ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಕ್ಕಷ್ಟೇ ಅಲ್ಲ ಕಾಡಿಗೂ ಟ್ಯಾಂಕರ್‌ ನೀರು

ಬಾಯಾರಿದ ವನ್ಯಜೀವಿಗಳ ದಾಹ ತಣಿಸಲು ವನ್ಯಜೀವಿ ಕಾರ್ಯಕರ್ತರ ಪಣ
Last Updated 17 ಏಪ್ರಿಲ್ 2019, 19:36 IST
ಅಕ್ಷರ ಗಾತ್ರ

ಬೆಂಗಳೂರು: ಈ ಬಾರಿಯ ಬಿರು ಬೇಸಿಗೆಯಲ್ಲಿ ಕುಡಿಯುವ ನೀರಿನ ಕೊರತೆ ಕಾಡುತ್ತಿರುವುದು ಜನರಿಗೆ ಮಾತ್ರ ಅಲ್ಲ. ನಗರದ ಸೆರಗಿನಲ್ಲಿರುವ ತುರಹಳ್ಳಿ ಹಾಗೂ ಮೈಲಸಂದ್ರ ಅರಣ್ಯದ ವನ್ಯಜೀವಿಗಳೂ ಬಾಯಾರಿ ಬಸವಳಿದಿವೆ.

ಕಾಡುಪ್ರಾಣಿಗಳಿಗೂ ಟ್ಯಾಂಕರ್‌ ನೀರು ಪೂರೈಸಿ ದಾಹ ನೀಗಿಸಬೇಕಾದ ವಿಷಮ ಸ್ಥಿತಿ ನಿರ್ಮಾಣವಾಗಿದೆ.

ಇಷ್ಟೊಂದು ನೀರಿನ ಕೊರತೆ ಯಾವತ್ತೂ ಎದುರಾಗಿರಲಿಲ್ಲ. ಈ ಬಾರಿ ಫೆಬ್ರುವರಿಯಲ್ಲೇ ನೀರು ಪೂರೈಕೆಗೆ ವ್ಯವಸ್ಥೆ ಮಾಡಬೇಕಾದ ಸ್ಥಿತಿ ಬಂತು. ತುರಹಳ್ಳಿ ಹಾಗೂ ಮೈಲಸಂದ್ರದಲ್ಲಿ ಕಾಡಿನಲ್ಲಿರುವ ಹೊಂಡಗಳನ್ನು ತುಂಬಿಸುವುದರ ಜೊತೆಗೆ ಐದಾರು ಕಡೆ ವನ್ಯಜೀವಿಗಳಿಗಾಗಿಯೇ ಕೃತಕ ಕೊಳಗಳನ್ನು ನಿರ್ಮಿಸಲಾಗಿದೆ.

ಇನ್ನು ಕೆಲವೆಡೆ ಸಿಮೆಂಟ್‌ ರಿಂಗ್ ಬಳಸಿ ಪುಟ್ಟ ಟ್ಯಾಂಕ್‌ಗಳನ್ನು ನಿರ್ಮಿಸಲಾಗಿದೆ. ಅವುಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಕೆಲವೆಡೆ ಹೊಂಡದ ತಳಕ್ಕೆ ಟಾರ್ಪಾಲ್‌ ಹೊದಿಸಿ ನೀರು ಪೋಲಾಗದಂತೆ ತಡೆಯುತ್ತಿದ್ದೇವೆ’ ಎಂದು ಕಗ್ಗಲೀಪುರದ ವಲಯ ಅರಣ್ಯಾಧಿಕಾರಿ ಪ್ರಶಾಂತ್‌ ದೇಶಪಾಂಡೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೊಂಡಗಳಲ್ಲಿ ಒಮ್ಮೆ ನೀರು ತುಂಬಿಸಿದರೆ ಕೆಲವು ದಿನಗಳಿಗಷ್ಟೇ ಸಾಕಾಗುತ್ತದೆ. ಅವುಗಳನ್ನು ಮತ್ತೆ ಮತ್ತೆ ತುಂಬಿಸಬೇಕಾಗುತ್ತದೆ. ಎಚ್‌.ಎನ್‌.ಸೋಮು, ಶ್ರೀಕಾಂತ್‌ ಮತ್ತಿತರ ವನ್ಯಜೀವಿ ಕಾರ್ಯಕರ್ತರೇ ಮುಂದೆ ಬಂದು ಈ ಹೊಂಡಗಳಿಗೆ ನೀರು ಪೂರೈಸುವ ಹೊಣೆ ವಹಿಸಿಕೊಂಡಿದ್ದಾರೆ. ಪೀಪಲ್‌ ಫಾರ್‌ ಅನಿಮಲ್‌ನಂತಹ ಸರ್ಕಾರೇತರ ಸಂಘಟನೆಗಳೂ ಕೈಜೋಡಿಸಿವೆ. ನಗರಕ್ಕೆ ಕುಡಿಯುವ ನೀರು ಪೂರೈಸುವವರಿಂದಲೇ ಟ್ಯಾಂಕರ್‌ ನೀರು ತರಿಸುತ್ತಿದ್ದಾರೆ. ಟ್ಯಾಂಕರ್‌ ನೀರಿಗೆ ₹ 700ರವರೆಗೆ ವೆಚ್ಚವಾಗುತ್ತದೆ. ಅದನ್ನು ವನ್ಯಜೀವಿ ಕಾರ್ಯಕರ್ತರು ಹಾಗೂ ಸಮಾನಮಸ್ಕರು ಸೇರಿ ಭರಿಸುತ್ತಿದ್ದಾರೆ’ ಎಂದು ವಿವರಿಸಿದರು ಉಪವಲಯ ಅರಣ್ಯಾಧಿಕಾರಿ ನವೀನ್‌ ಕುಮಾರ್‌.

‘ವನ್ಯಜೀವಿಗಳ ರಕ್ಷಣೆಗೆ ನೆರವಾಗುವಂತೆ ಅರಣ್ಯ ಇಲಾಖೆಯವರು ಒಂದೂವರೆ ತಿಂಗಳ ಹಿಂದೆ ಟ್ವಿಟರ್‌ನಲ್ಲಿ ಕೋರಿದ್ದರು. ಇದನ್ನು ಗಮನಿಸಿ ನಾವು ರಾಜರಾಜೇಶ್ವರಿ ನಗರ ರೆಸಿಡೆನ್ಸಿಯಲ್‌ ಫೋರಂ ವತಿಯಿಂದ ಅರಣ್ಯ ಇಲಾಖೆಯನ್ನು ಸಂಪರ್ಕಿಸಿದೆವು. ಕಾಡುಪ್ರಾಣಿಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸಲು ನೆರವಾಗುವಂತೆ ಸ್ಥಳೀಯ ವಲಯ ಅರಣ್ಯಾಧಿಕಾರಿ ಮನವಿ ಮಾಡಿದರು. ಬಳಿಕ ನಾವು ನಿತ್ಯ ಮೂರು ನಾಲ್ಕು ಟ್ಯಾಂಕರ್‌ಗಳಷ್ಟು ನೀರನ್ನು ಪೂರೈಸುತ್ತಿದ್ದೇವೆ’ ಎಂದು ವಿ.ಎಸ್‌.ಶ್ರೀಕಾಂತ್‌ ತಿಳಿಸಿದರು.

‘ನಾವು ಕ್ರೌಡ್‌ ಫಂಡಿಂಗ್‌ ಮೂಲಕ ದೇಣಿಗೆ ಸಂಗ್ರಹಿಸುತ್ತೇವೆ. ₹ 10 ಕೊಟ್ಟರೂ ಸ್ವೀಕರಿಸುತ್ತಿದ್ದೇವೆ. ಇದುವರೆಗೆ 27 ಟ್ಯಾಂಕರ್‌ ನೀರು ಪೂರೈಸಿದ್ದೇವೆ’ ಎಂದರು.

‘12 ವರ್ಷಗಳಿಂದ ಟ್ಯಾಂಕರ್‌ ನೀರು’
ಹಾವಿನ ಸಂರಕ್ಷಣೆಯನ್ನು ಹವ್ಯಾಸವಾಗಿ ಹೊಂದಿರುವ ಎಚ್‌.ಎನ್‌.ಸೋಮು ಅವರು 12 ವರ್ಷಗಳಿಂದ ಕಾಡುಪ್ರಾಣಿಗಳಿಗೆ ನೀರುಣಿಸುವ ಕಾಯಕದಲ್ಲಿ ತೊಡಗಿದ್ದಾರೆ. ಅವರ ಗೆಳೆಯರು ಬಂಧುಗಳು ಈ ಸೇವೆಯಲ್ಲಿ ಕೈಜೋಡಿಸಿದ್ದಾರೆ.

‘ನಗರದಲ್ಲಿ ಸಂರಕ್ಷಿಸುವ ಹಾವುಗಳನ್ನುನಾನು ತುರಹಳ್ಳಿ ಕಾಡಿಗೆ ಬಿಡುತ್ತೇನೆ. 2007ರಲ್ಲಿ ಒಮ್ಮೆ ಹಾವನ್ನು ಬಿಡಲು ಹೋದಾಗ ನವಿಲೊಂದು ನೀರಿನ ದಾಹ ತಡೆಯಲಾಗದೆ ಸತ್ತು ಬಿದ್ದುದು ಕಂಡು ಬಂತು. ಈ ಕಾಡಿನಲ್ಲಿರುವ ಜಿಂಕೆಗಳುಬೇಸಿಗೆಯಲ್ಲಿ ನೀರಿಲ್ಲದೆ ಸೊರಗುತ್ತಿದ್ದವು. ಇದಕ್ಕೇನಾದರೂ ಪರಿಹಾರ ಕಂಡುಕೊಳ್ಳಬೇಕೆಂಬ ಉದ್ದೇಶದಿಂದ ನೀರು ಪೂರೈಸುವ ಪ್ರಸ್ತಾಪವನ್ನು ಅರಣ್ಯ ಅಧಿಕಾರಿಗಳ ಮುಂದಿಟ್ಟಿದ್ದೆ. ಅವರ ಸಹಕಾರದಿಂದ ಪ್ರತಿ ವರ್ಷವೂ ಟ್ಯಾಂಕರ್‌ ನೀರು ಪೂರೈಸುತ್ತಿದ್ದೇನೆ’ ಎಂದು ಹೇಳಿದರು.

‘ಮೂರು ವರ್ಷಗಳಿಂದೀಚೆ ಗೆಳೆಯರಾದ ಕಪಿಲ್‌ ಮಾವಿನಕುರ್ವೆ ಹಾಗು ರಶ್ಮಿ ಮಾವಿನಕುರ್ವೆ ಜತೆ ಸೇರಿ ಶೇರ್‌ ಹ್ಯಾಬಿಟ್ಯಾಟ್‌ ಎಂಬ ತಂಡ ರಚಿಸಿಕೊಂಡು ನೀರು ಪೂರೈಸುತ್ತಿದ್ದೇವೆ’ ಎಂದು ತಿಳಿಸಿದರು.

**
ನಗರದ ಅಂಚಿನಲ್ಲೇ ಇರುವ ಕಾಡುಪ್ರಾಣಿಗಳು ನೀರು ಅರಸಿ ನಗರಕ್ಕೆ ಬಂದು ಬೀದಿನಾಯಿಗಳಿಗೆ ಆಹಾರವಾಗುತ್ತಿವೆ. ಇದನ್ನು ತಪ್ಪಿಸುವುದು ನಮ್ಮ ಉದ್ದೇಶ.
-ವಿ.ಎಸ್‌.ಶ್ರೀಕಾಂತ್‌

**
ತುರಹಳ್ಳಿ ಕಾಡಿನಲ್ಲಿ ಜಿಂಕೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಅವುಗಳಿಗೆ ನೀರಿನ ಮೂಲವೇ ಇಲ್ಲದಂತಾಗುತ್ತವೆ. ಅವುಗಳ ದಾಹ ತೀರಿಸುವಲ್ಲಿ ನಮ್ಮದು ಕಿಂಚಿತ್‌ ಸೇವೆ ಅಷ್ಟೇ.
-ಎನ್‌.ಎನ್‌.ಸೋಮು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT