ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷಿಗಳ ವಲಸೆ, ಬಣ್ಣ ಬದಲಿಸದ ಗೋಸುಂಬೆಗಳು!

ಗಾಳಿಯಂತ್ರಗಳಿಂದ ಜೀವ ಜಾಲದ ಮೇಲೆ ಗಂಭೀರ ಪರಿಣಾಮ
Last Updated 15 ಡಿಸೆಂಬರ್ 2018, 20:01 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್‌ ಉತ್ಪಾದನೆಗಾಗಿ ಅಳವಡಿಸಿರುವ ಗಾಳಿ ಯಂತ್ರಗಳಿಂದ ಜೀವ ಜಾಲದ ಮೇಲೆ ಗಂಭೀರ ಪರಿಣಾಮ ಬೀರಿದೆ. ಪರಭಕ್ಷಕ ಪಕ್ಷಿಗಳು ಸಾವಿನ ಪ್ರಮಾಣ ಹೆಚ್ಚಿದೆ, ಅಳಿದುಳಿದವು ವಲಸೆ ಹೋಗುತ್ತಿವೆ. ಇನ್ನೊಂದೆಡೆ ಬಣ್ಣ ಬದಲಿಸುವ ಗೋಸುಂಬೆಗಳು ಬಣ್ಣ ಬದಲಿಸುವುದನ್ನೇ ಬಿಟ್ಟಿವೆ!

ಗಾಳಿಯಂತ್ರಗಳಿಂದ ವಿವಿಧ ಬಗೆಯ ಪ್ರಾಣಿಗಳು, ಪಕ್ಷಿಗಳು ಮತ್ತು ಹಲ್ಲಿ ಜಾತಿ ಸರಿಸೃಪಗಳು ತೊಂದರೆಗೆ ಈಡಾಗಿರುವುದನ್ನು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.

ರಾಜ್ಯದ ಪಶ್ಚಿಮ ಘಟ್ಟಕ್ಕೆ ಹೊಂದಿಕೊಂಡಿರುವ ಬಯಲು ಪ್ರದೇಶದಲ್ಲಿ ಹಲವು ಬಗೆಯ ಪಕ್ಷಿಗಳು, ಬಾವಲಿಗಳಸಂಖ್ಯೆ ಕಡಿಮೆ ಆಗಿದೆ. ಹಲ್ಲಿ ಜಾತಿಯ ಸರೀಸೃಪಗಳ ಸಂಖ್ಯೆ ಹಲವು ಪಟ್ಟು ಹೆಚ್ಚುತ್ತಿದೆ ಮತ್ತು ಅವುಗಳ ವರ್ತನೆಯಲ್ಲೂ ಗಮನಾರ್ಹ ಬದಲಾವಣೆ ಆಗಿದೆ. ಇದರಿಂದ ಜೀವಜಾಲದ ಆಹಾರ ಸರಪಳಿಯ ಕೊಂಡಿಯನ್ನು ಕತ್ತರಿಸಿದಂತೆ ಆಗಿದೆ ಎನ್ನುತ್ತಾರೆ ವಿಜ್ಞಾನಿಗಳು.

ಜೀವಜಾಲ ಮೇಲೆ ಅನಿರೀಕ್ಷಿತವಾಗಿ ದುಷ್ಪರಿಣಾಮ ಆಗುತ್ತಿರುವುದನ್ನು ಈವರೆಗೂ ಯಾರು ಗಮನಿಸಿಲ್ಲ. ವಿಶೇಷವಾಗಿ ಸ್ಥಳೀಯ ಪ್ರಭೇದದ ಪಕ್ಷಿಗಳು, ಬಾವಲಿಗಳ ಸಂಖ್ಯೆ ದಿನೇ ದಿನೇ ಕಡಿಮೆ ಆಗುತ್ತಿದೆ. ಪಕ್ಷಿಗಳ ವಲಸೆ ಮಾರ್ಗವನ್ನೂ ಬದಲಾಯಿಸುವಂತೆ ಮಾಡಿದೆ. ಗೋಸುಂಬೆ, ಹಾವ್ರಾಣಿ ಮುಂತಾದ ಹಲ್ಲಿ ಜಾತಿಗೆ ಸೇರಿದವುಗಳನ್ನು ಭಕ್ಷಿಸಿ ಬದುಕುತ್ತಿದ್ದ ಹಕ್ಕಿಗಳು ಗಾಳಿಯಂತ್ರ ಇರುವ ಪ್ರದೇಶಗಳತ್ತಲೇ ಸುಳಿಯುತ್ತಿಲ್ಲ.

ಭಾರತದಲ್ಲಿ ಮಾತ್ರ ಕಂಡು ಬರುವ ಕತ್ತಿನ ಬಳಿ ರೆಕ್ಕೆಯಂತಿರುವ ಕಡು ನೀಲಿ, ಕಪ್ಪು ಮತ್ತು ಕೆಂಪು ಬಣ್ಣದ ಗೋಸುಂಬೆಗಳು ಗಾಳಿಯಂತ್ರಗಳಿರುವ ಪ್ರದೇಶದ ಸುತ್ತಮುತ್ತ ಭಾರೀ ಸಂಖ್ಯೆಯಲ್ಲಿ ಹೆಚ್ಚಿವೆ.ಅಚ್ಚರಿಯ ಸಂಗತಿ ಎಂದರೆ, ಉಳಿದ ಪ್ರದೇಶಗಳಿಗಿಂತ ಇಲ್ಲಿರುವ ಗೋಸುಂಬೆಗಳ ಗಾತ್ರ ಚಿಕ್ಕದಾಗಿವೆ ಮತ್ತು ಬಣ್ಣವೂ ಮಸುಕಾಗಿದೆ. ಗಾಳಿಯಂತ್ರಗಳಿಂದ ದೂರದಲ್ಲಿರುವ ಗೋಸುಂಬೆಗಳ ಬಣ್ಣ ಮತ್ತು ಗಾತ್ರದಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ ಎಂದು ಸಂಶೋಧಕಿ ಹಾಗೂ ಸಹಾಯಕ ಪ್ರಾಧ್ಯಾಪಕಿ ಮರಿಯಾ ಥಾಕರ್‌ ಹೇಳಿದ್ದಾರೆ.

ಇವೆಲ್ಲದರ ಪರಿಣಾಮ ಸರೀಸೃಪಗಳ ಸಂಖ್ಯೆಯ ಬೆಳವಣಿಗೆ ಮೇಲೆ ಹತೋಟಿಯೇ ಇಲ್ಲದಂತಾಗಿದೆ. ಇಲ್ಲಿಂದ ವಲಸೆ ಹೋದ ಭಕ್ಷಕ ಪಕ್ಷಿಗಳ ಸಂಖ್ಯೆಯು ಗಾಳಿಯಂತ್ರ ಇಲ್ಲದ ಪಶ್ಚಿಮಘಟ್ಟ ಪ್ರದೇಶದಲ್ಲಿ ನಾಲ್ಕು ಪಟ್ಟು ಹೆಚ್ಚಾಗಿದೆ. ಪ್ರಾಕೃತಿಕ ಅಸಮತೋಲನ ಉಂಟಾಗುತ್ತಿದ್ದು, ಇದರಿಂದ ಆಹಾರ ಸರಪಳಿಯ ಮೇಲೆ ಹೊಡೆತ ಬಿದ್ದಿದೆ ಎನ್ನುತ್ತಾರೆ ಅವರು.

ಹಲ್ಲಿಗಳ ಪ್ರಮಾಣ 3 ಪಟ್ಟು ಅಧಿಕ

ಭಕ್ಷಕ ಪಕ್ಷಿಗಳು ವಲಸೆ ಹೋದ ಪರಿಣಾಮ ಗಾಳಿಯಂತ್ರ ಸುತ್ತಮುತ್ತಲಿನ ಪ್ರದೇಶದಲ್ಲಿ ಗೋಸುಂಬೆ, ಹಾವ್ರಾಣಿ ಮುಂತಾದ ಹಲ್ಲಿ ಜಾತಿಯ ಸರೀಸೃಪಗಳ ಪ್ರಮಾಣ ಮೂರು ಪಟ್ಟು ಅಧಿಕವಾಗಿದೆ.

ಪಶ್ಚಿಮಘಟ್ಟ ಪರ್ವತ ಶ್ರೇಣಿಯಿಂದ 27 ಕಿ.ಮೀ ದೂರದಲ್ಲಿರುವ ಬಯಲು ಪ್ರದೇಶದಲ್ಲಿ ಅಧ್ಯಯನ ನಡೆಸಲಾಗಿದೆ. ಸಾವಿರಾರು ವರ್ಷಗಳಿಂದಲೂ ಈ ಪ್ರದೇಶಗಳಲ್ಲಿ ವಿವಿಧ ರೀತಿಯ ಭಕ್ಷಕ ಪಕ್ಷಿಗಳ ಸಂಖ್ಯೆ ಹೆಚ್ಚು. ಇಲ್ಲಿ ಪ್ರತಿಯೊಂದು ಚದರ ಕಿ.ಮೀ ವ್ಯಾಪ್ತಿಯಲ್ಲೂ 15 ಗಾಳಿಯಂತ್ರಗಳಿವೆ.

ಗೋಸುಂಬೆ ಮುಂತಾದ ಹಲ್ಲಿಗಳ ಸಂಖ್ಯೆ ಹೆಚ್ಚಾಗಿದ್ದರೂ, ಇವುಗಳ ನೆಮ್ಮದಿಗೂ ಭಂಗವಾಗಿದೆ. ಇವುಗಳ ಗಾತ್ರ, ದೇಹ ರಚನೆ ಮತ್ತು ವರ್ತನೆಗಳಲ್ಲಿ ಬಹಳ ಬದಲಾವಣೆ ಆಗಿದೆ. ಆಹಾರಕ್ಕಾಗಿ ಇವುಗಳ ಮಧ್ಯೆ ಪೈಪೋಟಿ ಹೆಚ್ಚಾಗಿದೆ. ಬಣ್ಣ ಬದಲಿಸುವ ಗುಣವನ್ನು ಕಳೆದುಕೊಳ್ಳುತ್ತಿರುವುದರ ಜತೆಗೆ ದಿನೇ ದಿನೇ ಕಳಾಹೀನವಾಗುತ್ತಿವೆ ಎಂದು ಮರಿಯಾ ಥಾಕರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT