ಶುಕ್ರವಾರ, ಜನವರಿ 22, 2021
28 °C

ಗೋಕಾಕ: ಆತಂಕ ಸೃಷ್ಟಿಸಿದ್ದ ಕಲ್ಲುಬಂಡೆ ತೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೋಕಾಕ: ಇಲ್ಲಿಗೆ ಸಮೀಪದ ಮಲ್ಲಿಕಾರ್ಜುನ ಬೆಟ್ಟದಿಂದ ಜರೆದು ಬೀಳುವ ಆತಂಕ ಸೃಷ್ಟಿಸಿದ್ದ ಬೃಹದಾಕಾರದ ಎರಡು ಕಲ್ಲು ಬಂಡೆಗಳ ಪೈಕಿ ಒಂದನ್ನು ಬುಧವಾರ ಯಶಸ್ವಿಯಾಗಿ ತೆರವುಗೊಳಿಸಲಾಯಿತು. ಇದಕ್ಕೆ ಹೊಂದಿಕೊಂಡಿದ್ದ, ಅಷ್ಟೇನೂ ಅಪಾಯಕಾರಿಯಲ್ಲದ ಇನ್ನೊಂದು ಕಲ್ಲುಬಂಡೆಯನ್ನು ಒಡೆಯುವ ಕಾರ್ಯಾಚರಣೆ ಗುರುವಾರ ಮುಂದುವರಿಯಲಿದೆ.

ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಬೆಟ್ಟದ ಮೇಲಿನ ಬೃಹತ್ ಕಲ್ಲು ಬಂಡೆ ಜರೆದಿತ್ತು. ಇದಕ್ಕೆ ಹಿಂಬದಿಯಿಂದ ಮತ್ತೊಂದು ಬಂಡೆ ತಾಗಿಕೊಂಡು ನಿಂತಿತ್ತು. ಹಿಂಬದಿ ಬಂಡೆಯ ಒತ್ತಡವು ಮುಂದಿನ ಬಂಡೆಯ ಮೇಲೆ ಬಿದ್ದುದರಿಂದ ಯಾವುದೇ ಕ್ಷಣದಲ್ಲಿ ಉರುಳಿ ಬೀಳುವ ಅಪಾಯ ಎದುರಾಗಿತ್ತು. ಬಂಡೆಯ ಇಳಿಜಾರಿನ ಪ್ರದೇಶದಲ್ಲಿ ನೂರಾರು ಜನರು ಮನೆ ಕಟ್ಟಿಕೊಂಡು ವಾಸವಾಗಿದ್ದಾರೆ. ಈ ಮನೆಗಳ ಮೇಲೆ ಬಂಡೆ ಉರುಳಿ ಬೀಳುವ ಅಪಾಯವಿತ್ತು.

ವಿಷಯ ಗಮನಕ್ಕೆ ಬರುತ್ತಿದ್ದಂತೆ ಕಾರ್ಯಪ್ರವೃತ್ತರಾದ ಸ್ಥಳೀಯ ಅಧಿಕಾರಿಗಳು, ಪುಣೆಯ ಎನ್‌ಡಿಆರ್‌ಎಫ್‌ 25 ಸಿಬ್ಬಂದಿಗಳನ್ನು ಕರೆಯಿಸಿದ್ದರು. ಶಾಸಕ ಸತೀಶ ಜಾರಕಿಹೊಳಿ ಅವರು ಕಲ್ಲು ಬಂಡೆ ಒಡೆಯುವ ಇಳಕಲ್‌, ರಾಜಸ್ಥಾನದ ಪರಿಣಿತರನ್ನು ಕರೆಯಿಸಿದ್ದರು. ಎಲ್ಲರೂ ಸೇರಿಕೊಂಡು ಕಾರ್ಯಾಚರಣೆ ನಡೆಸಿ ಅಪಾಯಕಾರಿಯಾಗಿದ್ದ ಒಂದು ಬಂಡೆಯನ್ನು ತೆರವುಗೊಳಿಸಿದರು. ಇದರಿಂದಾಗಿ ಇಳಿಜಾರು ಪ್ರದೇಶದ ಜನರು ನಿಟ್ಟುಸಿರು ಬಿಡುವಂತಾಗಿದೆ.

ಮಳೆ ಅಡ್ಡಿ: ‘ಹಿಂಬದಿ ತಾಗಿ ನಿಂತಿದ್ದ ಕಲ್ಲು ಬಂಡೆಯನ್ನು ಮೊದಲು ಒಡೆಯಲು ನಿರ್ಧರಿಸಿದೇವು. ಆಗಾಗ ಸುರಿಯುತ್ತಿದ್ದ ಮಳೆಯಿಂದ 4–5 ಸಲ ಕಾರ್ಯಾಚರಣೆಗೆ ಅಡ್ಡಿಯುಂಟಾಗಿತ್ತು. ಆದರೂ, ಹಠಬಿಡದೆ ಕಾರ್ಯಾಚರಣೆ ಮುಂದುವರಿಸಿದೇವು. ಡ್ರಿಲ್ಲಿಂಗ್‌ ಯಂತ್ರಗಳು ಹಾಗೂ ಡೈನಾಮೈಟ್‌ ಬಳಸಿ, ಹಂತ ಹಂತವಾಗಿ ಒಡೆಯಲಾಯಿತು. ಈಗ ಯಾವುದೇ ಅಪಾಯವಿಲ್ಲ’ ಎಂದು ತಹಶೀಲ್ದಾರ್‌ ಪ್ರಕಾಶ ಹೊಳೆಪ್ಪಗೋಳ ತಿಳಿಸಿದರು.

‘ಈಗ ಉಳಿದಿರುವ ಮುಂಬದಿಯ ಕಲ್ಲುಬಂಡೆ ನೆಲದಲ್ಲಿ ಗಟ್ಟಿಯಾಗಿದ್ದು, ಬೆಟ್ಟದಿಂದ ಜಾರುವ ಸಾಧ್ಯತೆ ಕಡಿಮೆ ಇದೆ. ಆದರೂ, ಸುರಕ್ಷತೆ ದೃಷ್ಟಿಯಿಂದ ಇದನ್ನು ಕೂಡ ಒಡೆಯಲಾಗುವುದು. ಗುರುವಾರ ಕಾರ್ಯಾಚರಣೆ ಪುನರಾರಂಭಿಸಲಾಗುವುದು’ ಎಂದು ಹೇಳಿದರು.

ಸ್ಥಳಕ್ಕೆ ಶಾಸಕ ಸತೀಶ ಜಾರಕಿಹೊಳಿ ಭೇಟಿ ನೀಡಿ ಕಾರ್ಯಾಚರಣೆ ವೀಕ್ಷಿಸಿದರು. ನಗರಸಭೆಯ ಸಹಾಯಕ ಎಕ್ಸಿಕ್ಯುಟಿವ್‌ ಎಂಜಿನಿಯರ್‌ ವಿ.ಎಸ್‌. ತಡಸಲೂರು, ಇತರರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು