ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಷವರ್ತುಲಕ್ಕೆ ಹಿಡಿದ ಕೈಗನ್ನಡಿ

ವಿಷವರ್ತುಲಕ್ಕೆ ಹಿಡಿದ ಕೈಗನ್ನಡಿ
Last Updated 28 ಅಕ್ಟೋಬರ್ 2018, 19:22 IST
ಅಕ್ಷರ ಗಾತ್ರ

‘ಪ್ರಜಾವಾಣಿ’ ಆರಂಭಿಸಿರುವ ‘ಒಳನೋಟ’ ಎಂಬ ಸವಿಸ್ತಾರ ವರದಿಗೆ ಭಾರಿ ಸ್ಪಂದನೆ ವ್ಯಕ್ತವಾಗಿದೆ. ಭಾನುವಾರ (ಅ. 28) ಪ್ರಕಟವಾದ ‘ಕೋಟಿ ವಿದ್ಯೆ ಇದ್ದರೆ ಕುಲಪತಿ’ ವರದಿ ‘ಮಂಜಿನ ಪರ್ವತದ ಚೂರು ಅಷ್ಟೆ’ (ಟಿಪ್ ಆಫ್ ಐಸ್ ಬರ್ಗ್) ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಕುಲಪತಿ ನೇಮಕ, ವಿಶ್ವವಿದ್ಯಾಲಯಗಳ ಅಕರಾಳ-ವಿಕರಾಳ ಮುಖಗಳ ಮೇಲೆ ಸರಣಿ ವರದಿ ಪ್ರಕಟಿಸಬೇಕು ಎಂಬ ಸಲಹೆಯನ್ನು ಸಜ್ಜನರು ನೀಡಿದ್ದಾರೆ. ಕೆಲವು ಪ್ರತಿಕ್ರಿಯೆಗಳನ್ನಷ್ಟೇ ಇಲ್ಲಿ ಪ್ರಕಟಿಸಲಾಗಿದೆ.

–––––––––––––––––––––––

ವಿ.ವಿ ಕರ್ಮಕಾಂಡಗಳ ಮೇಲೆ ಬೆಳಕು ಚೆಲ್ಲಿದ ‘ಪ್ರಜಾವಾಣಿ’ ಯತ್ನಕ್ಕೆ ಶ್ಲಾಘನೆ

ಭ್ರಷ್ಟಾಚಾರಮುಕ್ತ ವಿವಿ: ಜಿ.ಟಿ. ದೇವೇಗೌಡ ಭರವಸೆ

ಜಿ.ಟಿ. ದೇವೇಗೌಡ
ಜಿ.ಟಿ. ದೇವೇಗೌಡ

ಶಿವಮೊಗ್ಗ: ‘ಕುಲಪತಿ ಹುದ್ದೆಗಳೂ ಸೇರಿ ನೇಮಕಾತಿಗೆ ಕೌನ್ಸೆಲಿಂಗ್ ಮಾದರಿ, ಆಡಳಿತ,

ಅಭಿವೃದ್ಧಿ, ಗುತ್ತಿಗೆ, ಖರೀದಿ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ವಿಶ್ವವಿದ್ಯಾಲಯಗಳಲ್ಲೂ ಏಕರೀತಿಯ ವಿಧಾನ ಅನುಸರಿಸುವ ಕುರಿತು ಸರ್ಕಾರ ಚಿಂತನೆ ನಡೆಸಿದೆ‘ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಮಾಹಿತಿ ನೀಡಿದರು.

‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳೂ ಒಂದೇ ಕಾಯ್ದೆ ಅಡಿ ಕಾರ್ಯನಿರ್ವಹಿಸಬೇಕು.ವಿಶ್ವವಿದ್ಯಾಲಯಗಳ ಸ್ವಾಯತ್ತತೆಗೆ ಧಕ್ಕೆಯಾಗಬಾರದು.ಏಕರೀತಿಯ ಪ್ರವೇಶ, ಪರೀಕ್ಷಾ ವಿಧಾನ ಅನುಸರಿಸಲು ಹೊಸ ಸಾಫ್ಟ್‌ವೇರ್ ಸಿದ್ಧಪಡಿಸಲು ಈಗಾಗಲೇ ಸೂಚಿಸಲಾಗಿದೆ. ಎಲ್ಲ ಪ್ರಕ್ರಿಯೆ ಸಾಮಾನ್ಯ ಜನರಿಗೂ ತಿಳಿಯುವಂತೆ ಪಾರದರ್ಶಕ ನೀತಿ ಜಾರಿಗೊಳಿಸಲಾಗುತ್ತಿದೆ. ಇದಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೂ ಬೆಂಬಲ ನೀಡಿದ್ದಾರೆ’ ಎಂದರು.

‘ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಹಿಂದಿನ ಕಾಂಗ್ರೆಸ್ ಸರ್ಕಾರ ಮಸೂದೆ ಮಂಡಿಸಿತ್ತು. ಎರಡೂ ಸದನಗಳಲ್ಲಿ ಅಂಗೀಕಾರವಾಗಿ ರಾಜ್ಯಪಾಲರ ಸಹಿಗೆ ಕಳುಹಿಸಲಾಗಿದೆ. ಎರಡು ದಿನಗಳ ಹಿಂದೆ ರಾಜ್ಯಪಾಲರನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ. ಅಡ್ವೊಕೇಟ್ ಜನರಲ್ ಅಭಿಪ್ರಾಯ ಪಡೆದು ಶೀಘ್ರ ನಿರ್ಧಾರ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ’ ಎಂದು ವಿವರಿಸಿದರು.

ವಿಶ್ವವಿದ್ಯಾಲಯಗಳಲ್ಲಿ ಆಮೂಲಾಗ್ರ ಬದಲಾವಣೆ ತರಲು ಶಿಕ್ಷಣ ತಜ್ಞರು, ಉತ್ತಮ ಹೆಸರಿರುವ ವಿಶ್ರಾಂತ ಕುಲಪತಿಗಳು, ವಿಧಾನ ಪರಿಷತ್ ಸದಸ್ಯರು, ಬುದ್ಧಿಜೀವಿಗಳ ಸಲಹೆ ಪಡೆಯಲಾಗುತ್ತಿದೆ. ಈಗಾಗಲೇ ಎರಡು ಸಭೆಗಳನ್ನು ನಡೆಸಲಾಗಿದೆ. ಭವಿಷ್ಯದಲ್ಲಿ ಭ್ರಷ್ಟಾಚಾರಮುಕ್ತ ತಾಣವಾಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

––––––––––––––––––––––––––––

* ‘ಅಧಃಪತನಕ್ಕೆ ಮತ್ತೊಂದು ಉದಾಹರಣೆ‘

‘ಕುಲಪತಿ‘ (ಕೋಟಿ‌ಪತಿ) ನೇಮಕಾತಿ ಕುರಿತಾದ ಲೇಖನ ಬಹಳ ಗಟ್ಟಿಯಾಗಿ ಮೂಡಿಬಂದಿದೆ.‌ ಎಲ್ಲಿ ವಿ.ಕೃ. ಗೋಕಾಕ್, ಎಚ್. ನರಸಿಂಹಯ್ಯ... ಎಲ್ಲಿ ಈಗಿನ ಸೂಟ್‌ಕೇಸ್ ಧೀರರು? ಅಧಃಪತನಕ್ಕೆ ಮತ್ತೊಂದು ಉದಾಹರಣೆ ಈ ನೇಮಕಾತಿಗಳು.

-ಎಸ್‌. ಸುರೇಶ್‌ ಕುಮಾರ್‌, ಬಿಜೆಪಿ ಶಾಸಕ

* ‘ಕುಲಪತಿಗಳು ಗುತ್ತಿಗೆದಾರರಾಗಿದ್ದಾರೆ‘

ರಾಜಕೀಯ ಪ್ರಭಾವ, ಹಣ ಮತ್ತು ಜಾತಿ ಆಧಾರದ ಮೇಲೆ ಕುಲಪತಿಗಳ ಸ್ಥಾನದಲ್ಲಿ ಕುಳಿತವರಿಂದ ಸಮರ್ಥ ಆಡಳಿತ, ಗುಣಮಟ್ಟದ ಶಿಕ್ಷಣ ವ್ಯವಸ್ಥೆ ನಿರೀಕ್ಷಿಸಲು ಸಾಧ್ಯವೇ? ಕುಲಪತಿಗಳು ಇಂದು ವಿ.ವಿ. ಕಟ್ಟಡಗಳ ನಿರ್ಮಾಣದ ಗುತ್ತಿಗೆದಾರರಾಗಿದ್ದಾರೆ. ಅಕ್ರಮ ತಡೆಯಲು ಕಟ್ಟುನಿಟ್ಟಿನ ಕಾನೂನು ಮತ್ತು ಹುದ್ದೆಯಲ್ಲಿರುವ ವ್ಯಕ್ತಿಯ ಆತ್ಮಸಾಕ್ಷಿಯ ನಡೆಯಿಂದ ಮಾತ್ರ ಉನ್ನತ ಶಿಕ್ಷಣದ ಸುಧಾರಣೆ ಸಾಧ್ಯ

-ಎಚ್‌.ಕೆ.ಮರಿಸ್ವಾಮಿ, ನಿವೃತ್ತ ಪ್ರಾಧ್ಯಾಪಕ, ಬೆಂಗಳೂರು ವಿಶ್ವವಿದ್ಯಾಲಯ

* ವಿಷವರ್ತುಲಕ್ಕೆ ಹಿಡಿದ ಕೈಗನ್ನಡಿ

ವರದಿಯು ವಿಶ್ವವಿದ್ಯಾಲಯಗಳ ವಿಷವರ್ತುಲಕ್ಕೆ ಹಿಡಿದ ಕೈಗನ್ನಡಿಯಂತಿದೆ. ಮೌಲ್ಯಗಳನ್ನು ಹುಟ್ಟುಹಾಕಬೇಕಾಗಿದ್ದ ವಿಶ್ವವಿದ್ಯಾಲಯಗಳಲ್ಲಿ ಅವುಗಳ ಬಗ್ಗೆ ಮಾತನಾಡುವವರೇ ನಗೆಪಾಟಲಿಗೆ ಈಡಾಗುತ್ತಿದ್ದಾರೆ. ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳಲಾಗುತ್ತಿದೆ. ಮೂಲಸೌಲಭ್ಯಕ್ಕೆ ಒತ್ತು ನೀಡಲಾಗುತ್ತಿದೆಯೇ ಹೊರತು ಶೈಕ್ಷಣಿಕ ಘನತೆ ಹೆಚ್ಚಿಸಲಾಗುತ್ತಿಲ್ಲ.

– ಪ್ರೊ. ಬಿ. ಬಕ್ಕಪ್ಪ, ನಿವೃತ್ತ ಕುಲಸಚಿವ (ಮೌಲ್ಯಮಾಪನ), ದಾವಣಗೆರೆ ವಿಶ್ವವಿದ್ಯಾಲಯ


* ವಿದ್ವತ್ ಗೌರವ ಮಣ್ಣುಪಾಲು

ಕುಲಪತಿಗಳ ನೇಮಕಾತಿಯಲ್ಲಿ ರಾಜಕೀಯ ಒತ್ತಡ, ಹಣ ಪ್ರಾಮುಖ್ಯ ಪಡೆದ ಮೇಲೆ ವಿದ್ವತ್ ಪರಂಪರೆಗೆ ಸಿಗುತ್ತಿದ್ದ ಗೌರವ ಮಣ್ಣುಪಾಲಾಗಿದೆ. ವಿಶ್ವವಿದ್ಯಾಲಯಗಳಿಗೆ ಅಂಟಿದ ಇಂತಹ ಕಳಂಕ ದೂರ ಮಾಡಲು ಸರ್ಕಾರ ಕಾಯ್ದೆಗೆ ತಿದ್ದುಪಡಿ ತರಬೇಕು. ಸೂಕ್ತ ಕಾನೂನು ರೂಪಿಸಬೇಕು. ವಾಮಮಾರ್ಗದಲ್ಲಿ ಅಧಿಕಾರ ಹಿಡಿಯುವ ವರ್ಗ ಆತ್ಮಾವಲೋಕನ ಮಾಡಿಕೊಳ್ಳಬೇಕು. ಅಕ್ರಮ ಎಸಗಿರುವುದು ಕಂಡುಬಂದರೆ ಅಂತಹ ಕುಲಪತಿ, ಕುಲಸಚಿವರನ್ನು ಮುಂದುವರಿಸಬಾರದು.

–ಕುಮಾರ ಚಲ್ಯ, ನಿವೃತ್ತ ಪ್ರಾಧ್ಯಾಪಕ, ಕುವೆಂಪು ವಿ.ವಿ.


* ವಸ್ತುಸ್ಥಿತಿಯ ಪ್ರತಿಬಿಂಬ

ಒಂದಿಷ್ಟೂ ಉತ್ಪ್ರೇಕ್ಷೆ ಇಲ್ಲದ ವರದಿ. ಈ ಹೊತ್ತಿನಲ್ಲಿ ನಡೆಯುತ್ತಿರುವ ಸ್ಥಿತಿಯಚಿತ್ರಣ ಬಿಡಿಸಿಟ್ಟಿದೆ. ವಿಶ್ವವಿದ್ಯಾಲಯಗಳ ಶೈಕ್ಷಣಿಕ ಹಾಗೂ ಆಡಳಿತ ಗುಣಮಟ್ಟ ಸುಧಾರಿಸಲು ಸರ್ಕಾರ ಮುಂದಾಗಬೇಕು. ಈ ಕುರಿತು ಆತ್ಮವಿಮರ್ಶೆ ಮಾಡಿಕೊಳ್ಳದೆ ಹೋದರೆ ಭವಿಷ್ಯದಲ್ಲಿ ಉನ್ನತ ಶಿಕ್ಷಣ ಹಾಗೂ ವಿಶ್ವವಿದ್ಯಾಲಯಗಳಿಗೆ ಗೌರವ ಉಳಿಯುವುದಿಲ್ಲ.

–ಶ್ರೀಕಂಠ ಕೂಡಿಗೆ, ನಿವೃತ್ತ ಕುಲಸಚಿವ (ಪರೀಕ್ಷಾಂಗ), ಕುವೆಂವು ವಿ.ವಿ.

* ಕಣ್ಣು ತೆರೆದು ಸಾಗುವ ಮಾಹಿತಿ

10 ವರ್ಷಗಳಿಂದ ಇತ್ತೀಚೆಗೆ ವಿಶ್ವವಿದ್ಯಾಲಯಗಳ ಕುಲಪತಿ ಆಯ್ಕೆ ವಿವಾದಕ್ಕೆ ಸಿಲುಕುತ್ತಿದೆ. ಭ್ರಷ್ಟಾಚಾರ, ಸ್ವಜನ ಪಕ್ಷಪಾತದ ಆರೋಪಗಳು ಹೆಚ್ಚುತ್ತಿವೆ. ವಿಶ್ವವಿದ್ಯಾಲಯಗಳ ಘನತೆ ಹೆಚ್ಚಿಸಬೇಕಾದವರು ಅದನ್ನು ಗಾಳಿಗೆ ತೂರುತ್ತಿದ್ದಾರೆ. ಹೀಗೆ ವಿ.ವಿಗಳ ಲೋಪದೋಷಗಳ ಕುರಿತು ‘ಪ್ರಜಾವಾಣಿ’ ಕಟ್ಟಿಕೊಟ್ಟಿರುವ ‘ಒಳನೋಟ’ ಮಾಹಿತಿಯುಕ್ತವಾದುದು. ವಿಶ್ವವಿದ್ಯಾಲಯಗಳು ಕಣ್ಣು ತೆರೆದು ಸಾಗಬೇಕಾದ ವಿಷಯವನ್ನೂ ಹೇಳುತ್ತದೆ.

–ಡಾ. ಅನಂತರಾಮಯ್ಯ, ವಿಶ್ರಾಂತ ಕುಲಪತಿ, ತುಮಕೂರು

* ಭ್ರಷ್ಟ ವ್ಯವಸ್ಥೆಯ ಮೇಲೆ ಬೆಳಕು

ಸರ್ಕಾರಿ ಆಡಳಿತ ಯಂತ್ರವನ್ನೇ ಖರೀದಿಸಿರುವ ಕಾರ್ಪೊರೇಟ್‌ ವ್ಯವಸ್ಥೆ ಉನ್ನತ ಶಿಕ್ಷಣದ ಮೇಲೂ ನಿಯಂತ್ರಣ ಸಾಧಿಸಿದೆ. ಉನ್ನತ ಶಿಕ್ಷಣವನ್ನು ಅಪಹರಿಸುವ ಪ್ರಯತ್ನವೇ ಭ್ರಷ್ಟಾಚಾರ. ಪತ್ರಿಕೆಯು ಈ ಭ್ರಷ್ಟ ವ್ಯವಸ್ಥೆಯ ಹಲವು ಆಯಾಮಗಳ ಮೇಲೆ ಬೆಳಕು ಚೆಲ್ಲಿದೆ. ಈ ಪ್ರಯತ್ನ ತುಂಬಾ ಮುಖ್ಯವಾದುದು.

–ಪ್ರೊ.ಡಿ.ಡೊಮಿನಿಕ್‌, ಬೆಂಗಳೂರು ವಿವಿ ಕೋಲಾರ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ

* ಇನ್ನಷ್ಟು ಒಳನೋಟಗಳು ಬರಲಿ

ಓದಿ ಖುಷಿಯಾಯಿತು. ಮುಂದಿನ ದಿನಗಳಲ್ಲಿ ಹಲವು ಜ್ವಲಂತ ವಿಷಯಗಳ ಬಗ್ಗೆ ಇನ್ನಷ್ಟು ಒಳನೋಟಗಳು ಮೂಡಿಬರಲಿ
ಪ್ರೊ.ಬಿ. ಶಿವರಾಮ ಶೆಟ್ಟಿ

-ಪ್ರಾಧ್ಯಾಪಕರು, ಮಂಗಳೂರು ವಿಶ್ವವಿದ್ಯಾಲಯ

ವಾಸ್ತವಕ್ಕೆ ಕನ್ನಡಿ...

ವಿಶ್ವವಿದ್ಯಾಲಯಗಳ ವಾಸ್ತವ ಸ್ಥಿತಿಗತಿಗೆ ವರದಿ ಕನ್ನಡಿ ಹಿಡಿದಿದೆ.ಮುಖ್ಯಮಂತ್ರಿ, ರಾಜ್ಯಪಾಲರು ಹಾಗೂ ಶಿಕ್ಷಣ ಸಚಿವರು ಗಟ್ಟಿಯಾಗಿದ್ದರೆ ವಿಶ್ವವಿದ್ಯಾಲಯಗಳು ಸಮರ್ಪಕವಾಗಿರುತ್ತವೆ. ಅವರು ಮನಸ್ಸು ಮಾಡಿದರೆ ಏನಾದರೂ ಮಾಡಬಹುದು.

–ಪ್ರೊ. ಅಯ್ಯಪ್ಪ ತುಕ್ಕಾಯಿ,ನಿವೃತ್ತ ಪ್ರಾಂಶುಪಾಲ, ಸ್ಪಿಲ್‌ ಪದವಿ ಮಹಾವಿದ್ಯಾಲಯ, ರಾಯಚೂರು

ನಿಯಮಾವಳಿ ಬದಲಾಗಲಿ

ಬರೆದಿದ್ದು ಸತ್ಯ. ಕುಲಪತಿಗಳನ್ನು ಆಯ್ಕೆ ಮಾಡುವ ನಿಯಮಾವಳಿ ಸರಿ ಇಲ್ಲ; ಬದಲಾಗಬೇಕು. ಅರ್ಜಿ ಕರೆದು, ದೇಶದ ಎಲ್ಲ ಪತ್ರಿಕೆಗಳಲ್ಲೂ ಪ್ರಕಟಣೆ ಕೊಟ್ಟು, ಸಂದರ್ಶನ ಮೂಲಕ ಆಯ್ಕೆ ಮಾಡಬೇಕು.

–ಪ್ರೊ.ಬಿ.ಎನ್‌.ಜೋಶಿ,ನಿವೃತ್ತ ಪ್ರಾಧ್ಯಾಪಕ, ಗುಲಬರ್ಗಾ ವಿಶ್ವವಿದ್ಯಾಲಯ

ಸ್ವಾಗತಾರ್ಹ ಕೆಲಸ

ಪತ್ರಿಕೆಗಳು, ಈ ರೀತಿಯ ಕೆಲಸದ ಮೂಲಕ ಜನರನ್ನು ಶಿಕ್ಷಿತರನ್ನಾಗಿ ಮಾಡುವುದು ಹಾಗೂ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುವುದು ನಿಜಕ್ಕೂ ಸ್ವಾಗತಾರ್ಹವಾದುದು. ‘ಪ್ರಜಾವಾಣಿ’ ಇಂತಹ ಗಂಭೀರವಾದ ವಿಷಯವನ್ನು ಗ್ರಹಿಸಿ, ಜನರಿಗೆ ತಿಳಿಸಿರುವುದು ಒಳ್ಳೆಯ ಕೆಲಸ.

–ಡಿ. ಪಾಂಡುರಂಗಬಾಬು, ಹಿರಿಯ ಪ್ರಾಧ್ಯಾಪಕ, ಕನ್ನಡ ವಿಶ್ವವಿದ್ಯಾಲಯ, ಹಂಪಿ

ಕೆಟ್ಟು ಹೋಗಿರುವ ವ್ಯವಸ್ಥೆಗೆ ಕನ್ನಡಿ

ಕೆಟ್ಟುಹೋಗಿರುವ ಶೈಕ್ಷಣಿಕ ವ್ಯವಸ್ಥೆಗೆ ಕನ್ನಡಿ ಹಿಡಿದಿದೆ. ಸಮಾಜದ ಆತ್ಮಸಾಕ್ಷಿಯಂತಿರುವ ಶಿಕ್ಷಣ ಕ್ಷೇತ್ರ ಭ್ರಷ್ಟಗೊಂಡಿರುವುದು ಬದುಕಿನ ಸೂಕ್ಷ್ಮ ಸ್ತರಕ್ಕೆ ಹುಳು ಹತ್ತಿದಂತೆ. ಈ ಲೇಖನವು ಆತ್ಮಸಾಕ್ಷಿ ಇರುವ ವ್ಯಕ್ತಿಗಳಿಗೆ ತಿದ್ದಿಕೊಂಡು ನಡೆಯಲು ಮಾರ್ಗದರ್ಶನದಂತಿದೆ.

– ಪ್ರೊ. ನಿಜಲಿಂಗಪ್ಪ ವೈ.ಮಟ್ಟಿಹಾಳ, ಪ್ರಾಧ್ಯಾಪಕ, ಕರ್ನಾಟಕ ವಿ.ವಿ., ಧಾರವಾಡ

ನೈಜ ಚಿತ್ರಣ...

‘ಒಳನೋಟ’ ಹುಳಹಿಡಿದ ವಿಶ್ವವಿದ್ಯಾಲಯಗಳ ನೈಜ ಚಿತ್ರಣ ನೀಡಿದೆ. ಹಲವಾರು ದಿನಗಳಿಂದ ನನ್ನ ಮನಸ್ಸನ್ನು ಕಾಡುತ್ತಿದ್ದ ಸಂಗತಿಗೆ ‘ಪ್ರಜಾವಾಣಿ’ ಅಕ್ಷರ ರೂಪ ನೀಡಿದೆ. ವಿವಿಗಳ ಇಂದಿನ ‘ಅವಸರ್ಪಿಣಿ’ ಸ್ಥಿತಿ ನೋಡಿ ವಿಷಾದವೆನಿಸುತ್ತದೆ. ಬೋಧನೆ, ಪರೀಕ್ಷೆ, ಮೌಲ್ಯಮಾಪನ, ಪದವಿ ನೀಡಿಕೆ, ಪಿಎಚ್‌ಡಿ ದಯಪಾಲಿಸುವ ವಿವಿಗಳಲ್ಲೇ, ಬೌದ್ಧಿಕ ಕಸರತ್ತು ನಡೆಯಬೇಕಾದಲ್ಲಿ ಹಣಕಾಸು ಅವ್ಯವಹಾರ ನಡೆದಾಗ ತನಿಖೆ ಆಗಬೇಡವೇ?

ಪ್ರೊ.ಎ.ವಿ. ನಾವಡ,ಹಿರಿಯ ವಿದ್ವಾಂಸ ಹಾಗೂ ನಿವೃತ್ತ ಪ್ರಾಧ್ಯಾಪಕ

***

ತಿದ್ದುಪಡಿ

ಕುವೆಂಪು ವಿಶ್ವವಿದ್ಯಾಲಯ ನಕಲಿ ಅಂಕಪಟ್ಟಿ ವಿವಾದಕ್ಕೆ ಸಂಬಂಧಿಸಿ ವಿಶ್ವವಿದ್ಯಾಲಯದ ಕುಲಪತಿಗಳ ನಿರ್ದೇಶಾನುಸಾರ ರಚಿಸಿದ ಆಂತರಿಕ ತನಿಖಾ ಸಮಿತಿಗೆ ಪ್ರೊ.ಎಚ್.ಎಸ್. ಭೋಜ್ಯಾನಾಯ್ಕ ಸಂಚಾಲಕರಾಗಿದ್ದರು. ಈ ಆಂತರಿಕ ತನಿಖಾ ಸಮಿತಿಯ ವರದಿ ಶಿಫಾರಸಿನ ಮೇಲೆ 8 ಮಂದಿ ವಿರುದ್ಧ ಕ್ರಮ ಕೈಗೊಳ್ಳಲಾಯಿತು. ಹಾಲಿ ಕುಲಸಚಿವ ಪ್ರೊ. ಭೋಜ್ಯಾನಾಯ್ಕ ಅವರಿಗೂ ನಕಲಿ ಅಂಕಪಟ್ಟಿ ವಿವಾದದಕ್ಕೂ ಯಾವುದೇ ಸಂಬಂಧವಿಲ್ಲ. ಭಾನುವಾರದ ಸಂಚಿಕೆಯ 7ನೇ ಪುಟದಲ್ಲಿ ಪ್ರಕಟವಾಗಿದ್ದ ವಿ.ವಿ. ಕರ್ಮಕಾಂಡ ವರದಿಯಲ್ಲಿ ಈ ಮಾಹಿತಿ ತಪ್ಪಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT