ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಗಳ ಒಡಲು ಬರಿದು!

ಬರದ ಭೀಕರತೆ ಸಾರುತ್ತಿರುವ ಜಲಮೂಲಗಳು
Last Updated 15 ಮಾರ್ಚ್ 2019, 12:28 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯಲ್ಲಿ ಸಾವಿರಾರು ಹೆಕ್ಟೇರ್‌ಗಳಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳಲು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವ ಪ್ರಮುಖ ಮೂಲವಾಗಿರುವ ಕೆರೆಗಳ ಒಡಲು ಸಂಪೂರ್ಣ ಬರಿದಾಗಿದೆ.

ಕೆಲವು ಕೆರೆಗಳಲ್ಲಿ ಮಾತ್ರವೇ ಕೊಂಚ ಪ್ರಮಾಣದಲ್ಲಿ ನೀಡಿದೆ. ದಿನೇ ದಿನೇ ಬಿಸಿಲಿನ ಝಳ ಹೆಚ್ಚಾಗುತ್ತಿದ್ದಂತೆಯೇ, ನೀರು ಆವಿಯಾಗುತ್ತಿದ್ದು ಕೆರೆಗಳು ಬರದ ಭೀಕರತೆಯನ್ನು ಸಾರುತ್ತಿವೆ. ಬಹುತೇಕ ಕೆರೆಗಳಲ್ಲಿನ ನೆಲ ಬಿರುಕು ಬಿಟ್ಟಿದ್ದು, ಹನಿ ನೀರು ಕೂಡ ಉಳಿದಿಲ್ಲ. ಇದರಿಂದಾಗಿ, ಜಾನುವಾರುಗಳು ನೀರಿಗಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಸಣ್ಣ ನೀರಾವರಿ ವಿಭಾಗ ಬೆಳಗಾವಿ ವ್ಯಾಪ್ತಿಯ ಬೆಳಗಾವಿ, ಖಾನಾಪುರ, ಬೈಲಹೊಂಗಲ, ಹುಕ್ಕೇರಿ, ಗೋಕಾಕ, ರಾಮದುರ್ಗ, ಸವದತ್ತಿ, ಅಥಣಿ, ಚಿಕ್ಕೋಡಿ, ರಾಯಬಾಗ ತಾಲ್ಲುಕುಗಳಲ್ಲಿ 277 ಕೆರೆಗಳಿವೆ. ಇವುಗಳ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯ 3304.72 ಎಂಸಿಎಫ್‌ಟಿ (ಮೀಟರ್‌ ಕ್ಯುಬಿಕ್‌ ಫೀಟ್‌). ಇವು 30,592.82 ಹೆಕ್ಟೇರ್‌ ಅಚ್ಚುಕಟ್ಟು ಪ್ರದೇಶ ಹೊಂದಿವೆ. ಇವುಗಳಲ್ಲಿ 197 ಕೆರೆಗಳು ಖಾಲಿ ಇವೆ. ಶೇ 30ರವರೆಗೆ ತುಂಬದ ಕೆರೆಗಳ ಸಂಖ್ಯೆ 48. ಶೇ 31ರಿಂದ ಶೇ 80 ತುಂಬಿದವು 22. ಶೇ 51ರಿಂದ ಶೇ 99 ತುಂಬಿದ ಕೆರೆಗಳು 11 ಮಾತ್ರ. ಪೂರ್ತಿ ತುಂಬಿರುವ ಕೆರೆಗಳು ಒಂದೂ ಇಲ್ಲ.

ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ:

ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಸಂಗ್ರಹಿಸಿದ ಮಾಹಿತಿ ‍ಪ್ರಕಾರ ಈ ಅಂಶಗಳು ತಿಳಿದುಬಂದಿವೆ. ಫೆಬ್ರುವರಿ ಅಂತ್ಯಕ್ಕೆ ಸಂಗ್ರಹಿಸಲಾದ ಮಾಹಿತಿ ಇದು. 15 ದಿನಗಳಲ್ಲಿ ಕೆರೆಗಳಲ್ಲಿನ ನೀರಿನ ಪ್ರಮಾಣ ಮತ್ತಷ್ಟು ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇದೆ. ಇದು ಗ್ರಾಮೀಣ ಪ್ರದೇಶಗಳ ಜನರ ಆತಂಕಕ್ಕೆ ಕಾರಣವಾಗಿದೆ.

ಉತ್ತಮ ಮಳೆಯಾಗಿದ್ದ ಖಾನಾಪುರ ತಾಲ್ಲೂಕಿನಲ್ಲೂ 40ರಲ್ಲಿ 20 ಕೆರೆಗಳು ಖಾಲಿ ಇವೆ.

‘ಕೆರೆಗಳ ಸ್ಥಿತಿಯ ಕುರಿತು ಜಲಸಂಪನ್ಮೂಲ ಇಲಾಖೆಯ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಹೋದ ವರ್ಷ ಇದೇ ಅವಧಿಗೆ ಹೋಲಿಸಿದರೆ ನೀರಿನ ಪ್ರಮಾಣ ಶೇ 25ರಷ್ಟು ಜಾಸ್ತಿಯೇ ಇದೆ. ಲಭ್ಯವಿರುವ ಕಡೆಗಳಲ್ಲಿ ನೀರನ್ನು ಇನ್ನೆರಡು ತಿಂಗಳವರೆಗೆ ಕುಡಿಯುವ ಉದ್ದೇಶಕ್ಕೆ ಬಳಸಬಹುದಾಗಿದೆ’ ಎಂದು ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಕೆ.ಕೆ. ಜಾಲಿಬೇರಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಕೆ:

‘ಕೆರೆಗಳ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರವೇ ಬಳಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಕೃಷಿಗೆ ಪಂಪ್‌ ಮಾಡಿಕೊಳ್ಳುವಂತಿಲ್ಲ ಹಾಗೂ ಟ್ಯಾಂಕರ್‌ಗಳಲ್ಲಿ ತುಂಬಿಕೊಂಡು ಹೋಗುವಂತಿಲ್ಲ. ಫೆಬ್ರುವರಿಯಿಂದಲೇ ಈ ಆದೇಶ ಮಾಡಲಾಗಿದೆ. ಕೃಷಿಗೆ ಬಳಸದಂತೆ ನಿಗಾ ವಹಿಸಲಾಗಿದೆ. ಜಾನುವಾರುಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದರು.

‘ಬೆಳಗಾವಿ ಹಾಗೂ ಖಾನಾಪುರ ತಾಲ್ಲೂಕುಗಳಲ್ಲಿ ಮಾತ್ರವೇ ಉತ್ತಮ ಮಳೆಯಾಗಿತ್ತು. ಆ ಭಾಗದ ಕೆಲವು ಕೆರೆಗಳು ಸಂಪೂರ್ಣ ತುಂಬಿದ್ದವು. ಅವುಗಳಲ್ಲೂ ಈಗ ನೀರಿನ ಪ್ರಮಾಣ ಇಳಿದಿದೆ. ಉಳಿದಂತೆ ಇತರ ಕಡೆಗಳಲ್ಲಿ ಕೆರೆಗಳಲ್ಲಿ ಸಮಾಧಾನಕರ ಸಂಗ್ರಹ ಇರಲಿಲ್ಲ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT