ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆವಿಷ್ಕಾರ ಉತ್ತೇಜನಕ್ಕೆ ‘ರೆಗ್ಯುಲೇಟರಿ ಸ್ಯಾಂಡ್‌ಬಾಕ್ಸ್‌ ನೀತಿ’

ಸಮಾರೋಪದಲ್ಲಿ ಅಶ್ವತ್ಥನಾರಾಯಣ ಭರವಸೆ
Last Updated 20 ನವೆಂಬರ್ 2019, 19:46 IST
ಅಕ್ಷರ ಗಾತ್ರ

ಬೆಂಗಳೂರು: ‘ಹೊಸ ಆವಿಷ್ಕಾರಗಳಿಗೆ ಉತ್ತೇಜನ ನೀಡುವ ಸಲುವಾಗಿ ಕಾನೂನು ಪ್ರಕ್ರಿಯೆಯಲ್ಲಿ ಅಗತ್ಯ ಸುಧಾರಣೆಗಳನ್ನು ಜಾರಿಗೊಳಿಸುವ ತುರ್ತು ಅಗತ್ಯವಿದೆ. ಈ ಸಲುವಾಗಿ ಸರ್ಕಾರ ‘ರೆಗ್ಯುಲೇಟರಿ ಸ್ಯಾಂಡ್‌ಬಾಕ್ಸ್‌ ನೀತಿ’ ಜಾರಿ ತರಲು ನಿರ್ಧರಿಸಿದೆ’ ಎಂದು ಉಪಮುಖ್ಯಮಂತ್ರಿ ಸಿ.ಎನ್‌.ಅಶ್ವತ್ಥನಾರಾಯಣ ತಿಳಿಸಿದರು.

‘ಉದಯೋನ್ಮುಖ ಪ್ರತಿಭೆಗಳಿಗೆ ಉತ್ತೇಜನ ನೀಡುವ ಸಲುವಾಗಿ ಪ್ರತಿಭಾ ವೇಗವರ್ಧಕ (ಟ್ಯಾಲೆಂಟ್‌ ಆಕ್ಸಿಲರೇಟರ್‌) ಹಾಗೂ ಕರ್ನಾಟಕ ತಾಂತ್ರಿಕ ಅಭಿವೃದ್ಧಿ ಮಂಡಳಿಯನ್ನು (ಕೆಟಿಬಿಟಿ) ಸ್ಥಾಪಿಸಲಿದ್ದೇವೆ’ ಎಂದೂ ಅವರು ಪ್ರಕಟಿಸಿದರು.

ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ ಸಮಾರೋಪದಲ್ಲಿ ಅವರು ಮಾತನಾಡಿದ ಅವರು, ‘ರೆಗ್ಯುಲೇಟರಿ ಸ್ಯಾಂಡ್‌ಬಾಕ್ಸ್‌ ನೀತಿಯನ್ನು ರಾಜ್ಯದಲ್ಲಿ ಮೊದಲ ಬಾರಿಗೆ ಪರಿಚಯಿಸುತ್ತಿದ್ದೇವೆ. ಇದರ ಪ್ರಕಾರ ಆಡಳಿತ ವ್ಯವಸ್ಥೆಯಲ್ಲಿ ಆವಿಷ್ಕಾರ ಸಂಸ್ಥೆಗಳು ಈ ಯೋಜನೆಯ ಭಾಗವಾಗಲು ಅರ್ಜಿ ಸಲ್ಲಿಸಬಹುದು. ಈ ನೀತಿ ಉದ್ಯೋಗಾವಕಾಶ ಹೆಚ್ಚಳದ ಜತೆಗೆ ಆರ್ಥಿಕತೆ ಸುಧಾರಣೆಗೂ ನೆರವಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಈ ನೀತಿಯನ್ನು ಜಾರಿಗೊಳಿಸುವ ಪ್ರಕ್ರಿಯೆಗೆ ಈಗಾಗಲೇ ಚಾಲನೆ ಸಿಕ್ಕಿದೆ. ಕರ್ನಾಟಕ ಆವಿಷ್ಕಾರ ಪ್ರಾಧಿಕಾರ ಸ್ಥಾಪಿಸುವ ಬಗ್ಗೆ ನ. 9ರಂದೇ ಸುಗ್ರೀವಾಜ್ಞೆ ಹೊರಡಿಸಲಾಗಿದೆ. ಈ ಪ್ರಾಧಿಕಾರವು ರೆಗ್ಯುಲೇಟರಿ ಸ್ಯಾಂಡ್‌ಬಾಕ್ಸ್‌ ನೀತಿಯ ಕಾನೂನಾತ್ಮಕ ರೂಪರೇಷೆಗಳನ್ನು ನಿರ್ಧರಿಸಲಿದೆ’ ಎಂದರು.

‘ಈ ನೀತಿಯಲ್ಲಿ ನವೋದ್ಯಮಗಳ ಆವಿಷ್ಕಾರಗಳಿಗೆ ಕಾನೂನಾತ್ಮಕವಾಗಿ ಯಾವುದೇ ಅಡ್ಡಿ ಎದುರಾಗದಂತೆ ಖಾತರಿ ಒದಗಿಸುವ ಸಲುವಾಗಿ ಅವುಗಳಿಗೆ 2 ವರ್ಷಗಳ ವಿನಾಯಿತಿ ನೀಡಲಾಗುವುದು. ಈ ನೀತಿ ಯಾವುದೇ ನಿರ್ದಿಷ್ಟ ವಲಯದ ಆವಿಷ್ಕಾರಕ್ಕೆ ಸೀಮಿತವಲ್ಲ. ಎಲ್ಲ ವಲಯಗಳಿಗೂ ಅನ್ವಯವಾಗಲಿದೆ’ ಎಂದರು.

‘ನಮ್ಮಲ್ಲಿ ಪದವೀಧರರ ಕೌಶಲಗಳ ಗುಣಮಟ್ಟ ಮತ್ತು ಉದ್ಯಮದ ನಿರೀಕ್ಷೆ ಪರಸ್ಪರ ತಾಳೆ ಆಗುತ್ತಿಲ್ಲ‌. ಸಮಸ್ಯೆ ನಿವಾರಿಸಲು ಕಾರ್ಯತಂತ್ರದ ಅವಶ್ಯಕತೆ ಇದೆ. ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸುವ ನಿಟ್ಟಿನಲ್ಲಿ ಇದು ಇನ್ನಷ್ಟು ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಶಾಲಾ-ಕಾಲೇಜಿನ ಪ್ರತಿಭ್ವಾನಿತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ನಿರ್ದಿಷ್ಟ ಉದ್ಯಮದ ವತಿಯಿಂದ ಕೌಶಲ ಅಭಿವೃದ್ಧಿಗೆ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಪ್ರತಿಭಾ ವೇಗವರ್ಧಕ ಪರಿಕಲ್ಪನೆಯನ್ನು ಪರಿಚಯಿಸುತ್ತಿದ್ದೇವೆ’ ಎಂದರು.

‘ಎರಡನೇ ಮತ್ತು ಮೂರನೇ ಹಂತದ ನಗರಗಳು ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮದಡಿ ಆದ್ಯತೆ ನೀಡಲಾಗುತ್ತದೆ. ಕಾನೂನು ತಿದದುಪಡಿ ಮೂಲಕ ತಾಂತ್ರಿಕ ಉದ್ಯಮದಲ್ಲಿ ಕೌಶಲ ಕಲಿಕೆಗೆ ಅವಕಾಶ ಮಾಡಿಕೊಡಲಿದ್ದೇವೆ. ಹೊಸ ತಲೆಮಾರಿನ ಉತ್ತೇಜನಾ ಜಾಲ (ನ್ಯೂ ಏಜ್‌ ಇನ್‌ಕ್ಯೂಬೇಷನ್‌ ನೆಟ್‌ವರ್ಕ್‌–ಎನ್‌ಎಐಎನ್‌) ಸೇರಿದಂತೆ ಅಸ್ತಿತ್ವದಲ್ಲಿರುವ ಯೋಜನೆಗಳ ಪುನರುಜ್ಜೀವನಕ್ಕೆ ಮತ್ತು ವಿಸ್ತರಣೆಗೆ ಒತ್ತು ನೀಡಲಿದ್ದೇವೆ’ ಎಂದರು.

‘ಕೆಟಿಡಿಬಿಯು ರಾಜ್ಯದ ತಂತ್ರಜ್ಞಾನ ಸಂಸ್ಥೆಗಳಿಗೆ ದೇಶ ಮತ್ತು ವಿದೇಶಗಳಿಂದ ಹೂಡಿಕೆಯನ್ನು ಆಕರ್ಷಿಸುವ ಜತೆಗೆ ತಂತ್ರಜ್ಞಾನದ ಕಾರಿಡಾರ್‌ಗಳನ್ನು ಮೈಸೂರು, ಮಂಗಳೂರು, ಬೆಳಗಾವಿ, ಶಿವಮೊಗ್ಗ ಮತ್ತು ಹುಬ್ಬಳ್ಳಿ-ಧಾರವಾಡದಂತಹ ನಗರಗಳಿಗೂ ವಿಸ್ತರಿಸಲು ಅಗತ್ಯ ಮೂಲಸೌಕರ್ಯಗಳ ಒದಗಿಸಲಿದೆ. ಪರವಾನಗಿ, ಮಂಜೂರಾತಿ ಮತ್ತು ಮೂಲಸೌಕರ್ಯವೂ ಸೇರಿ ಇನ್ನಿತರ ವಿಷಯಗಳ ಬಗ್ಗೆ ಸರ್ಕಾರ ಮತ್ತು ಸ್ಥಳಿಯಾಡಳಿತಗಳ ಜತೆ ಮಾತುಕತೆಗೆ ನಡೆಸಲು ಕಂಪನಿಗಳಿಗೆ ನೆರವಾಗಲಿದೆ’ ಎಂದು ವಿವರಿಸಿದರು.

ಏನಿದು ರೆಗ್ಯುಲೇಟರಿ ಸ್ಯಾಂಡ್‌ಬಾಕ್ಸ್‌ ನೀತಿ?

‘ನವೋದ್ಯಮಗಳು ಹೊಸ ಆಲೋಚನೆಗಳನ್ನು ಆಧರಿಸಿದ ಸೇವೆ ಹಾಗೂ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುತ್ತವೆ. ಅಂತಹವುಗಳು ಈಗಿರುವ ಕಾನೂನಿನ ವ್ಯಾಖ್ಯೆಗೆ ನಿಲುಕುವುದಿಲ್ಲ. ಹಾಗಾಗಿ, ಅಂತಹ ಉತ್ಪನ್ನ ಅಥವಾ ಸೇವೆಗಳಿಗೆ ತೊಡಕಾಗಬಾರದು ಎಂಬ ಕಾರಣಕ್ಕೆ ಸೀಮಿತ ಅವಧಿ, ನಿರ್ದಿಷ್ಟ ಪ್ರದೇಶಕ್ಕೆ ಅನ್ವಯವಾಗುವಂತೆ ಅಲ್ಪಕಾಲಿಕ ವಿನಾಯಿತಿ ನೀಡಲಾಗುತ್ತದೆ. ಇದನ್ನೇ ‘ರೆಗ್ಯುಲೇಟರಿ ಸ್ಯಾಂಡ್‌ಬಾಕ್ಸ್‌ ನೀತಿ’ ಎಂದು ಕರೆಯಲಾಗುತ್ತದೆ’ ಎಂದು ಮಾಹಿತಿ ತಂತ್ರಜ್ಞಾನ ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಗರದಲ್ಲಿ ಓಲಾ ಹಾಗೂ ಉಬರ್‌ ಸಂಸ್ಥೆಗಳು ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆ ಆರಂಭಿಸಿದಾಗ ಕಾನೂನು ತೊಡಕು ಉಂಟಾಗಿತ್ತು. ಇಂತಹ ಪರಿಸ್ಥಿತಿ ಮರುಕಳಿಸುವುದನ್ನು ಈ ಹೊಸ ನೀತಿ ತಪ್ಪಿಸಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT