ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಬಂಧನೆ ಪಾಲನೆಗೆ ‍ಪ್ರಾಧಿಕಾರ ತಾಕೀತು

Last Updated 4 ಜನವರಿ 2019, 20:23 IST
ಅಕ್ಷರ ಗಾತ್ರ

ಬೆಂಗಳೂರು: ಹುಲಿ ಸಂರಕ್ಷಿತ ಪ್ರದೇಶಗಳು ಹಾಗೂ ಹುಲಿ ಕಾರಿಡಾರ್‌ಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳುವ ವೇಳೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಶಾಸನಬದ್ಧ ನಿಬಂಧನೆಗಳನ್ನು ಅನುಸರಿಸುವಂತೆ ಎಲ್ಲ ರಾಜ್ಯಗಳ ಮುಖ್ಯ ವನ್ಯಜೀವಿ ಪರಿಪಾಲಕರಿಗೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ‌

ಈ ಕುರಿತಂತೆ ಪ್ರಾಧಿಕಾರವು ನ. 28ರಂದು ಹೊರಡಿಸಿರುವ ಆದೇಶದ ಪ್ರತಿ 'ಪ್ರಜಾವಾಣಿ'ಗೆ ಲಭ್ಯವಾಗಿದೆ. ವನ್ಯಜೀವಿ (ಸಂರಕ್ಷಣಾ) ಕಾಯ್ದೆಯ 1972 ರ ಸೆಕ್ಷನ್ 38 ಓ ಅಡಿಯಲ್ಲಿ ಶಾಸನಬದ್ಧ ಪ್ರಾಧಿಕಾರವಾದ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ಕೆಲವು ಮುಖ್ಯ ಅಧಿಕಾರಗಳಿದ್ದು ಅವುಗಳನ್ನು ಉಲ್ಲೇಖಿಸಿ ಪ್ರಾಧಿಕಾರ ಪತ್ರ ಬರೆದಿದೆ.

ಪತ್ರದಲ್ಲೇನಿದೆ?: ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಪ್ರಕಾರ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಗಣಿಗಾರಿಕೆ, ಉದ್ಯಮ ಮತ್ತು ಇತರ ಯೋಜನೆಗಳಂತಹ ಪರಿಸರ ಮೇಲೆ ಪರಿಣಾಮ ಬೀರುವ ಅಸಮರ್ಥನೀಯ ಯೋಜನೆಗಳಿಗೆ ಭೂಬಳಕೆ ನಿರ್ಬಂಧಿಸಬೇಕು.

ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 38 ಓ (1) (ಜಿ) ಪ್ರಕಾರ ಹುಲಿ ಮೀಸಲು ಮತ್ತು ಪ್ರದೇಶಗಳು ಸಂಪರ್ಕಿಸುವ ಸಂರಕ್ಷಿತ ಪ್ರದೇಶ ಅಥವಾ ಹುಲಿ ಮೀಸಲು ಪ್ರದೇಶಗಳನ್ನು ಪರಿಸರ ಅಸಮರ್ಥನೀಯ ಯೋಜನೆಗಳಿಗೆ ಪರಿವರ್ತನೆ ಮಾಡಬಾರದು. ಒಂದು ವೇಳೆ ಅನುಮತಿ ನೀಡಿದ್ದೇ ಆದರೆ ಅಂತಹ ಯೋಜನೆಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಅಡಗಿರಬೇಕು. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಸಲಹೆ ಮೇರೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಒಪ್ಪಿಗೆ ಪಡೆಯಬೇಕು.

ಪ್ರಸ್ತಾವ ಕೈಬಿಡಬೇಕು: ‘ಹುಬ್ಬಳ್ಳಿ– ಅಂಕೋಲಾ ಯೋಜನೆ ಕುರಿತು ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಲು ಕೇಂದ್ರ ಸರ್ಕಾರ ಸೂಚಿಸಿತ್ತು. ವರದಿ ನೀಡಿದ್ದ ಹುಲಿ ಸಂರಕ್ಷಣಾ ಪ್ರಾಧಿಕಾರ ಯೋಜನೆ ತಿರಸ್ಕರಿಸಲು ಶಿಫಾರಸು ಮಾಡಿತ್ತು’ ಎಂದು ವನ್ಯಜೀವಿ ಕಾರ್ಯಕರ್ತ ಗಿರಿಧರ ಕುಲಕರ್ಣಿ ತಿಳಿಸಿದರು.

‘ ಕಾಯ್ದೆ ಅನ್ವಯ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಕೈಗೊಳ್ಳುವ ವೇಳೆ ಪ್ರಾಧಿಕಾರದ ನಿರ್ದೇಶನಗಳನ್ನು ಪಾಲಿಸಬೇಕಿದೆ. ಈ ಯೋಜನೆಯನ್ನು ಕೈಬಿಡುವ ಕುರಿತು ಮುಖ್ಯ ವನ್ಯಜೀವಿ ಪರಿಪಾಲಕರು ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.ಹುಬ್ಬಳ್ಳಿ–ಅಂಕೋಲಾ ರೈಲು ಮಾರ್ಗ ಅನುಷ್ಠಾನ ಅಸಾಧ್ಯ ಎಂದು ರೈಲ್ವೆ ಸಚಿವರು ರಾಜ್ಯದ ನಿಯೋಗಕ್ಕೆ ಈಚೆಗೆ ತಿಳಿಸಿದ್ದರು.

ರೈಲ್ವೆ ಅಪಘಾತಕ್ಕೆ 53 ಆನೆಗಳು ಬಲಿ

2016 ರಿಂದ 2018 ರ ನವೆಂಬರ್‌ 15ರ ವರೆಗೆ ದೇಶದಾದ್ಯಂತ 53 ಆನೆಗಳು ರೈಲ್ವೆ ಅಪಘಾತಕ್ಕೆ ಬಲಿಯಾಗಿವೆ ಎಂದು ಕೇಂದ್ರ ಸಚಿವ ಮಹೇಶ್ ಶರ್ಮಾ ಲೋಕಸಭೆಯಲ್ಲಿ ಮಾಹಿತಿ ನೀಡಿದ್ದಾರೆ. ಕರ್ನಾಟಕದಲ್ಲಿ ಮೂರು ಆನೆಗಳು ಸತ್ತಿವೆ ಎಂದಿದ್ದಾರೆ.

2014ರ ಗಣತಿ ಪ್ರಕಾರ ದೇಶದಲ್ಲೇ ಅತೀ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯವೆಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. ಅಲ್ಲದೇ 2018 ರ ಗಣತಿಯಲ್ಲೂ ಪ್ರಥಮ ಸ್ಥಾನ ಪಡೆಯುವ ವಿಶ್ವಾಸದಲ್ಲಿದೆ. ಹೀಗಾಗಿ, ಹುಲಿಗಳು ಹಾಗೂ ಅವುಗಳ ಆವಾಸಸ್ಥಾನಕ್ಕೆ ದೀರ್ಘಕಾಲದಲ್ಲಿ ಕಂಟಕಪ್ರಾಯವಾಗಬಲ್ಲ ಹುಬ್ಬಳ್ಳಿ– ಅಂಕೋಲಾ ರೈಲು ಯೋಜನೆ ಕೈಬಿಡುವುದು ಒಳಿತು ಎಂದು ಗಿರಿಧರ್ ಕುಲಕರ್ಣಿ ಅವರು ರಾಜ್ಯ ಸರ್ಕಾರವನ್ನು ವಿನಂತಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT