ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ಮನ್ನಾ ಮಾಡಿ, ಇಲ್ಲದಿದ್ದರೆ ಖುರ್ಚಿ ಕುರ್ಚಿ ಖಾಲಿ ಮಾಡಿ: ಬಿಜೆಪಿ ರೈತ ಸಮಾವೇಶ

Last Updated 10 ಡಿಸೆಂಬರ್ 2018, 12:52 IST
ಅಕ್ಷರ ಗಾತ್ರ

ಬೆಳಗಾವಿ: ‘ಭರವಸೆ ನೀಡಿದಂತೆ ರೈತರ ಸಾಲ ಮನ್ನಾ ಮಾಡಿ. ಇಲ್ಲದಿದ್ದರೆ ಕುರ್ಚಿ ಖಾಲಿ ಮಾಡಿ’ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಬಿಜೆಪಿ ಒತ್ತಾಯಿಸಿದೆ.

ನಗರದಲ್ಲಿ ಸೋಮವಾರ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರೈತರ ಬೃಹತ್‌ ಸಮಾವೇಶದಲ್ಲಿ ಭಾಗವಹಿಸಿದ್ದ ಮುಖಂಡರು, ಕುರ್ಚಿ ಖಾಲಿ ಮಾಡದಿದ್ದರೆ ರಾಜ್ಯ ವ್ಯಾಪಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಮಾತನಾಡಿ, ‘100ಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ಬರ ಆವರಿಸಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿ, ಅಧಿಕಾರಕ್ಕೇರಿರುವ ಕುಮಾರಸ್ವಾಮಿ ಅವರು ತಮ್ಮ ಮಾತನ್ನು ಮರೆತು ತುಘಲಕ್‌ ದರ್ಬಾರ್‌ ನಡೆಸಿದ್ದಾರೆ’ ಎಂದು ಕಿಡಿಕಾರಿದರು.

ಬರ ಪ್ರದೇಶಗಳಲ್ಲಿ ಸಚಿವರಾಗಲಿ, ಅಧಿಕಾರಿಗಳಾಗಲಿ ಯಾರೂ ಭೇಟಿ ನೀಡಿಲ್ಲ. ಬರ ಪರಿಸ್ಥಿತಿಯನ್ನು ಅಧ್ಯಯನ ಮಾಡಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದೆ. ಇವರ ನೆರವಿಗೆ ಸರ್ಕಾರ ತಕ್ಷಣ ಧಾವಿಸಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್‌ ತಬ್ಬಲಿಗಳು

‘ಜೆಡಿಎಸ್‌ಗೆ ಬೆಂಬಲ ನೀಡಿದ್ದರಿಂದ ತಾವು ತಬ್ಬಲಿಗಳಾಗಿದ್ದೇವೆ ಎನ್ನುವ ಭಾವನೆ ಕಾಂಗ್ರೆಸ್ಸಿಗರಲ್ಲಿ ಕಾಣಿಸುತ್ತಿದೆ. ತಾವು ಬೀದಿಪಾಲಾಗುತ್ತಿದ್ದೇವೆ ಎನ್ನುವುದು ಗೊತ್ತಾಗಿದೆ. ಅವರಿಂದಲೇ ಸರ್ಕಾರ ಬಿದ್ದುಹೋಗಲಿದೆ. ಅಲ್ಲಿಯವರೆಗೆ ಶಾಂತವಾಗಿ ಕಾಯುತ್ತೇವೆ’ ಎಂದು ಹೇಳಿದರು.

ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷ ಲಕ್ಷ್ಮಣ ಸವದಿ ಮಾತನಾಡಿ, ‘24 ಗಂಟೆಯೊಳಗೆ ಸಾಲ ಮನ್ನಾ ಮಾಡುವುದಾಗಿ ಹೇಳಿ ಅಧಿಕಾರಕ್ಕೆ ಬಂದಿದ್ದೀರಿ. ನಿಮ್ಮ ಮಾತನ್ನು ಮರೆಯಬೇಡಿ. ವಚನಭ್ರಷ್ಟರಾಗಬೇಡಿ. ರೈತರ ಶಾಪ ತಟ್ಟುತ್ತದೆ’ ಎಂದು ಕುಮಾರಸ್ವಾಮಿ ಅವರನ್ನು ಚುಚ್ಚಿದರು.

ಬಿಜೆಪಿ ಸದಸ್ಯರ ಆಡಳಿತವಿರುವ ಅಥಣಿಯ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಎಲ್ಲ ಕಬ್ಬು ಬೆಳೆಗಾರರಿಗೆ ಹಣ ಪಾವತಿಸಿದೆ. ಒಂದು ಪೈಸೆಯೂ ಬಾಕಿ ಉಳಿಸಿಕೊಂಡಿಲ್ಲ. ಕಬ್ಬು ಬೆಳೆಗಾರರ ಬಾಕಿ ಬಿಲ್‌ ಉಳಿಸಿಕೊಂಡಿರುವ ಸಕ್ಕರೆ ಕಾರ್ಖಾನೆಗಳ ವಿರುದ್ಧ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ನೂರಾರು ಕೋಟಿ ವೆಚ್ಚ ಮಾಡಿ ಕಟ್ಟಲಾಗಿರುವ ಇಲ್ಲಿನ ಸುವರ್ಣ ವಿಧಾನಸೌಧವನ್ನು ಸದ್ಬಳಕೆ ಮಾಡಿಕೊಳ್ಳಬೇಕಾಗಿದೆ. ವರ್ಷಕ್ಕೊಮ್ಮೆ 10 ದಿನಗಳ ಅಧಿವೇಶನ ನಡೆಸಿದರೆ ಸಾಲದು, ಪ್ರಮುಖ ಇಲಾಖೆಗಳು ಇಲ್ಲಿಗೆ ಸ್ಥಳಾಂತರಗೊಳ್ಳಬೇಕು. ವರ್ಷವಿಡೀ ಚಟುವಟಿಕೆಯ ಕೇಂದ್ರವಾಗಿರಬೇಕು ಎಂದು ಒತ್ತಾಯಿಸಿದರು.

ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ಬೆಂಬಲ ಬೆಲೆಯಡಿ ಈರುಳ್ಳಿ ಖರೀದಿಸಲು ಸರ್ಕಾರದ ಬಳಿ ಹಣವಿಲ್ಲವೆಂದು ಮುಖ್ಯಮಂತ್ರಿ ಹೇಳುತ್ತಾರೆ. ರಾಜ್ಯ ಸರ್ಕಾರವೇನು ಪಾಪರ್‌ ಆಗಿದೆಯೇ? ಎಂದು ವ್ಯಂಗ್ಯವಾಡಿದರು.

ಶಾಸಕ ಜಗದೀಶ ಶೆಟ್ಟರ್‌ ಮಾತನಾಡಿ, ಸಾಲ ಮನ್ನಾ ಮಾಡಲು ಮುಖ್ಯಮಂತ್ರಿಗಳು 53 ಷರತ್ತುಗಳನ್ನು ವಿಧಿಸಿದ್ದಾರೆ. ಇವೆಲ್ಲ ಷರತ್ತುಗಳನ್ನು ಪೂರೈಸಲು ರೈತರಿಂದ ಸಾಧ್ಯವಿಲ್ಲ. ಹೀಗಾಗಿ ಸಾಲ ಮನ್ನಾ ಆಗಲಿದೆ ಎನ್ನುವ ರೈತರ ಆಶಯ ಹಗಲುಗನಸಾಗಲಿದೆ ಎಂದರು.

ಬರ ಪ್ರದೇಶದಿಂದ ಜನರು, ರೈತರು, ಕಾರ್ಮಿಕರು ಗುಳೆ ಹೋಗುತ್ತಿದ್ದಾರೆ. ಇದನ್ನು ತಡೆಯಲು ಸರ್ಕಾರ ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಸಚಿವರು, ಅಧಿಕಾರಿಗಳು ಈ ಪ್ರದೇಶಗಳಿಗೆ ಭೇಟಿ ನೀಡುತ್ತಿಲ್ಲ. ಯಾವುದೇ ಬರ ಪರಿಹಾರ ಕಾಮಗಾರಿ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಸಂಸದ ಸುರೇಶ ಅಂಗಡಿ ಮಾತನಾಡಿ, ಬರ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳದ ರಾಜ್ಯ ಸರ್ಕಾರ ಸತ್ತುಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಗೋವಿಂದ ಕಾರಜೋಳ, ಶಾಸಕ ಕೆ.ಎಸ್‌. ಈಶ್ವರಪ್ಪ, ಸಂಸದ ಪಿ.ಸಿ. ಗದ್ದಿಗೌಡರ ಮಾತನಾಡಿದರು.

ಶಾಸಕ ಆರ್‌.ಅಶೋಕ ಮಾತನಾಡಿ, ‘ಹಾಸನ ಜಿಲ್ಲೆಯ ಹೊಳೆನರಸಿಪುರದಿಂದ ಕುಮಾರಸ್ವಾಮಿ ಅವರು ಆಡಳಿತ ನಡೆಸುತ್ತಿದ್ದಾರೆ. ಅವರು ರಾಜ್ಯದ ಮುಖ್ಯಮಂತ್ರಿ ಎನ್ನುವುದನ್ನು ಮರೆತು, ಹೊಳೆ ನರಸಿಪುರದ ಮುಖ್ಯಮಂತ್ರಿಯಂತೆ ವರ್ತಿಸುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT