ಭಾನುವಾರ, ಅಕ್ಟೋಬರ್ 20, 2019
27 °C

ಅಣ್ಣ, ಅಕ್ಕಾ, ಸರ್‌, ಮೇಡಂ ಪದ ಬಳಸಿ!

Published:
Updated:
Prajavani

ಬೆಂಗಳೂರು: ‘ಏನಯ್ಯ, ಹೋಗಯ್ಯ ಎಂಬ ಪದಗಳನ್ನು ಬಳಸುವುದಕ್ಕಿಂತ ಸರ್‌, ಮೇಡಂ, ಅಣ್ಣ, ಅಕ್ಕಾ ಪದಗಳನ್ನು ಬಳಸುವುದು ಸೂಕ್ತ’ ಎಂದು ಸಾರಿಗೆ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ರಾಜ್ಯ ರಸ್ತೆ ಸಾರಿಗೆ ಚಾಲಕರು ಮತ್ತು ನಿರ್ವಾಹಕರಿಗೆ ಸಲಹೆ ನೀಡಿದ್ದಾರೆ.

‘ಪ್ರಯಾಣಿಕರಿಂದ ಸಣ್ಣ– ಪುಟ್ಟ ಕಿರಿಕಿರಿಗಳಾದರೂ ನಿಮ್ಮ ಮಾತುಗಳು ಮೆಲು ಧ್ವನಿಯಲ್ಲೇ ಇರಲಿ. ಪ್ರಯಾಣಿಕರ ಸಹಾಯಕಾಗಿ ಸೌಜನ್ಯದಿಂದ ವರ್ತಿಸಬೇಕು’ ಎಂದಿದ್ದಾರೆ.

‘ಸ್ವಂತ ಕಾರು, ಜೀಪನ್ನು ಎಷ್ಟೊಂದು ಸ್ವಚ್ಛವಾಗಿ ಇಟ್ಟುಕೊಳ್ಳುತ್ತೇವಲ್ಲ. ಅದೇ ಭಾವನೆ ನಮ್ಮ ಸಾರಿಗೆ ಸಂಸ್ಥೆಗಳ ಬಸ್ಸುಗಳ ಮೇಲೆಯೂ ಇದ್ದರೆ ಕೆಲಸಕ್ಕೆ ಮತ್ತಷ್ಟು ಮಹತ್ವ– ಹೊಸತನ ಒದಗಿ ಬರುತ್ತದೆ. ಒಬ್ಬ ಚಾಲಕ ಫುಟ್‌ಪಾತ್‌ ಮೇಲೆ ಬಸ್ಸನ್ನು ಚಲಾಯಿಸಿದರೆ ಅಥವಾ ನಿರ್ವಾಹಕ ಪ್ರಯಾಣಿಕರ ಮೇಲೆ ಹರಿಹಾಯ್ದರೆ ಇಡೀ ಸಿಬ್ಬಂದಿ ಸಮೂಹಕ್ಕೆ ಕೆಟ್ಟ ಹೆಸರು ಬರುತ್ತದೆ. ಇದನ್ನು ತಪ್ಪಿಸಬೇಕು’ ಎಂದಿದ್ದಾರೆ.

ಚಿಕ್ಕ ಪುಟ್ಟ ಅಪಘಾತಗಳಾದಾಗ ಗಾಯಾಳುಗಳಿಗೆ ನೆರವು, ಪ್ರಥಮ ಚಿಕಿತ್ಸೆ ನೀಡಿ ವೈದ್ಯರಂತೆ ಸೇವೆ ಸಲ್ಲಿಸಬೇಕು. ಈ ರೀತಿ ಪ್ರಯಾಣಿಕರಿಗೆ ಆಪದ್ಬಾಂಧವರಾಗುವ ಮನೋಭಾವ ಹೆಚ್ಚಬೇಕು ಎಂದು ಹೇಳಿದ್ದಾರೆ.

ಸಾರ್ವಜನಿಕರು ಧರಣಿ, ಮುಷ್ಕರದ ಸಂದರ್ಭದಲ್ಲಿ ವಿನಾಕಾರಣ ಬಸ್ಸುಗಳು ಆಹುತಿಯಾಗುವುದನ್ನು ತಡೆಯಬೇಕು ಎಂದೂ ಸವದಿ ಮನವಿ ಮಾಡಿದ್ದಾರೆ.

Post Comments (+)