ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಮತ್ತೊಂದು ಚುನಾವಣೆ: 63 ಸ್ಥಳೀಯ ಸಂಸ್ಥೆಗಳಿಗೆ ಮುಹೂರ್ತ ನಿಗದಿ

ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಫ್ರೆಂಡ್ಲಿ ಫೈಟ್‌?
Last Updated 2 ಮೇ 2019, 8:44 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ 63 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ಈ ಚುನಾವಣೆಯಲ್ಲಿ ಜೆಡಿಎಸ್–ಕಾಂಗ್ರೆಸ್‌ ಮೈತ್ರಿಕೂಟ ‘ಫ್ರೆಂಡ್ಲಿ ಫೈಟ್‌’ ಮಾಡಲು ಮುಂದಾಗಿವೆ.

ಮೊದಲ ಹಂತದಲ್ಲಿ 109 ನಗರ ಸ್ಥಳೀಯ ಸಂಸ್ಥೆಗಳಿಗೆ 2018ರ ಆಗಸ್ಟ್‌ನಲ್ಲಿ ಚುನಾವಣೆ ನಡೆದಿತ್ತು. ಎರಡನೇ ಹಂತದಲ್ಲಿ 103 ಸಂಸ್ಥೆಗಳಿಗೆ ಚುನಾವಣೆ ನಡೆಸಬೇಕಿತ್ತು. ಆದರೆ, ಕ್ಷೇತ್ರ ವಿಂಗಡಣೆ ಹಾಗೂ ವಾರ್ಡ್‌ವಾರ್ ಮೀಸಲಾತಿ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ 39 ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಪ್ರಕರಣಗಳು ದಾಖಲಾಗಿವೆ. ಜತೆಗೆ, ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುತ್ತಿರುವುದರಿಂದ ಅಲ್ಲಿನ ಪಟ್ಟಣ ಪಂಚಾಯಿತಿಯ ಚುನಾವಣೆಯನ್ನು ನಡೆಸುತ್ತಿಲ್ಲ ಎಂದು ರಾಜ್ಯ ಚುನಾವಣಾ ಆಯುಕ್ತ ಪಿ.ಎನ್‌.ಶ್ರೀನಿವಾಸ ಆಚಾರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ನೀತಿಸಂಹಿತೆ ತಕ್ಷಣದಿಂದ ಜಾರಿಗೆ ಬರುತ್ತದೆ. ಅದು ಮೇ 31ರ ವರೆಗೆ ಆಯಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಜಾರಿಯಲ್ಲಿರುತ್ತದೆ. ನೋಟಾ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ. 63 ಸಂಸ್ಥೆಗಳ 1,361 ವಾರ್ಡ್‌ಗಳಿಗೆ ಚುನಾವಣಾ ಪ್ರಕ್ರಿಯೆ ಜರುಗಲಿದೆ.

ಮೊದಲ ಹಂತದ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ‍ಮೈತ್ರಿ ಮಾಡಿಕೊಂಡಿರಲಿಲ್ಲ. ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿವೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಈ ಮೈತ್ರಿ ಅನ್ವಯ ಆಗುವುದಿಲ್ಲ ಎಂದು ಉಭಯ ಪಕ್ಷಗಳ ನಾಯಕರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ಮೇ 9: ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದಾರೆ.

ಮೇ 16: ನಾಮಪತ್ರ ಸಲ್ಲಿಸಲು ಕೊನೆಯ ದಿನ.

ಮೇ 17: ನಾಮಪತ್ರ ಪರಿಶೀಲನೆ.

ಮೇ 20: ನಾಮಪತ್ರ ಹಿಂಪಡೆಯಲು ಕೊನೆಯ ದಿನ.

ಮೇ 29: ಮತದಾನ

ಮೇ 31: ಮತ ಎಣಿಕೆ

ಉಪಚುನಾವಣೆ: ಬಿಬಿಎಂ‍‍ಪಿಯ ಸಗಾಯಿಪುರ, ಕಾವೇರಿಪುರ, ತುಮಕೂರು ಮಹಾನಗರ ಪಾಲಿಕೆಯ ವಾರ್ಡ್‌ 22, ಹೆಬ್ಬಗೋಡಿ ನಗರಸಭೆಯ ವಾರ್ಡ್‌ 26, ಸದಲಗ ಪುರಸಭೆ ವಾರ್ಡ್‌ 19, ಮುಳಗಖೋಡ ಪುರಸಭೆಯ ವಾರ್ಡ್‌ 2ಕ್ಕೆ ಉಪಚುನಾವಣೆ ನಡೆಯಲಿದೆ. ಈ ವಾರ್ಡ್‌ಗಳಲ್ಲಿ ಸದಸ್ಯರು ನಿಧನರಾಗಿದ್ದರಿಂದ ಉಪಚುನಾವಣೆ ನಡೆಯಲಿದೆ.

ಗ್ರಾ.ಪಂ. ಉಪಚುನಾವಣೆ: 8 ತಾಲ್ಲೂಕು ಪಂಚಾಯಿತಿಗಳ 10 ಸದಸ್ಯ ಸ್ಥಾನಗಳಿಗೆ ಹಾಗೂ ಗ್ರಾಮ ಪಂಚಾಯಿತಿಗಳ 202 ಸದಸ್ಯ ಸ್ಥಾನಗಳಿಗೂ ಉಪಚುನಾವಣೆ ನಡೆಯಲಿದೆ. ಇಲ್ಲಿ ಮೇ 13ರಿಂದ 31ರ ವರೆಗೆ ನೀತಿಸಂಹಿತೆ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ಶ್ರೀನಿವಾಸ ಆಚಾರಿ ತಿಳಿಸಿದರು.

ಸದಸ್ಯತ್ವ ರದ್ದು: ಆಸ್ತಿ ವಿವರ ಸಲ್ಲಿಸದ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳ ಒಟ್ಟು 26 ಸದಸ್ಯರ ಸದಸ್ಯತ್ವವನ್ನು ರದ್ದುಪಡಿಸಲಾಗಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT