣ ಮಾಡಿದ್ದಾರೆ. ನಗರದಲ್ಲಿ ಸರ್ಕಾರಿ ಶಾಲೆಯ ಆವರಣದಲ್ಲಿ ಜಾನಪದ ವಿಶ್ವವಿದ್ಯಾಲಯದ ಪ್ರಾದೇಶಿಕ ಅಧ್ಯಯನ ಕೇಂದ್ರ ತೆರೆಯಲಾಗಿದೆ. ಕೆಲವು ಕಡೆ ನೂರಾರು ವಿದ್ಯಾರ್ಥಿಗಳಿದ್ದರೂ ಸರ್ಕಾರ ಕಟ್ಟಡ ನಿರ್ಮಿಸುತ್ತಿಲ್ಲ. ಈ ಎಲ್ಲ ಕಾರಣಗಳಿಂದಾಗಿ ಕನ್ನಡಕ್ಕೆ ಅಪಾಯ ಬಂದೊದಗಿದೆ.

‘ಇಡೀ ಬೀದರ್ ಜಿಲ್ಲೆಯಲ್ಲಿ ಒಂದೇ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇದೆ. ಅದಕ್ಕೆ ಸ್ವಂತ ಕಟ್ಟಡ ಇಲ್ಲ. ಸರ್ಕಾರ ಅಗತ್ಯ ಮೂಲಸೌಕರ್ಯ ಒದಗಿಸಲೂ ಸಿದ್ಧವಿಲ್ಲ. ಮನವಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ’ ಎಂದು ಕಾಲೇಜಿನ ವಿದ್ಯಾರ್ಥಿನಿಯರು ಬೇಸರ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT