ಶನಿವಾರ, ಜುಲೈ 31, 2021
27 °C
ರಾಮನಾಯಕ ತಾಂಡಾ: ಕೈಪಂಪಿನ ಕೊಳವೆ ಬಾವಿಯಲ್ಲೂ ನೀರಿನ ಕೊರತೆ

ಕುಡಿವ ನೀರಿಗಾಗಿ ಪರದಾಟ

ಸಿದ್ದರಾಜ ಎಸ್ ಮಲಕಂಡಿ Updated:

ಅಕ್ಷರ ಗಾತ್ರ : | |

Prajavani

ವಾಡಿ: ಸಮೀಪದ ಕರದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮನಾಯಕ ತಾಂಡಾದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ.

ಸುಮಾರು 800 ಜನಸಂಖ್ಯೆ ಇರುವ ಈ ತಾಂಡಾದಲ್ಲಿ ನೀರು ಪೂರೈಸುವ ಕೊಳವೆಬಾವಿ ಬತ್ತಿ ಹೋಗಿ ತಿಂಗಳ ಮೇಲಾಗಿದೆ. ಕಿರು ನೀರು ಸರಬರಾಜು ಯೋಜನೆಯ ಗುಮ್ಮಿಯಲ್ಲಿ ನೀರು ಬರುತ್ತಿಲ್ಲ. ಬೇರೆ ನೀರಿನ ಮೂಲ ಇಲ್ಲದ ಸ್ಥಳೀಯರಿಗೆ ಕೈಪಂಪಿನ ಕೊಳವೆಬಾವಿ ಮಾತ್ರ ಆಸರೆಯಾಗಿತ್ತು. ಈಗೀಗ ಅದು ಕೂಡ ಸಮರ್ಪಕ ನೀರು ಒದಗಿಸುತ್ತಿಲ್ಲ.

ಮುಂಬೈನಿಂದ ಜನರು ತಾಂಡಾಕ್ಕೆ ಮರಳಿದ್ದು, ನೀರಿನ ಸಮಸ್ಯೆ ಭೀಕರ ಸ್ವರೂಪ ತಾಳಿದೆ. ಕೈಪಂಪಿನ ಕೊಳವೆ ಬಾವಿಯ ಮುಂದೆ ಸರತಿ ಸಾಲಿನಲ್ಲಿ ನಿಂತು ನೀರು ತುಂಬಿಸಿ ಕೊಳ್ಳುವುದು ನಿತ್ಯದ ಗೋಳಾಗಿದೆ.

‘ನೀರಿನ ಸಮಸ್ಯೆ ಕಂಡು ಬಂದರೂ ಸ್ಥಳೀಯ ಆಡಳಿತ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದಾರೆಯೇ ವಿನಃ ಸಮಸ್ಯೆ ಬಗೆಹರಿಸುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಸ್ಥಳೀಯರು.

ಸದ್ಯ ಇಡೀ ತಾಂಡಾಕ್ಕೆ ಇದೊಂದೇ ಕೊಳವೆಬಾವಿ ಆಸರೆಯಾಗಿದೆ. ಜನರು ರೈತರ ಜಮೀನಿಗೆ ಎತ್ತಿನ ಬಂಡಿ, ಸೈಕಲ್‌ಗಳ ಮೂಲಕ ತೆರಳಿ ನೀರು ತರುವುದು ಸಾಮಾನ್ಯವಾಗಿದೆ. ದಿನಬೆಳಗಾದರೆ ನೀರಿನ ಸೆಲೆ ಹುಡುಕುತ್ತಾ ತೆರಳುವ ಇಲ್ಲಿನ ನಿವಾಸಿಗಳು ಸಮಸ್ಯೆ ಬಗೆಹರಿಸದ ಪಂಚಾಯತಿ ಆಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

ನೀರು ಸರಬರಾಜು ಮಾಡುವ ಕೊಳವೆ ಬಾವಿ ಬತ್ತಿದ್ದರೂ ಬದಲಿ ವ್ಯವಸ್ಥೆ ಮಾಡಲು ಅಧಿಕಾರಿಗಳು ವ್ಯರ್ಥ ಕಾಲಹರಣ ಮಾಡುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿ ಖೀರು ಸಿಂಗ್ ರಾಠೊಡ್ ದೂರಿದ್ದಾರೆ.

ಕ್ವಾರಂಟೈನ್ ಮುಗಿಸಿ ತಾಂಡಾಕ್ಕೆ ವಾಪಸ್‌ ಬಂದಿದ್ದ ಹಲವು ಕಾರ್ಮಿಕರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಹಲವು ದಿನಗಳ ಕಾಲ ತಾಂಡಾದಲ್ಲಿ ವಾಸವಾಗಿದ್ದ ಸೋಂಕಿತರಿಂದ ಈಗ ಎಲ್ಲೆಡೆ ರೋಗಭೀತಿ ಆವರಿಸಿದೆ. ಇದಕ್ಕಾಗಿ ಜನರು ಒಂದೆಡೆ ಸೇರದಿರಲು ಜಿಲ್ಲಾ ಆಡಳಿತ ಸೂಚಿಸಿದೆ. ಆದರೆ ಜನರು ನೀರಿಗಾಗಿ ಅಂತರ ಮರೆತು ಓಡಾಡುತ್ತಿದ್ದಾರೆ.

ನೀರಿನ ಮೂಲಗಳು ಬತ್ತಿ ಹೋಗಿವೆ ಎಂಬ ಕಾರಣ ನೀಡುವ ಬದಲು ಲಭ್ಯವಿರುವ ಅನುದಾನ ಬಳಸಿಕೊಂಡು ಬೇರೆ ಕಡೆ ಕೊಳವೆಬಾವಿ ಕೊರೆಸಿ ನೀರು ಪೂರೈಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.