26ರಿಂದ ಕಾರ್ಯಕರ್ತರ ಜನಸಂಪರ್ಕ

7
ಜೆಡಿಎಸ್ ಜೊತೆ ಸ್ಥಾನ ಹೊಂದಾಣಿಕೆ ಚರ್ಚೆ ಆಗಿಲ್ಲ– ವೇಣುಗೋಪಾಲ್‌

26ರಿಂದ ಕಾರ್ಯಕರ್ತರ ಜನಸಂಪರ್ಕ

Published:
Updated:

ಬೆಂಗಳೂರು: ‘ಕಾಂಗ್ರೆಸ್- ಜೆಡಿಎಸ್ ಮೈತ್ರಿ ಲೋಕಸಭೆ ಚುನಾವಣೆಯಲ್ಲೂ ಮುಂದುವರಿಯಲಿದೆ. ಆದರೆ, ಸ್ಥಾನ ಹಂಚಿಕೆ ಬಗ್ಗೆ ಇನ್ನೂ ಯಾವುದೇ ಚರ್ಚೆ ಆಗಿಲ್ಲ’ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಹೇಳಿದರು.

ಕೆಪಿಸಿಸಿ ಪದಾಧಿಕಾರಿಗಳು ಮತ್ತು ಜಿಲ್ಲಾ ಘಟಕದ ಅಧ್ಯಕ್ಷರ ಸಭೆಯ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸೌಹಾರ್ದಯುತ ಮಾತುಕತೆ ಮೂಲಕ ಸ್ಥಾನ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ’ ಎಂದು ಸ್ಪಷ್ಟಪಡಿಸಿದರು.

‘ಉಭಯ ಪಕ್ಷಗಳ ನಾಯಕರ ಮಧ್ಯೆ ಯಾವುದೇ ಅಸಮಾಧಾನ ಇಲ್ಲ. ಜೆಡಿಎಸ್‌ ವರಿಷ್ಠ ದೇವೇಗೌಡ ಹಿರಿಯರು. ಮೈತ್ರಿ ಅಂದ ಮೇಲೆ ಸಣ್ಣ ಪುಟ್ಟ ಸಮಸ್ಯೆಗಳಿರುತ್ತವೆ. ಅದನ್ನೇ ದೊಡ್ಡದು ಮಾಡಬೇಕಿಲ್ಲ. ಎಲ್ಲ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ’ ಎಂದರು.

‘ಲೋಕಸಭಾ ಚುನಾವಣೆಗೆ ಪಕ್ಷ ಸಿದ್ಧಗೊಳಿಸುವ ಉದ್ದೇಶದಿಂದ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. ಬೂತ್‌ ಮಟ್ಟದಿಂದ ಪಕ್ಷವನ್ನು ಬಲಪಡಿಸಬೇಕಿದೆ. ಕಾರ್ಯಕರ್ತರು ಇದೇ 26ರಿಂದ ಫೆ. 15ರವರೆಗೆ ಜನಸಂಪರ್ಕ ಕೈಗೊಳ್ಳಲಿದ್ದಾರೆ. ಪ್ರತಿ ಮನೆಗೆ ತೆರಳಿ ಕೇಂದ್ರ ಸರ್ಕಾರದ ವೈಫಲ್ಯಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲಿದ್ದಾರೆ’ ಎಂದರು.

‘ದೇಶದ ಸದ್ಯದ ವಿದ್ಯಮಾನಗಳು ಕೇಂದ್ರ ಸರ್ಕಾರದ ವಿರುದ್ಧವಾಗಿದೆ. ಮಧ್ಯರಾತ್ರಿ ಹೈಡ್ರಾಮಾ ಮೂಲಕ ಸಿಬಿಐ ನಿರ್ದೇಶಕರನ್ನು ಬದಲಾವಣೆ ಮಾಡಲಾಗಿತ್ತು. ಈಗ ಮರುನೇಮಕಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಈ ಬೆಳವಣಿಗೆ ಕೇಂದ್ರ ಸರ್ಕಾರಕ್ಕೆ ದೊಡ್ಡ ಹೊಡೆತ’ ಎಂದು ಅಭಿಪ್ರಾಯಪಟ್ಟರು.

‘ರಫೇಲ್ ಹೋರಾಟವನ್ನು ಕಾಂಗ್ರೆಸ್‌ ಕೈಬಿಡುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಇದೇ ವಿಷಯ ಪ್ರಮುಖ ಅಸ್ತ್ರವಾಗಲಿದೆ’ ಎಂದರು.

‘ಮೇಲ್ವರ್ಗಕ್ಕೆ ಶೇ 10ರಷ್ಟು ಮೀಸಲಾತಿ ನೀಡಿದ ಕೇಂದ್ರ ಸರ್ಕಾರದ ಕ್ರಮವನ್ನು ಪಕ್ಷ ಸ್ವಾಗತಿಸುತ್ತದೆ. ಆದರೆ, ಇದು ದೇಶದ ಜನರಿಗೆ ಮೋದಿ ಸರ್ಕಾರದ ಲಾಲಿಪಾಪ್. ತರಾತರಿಯಲ್ಲಿ ಮೀಸಲಾತಿ‌ ಘೋಷಿಸಿರುವುದು ಚುನಾವಣಾ ಗಿಮಿಕ್‌’ ಎಂದು ಅವರು ಟೀಕಿಸಿದರು.

ನಿಗಮ ಮಂಡಳಿ ನೇಮಕ ಗೊಂದಲದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಮೈತ್ರಿ ಸರ್ಕಾರ ಸುಭದ್ರವಾಗಿದೆ. ನಮ್ಮ ಪಕ್ಷದ ಶಾಸಕ ಕೆ. ಸುಧಾಕರ್‌ ವಿಚಾರದಲ್ಲೂ ಸಮಸ್ಯೆ ಇಲ್ಲ. ಅವರ ಜೊತೆ ಮಾತಾಡಿದ್ದೇನೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !