ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಕಚೇರಿ ಆವರಣದಲ್ಲೇ ಟಿಪ್ಪು ಜಯಂತಿ ಆಚರಣೆ

ಹೈಕೋರ್ಟ್‌ಗೆ ಮೊರೆ; ಸಚಿವ ಸೋಮಣ್ಣ–ಜಿಲ್ಲಾಡಳಿತದ ಅಧಿಕಾರಿಗಳ ವಿರುದ್ಧ ಶಾಸಕ ತನ್ವೀರ್‌ ಸೇಠ್‌ ಕಿಡಿ
Last Updated 7 ನವೆಂಬರ್ 2019, 19:23 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಕಚೇರಿ ಆವರಣದಲ್ಲಿ ಗುರುವಾರ ರಾತ್ರಿ ಶಾಸಕ ತನ್ವೀರ್‌ ಸೇಠ್‌ ನೇತೃತ್ವದಲ್ಲಿ ಸಾಂಕೇತಿಕವಾಗಿ ಟಿಪ್ಪು ಜಯಂತಿ ಆಚರಿಸಲಾಯಿತು.

ಟಿಪ್ಪು ಜಯಂತಿ ಆಚರಣೆಗೆ ಬನ್ನಿಮಂಟಪದ ಪಂಜಿನ ಕವಾಯತು ಮೈದಾನವನ್ನು ಬಾಡಿಗೆ ಕೊಡಲು ನಿರಾಕರಿಸಿದ್ದನ್ನು ಖಂಡಿಸಿ, ಪ್ರತಿಭಟನಕಾರರು ಜಯಂತಿ ಆಚರಣೆಗೆ ಮುಂದಾದರು. ಕಚೇರಿ ಮುಂಭಾಗದಲ್ಲೇ ಟಿಪ್ಪು ಭಾವಚಿತ್ರವಿಟ್ಟು, ಎರಡೂ ಬದಿಯಲ್ಲಿ ಕನ್ನಡ ಬಾವುಟಗಳನ್ನು ಕಟ್ಟಿ, ಹೂವಿನ ಹಾರ ಹಾಕಿ, ಗುಲಾಬಿ ಹೂವಿನ ದಳಗಳಿಂದ ಅರ್ಚನೆ ಮಾಡಲಾಯಿತು.

ಬುಧವಾರ ರಾತ್ರಿ ಇದೇ ಆವರಣದಲ್ಲೇ ಧರಣಿ ನಡೆಸಿದ್ದರು. ಗುರುವಾರ ಮಧ್ಯಾಹ್ನದವರೆಗೆ ಸಮಯ ಕೋರಿದ್ದ ಜಿಲ್ಲಾಧಿಕಾರಿ, ಅವಕಾಶ ನೀಡುವ ನಿರ್ಧಾರ ತಿಳಿಸುವುದಾಗಿ ಹೇಳಿದ್ದರು. ರಾತ್ರಿ, ಜಿಲ್ಲಾಡಳಿತದ ಸ್ಪಷ್ಟೀಕರಣ ಪತ್ರದೊಂದಿಗೆ ಪ್ರತಿಭಟನಾ ಸ್ಥಳಕ್ಕೆ ಬಂದ ಮುಡಾ ಆಯುಕ್ತ ಪಿ.ಎಸ್.ಕಾಂತರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್‌.ಚನ್ನಪ್ಪ ಅವರನ್ನು ಶಾಸಕ ತನ್ವೀರ್ ಸೇಠ್‌ ತರಾಟೆಗೆ ತೆಗೆದುಕೊಂಡರು.

ಹೈಕೋರ್ಟ್‌ಗೆ: ‘ಟಿಪ್ಪು ಜಯಂತಿ ಆಚರಣೆಗೆ ಸಂಬಂಧಿಸಿದಂತೆ ಈಗಾಗಲೇ ಹೈಕೋರ್ಟ್‌ನಲ್ಲಿ ಪ್ರಕರಣವೊಂದು ನಡೆದಿದೆ. ಈ ಪ್ರಕರಣದ ಭಾಗಿದಾರರಾಗಿ ನಾವೂ ಹೈಕೋರ್ಟ್‌ ಮೆಟ್ಟಿಲೇರುತ್ತೇವೆ. ಶುಕ್ರವಾರ ಪ್ರಕರಣ ದಾಖಲಿಸಿ, ನಿರ್ದೇಶನ ನೀಡುವಂತೆ ಕೋರುತ್ತೇವೆ. ಈ ಸಂದರ್ಭ ಅಧಿಕಾರಿಗಳು ನೀಡಿದ ಹಿಂಬರಹವನ್ನು, ಮುಡಾಗೆ ಆರ್ಥಿಕ ನಷ್ಟ ಉಂಟು ಮಾಡಿದ್ದನ್ನು ಕೋರ್ಟ್‌ ಗಮನಕ್ಕೆ ತರಲಾಗುವುದು’ ಎಂದು ತನ್ವೀರ್‌ ಸೇಠ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಧಿಕಾರಿಗಳು ಸಚಿವ ಸೋಮಣ್ಣ ಅವರ ಕೈಗೊಂಬೆಗಳಾಗಿದ್ದಾರೆ. ನ.10ರಂದು ಮೈಸೂರು ಸೇರಿದಂತೆ ರಾಜ್ಯದ ಎಲ್ಲೆಡೆ ಜಯಂತಿ ಆಚರಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT