ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರುಷನಷ್ಟೇ ಮಹಿಳೆ ಸಮಾನಳು...

Last Updated 8 ಮಾರ್ಚ್ 2019, 3:50 IST
ಅಕ್ಷರ ಗಾತ್ರ

* ರಾಜ್ಯದಲ್ಲಿ ಎಷ್ಟು ಮೀಟೂ ಪ್ರಕರಣಗಳು ದಾಖಲಾಗಿವೆ?

ಅಭಿಯಾನ ಈಚೆಗೆ ಆರಂಭವಾಗಿದೆ. ಅನ್ಯಾಯ ತುಂಬ ವರ್ಷಗಳಿಂದಲೂ ನಡೆಯುತ್ತಲೇ ಇದೆ. ಮೀಟೂ ಅಂದರೆ ಸೆಲೆಬ್ರಿಟಿಗೆ ಮಾತ್ರ ಸಂಬಂಧಿಸಿದ್ದಲ್ಲ. ಶ್ರೀಸಾಮಾನ್ಯರಲ್ಲೂ ಅಂತಹ ಘಟನೆಗಳು ಸಾಕಷ್ಟಿವೆ. ನಮ್ಮಲ್ಲಿ ದಾಖಲಾಗುವ ಪ್ರಕರಣಗಳಲ್ಲಿ ಶೇ.60ರಷ್ಟು ಅವೇ. ನನ್ನ ದೃಷ್ಟಿಯಲ್ಲಿ ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯವೇ ಮೀಟೂ. ಅದನ್ನು ಪ್ರತ್ಯೇಕಿಸಿ ನೋಡಲಾಗದು.

* ದೌರ್ಜನ್ಯಕ್ಕೆ ತುತ್ತಾದ ಮಹಿಳೆ ಆಯೋಗಕ್ಕೆ ಬಂದಾಗ ತಾತ್ಕಾಲಿಕ ಆರ್ಥಿಕ ಭದ್ರತೆ ನೀಡಲು ಸಾಧ್ಯವೇ?

ಯಾವುದೇ ಪ್ರಕರಣ ದಾಖಲಾದರೂ ಪರಿಶೀಲಿಸಿ ಪರಿಹಾರ ನೀಡುತ್ತೇವೆ. ತಪ್ಪಿತಸ್ಥ ಪುರುಷನಿಗೆ ಶಿಕ್ಷೆಯನ್ನೂ ನೀಡಬಹುದು. ಆದರೆ ಆರೋಪಿಯನ್ನು ಬಂಧಿಸುವ ಅಧಿಕಾರ ಇಲ್ಲ. ಪೊಲೀಸರ ನೆರವಿನಿಂದಲೇ ಬಂಧಿಸಬೇಕು. ನಮಗೆ ಆರ್ಥಿಕ ಭದ್ರತೆ ಕೊಡಲು ಸಾಧ್ಯವಿಲ್ಲ. ಅದನ್ನು ಮಹಿಳಾ ಅಭಿವೃದ್ಧಿ ನಿಗಮ, ಮಹಿಳಾ, ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆಗಳು ಮಾಡುತ್ತವೆ.

* ನಗರ ಕೇಂದ್ರಿತ ಮತ್ತು ಶಿಕ್ಷಿತ ಮಹಿಳೆಯರಿಗೆ ಮಾತ್ರ ಆಯೋಗ ಸೀಮಿತ ಎನ್ನುವ ಆರೋಪ ಇದೆ...

ಗ್ರಾಮೀಣಮಟ್ಟದಿಂದ ದೂರು ಬರುವುದು ಕಡಿಮೆ. ‘ಇಗೋ’ ಸಂಘರ್ಷಗಳು ನಗರದಲ್ಲಿ ಹೆಚ್ಚು. ಅವರಿಗೆ ಸಂಸಾರ ಸರಿಪಡಿಸಿಕೊಳ್ಳುವ ಉದ್ದೇಶ ಇರುವುದಿಲ್ಲ. ಡಿವೋರ್ಸ್‌ಗೆ ಸಿದ್ಧರಾಗಿಯೇ ಬಂದಿರುತ್ತಾರೆ. ನಾವು ಹಳ್ಳಿಯನ್ನೂ ತಲುಪುವುದಕ್ಕೆ ಸಿದ್ಧರಿದ್ದೇವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆಯ ಜಿಲ್ಲಾ ಕಚೇರಿಗೆ ಸಂತ್ರಸ್ಥರು ದೂರು ನೀಡಬಹುದು. ‘ಮಹಿಳಾ ಆಯೋಗದ ಚಿತ್ತ. ಜಿಲ್ಲಾ ಆಡಳಿತದತ್ತ’ ಎನ್ನುವ ಕಾರ್ಯಕ್ರಮ ರೂಪಿಸಿದ್ದೇವೆ. ಅದರ ಅಡಿಯಲ್ಲಿ ಅಂಗನವಾಡಿ ಕಾರ್ಯಕರ್ತರು, ಸ್ವಸಹಾಯ ಸಂಘಗಳ ಕಾರ್ಯಕರ್ತರಿಗೆ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಆಯೋಗವೇ ಹಳ್ಳಿಗೆ ಹೋಗಿರುತ್ತದೆ. ಆಗ ದೂರುಗಳೇನಾದರೂ ಬಂದರೆ ಸಮಸ್ಯೆಗಳನ್ನು ಅಲ್ಲೇ ಪರಿಹರಿಸುತ್ತೇವೆ.

* ಪೊಲೀಸರಿಂದಲೇ ಮಹಿಳೆಯರ ಮೇಲೆ ದೌರ್ಜನ್ಯ ನಡೆದ ಉದಾಹರಣೆಗಳೂ ಇವೆಯಲ್ಲ...

ಹೌದು. ಒಳ್ಳೆಯ ಅಧಿಕಾರಿಗಳ ನಡುವೆಯೂ ಅಂತಹ ಪ್ರಕರಣಗಳೂ ನಡೆದಿವೆ. ಒಂದೆರಡು ಪ್ರಕರಣ ಹೇಳುವುದಾದರೆ, ತುಮಕೂರಿನಲ್ಲಿ ಯುವತಿಯೊಬ್ಬಳು ಮನೆಯಿಂದ ತಪ್ಪಿಸಿಕೊಂಡಳು. ಸ್ಫುರದ್ರೂಪಿಯಾದ, ಮಾನಸಿಕ ಆರೋಗ್ಯ ಸಹಜವಾಗಿಲ್ಲದ ಆಕೆ ದಾರಿಯಲ್ಲಿ ಹೋಗುತ್ತಿದ್ದಾಗ, ಪೊಲೀಸ್‌ ಇನ್‌ಸ್ಪೆಕ್ಟರ್‌ ಒಬ್ಬರು ಜೀಪಿನಲ್ಲಿ ಕರೆದುಕೊಂಡುಹೋಗಿ ಅತ್ಯಾಚಾರ ಎಸಗಿದರು. ತಪ್ಪಿತಸ್ಥರಿಗೆ ಶಿಕ್ಷೆ ಆಯಿತು. ರಾಣೆಬೆನ್ನೂರು ತಾಲ್ಲೂಕಿನಲ್ಲಿ ದೂರು ನೀಡಲು ಬಂದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು. ಬೆಂಗಳೂರಿನ ಠಾಣೆಯೊಂದರಲ್ಲಿಯೂ ಇತ್ತೀಚೆಗೆ ದೂರು ನೀಡಲು ಬಂದ ಮಹಿಳೆಯ ಮೇಲೆ ಹಲ್ಲೆ ಮಾಡಲಾಗಿತ್ತು. ಈ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಪೊಲೀಸರಿಗೂ ಈ ಬಗ್ಗೆ ಅರಿವು ಇರಬೇಕಾಗುತ್ತದೆ. ಯಾವುದೇ ಒಂದು ಹೆಣ್ಣು ಠಾಣೆಗೆ ಬರಬೇಕು ಎಂದಾಗ ಹತ್ತಾರು ಬಾರಿ ಯೋಚನೆಯನ್ನು ಮಾಡಿರುತ್ತಾಳೆ. ಪೊಲೀಸರು ಸಮಸ್ಯೆಗೆ ಸ್ಪಂದಿಸಿ ಸಮಾಧಾನವನ್ನು ಹೇಳಿದರೆ ಸಾಕು ದೂರು ಹೊತ್ತು ತಂದವಳಿಗೆ ಅರ್ಧದಷ್ಟು ಸಮಸ್ಯೆ ಕಡಿಮೆ ಆದಂತೆ ಅನ್ನಿಸುತ್ತದೆ. ಇಲ್ಲದ ಪ್ರಶ್ನೆ ಕೇಳಿ ನೊಂದವಳನ್ನು ಮತ್ತಷ್ಟು ಗಾಸಿ ಮಾಡಬಾರದು.

* ಕಾರ್ಪೋರೆಟ್‌ ಸಂಸ್ಥೆಗಳಲ್ಲಿ ಆಂತರಿಕ ದೂರು ಸಮಿತಿ ನೆಪಕ್ಕೆ ಆದಂತಿದೆ...

ಮಹಿಳಾ ಆಯೋಗವೇ ಅದನ್ನು ಮಾಡುತ್ತಿರುವುದು. ಹತ್ತಕ್ಕಿಂತ ಹೆಚ್ಚು ಮಹಿಳೆಯರು ಕೆಲಸ ಮಾಡುವ ಸ್ಥಳದಲ್ಲಿ ಆಂತರಿಕ ದೂರು ಸಮಿತಿ ರೂಪಿಸಬೇಕು. ಆಡಳಿತ ಮಂಡಳಿಯ ಒಬ್ಬರ ಅಧ್ಯಕ್ಷತೆಯಲ್ಲಿ ನೌಕರರು, ಕಾನೂನು ತಜ್ಞರನ್ನು ಆ ಸಮಿತಿ ಒಳಗೊಂಡಿರುತ್ತದೆ. ಆಡಳಿತ ಮಂಡಳಿಯ ಪರವಾಗಿ ಪ್ರಧಾನ ಹುದ್ದೆಯಲ್ಲಿ ಇರುವವರೇ ಅಧ್ಯಕ್ಷರಾಗಿರುವುದರಿಂದ ಸಂತ್ರಸ್ತೆ ದೂರು ನೀಡಲು ಹಿಂದೇಟು ಹಾಕುತ್ತಾಳೆ. ಗಾರ್ಮೆಂಟ್ಸ್‌ ಕಾರ್ಖಾನೆಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚು. ದೂರು ನೀಡಿದರೆ ತನ್ನ ಕೆಲಸಕ್ಕೆ ಕುತ್ತು ಬಂದೀತು ಎನ್ನುವ ಆತಂಕ ಇರುತ್ತದೆ. ಇದೇ ಕಾರಣಕ್ಕೆ ಮುಖ್ಯಸ್ಥರನ್ನು ಬಿಟ್ಟು ಸಮಿತಿ ರಚನೆ ಆಗಬೇಕೆಂದು ಆಯೋಗ ಸುತ್ತೋಲೆಯನ್ನು ನೀಡಿದೆ.

* ದೌರ್ಜನ್ಯ ನಡೆದರೂ ದೂರು ದಾಖಲಾಗುವುದೇ ಇಲ್ಲ. ಆಗ ಆಯೋಗ ಯಾವ ಪಾತ್ರ ವಹಿಸುತ್ತದೆ?

ಬಹಳಷ್ಟು ಸಂದರ್ಭಗಳಲ್ಲಿ ದೂರು ನೀಡಿದರೆ ಕಿರುಕುಳ ಹೆಚ್ಚಾಗುತ್ತದೆ ಎಂದು ದೂರು ನೀಡುವುದಿಲ್ಲ. ಇದೇ ಭಯದಲ್ಲಿ ಫೋನ್‌ ಮಾಡಿ ದೂರು ದಾಖಲಿಸದೆ ಪರಿಹಾರವನ್ನು ಕೇಳಿದ ಸಂದರ್ಭವೂ ಇದೆ. ಆಗ ಮನೆಯವರನ್ನು ಕರೆಸಿ ಎಚ್ಚರಿಕೆ ಕೊಟ್ಟು ಕಳಿಸುತ್ತೇವೆ.

ಮೈಸೂರಿನಲ್ಲಿ ನಡೆದ ಒಂದು ಪ್ರಕರಣದ ಬಗ್ಗೆ ಹೇಳುತ್ತೇನೆ. 80 ವರ್ಷದ ಸ್ಥಿತಿವಂತ ಅಜ್ಜಿ ಇದ್ದಾರೆ. ಅಜ್ಜಿಯ ಹಿರಿಯ ಮಗ ತನ್ನ ತಾಯಿಯನ್ನು ಪುಸಲಾಯಿಸಿ ಮನೆಗೆ ಕರೆದುಕೊಂಡು ಹೋಗುತ್ತಾನೆ. ಆಕೆಯ ಆಸ್ತಿಯನ್ನೆಲ್ಲ ಬರೆಸಿಕೊಂಡು ಒಂದು ದಿನ ರಾತ್ರಿ ಅಜ್ಜಿಗೆ ಚೆನ್ನಾಗಿ ಹೊಡೆದು ಮನೆಯಿಂದ ಹೊರತಳ್ಳುತ್ತಾನೆ. ಅವನಿಗೆ ಮೂರು ಮದುವೆ ಆಗಿರುತ್ತವೆ. ಈ ಕೃತ್ಯವನ್ನು ತನ್ನ ಹಿರಿಯ ಹೆಂಡತಿಯ ಮಗನ ಜೊತೆ ಸೇರಿ ಮಾಡಿರುತ್ತಾನೆ. ಅವರ ನೆರೆಯ ಮನೆಯವರು ಫೋನ್‌ ಮಾಡಿ ಆ ಬಗ್ಗೆ ಹೇಳಿದ್ದರು. ಮರುದಿನವೇ ನಾನು ಸ್ಥಳಕ್ಕೆ ಹೋಗಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡೆ. ಅಜ್ಜಿಗೆ ನ್ಯಾಯ ದಕ್ಕಿತು. ಅವರ ಮಗ–ಮೊಮ್ಮಗ ಜೈಲು ಸೇರಿದ್ದರು.

* ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶದ ಕೂಗು ಎದ್ದಾಗ ನಿಮ್ಮಿಂದ ಭಿನ್ನ ಅಭಿಪ್ರಾಯ ವ್ಯಕ್ತವಾಯಿತು...

ಮಹಿಳಾ ಆಯೋಗ ಇರುವುದೇ ಮಹಿಳೆಯರ ದನಿಯಾಗಿ. ನಾನು ಬಾಲಿಶವಾಗಿ ಮಾತನಾಡಲು ಸಿದ್ಧಳಿಲ್ಲ. ಮಹಿಳೆಗೆ ಎಲ್ಲಾ ಕ್ಷೇತ್ರದಲ್ಲಿ ಸಮಾನ ಅವಕಾಶಬೇಕು. ಸಂವಿಧಾನವೂ ಪುರುಷನಿಗೆ ನೀಡಿದ ಎಲ್ಲ ಹಕ್ಕುಗಳನ್ನು ಮಹಿಳೆಗೂ ನೀಡಿದೆ. ಮಹಿಳೆ ದೇವಸ್ಥಾನ ಪ್ರವೇಶ ಮಾಡುವುದರಲ್ಲಿ ತಪ್ಪೇನಿದೆ? ಧಾರ್ಮಿಕ ಸಂಗತಿಯನ್ನು ಸೂಕ್ಷ್ಮವಾಗಿ ನೋಡಬೇಕು ಎಂದು ನಾನು ಹೇಳಿದ್ದೆ. ಅದನ್ನು ತಪ್ಪಾಗಿ ಅರ್ಥೈಸಲಾಗಿತ್ತು. ಮಹಿಳೆ ದೇವಸ್ಥಾನದ ಒಳಗೆ ಪ್ರವೇಶ ಮಾಡಬಾರದು ಎನ್ನುವುದು ನನ್ನ ಉದ್ದೇಶ ಆಗಿರಲಿಲ್ಲ. ಆ ಬಗ್ಗೆ ಸುಪ್ರೀಂಕೋರ್ಟ್‌ ಆದೇಶ ನೀಡಿದೆ. ಆ ತೀರ್ಪು ಅನ್ನು ಪಾಲನೆ ಮಾಡುವುದು ನಮ್ಮ ಕರ್ತವ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT