ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ, ದೀದಿ ಔರ್‌ ಚಾಲೀಸ್‌ ಚೋರ್

Last Updated 3 ಮೇ 2019, 20:15 IST
ಅಕ್ಷರ ಗಾತ್ರ

ಬ್ಯಾಸಗಿ ಧಗಿ ಕಾರಣಕ್ಕೆ ಮನಿ ಮುಂದಿನ ಕಟ್ಟಿಮ್ಯಾಗ್ ಮಲಗಿದಾಂವ ಅದೇ ಆಗ ಎದ್ದು ಆಕಳಿಸುತ್ತ ಕುಳಿತಾಗಲೇ, ‘ಬೆಳಗಾತೇನಪಾ, ಬೆಡ್‌ ಟೀ ಕುಡ್ದಿ ಏನ್‌’ ಎಂದೆನ್ನುತ್ತ ಪ್ರಭ್ಯಾ ಬಂದು ವಕ್ಕರಿಸಿದ.

‘ಚುನಾವಣಾ ಗದ್ದಲದ ಬಗ್ಗೆ ನಂಗೇನೂ ಗೊತ್ತಿಲ್ಲ. ಸೂರ್ಯಾ ಮ್ಯಾಲ ಬಂದಾಗ ನಂಗ ಬೆಡ್‌ ಟೀ ಕೊಟ್ಟಾರ್‌. ನಾ ಎದ್ದಿದ್ದೂ ತಡಾ’ ಅಂತ ಹೇಳ್ಕೊಂಡ್‌ ಟಿಎಂಸಿ ಸ್ಪರ್ಧಿ ಮೂನ್‌ ಮೂನ್‌ ಸೇನ್‌ಗೆ ನನಗ್‌ ಹೋಲುಸ್ತಿ ಏನ್‌ ಮಗ್ನ. ಬೆಳಗ್ಗ ಬೆಳಗ್ಗ ಮಂಗಳಾರತಿ ಮಾಡಿಸ್ಕೊಳ್ಳೊ ಆಸೆ ಆಗೆದೇನ್‌’ ಎಂದು ಜಬರಿಸಿದೆ.

‘ಸುಮ್ನ ಚಾಷ್ಟಿ ಮಾಡ್ಡೆ’ ಅಂತ ಸಮಾಧಾನಿಸಿದ.

‘ಅದಿರ್ಲಿ, ಸವಾರಿ ಎಲ್ಲಿಗೋ ಹೊಂಟೈತಲ್ಲ’ ಎಂದೆ.
‘ಎಲೆಕ್ಷನ್‌ದಾಗ್‌ ಓಡಾಡಿ ರೊಕ್ಕಾ ಹಂಚಿ ಸಾಕಾಗೈತಿ, ಮೈ–ಮನಸ್‌ ಹಗುರ್‌ ಮಾಡ್ಕೊಂಡ್‌ ಬರಾಕ್‌ ಗೋವಾಕ್ಕ ಹೋಗಿ ಬರಬೇಕಂದ್ರ ಆಡಿಯೋರಪ್ಪನೋರು ಎಲ್ಲೂ ಹೋಗದ್ಹಂಗ್‌ ಮೂಗುದಾರ ಹಾಕಿ ಬಿಟ್ಟಾರ್‌. ಅದ್ಕ ವಾಕಿಂಗ್‌ ಹೊಂಟಿದ್ಯಾ’ ಎಂದ.

‘ಉಪ ಚುನಾವಣೆ ಮುಗದ್‌ಮ್ಯಾಲೇ ಹನಿಮೂನಕ್ಕರ ಹೋಗ್ರಿ ಇಲ್ಲಾ ಹರಗ್ಯಾಡಾಕ್ಕರ ಹೋಗ್ರಿ ಅಂದಾರ್‌. ಚುನಾವಣಾ ರಿಸಲ್ಟ್‌ನ್ಯಾಗ್‌ 22 ಸೀಟ್‌ ಗೆದ್ದು ಮತ್ತ ಆಪರೇಷನ್‌ ಕಮಲ ಸುರು ಆದ್ರ ಅದ್ಕೂ ಕಲ್‌ ಬಿದ್ಹಂಗ್‌ ಬಿಡೊ ಮಾರಾಯ’ ಅಂತ ಬೇಜಾರ್‌ ಮಾಡ್ಕೊಂಡ.

‘22 ಸೀಟ್‌ ಗೆಲ್ಲೋತನಕ ಮನಿಗಿ ಹೋಗುದಿಲ್ಲ ಅಂತ ಪ್ರತಿಜ್ಞೆ ಸ್ವೀಕರಿಸಿದ್ದವರು ಈಗ ಎಲ್ಲಿ ಅದಾರಪಾ’ ಎಂದೆ.

‘ಅದೇನೋ ಗೊತ್ತಿಲ್ಲಪ್ಪ. ಎಚ್‌ಎಂಟಿ ಕಾರ್ಖಾನೆ ಬಾಗಿಲು ಹಾಕ್ದಂಗ್‌, ಹಾಸನ, ಮಂಡ್ಯ ಮತ್ತು ತುಮಕೂರು (ಎಚ್‌ಎಂಟಿ) ಸೋಲುವ ಭೀತಿಯನ್ನ ಎದುರಿಸಲು ದೊಡ್ಡ ಗೌಡ್ರು, ಚಿಕ್ಕ ಗೌಡ್ರು ಮೂಳೂರಿನ ರೆಸಾರ್ಟ್‌ನ ಬೇಲಿಗೆಲ್ಲ ಬಟ್ಟೆ ಹೊದಿಸಿ ಪಂಚಕರ್ಮ ಚಿಕಿತ್ಸೆ ಪಡ್ಯಾಕತ್ತಾರ್‌ ಅನ್ನೂದಷ್ಟ ಗೊತ್ತು’ ಎಂದ ಪ್ರಭ್ಯಾ ಕರ್ಮ, ಕರ್ಮ ಅಂತ ಹಣೆ ಚಚ್ಚಿಕೊಂಡ.

‘ಎಲೆಕ್ಷನ್‌ ರಿಸಲ್ಟ್‌ ಏನರ್‌ ಇರಲಿ, ಎಸ್ಸೆಸ್ಸೆಲ್ಸಿ ಪರೀಕ್ಷಾ ಸಾಧನೆ ಬಗ್ಗೆ ಹಾಸನದ ಪ್ರಕಾಂಡ ಪಂಡಿತ ಜ್ಯೋತಿಷಿಯ ಮಾತೇ ದೊಡ್ಡ ನಗೆಚಾಟಿಕಿ ಆಗೇದ್‌. ಎಸ್ಸೆಸ್ಸೆಲ್ಸಿ ಮತ್ತ ಎಲೆಕ್ಷನ್‌ ಪರೀಕ್ಷೆದಾಗ ಇವರೆಲ್ಲ ಏನೇನೂ ಕಡಿದು ಕಟ್ಟೆ ಹಾಕಿದ್ಹಂಗ್‌ ಕಾಣ್ಸುದಿಲ್ಲ’ ಎಂದ.

‘ಪರೀಕ್ಷಾ ಫಲಿತಾಂಶ ಬಗ್ಗೆ ಆಕಾಶ– ಪಾತಾಳ್‌ ಒಂದ್‌ಮಾಡಿ ಗೌಡ್ರ ಕುಟುಂಬದವರ ಪರಿಶ್ರಮವೇ ಕಾರಣ ಅಂತ ಬಡ್ಕೊಳ್ಳಾಕತ್ತಾರಲ್ಲ. ಎಲೆಕ್ಷನ್‌ ರಿಸಲ್ಟ್‌ನ್ಯಾಗ್‌ ಇವ್ರು ಅಂದ್ಕೊಂಡಿದ್ದೆಲ್ಲ ಉಲ್ಟಾಪಲ್ಟಾ ಆದ್ರ ಎದುರಾಳಿಗಳ ಮೈಮ್ಯಾಲಿನ ಅಂಗಿ ಚೊಣ್ಣಾ ಹರ‍್ಯಾಕ್‌ ಕೂಡಾ ಹಿಂದ್‌ ಮುಂದ್‌ ನೋಡುದಿಲ್ಲ ಬಿಡು’ ಎಂದ.

‘ಬಟ್ಟೆ ಹರ್‍ಕೊಳ್ಳವರ ಕತೆ ಬಿಡು. ಹೊಸ ಬಟ್ಟೆ ಹೊಲಿಸಿಕೊಂಡು ಗೂಟದ ಕಾರ್‌ನ್ಯಾಗ್‌ ಓಡಾಡೊ ಮತ್ತೊಂದು ಕನಸ್‌ ಕಾಣಾವ್ರ ಬಗ್ಗೆ ಮಾತಾಡು. ಈ ಸಲ, ಆಪರೇಷನ್‌ ಕಮಲಕ್ಕ ಸೂಪರ್‌ ಸ್ಪೆಷಾಲಿಟಿ ಡಾಕ್ಟ್ರ ಕತ್ತರಿ ಆಡ್ಸೊ ಹಂಗ ಕಾಣಾಕತ್ತದ್‌’ ಎಂದೆ.

‘ಆಡಿಯೋರಪ್ಪನ್ನೋರ್‍ನ ಬಿಟ್ರ ಮತ್ಯಾವ್‌ ಗಂಡ್ಸ ಅದಾರಪ ನಮ್ಮ ಪಕ್ಷದಾಗ್‌... ಆಪರೇಷನ್‌ ಮಾಡಾಕs...’ ಅಂತ ಪ್ರಭ್ಯಾ ಗುಮಾನಿಯಿಂದ ರಾಗಾ ಎಳೆದ.

‘ನೀ ಎಂಥಾ ದಡ್ಡ ಅದೀಲೇ. ತೃಣಮೂಲ ಕಾಂಗ್ರೆಸ್‌ ಪಕ್ಷದ 40 ಮಂದಿ ಎಂಎಲ್‌ಎಗಳು ದೀದಿ ಕಳಿಸಿದ್ದ ಜುಬ್ಬಾ ಕಿಸೆದಾಗ್‌ ಅದಾರ್‌. 23ರ ನಂತ್ರ ದೀದಿ ಸರ್ಕಾರ ಬೀಳ್ತದ ಅಂತ ಸ್ವತಃ ಚೌಕೀದಾರನs ಹೇಳ್ಕೊಂಡಾನ್‌. ಹಿಂದ್‌, ರಾಜ್ಯಾ ಗೆಲ್ಲಾಕ್‌ ಅಶ್ವಮೇಧ ಮಾಡತಿದ್ರು. ಈಗ ‘ಎಂಎಲ್‌ಎಮೇಧ’ ಮಾಡಾಕ್‌ ಚೌಕೀದಾರನೂ ಕಣಕ್ಕ ಇಳಿದಾನ. ಎಂಥಾ ಒಳ್ಳೆಯ ದಿನಗಳು ಬಂದಾವಲ್ಲ’ ಎಂದು ಕಿಚಾಯಿಸಿದೆ.

‘40 ಎಂಎಲ್‌ಎ’ಗೋಳು ಪ್ರಧಾನಿ ಬಾಬಾ ಹಿಂದ್‌ ಹೋದ್ರೂ, ದೀದಿ ಸರ್ಕಾರಕ್ಕ ಏನೂ ಆಗುದಿಲ್ಲಲೇ. ಆಕಿ ಕಡಿಗೆ 211 ಎಂಎಲ್‌ಎಗೋಳ್‌ ಅದಾರ್‌. ‘ನವೋ’ಗೆ ಹೊಸದಾಗಿ ‘ಅಲಿಬಾಬಾ ಔರ್‌ 40 ಚೋರ್‌’ ಹಣೆಪಟ್ಟಿ ತಗಲ್ತದ ಅಷ್ಟೇ. ಕುಮಾರಣ್ಣ ಸರ್ಕಾರದಾಗ ಬರೀ ನಾಕs ನಾಕ್‌ ಮಂದಿ ಕೈಕೊಟ್ರೂ ಸರ್ಕಾರನ ಬಿದ್ದ ಹೋಗ್ತದಲ್ಲ’ ಎಂದ.

‘ಬೆಳಗಾವಿ ಸಾಹುಕಾರ್‌ನ ಒಬ್ಬಂಟಿ ಆಗಿ ಗಾಳಿ ಜತೆ ಗುದ್ದಾಡಾಕತ್ತಾನ್‌. ಅಂವ್ಗ ಬಂದಿರೋ ಗತಿ ನೋಡಿದ್ರ ಯಾರ ಆಪರೇಷನ್ನೂ ನಡೆಯೋ ಹಂಗ್‌ ಕಾಣಿಸ್ತಿಲ್ಲ’ ಎಂದೆ.

‘211 ಎಂಎಲ್‌ಎಗಳ ತೃಣಮೂಲ ಕಾಂಗ್ರೆಸ್‌ಗ ಕೈಹಾಕಿದವ್ರಿಗೆ 80 ಶಾಸಕರ ಕಾಂಗ್ರೆಸ್‌ ತೃಣ, ತೃಣ ಸಮಾನ ಇದ್ದೀತು’ ಎಂದ ಪ್ರಭ್ಯಾ.

‘ಕಾಂಗ್ರೆಸ್‌ ಬಗ್ಗೆ ಅಷ್ಟ ಹಗುರ ಆಗಿ ಮಾತಾಡಾಕ್‌ ನಾಲಗಿ ಉದ್ದ ಬಿಡಬ್ಯಾಡಲೆ’ ಎಂದು ಜೋರು ಮಾಡಿದೆ. ‘ನನ್ನ ನಾಲಿಗೇನೂ ಈಶ್ವರಪ್ಪ ಥರಾ ಉದ್ದ ಇಲ್ಲಪಾ’ ಅಂತ ಹೇಳುತ್ತಲೇ, ನಾಲಿಗಿ ಹೊರಗ್‌ ತಗ್ದು ತೋರ್ಸಿ ಹಿ ಹೀ ಹೀ ಅಂತ ಹಲ್ಕಿರಿದ.

‘ನಿಮ್ಮ ಪಕ್ಷದವ್ರದ್ದು ನಾಲ್ಗಿ ಉದ್ದ ಇರ್ಲಿಕ್ಕಿಲ್ಲ. ಆದ್ರ ಎರಡು ನಾಲಿಗಿ ಇರಬಹುದು’ ಎಂದೆ. ‘ಯೇತಿ ಅಂದ್ರ ಪ್ರೇತಿ ಅಂತಿಯಲ್ಲೋ’ ಎಂದು ಕಾಲೆಳೆದ. ’ಯೇತಿ’ ಹೆಜ್ಜೆ ಗುರುತು ಪತ್ತೆಯಾಗಿವೆ ಅಂತ ಸೇನೆ ಹೇಳ್ಕೊಂಡಿದೆಯಲ್ಲ. ಸದ್ಯಕ್ಕೆ ಅದೂ ನಮ್ಮ ಸಾಧನೆಯೇ ಅಂತ ಪ್ರಧಾನ ಪ್ರಚಾರ ಮಂತ್ರಿ ಹೇಳ್ಕೊಳ್ಳದಿದ್ರ ಸಾಕೊ ಮಾರಾಯಾ. ‘ಒಳ್ಳೆಯ ದಿನಗಳೂ’ಯೇತಿಹಂಗs ನಿಗೂಢವಾಗಿವೆ ಏಳ್‌' ಎಂದೆ.

‘ಹಲ್ಕಾ ರಾಜಕಾರಣಿಗಳ ಬಗ್ಗೆ ಎಷ್ಟ ಮಾತಾಡಿದ್ರೂ ಅಷ್ಟ ಏಳ್‌. ನೀ ಜಾಗಾ ಖಾಲಿ ಮಾಡ್. ನಾನೂ ಜಳಕಾ ಮಾಡುದದ ಅಂತ ಹೇಳಿ ಅವ್ನ ಸಾಗಹಾಕಿ ಬಚ್ಚಲ ಮನೆ ಬಾಗಿಲಲ್ಲಿ ನಿಂತು ‘ಖುಲ್‌ ಜಾ ಸಿಮ್‌ಸಿಮ್‌’ ಅಂತ ಕೂಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT