ನಕಲಿ ಆಡಿಯೊ ಕೇಳಿಸಿ ಕಥೆ ಹೇಳ್ತಿದ್ದೀರಿ: ಸಿಎಂಗೆ ಯಡಿಯೂರಪ್ಪ ತಿರುಗೇಟು

7

ನಕಲಿ ಆಡಿಯೊ ಕೇಳಿಸಿ ಕಥೆ ಹೇಳ್ತಿದ್ದೀರಿ: ಸಿಎಂಗೆ ಯಡಿಯೂರಪ್ಪ ತಿರುಗೇಟು

Published:
Updated:

ಬೆಂಗಳೂರು: ‘ಸಿನಿಮಾ ನಿರ್ಮಾಪಕರಾಗಿರುವ ಕುಮಾರಸ್ವಾಮಿ ನಕಲಿ ಆಡಿಯೊ ಸೃಷ್ಟಿಸಿದ್ದಾರೆ. ಸಿಎಂ ಬಿಡುಗಡೆ ಮಾಡಿರುವುದು ನಕಲಿ ಆಡಿಯೊ. ಅವರ ಆರೋಪ ಆಧಾರವಿಲ್ಲದ್ದು’ ಎಂದು ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದರು.

‘ನಾನು ಸ್ಪೀಕರ್‌ ಬಗ್ಗೆ ಮಾತನಾಡಿರುವುದು ನಿಜವಾದರೆ, ಕುಮಾರಸ್ವಾಮಿ ಆರೋಪ ಸಾಬೀತಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ರಾಜಕೀಯ ನಿವೃತ್ತಿ ಘೋಷಿಸುತ್ತೇನೆ’ ಎಂದು ಆತ್ಮವಿಶ್ವಾಸ ಪ್ರದರ್ಶಿಸಿದರು.

‘ಈ ಕುಮಾರಸ್ವಾಮಿ ಸಿನಿಮಾದ ವ್ಯಕ್ತಿ‌. ಏನು ಬೇಕಾದರೂ ಸೃಷ್ಟಿ ಮಾಡಬಲ್ಲರು. ಇದು ನಕಲಿ ಆಡಿಯೊ. ಸರ್ಕಾರ ರಚಿಸುವ ಆಸೆಯಿಂದ ನಾನು ಯಾರನ್ನೂ ಬೇಟಿ ಮಾಡಿಲ್ಲ. 2011ರ ಘಟನೆಯನ್ನು ಕುಮಾರಸ್ವಾಮಿ ಮರೆತರಾ. ಅವರೇನು ಸತ್ಯ ಹರಿಶ್ಚಂದ್ರರಾ? ಎಂದು ಬಿಎಸ್‌ವೈ ಪ್ರಶ್ನಿಸಿದರು.

‘ಶರಣಗೌಡ ನಮ್ಮೊಡನೆ ಮಾತನಾಡಿದ್ದಾರೆ ಎಂಬ ಕಥೆ ಕಟ್ಟಿ ಗೊಂದಲ ಸೃಷ್ಟಿಸುವುದು ಕುಮಾರಸ್ವಾಮಿ ಉದ್ದೇಶ. ಸಮ್ಮಿಶ್ರ ಸರ್ಕಾರದ ಶಾಸಕರಿಗೇ ಸರ್ಕಾರದ ಬಗ್ಗೆ ನಂಬಿಕೆ ಇಲ್ಲ. ಎಲ್ಲ ಇಲಾಖೆಗಳಲ್ಲೂ ಶಾಸಕರ ಬದಲು ಗುತ್ತಿಗೆದಾರರೇ ಆಡಳಿತ ನಡೆಸುತ್ತಿದ್ದಾರೆ. ಇವತ್ತು ಕಡಿಮೆ ಎಂದರೂ 11 ಶಾಸಕರು ವಿಧಾನಸಭೆಗೆ ಆಗಮಿಸುವುದಿಲ್ಲ. ಮುಂದೇನಾಗುತ್ತದೆ ಎಂಬುದನ್ನು ಇನ್ನು ಕೆಲವು ದಿನಗಳವರೆಗೆ ಕಾದು ನೋಡಿ’ ಎಂದು ಅವರು ಸವಾಲು ಹಾಕಿದರು.

‘ಸಾಲಮನ್ನಾ ಆಸೆ ತೋರಿಸಿ ರೈತರ ಕಣ್ಣಿಗೆ ಮಣ್ಣೆರಚಿದ್ದೀರಿ, ಒಂದೇ ಕಂತಿನಲ್ಲಿ 48 ಸಾವಿರ ಕೋಟಿ ನೀಡುತ್ತೇನೆ ಎಂದಿದ್ದರಿ ಅದಕ್ಕೆ ಉತ್ತರ ನೀಡಿ. ರಾಜ್ಯದ 150ಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ಬರ ಇದೆ. ಸರ್ಕಾರಕ್ಕೆ ಮಾನ ಮರ್ಯಾದೆ ಇದ್ರೆ ರಾಜೀನಾಮೆ ಕೊಟ್ಟು ಮೊನೆಗೆ ಹೋಗಲಿ. ತರಾತುರಿಯಲ್ಲಿ ಬಜೆಟ್‌ ಅಧಿವೇಶನ ಮುಗಿಸದೆ ಇನ್ನೂ ಮೂರು ದಿನ ಅವಕಾಶ ನೀಡಲಿ. ಇಂದು ಮಂಡನೆಯಾಗಲಿರುವ ಬಜೆಟ್‌ ರಾಜ್ಯದ ಆರೂವರೆ ಕೋಟಿ ಜನರಿಗೆ ಸಂಬಂಧಿಸಿದ್ದು. ಕಳೆದ ಒಂಭತ್ತು ತಿಂಗಳಲ್ಲಿ ನಿಮ್ಮ ಸರ್ಕಾರದ ಸಾಧನೆ ಏನು?’ ಎಂದು ಪ್ರಶ್ನಿಸಿದರು.

ಮಾಧ್ಯಮ ಪ್ರತಿನಿಧಿಗಳೊಡನೆ ಮಾತನಾಡಿದ ಬಿಜೆಪಿ ಶಾಸಕ ಸುಭಾಷ್ ಗುತ್ತೇದಾರ್ ‘ಪಕ್ಷಕ್ಕೆ ಬರುವುದಾದರೆ ಮಂತ್ರಿ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದ್ದರು’ ಎಂದು ಶಾಸಕ ಸುಭಾಷ್ ಗುತ್ತೇದಾರ್‌ ಹೇಳಿದರು.

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 0

  Frustrated
 • 5

  Angry

Comments:

0 comments

Write the first review for this !