ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಕಾಸಸೌಧಕ್ಕೇ ಕಳಪೆ ಕಲ್ಲು!

14 ಎಂಜಿನಿಯರ್‌ಗಳ ಬಡ್ತಿ, ವೇತನ ಹೆಚ್ಚಳಕ್ಕೆ ಕತ್ತರಿ: ಲೋಕಾಯುಕ್ತ ಶಿಫಾರಸು
Last Updated 17 ಫೆಬ್ರುವರಿ 2019, 20:14 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಆಡಳಿತಾಂಗವನ್ನು ನಿಯಂತ್ರಿಸುವ ಕಚೇರಿಗಳ ಕೇಂದ್ರವಾಗಿರುವ ವಿಕಾಸಸೌಧವೆಂಬ ಭವ್ಯ ಕಟ್ಟಡ ಕಟ್ಟುವಾಗ ಕಳಪೆ ಕಲ್ಲುಗಳನ್ನು ಬಳಸಿರುವುದು ಲೋಕಾಯುಕ್ತ ತನಿಖೆಯಿಂದ ಪತ್ತೆಯಾಗಿದೆ.

ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆನ್ನಲಾದ ಲೋಕೋಪಯೋಗಿ ಇಲಾಖೆಯ 14 ಎಂಜಿನಿಯರ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತರು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.

ಎಸ್‌.ಎಂ. ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ (2004) ವಿಕಾಸಸೌಧ ನಿರ್ಮಾಣವಾಗಿದ್ದು, ಟೆಂಡರ್‌ನಲ್ಲಿ ನಿರ್ದಿಷ್ಟಪಡಿಸಿದ ಗುಣಮಟ್ಟದ ಕಲ್ಲುಗಳನ್ನು ಬಳಸದೆ, ಉಬ್ಬುತಗ್ಗುಗಳಿರುವ ಕಲ್ಲುಗಳನ್ನು ಉಪಯೋಗಿಸಲಾಗಿದೆ. ಇದರಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎಂದು ಸರ್ಕಾರಕ್ಕೆ ಕಳುಹಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕೇವಲ 15 ವರ್ಷಗಳಲ್ಲಿ ವಿಕಾಸಸೌಧದ ಗೋಡೆಗಳಲ್ಲಿ ಬಿರುಕುಗಳು ಮತ್ತು ತೇವಾಂಶ ಕಾಣಿಸಿಕೊಂಡಿದೆ. ಈ ದೋಷಪೂರಿತ ಕಾಮಗಾರಿಯಲ್ಲಿ ಆಗಿನ 14 ಎಂಜಿನಿಯರ್‌ಗಳು ಭಾಗಿಯಾಗಿದ್ದು, ಅವರಿಗೆ ನಿರ್ದಿಷ್ಟ ಅವಧಿಯವರೆಗೆ ಬಡ್ತಿ ಮತ್ತು ವೇತನ ಬಡ್ತಿಯನ್ನು ತಡೆಹಿಡಿಯುವಂತೆ ಶಿಫಾರಸು ಮಾಡಲಾಗಿದೆ. ಸೇವೆಯಿಂದ ನಿವೃತ್ತಿ ಹೊಂದಿರುವ ಕೆಲವು ಎಂಜಿನಿಯರ್‌ಗಳ ಪಿಂಚಣಿ ಹಣದಲ್ಲಿ ಭಾಗಶಃ ಕಡಿತ ಮಾಡುವಂತೆ ಹೇಳಲಾಗಿದೆ.

ವಿಕಾಸಸೌಧ ನಿರ್ಮಾಣಕ್ಕೆ ತಗುಲಿದ ವೆಚ್ಚದ ಅಂತಿಮ ಬಿಲ್‌ ಇತ್ಯರ್ಥವಾಗದಿದ್ದರೂ, ದಾಖಲೆಗಳಲ್ಲಿ ಅಸಮರ್ಪಕವಾದ ಲೆಕ್ಕಗಳನ್ನು ತೋರಿಸಿ ಗುತ್ತಿಗೆದಾರರಿಗೆ ಹೆಚ್ಚು ಹಣ ಪಾವತಿಸಿರುವ ಸಾಧ್ಯತೆಯಿದೆ. ಆದರೆ, ಸಂಬಂಧಪಟ್ಟ ಇಲಾಖೆ ಅಗತ್ಯ ದಾಖಲೆಗಳನ್ನು ಒದಗಿಸದಿರುವುದರಿಂದ ನಷ್ಟದ ಪ್ರಮಾಣವನ್ನು ನಿಖರವಾಗಿ ಅಂದಾಜಿಸಲು ಸಾಧ್ಯವಾಗಿಲ್ಲ ಎಂದೂ ಲೋಕಾಯುಕ್ತರ ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.

ಕಳಪೆ ಕಲ್ಲುಗಳ ಬಳಕೆ ಹಾಗೂ ದೋಷಪೂರಿತ ಕಾಮಗಾರಿಯಿಂದ ಎಷ್ಟು ನಷ್ಟವಾಗಿದೆ ಎಂಬುದನ್ನು ಸರ್ಕಾರವೇ ಅಂದಾಜಿಸಬೇಕು.ಗುತ್ತಿಗೆದಾರರಿಗೆ ಎಷ್ಟು ಹಣ ಪಾವತಿಯಾಗಿದೆ; ಇನ್ನೂ ಬಿಲ್‌ ಪಾವತಿ ಬಾಕಿ ಇದೆಯೇ ಇಲ್ಲವೆ ಹೆಚ್ಚುವರಿ ಹಣ ಪಾವತಿ ಮಾಡಲಾಗಿದೆಯೇ ಎಂಬ ಅಂಶಗಳ ಬಗ್ಗೆಯೂ ಪರಿಶೀಲಿಸಬೇಕು. ಬಿಲ್‌ ಪಾವತಿ ಆಗದಿದ್ದರೆ ಅದರಿಂದಲೇ ನಷ್ಟ ತುಂಬಿಕೊಳ್ಳಬೇಕು ಎಂದೂ ತಿಳಿಸಲಾಗಿದೆ.

ಅಕಸ್ಮಾತ್‌ ಸರ್ಕಾರಕ್ಕೆ ಆಗಿರುವ ನಷ್ಟದ ಪ್ರಮಾಣ ಗುತ್ತಿಗೆದಾರರಿಗೆ ಪಾವತಿಸಬೇಕಾಗಿರುವ ಹಣಕ್ಕಿಂತಲೂ ಹೆಚ್ಚಾಗಿದ್ದರೆ ಗುತ್ತಿಗೆದಾರರಿಂದ ವಸೂಲು ಮಾಡಲು ಕ್ರಮ ಕೈಗೊಳ್ಳಬೇಕು. ಗುತ್ತಿಗೆದಾರರಿಗೆ ನಷ್ಟ ಕಟ್ಟಿಕೊಡಲು ಸಾಧ್ಯವಾಗದಿದ್ದರೆ ತಪ್ಪಿತಸ್ಥ ಅಧಿಕಾರಿಗಳ ವೇತನ, ನಿವೃತ್ತಿ ಸೌಲಭ್ಯಗಳಿಂದ ವಸೂಲು ಮಾಡುವಂತೆ ಸಲಹೆ ನೀಡಲಾಗಿದೆ.

ಸಹಾಯಕ ರಿಜಿಸ್ಟ್ರಾರ್‌ ಅವರ ವಿಚಾರಣಾ ವರದಿ ಆಧರಿಸಿ ಲೋಕಾಯುಕ್ತರು ಎಂಜಿನಿಯರ್‌ಗಳ ವಿರುದ್ಧ ಕೈಗೊಳ್ಳಬೇಕಾದ ಕ್ರಮ ಕುರಿತು ತೀರ್ಮಾನ ಮಾಡಿದ್ದಾರೆ. ಎಷ್ಟು ವರ್ಷ ಬಡ್ತಿ ಮತ್ತು ವೇತನ ಬಡ್ತಿ ತಡೆ ಹಿಡಿಯಬೇಕು ಎಂದು ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖ ಮಾಡಿದ್ದಾರೆ.

ತಮ್ಮ ವರದಿ ತಲುಪಿದ ಮೂರು ತಿಂಗಳ ಒಳಗಾಗಿ ಕೈಗೊಂಡ ಕ್ರಮ ಕುರಿತು ತಿಳಿಸುವಂತೆ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಸೂಚಿಸಿದ್ದಾರೆ. ಈ ಕುರಿತ ಪ್ರತಿಕ್ರಿಯೆಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಅವರು ಲಭ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT