ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಾಶಯಗಳಿಗೆ ಒಳಹರಿವು ಹೆಚ್ಚಳ

ಕೆಲವೇ ದಿನಗಳಲ್ಲಿ ಹೆಚ್ಚಿದ ನೀರಿನ ಮಟ್ಟ
Last Updated 1 ಆಗಸ್ಟ್ 2019, 11:24 IST
ಅಕ್ಷರ ಗಾತ್ರ

ಬೆಳಗಾವಿ: ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆ ಸುರಿಯುತ್ತಿರುವುದರಿಂದ, ಜಿಲ್ಲೆಯ ಪ್ರಮುಖ ಜಲಮೂಲಗಳಾದ ಹಿಡಕಲ್ ಹಾಗೂ ನವಿಲುತೀರ್ಥ ಜಲಾಶಯಗಳಲ್ಲಿನ ನೀರಿನ ಮಟ್ಟ ಏರಿಕೆಯಾಗುತ್ತಿದೆ.

ಘಟಪ್ರಭಾ ನದಿಗೆ ಹಿಡಕಲ್‌ ಬಳಿ (ರಾಜಾ ಲಖಮಗೌಡ ಜಲಾಶಯ) ಹಾಗೂ ಮಲಪ್ರಭಾ ನದಿಗೆ ಸವದತ್ತಿ ತಾಲ್ಲೂಕಿನ ನವಿಲುತೀರ್ಥ ಬಳಿ ಜಲಾಶಯ (ರೇಣುಕಾ) ನಿರ್ಮಿಸಲಾಗಿದೆ. ಮುಂಗಾರು ಹಂಗಾಮು ಆರಂಭವಾಗಿ ತಿಂಗಳು ಕಳೆದರೂ ಪ್ರಬಲವಾದ ಮಳೆ ಬಂದಿರಲಿಲ್ಲ. ಹೀಗಾಗಿ, ಈ ಜಲಾಶಯಗಳ ನೀರಿನ ಮಟ್ಟ ಅಷ್ಟೇನೂ ಏರಿಕೆಯಾಗಿರಲಿಲ್ಲ. ಆದರೆ, ನಾಲ್ಕೈದು ದಿನಗಳಿಂದ ಜೋರು ಮಳೆ ಆಗುತ್ತಿರುವುದರಿಂದ, ಈ ಜಲಮೂಲಗಳ ಒಡಲು ಭರ್ತಿಯಾಗುತ್ತಿದೆ.

ಮಲಪ್ರಭಾ ನದಿಯ ಉಗಮ ಸ್ಥಳವಾದ ಕಣಕುಂಬಿ ಹಾಗೂ ಖಾನಾಪುರ ಸುತ್ತಮುತ್ತ ಸುರಿಯುತ್ತಿರುವ ಮಳೆಯಿಂದಾಗಿ ನೀರು ಮಲಪ್ರಭಾ ನದಿಯಲ್ಲಿ ಹರಿದು ಜಲಾಶಯ ಸೇರುತ್ತಿದೆ.

ಕೆಲವೇ ದಿನಗಳಲ್ಲಿ:

ನವಿಲುತೀರ್ಥ ಜಲಾಶಯದಲ್ಲಿ 37.731 ಟಿ.ಎಂ.ಸಿ ಅಡಿಗಳಷ್ಟು ನೀರು ಸಂಗ್ರಹ ಸಾಮರ್ಥ್ಯವಿದೆ. ಗುರುವಾರ 19.135 ಟಿಎಂಸಿ ಇತ್ತು. ಇದರ ಗರಿಷ್ಠ ಮಟ್ಟ 2079.50 ಅಡಿಗಳು. ಈ ಪೈಕಿ ಗುರುವಾರ ನೀರಿನ ಮಟ್ಟ 2063.05 ಅಡಿ ಇತ್ತು. 26,101 ಕ್ಯುಸೆಕ್‌ ಒಳಹರಿವಿತ್ತು. 164 ಕ್ಯುಸೆಕ್‌ ಹೊರಹರಿವು ಇತ್ತು. ಹೋದ ವರ್ಷ ಆ.1ರಂದು 2063.30 ಇತ್ತು. ಇದೇ ವರ್ಷದ ಜುಲೈ 22ರಂದು 2055.80 ಅಡಿ ಇತ್ತು. ಅಂದರೆ, ನೀರಿನ ಮಟ್ಟ 10 ದಿನಗಳಲ್ಲಿ 8 ಅಡಿಗಳಷ್ಟು ಏರಿಕೆಯಾಗಿದೆ.

ಇದು ಹುಬ್ಬಳ್ಳಿ–ಧಾರವಾಡ, ಸವದತ್ತಿ, ರಾಮದುರ್ಗ, ಬಾದಾಮಿ, ರೋಣ, ನವಲಗುಂದ, ಅಣ್ಣಿಗೇರಿ ಮತ್ತು ಕುಂದಗೋಳ ಪಟ್ಟಣಗಳ ಕುಡಿಯುವ ನೀರಿನ ಮೂಲವಾಗಿದೆ. 2018ರಲ್ಲಿ ಶೇ 70ರಷ್ಟು ಮಾತ್ರ ಭರ್ತಿಯಾಗಿತ್ತು.

ಒಟ್ಟು 37 ಟಿಎಂಸಿ ಅಡಿಯಲ್ಲಿ ಪ್ರತಿ ವರ್ಷ 9 ಟಿಎಂಸಿ ಅಡಿ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಮೀಸಲಿಡಲಾಗುತ್ತದೆ. 3 ಟಿಎಂಸಿ ನೀರನ್ನು ವಿವಿಧ ನಗರಗಳಿಗೆ ಪೈಪ್‌ಲೈನ್‌ ಮೂಲಕ ಹಾಗೂ 5 ಟಿಎಂಸಿ ಅಡಿ ನೀರನ್ನು ನಾಲೆ ಮತ್ತು ನದಿಗಳ ಮೂಲಕ ಹರಿಸಿ, ಕೆರೆ ಮತ್ತು ಬ್ಯಾರೇಜ್‌ಗಳನ್ನು ಭರ್ತಿ ಮಾಡಲು ಬಳಸಲಾಗುತ್ತದೆ. ಈ ಜಲಾಶಯ ನಿರ್ಮಾಣವಾದ ಬಳಿಕ 1998, 2005, 2006, 2007, 2009 ಮತ್ತು 2012ರಲ್ಲಿ ಮಾತ್ರ ಭರ್ತಿಯಾಗಿದೆ. ಈ ಬಾರಿ ತುಂಬುವುದೇ ಎನ್ನುವ ನಿರೀಕ್ಷೆ ಮೂಡಿದೆ.

10 ದಿನಗಳಲ್ಲಿ 15 ಅಡಿ:

ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಬಳಿ ಘಟಪ್ರಭಾ ನದಿಗೆ ನಿರ್ಮಿಸಿರುವ ಜಲಾಶಯದಲ್ಲೂ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. 51 ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹ ಸಾಮರ್ಥ್ಯದ ಇಲ್ಲಿ 34.02 ಟಿಎಂಸಿ ಅಡಿಗಳಷ್ಟಿತ್ತು. ಇದರ ಗರಿಷ್ಠ ಮಟ್ಟ 2175 ಅಡಿಗಳು. ಇದರಲ್ಲಿ 2151.75 ಅಡಿಗಳಷ್ಟು ನೀರು ಸಂಗ್ರಹವಾಗಿದೆ. 28,744 ಕ್ಯುಸೆಕ್ ಒಳಹರಿವು ಹಾಗೂ 2,474 ಕ್ಯುಸೆಕ್‌ ಹೊರಹರಿವು ಇತ್ತು. 10 ದಿನಗಳಲ್ಲಿ 15 ಅಡಿಗಳಷ್ಟು ನೀರು ಹರಿದುಬಂದಿದೆ. ಹೋದ ವರ್ಷ ಆ. 1ರಂದು 2171.91 ಅಡಿಗಳಿಗೆ ತಲುಪಿತ್ತು. 48.62 ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹವಿತ್ತು.

‘ಹೋದ ವರ್ಷ ಈ ವೇಳೆಗಾಗಲೇ ಹಿಡಕಲ್ ಜಲಾಶಯ ಬಹುತೇಕ ಭರ್ತಿಯಾಗಿತ್ತು. ಕೆಲವು ದಿನಗಳಿಂದ ನಿತ್ಯ ಸರಾಸರಿ 2 ಟಿಎಂಸಿ ಅಡಿಗಳಷ್ಟು ನೀರು ಬರುತ್ತಿದೆ. ಇದೇ ರೀತಿ ಮುಂದುವರಿದರೆ ಮುಂದಿನ 10 ದಿನಗಳಲ್ಲಿ ಭರ್ತಿಯಾಗುವ ಸಾಧ್ಯತೆ ಇದೆ. ಕೆಲವೇ ದಿನಗಳಲ್ಲಿ 6 ಟಿಎಂಸಿಗೂ ಹೆಚ್ಚಿನ ಪ್ರಮಾಣದ ನೀರು ಹರಿದುಬಂದಿದೆ’ ಎಂದು ಪ್ರಭಾರ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್‌.ಸಿ. ನಾಯ್ಕ ‘ಪ್ರಜಾವಾಣಿ’ಗೆ ತಿಳಿಸಿದರು.

ಇಲ್ಲಿಂದ ಬೆಳಗಾವಿ ನಗರ, ಸಂಕೇಶ್ವರ, ಹುಕ್ಕೇರಿ, ಗೋಕಾಕ ಮೊದಲಾದ ಕಡೆಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತದೆ.

ಇದಲ್ಲದೇ, ಯಮಕನಮರಡಿ ಸಮೀಪದಲ್ಲಿರುವ ಮಾರ್ಕಂಡೇಯ (ಶಿರೂರು ಡ್ಯಾಂ) ಜಲಾಶಯ ಭರ್ತಿಯಾಗಿದ್ದು, ನಾಲ್ಕು ಗೇಟುಗಳ ಮೂಲಕ ನೀರು ಹೊರಬಿಡಲಾಗುತ್ತಿದೆ. ಬೆಳಗಾವಿ ನಗರಕ್ಕೆ ಕುಡಿಯುವ ನೀರು ಪೂರೈಸುವ ಮೂಲಗಳಲ್ಲಿ ಒಂದಾಗಿರುವ ತಾಲ್ಲೂಕಿನ ರಕ್ಕಸಕೊಪ್ಪ ಜಲಾಶಯವೂ ಭರ್ತಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT