ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಕಲ್‌: ಅಸ್ಪೃಶ್ಯತೆಯ ಬೇರು ಜೀವಂತ

ಸವರ್ಣೀಯರ ಮನಸ್ಸಿನ ಕೊಳೆಯಲ್ಲಿ ದಲಿತರ ನರಳಾಟ
Last Updated 20 ಜನವರಿ 2019, 8:53 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ ಮಾಲೂರು ತಾಲ್ಲೂಕಿನ ಚನ್ನಕಲ್‌ ಗ್ರಾಮದಲ್ಲಿ ಅಸ್ಪೃಶ್ಯತೆಯ ಬೇರು ಜೀವಂತವಾಗಿದ್ದು, ಗ್ರಾಮದ ಸವರ್ಣೀಯ ಜಾತಿಗಳಾದ ಒಕ್ಕಲಿಗ, ಕುರುಬ, ಲಿಂಗಾಯತ ಮತ್ತು ಕುಂಬಾರಸಮುದಾಯಗಳಮನಸ್ಸಿನ ಕೊಳೆಯಲ್ಲಿ ದಲಿತರಾದ ಆದಿಕರ್ನಾಟಕ (ಎಕೆ) ಸಮುದಾಯದವರನೋವು ನರಳಾಟ ಮುಂದುವರಿದಿದೆ.

ಮಾಲೂರು– ಮಾಸ್ತಿ ರಸ್ತೆಗೆ ಹೊಂದಿಕೊಂಡಂತೆ ಇರುವ ಈ ಪುಟ್ಟ ಹಳ್ಳಿಯಲ್ಲಿ 230 ಮನೆಗಳಿವೆ. ಸಂತೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಈ ಗ್ರಾಮದ ಜನಸಂಖ್ಯೆ 2 ಸಾವಿರದ ಗಡಿ ದಾಟಿಲ್ಲ. ಮೇಲ್ಜಾತಿಗಳ ಪ್ರಾಬಲ್ಯ ಹೆಚ್ಚಿರುವ ಗ್ರಾಮದಲ್ಲಿ ದಲಿತರು ಅಲ್ಪಸಂಖ್ಯಾತರಾಗಿದ್ದಾರೆ. ಗ್ರಾಮದ ಮಧ್ಯೆ ಹಾದು ಹೋಗುವ ರಸ್ತೆಯು ಸವರ್ಣೀಯರ ಮತ್ತು ದಲಿತರ ಕೇರಿಯನ್ನು ಪ್ರತ್ಯೇಕಿಸಿದೆ.

ಇಡೀ ಊರಿಗೆ ಒಂದೇ ಕೊಳವೆ ಬಾವಿಯಿದ್ದು, ಅದರಿಂದ 6 ನೀರಿನ ತೊಟ್ಟಿಗೆ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಮನೆಗಳಿಗೆ ನಲ್ಲಿ ಸಂಪರ್ಕವಿಲ್ಲ. ಗ್ರಾಮ ಪಂಚಾಯಿತಿಯಿಂದ ಟ್ಯಾಂಕರ್‌ ನೀರಿನ ವ್ಯವಸ್ಥೆ ಸಹ ಮಾಡಿಲ್ಲ. ನೀರಿನ ತೊಟ್ಟಿ ಮೂಲಕವೇ ಇಡೀ ಗ್ರಾಮಕ್ಕೆ ನೀರು ಕೊಡಲಾಗುತ್ತಿದೆ. ಮೇಲ್ಜಾತಿಯವರು ನೀರು ಹಿಡಿದುಕೊಳ್ಳುವಾಗ ದಲಿತ ಮಹಿಳೆಯರು ಅಲ್ಲಿ ಸುಳಿಯುವಂತಿಲ್ಲ. ದಲಿತರಿಗೆ ಪ್ರತ್ಯೇಕ ಸಮಯ ನಿಗದಿಪಡಿಸಿ ನೀರು ಕೊಡಲಾಗುತ್ತಿದೆ.

ಗ್ರಾಮದ ಐದು ದೇವಸ್ಥಾನಗಳ ಪೈಕಿ ನಾಲ್ಕಕ್ಕೆ ದಲಿತರಿಗೆ ಪ್ರವೇಶವಿಲ್ಲ. ಮೇಲ್ಜಾತಿಯವರ ಮನೆಗಳಿಗೂ ದಲಿತರ ಪ್ರವೇಶ ನಿರ್ಬಂಧಿಸಲಾಗಿದೆ. ಮೇಲ್ಜಾತಿಯವರ ಯಜಮಾನಿಕೆಯಿಂದ ರೋಸಿ ಹೋಗಿರುವ ದಲಿತರು ತಮ್ಮ ಕೇರಿಯಲ್ಲೇ ಕರಗದಮ್ಮ ದೇವಸ್ಥಾನ ಕಟ್ಟಿಕೊಂಡಿದ್ದಾರೆ. ಊರ ಹಬ್ಬ ಸೇರಿದಂತೆ ಗ್ರಾಮದ ಯಾವುದೇ ಧಾರ್ಮಿಕ ಕಾರ್ಯಕ್ರಮದಲ್ಲಿ ದಲಿತರು ಭಾಗಿಯಾಗುವಂತಿಲ್ಲ.

ಕ್ಷೌರ ಮಾಡುವುದಿಲ್ಲ: ಗ್ರಾಮದಲ್ಲಿ ಕ್ಷೌರದ ಅಂಗಡಿಗಳಿಲ್ಲ. ಪ್ರತಿ ಭಾನುವಾರ ಸಮೀಪದ ದ್ಯಾಪಸಂದ್ರದಿಂದ ಗ್ರಾಮಕ್ಕೆ ಬರುವ ಕ್ಷೌರಿಕನು ಮೇಲ್ಜಾತಿಯವರ ಮನೆ ಬಳಿ ಹೋಗಿ ಕ್ಷೌರ ಮಾಡುತ್ತಾನೆ. ಆದರೆ, ಆತ ದಲಿತರ ಕೇರಿಗೆ ಬರಲು ಒಪ್ಪುವುದಿಲ್ಲ. ಹೀಗಾಗಿ ದಲಿತರು ಮೂರ್ನಾಲ್ಕು ಕಿಲೋ ಮೀಟರ್‌ ದೂರದ ಮೈಲಾಂಡಹಳ್ಳಿಗೋ ಅಥವಾ ಮಾಲೂರು ತಾಲ್ಲೂಕು ಕೇಂದ್ರಕ್ಕೆ ಹೋಗಿ ಕ್ಷೌರ ಮಾಡಿಸಿಕೊಂಡು ಬರುತ್ತಾರೆ.

ಬೀದಿ ಕಾಮಣ್ಣರ ಕಾಟ: ಸಂಜೆಯಾಯಿತೆಂದರೆ ದಲಿತ ಯುವತಿಯರಿಗೆ ಮೇಲ್ಜಾತಿಯ ಕೆಲ ಪುಂಡರ ಕಾಟ. ದಲಿತ ಹುಡುಗಿಯರನ್ನು ಚುಡಾಯಿಸಲೆಂದೇ ಸವರ್ಣೀಯ ಕೆಲ ಯುವಕರ ಗುಂಪು ರಸ್ತೆಯಲ್ಲಿ ಕಾದು ಕುಳಿತಿರುತ್ತದೆ. ಪೊಲೀಸರಿಗೆ ದೂರು ನೀಡಿದರೂ ಯುವತಿಯರಿಗೆ ಬೀದಿ ಕಾಮಣ್ಣರ ಕಾಟ ತಪ್ಪಿಲ್ಲ ಎಂದು ಗ್ರಾಮಸ್ಥರೊಬ್ಬರು ತಿಳಿಸಿದರು.

ಸವರ್ಣೀಯರ ದೌರ್ಜನ್ಯದಿಂದ ನಲುಗಿರುವ ದಲಿತ ಮಂದಿ ಆ ಬಗ್ಗೆ ತುಟಿ ಬಿಚ್ಚಲು ಸಹ ಹೆದರುತ್ತಾರೆ. ಜೀವ ಭಯದಲ್ಲೇ ‘ಪ್ರಜಾವಾಣಿ’ ಜತೆ ನೋವು ತೋಡಿಕೊಂಡ ದಲಿತ ಮಹಿಳೆಯರು ಅಸ್ಪೃಶ್ಯತೆಯ ಕರಾಳ ಮುಖದ ಇಂಚಿಂಚೂ ಮಾಹಿತಿ ನೀಡಿ ತಮ್ಮ ಗುರುತು ಬಹಿರಂಗಪಡಿಸದಂತೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT