ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅನರ್ಹರು ವೈರಸ್’ ಕೆರಳಿದ ಸಚಿವರು

Last Updated 19 ಫೆಬ್ರುವರಿ 2020, 22:52 IST
ಅಕ್ಷರ ಗಾತ್ರ

ಬೆಂಗಳೂರು: ‘ಅನರ್ಹ ಶಾಸಕರು ಬಿಜೆಪಿಗೆ ಅಂಟಿದ ವೈರಸ್’ ಎಂದು ಸ್ವತಃ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೇಳಿದ್ದಾರೆ ಎನ್ನಲಾದ ಮಾತು ವಿಧಾನ ಪರಿಷತ್‌ನಲ್ಲಿ ಬುಧವಾರ ತೀವ್ರ ಕೋಲಾಹಲ ಸೃಷ್ಟಿಸಿತು. ಇಬ್ಬರು ಸಚಿವರಂತೂ ಕೆರಳಿ ಕೆಂಡವಾದರು.

ನಿಲುವಳಿ ಸೂಚನೆ ಮೇಲೆ ಆರ್‌.ಬಿ.ತಿಮ್ಮಾಪುರ ಅವರು ಮಂಗಳೂರು ಗಲಭೆ, ರಾಜ್ಯದಲ್ಲಿ ಹದಗೆಟ್ಟ ಆಡಳಿತದ ಬಗ್ಗೆ ಮಾತನಾಡುತ್ತಿದ್ದ ವೇಳೆ ಮಧ್ಯಪ್ರವೇಶಿಸಿದ ಕಾಂಗ್ರೆಸ್‌ನ ಪಿ.ಆರ್‌.ರಮೇಶ್,ಅನರ್ಹರು ವೈರಸ್ ಎಂಬುದಾಗಿ ಸಂತೋಷ್ ಹೇಳಿದ್ದಾರೆ ಎಂದು ಪ್ರಸ್ತಾಪಿಸಿದರು.

ಸಚಿವರಾದ ಎಸ್.ಟಿ. ಸೋಮಶೇಖರ್ ಮತ್ತು ಬಿ.ಸಿ.ಪಾಟೀಲ ಅವರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ‘ಸುಪ್ರೀಂ ಕೋರ್ಟ್ ತೀರ್ಪಿನಂತೆ ನಾವು ಮತ್ತೆ ಜನರಿಂದ ಆಯ್ಕೆಯಾಗಿ ಬಂದವರು’ ಎಂದರು. ‘ಕಾಂಗ್ರೆಸ್‌ನಯೋಗ್ಯತೆಗೆ ಕೆಪಿಸಿಸಿ ಅಧ್ಯಕ್ಷರನ್ನು ಆಯ್ಕೆ ಮಾಡುವುದೇ ಸಾಧ್ಯವಾಗಿಲ್ಲ’ ಎಂದು ಛೇಡಿಸಿದರು.

ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರೂ ಸಚಿವರನ್ನು ಸಮರ್ಥಿಸಿ, ಸಂತೋಷ್‌ ಹೇಳಿದ್ದನ್ನು ತಪ್ಪಾಗಿ ವ್ಯಾಖ್ಯಾನಿಸಲಾಗಿದೆ ಎಂದು ಹೇಳಲು ಯತ್ನಿಸಿದರು.ಆದರೆ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಅವರು ಇನ್ನಷ್ಟು ಚರ್ಚೆಗೆ ಅವಕಾಶ ಕೊಡಲಿಲ್ಲ.

ಪುಟ್ಟಣ್ಣಗೆ ಕೊನೆಗೂ ಸಿಕ್ತು ಸೀಟು
ಬೆಂಗಳೂರು:
ವಿಧಾನ ಪರಿಷತ್‌ ಜೆಡಿಎಸ್‌ ಸದಸ್ಯರಾಗಿದ್ದ ಹಾಗೂ ಪಕ್ಷದಿಂದ ಉಚ್ಚಾಟಿತರಾಗಿರುವ ಪುಟ್ಟಣ್ಣ ಅವರಿಗೆ ಕೊನೆಗೂ ‘ಆಡಳಿತ’ ಪಕ್ಷದ ಬದಿಯ 41ನೇ ಸೀಟು ದೊರೆತಿದೆ. ಈ ಮೂಲಕ ಅತಂತ್ರ ನಿವಾರಣೆಯಾಗಿದೆ.

ಮಂಗಳೂರು ಗಲಭೆ ಕುರಿತು ಕಾಂಗ್ರೆಸ್‌ನ ಪ್ರಕಾಶ್ ರಾಠೋಡ್‌ ಮಾತನಾಡುವ ಸಮಯದಲ್ಲಿ ಗಲಭೆಯ ಚಿತ್ರಗಳನ್ನು ಪ್ರದರ್ಶಿಸಿದರು. ಇದಕ್ಕೆ ಪ್ರತಿಯಾಗಿ ಬಿಜೆಪಿಯ ಮಹಾಂತೇಶ ಕವಟಗಿಮಠ ಅವರೂ ಫೋಟೊ
ಪ್ರದರ್ಶಿಸಿದರು.

ಆಗ ಎರಡೂ ಕಡೆಯ ಸದಸ್ಯರು ಮಾತಿಗೆ ಮಾತು ಬೆಳೆಸಿದರು. ಪುಟ್ಟಣ್ಣ ಅವರೂ ಎದ್ದುನಿಂತು ಆಡಳಿತ ಪಕ್ಷದ ಫೋಟೊ ಪ್ರದರ್ಶನವನ್ನು ಸಮರ್ಥಿಸಿದರು.

ಕೆ.ಟಿ.ಶ್ರೀಕಂಠೇಗೌಡ ತಕ್ಷಣ ಎದ್ದು ನಿಂತು, ‘ನಿಮ್ಮ ಸ್ಥಾನ ನನ್ನ ಪಕ್ಕದಲ್ಲಿದೆ, ಈ ಕುರ್ಚಿಯಲ್ಲಿ ನಿಮ್ಮ ಹೆಸರೂ ಇದೆ. ಇಲ್ಲೇ ಬಂದು ಮಾತನಾಡಿ’ ಎಂದು ಛೇಡಿಸಿದರು. ‘ನಾನು ಅಲ್ಲಿ ಬಂದಾಗ ನೀವೇ ಆಚೆ ಹೋಗಿ ಎಂದಿದ್ದೀರಲ್ಲ’ ಎಂದು ಪುಟ್ಟಣ್ಣ ತಿರುಗೇಟು ನೀಡಿದರು.

ಆಗ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ರೂಲಿಂಗ್ ಹೊರಡಿಸಿ, ‘ಪುಟ್ಟಣ್ಣ ಅವರಿಗೆ ಆಡಳಿತ ಪಕ್ಷದ ಬದಿಯಲ್ಲಿ ಇರುವ 41ನೇ ಸೀಟು ನೀಡಲಾಗಿದೆ’ ಎಂದರು. ಮಾರ್ಷಲ್‌ ಅವರು ಪುಟ್ಟಣ್ಣ ಅವರ ಹೆಸರನ್ನು ಹಳೆ ಸೀಟಿನಿಂದ ಕಿತ್ತು ಹೊಸ ಸೀಟಿಗೆ ಅಂಟಿಸಿದರು.

ಪರಿಷತ್‌ನಲ್ಲಿ ಪ್ರತಿಧ್ವನಿಸಿದ ‘ಪ್ರಜಾವಾಣಿ’ ವರದಿ
ಬೆಂಗಳೂರು:
ಮಳೆ ಹಾಗೂ ನೆರೆ ಯಿಂದಾಗಿ ಮನೆ ಕಳೆದುಕೊಂಡವರ ಬಗ್ಗೆ ‘ಕೊಚ್ಚಿಹೋದ ಸೂರು: ನಿಲ್ಲದ ಕಣ್ಣೀರು’ ಶೀರ್ಷಿಕೆಯಡಿ ‘ಪ್ರಜಾವಾಣಿ’ ಯಲ್ಲಿ ಬುಧವಾರ ಪ್ರಕಟವಾದ ವರದಿ ವಿಧಾನ ಪರಿಷತ್‌ನಲ್ಲಿ ಪ್ರತಿಧ್ವನಿಸಿತು.

ನಿಲುವಳಿ ಸೂಚನೆ ಮೇಲೆ ಚರ್ಚೆ ನಡೆಯುತ್ತಿದ್ದ ಸಮಯದಲ್ಲಿ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್, ‘ವಿರೋಧ ಪಕ್ಷದವರು ನಿಲುವಳಿ ಸೂಚನೆ ತಂದ ಉದ್ದೇಶ ಈಡೇರಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿಲ್ಲ. ಇದರಿಂದ ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿಲ್ಲ’ ಎಂದು ಸಮರ್ಥಿಸಿಕೊಂಡರು.

ಈ ಸಮಯದಲ್ಲಿ ಎದ್ದುನಿಂತ ವೈ.ನಾರಾಯಣಸ್ವಾಮಿ, ಆರ್.ಧರ್ಮಸೇನಾ ಅವರು ‘ಪ್ರಜಾವಾಣಿ’ ಪತ್ರಿಕೆ ಪ್ರದರ್ಶಿಸಿ ದರು. ನೆರೆಗೆ ತುತ್ತಾದವರಿಗೆ ಇನ್ನೂ ಸೂರು ಕಲ್ಪಿಸಿಲ್ಲ. ಇದು ಸರ್ಕಾರದ ವೈಫಲ್ಯವಲ್ಲದೆ ಮತ್ತೇನು ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT