ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾ. ದೀಕ್ಷಿತ್‌ ತೀರ್ಪು: ಮಹಿಳಾ ಸಂಘಟನೆಗಳ ಆಕ್ಷೇಪ

ಬಹಿರಂಗ ಪತ್ರ ಬರೆದ ರಾಮಚಂದ್ರ ಗುಹಾ
Last Updated 27 ಜೂನ್ 2020, 20:45 IST
ಅಕ್ಷರ ಗಾತ್ರ

ಬೆಂಗಳೂರು: ‘ಅತ್ಯಾಚಾರ ಪ್ರಕರಣದಲ್ಲಿ ಹೈಕೋರ್ಟ್‌ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರು ನೀಡಿರುವ ತೀರ್ಪು ಸರಿಯಲ್ಲ' ಎಂದು ಮಹಿಳಾ ಸಂಘಟನೆಗಳು ಹಾಗೂ ರಾಮಚಂದ್ರ ಗುಹಾ ಸೇರಿದಂತೆ ಹಲವು ಲೇಖಕರು, ಸಾಮಾಜಿಕ ಕಾರ್ಯಕರ್ತರು ಪ್ರತಿಪಾದಿಸಿದ್ದಾರೆ.

ಆಕ್ಷೇಪಿಸಿ ಬರೆದಿರುವ ಬಹಿರಂಗ ಪತ್ರಕ್ಕೆ ಇತಿಹಾಸಕಾರ ರಾಮಚಂದ್ರ ಗುಹಾ, ರಂಗಕರ್ಮಿ ಅರುಂಧತಿ ನಾಗ್‌, ಲೇಖಕಿ ವಿಜಯಾ, ಇ.ರತಿರಾವ್‌, ಕಾವೇರಿ ಬೋಪಯ್ಯ ಸಹಿ ಹಾಕಿದ್ದಾರೆ. ಮಹಿಳಾ ಮುನ್ನಡೆ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ಅಖಿಲ ಭಾರತ ಪ್ರಗತಿಪರ ಮಹಿಳಾ ಒಕ್ಕೂಟ, ಕರ್ನಾಟಕ ಜನಶಕ್ತಿ ಸಂಘಟನೆ,ಪಿಯುಸಿಎಲ್ ಕರ್ನಾಟಕ, ಎಐಸಿಸಿಟಿಯು, ಸ್ವರಾಜ್ ಅಭಿಯಾನದಂತಹ ಸಂಘಟನೆಗಳು ಆಕ್ಷೇಪ ಪತ್ರಕ್ಕೆ ಬೆಂಬಲ ವ್ಯಕ್ತಪಡಿಸಿವೆ.

‘ದೀಕ್ಷಿತ್ ಅವರು ನೀಡಿರುವ ತೀರ್ಪು ಮಹಿಳೆಯರ ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಲೈಂಗಿಕ ಜೀವನದ ಬಗ್ಗೆ ಪೂರ್ವಗ್ರಹ
ಭಾವನೆ ಹೊಂದಿದೆ. ತೀರ್ಪಿನಲ್ಲಿ ಬಳಸಿರುವ ಭಾಷೆ ಮತ್ತು ವಿಚಾರ ಪಿತೃಪ್ರಧಾನ ಭಾವನೆಯಿಂದ ಕೂಡಿವೆ ಎಂದು ಹೇಳಲು ವಿಷಾದವಾಗುತ್ತದೆ‌. ಸಂವಿಧಾನದ ಆಶಯಗಳಿಗೆ ತಕ್ಕಂತೆ ತೀರ್ಪು ನೀಡಬೇಕು’ ಎಂದೂ ಪತ್ರದಲ್ಲಿ ಆಗ್ರಹಿಸಲಾಗಿದೆ.

ಈ ಪತ್ರಕ್ಕೆ ರಾಜ್ಯ ವಕೀಲರ ಪರಿಷತ್‌ ಸದಸ್ಯ ಎಸ್‌.ಬಸವರಾಜ್‌ ಮತ್ತು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್‌.ಸಂತೋಷ ಹೆಗ್ಡೆ ಪ್ರತಿಕ್ರಿಯಿಸಿದ್ದಾರೆ.

‘ತೀರ್ಪಿನಿಂದ ತನಗೆ ಅನ್ಯಾಯವಾಗಿದೆ ಎಂದು ಭಾವಿಸುವ ಸಂತ್ರಸ್ತೆ ಅಥವಾ ಪ್ರಕರಣದಲ್ಲಿರುವವರು ಈ ಕುರಿತಂತೆ ಮೇಲ್ಮನವಿ ಸಲ್ಲಿಸಿ ನ್ಯಾಯ ಪಡೆಯಬಹುದು. ಅದು ಬಿಟ್ಟು ಗುಹಾ ಮತ್ತು ಕೆಲವರು ಬಹಿರಂಗ ಪತ್ರ ಬರೆದಿರುವುದು ಸರಿಯಲ್ಲ’ ಎಂದು ಬಸವರಾಜ್‌ ಹೇಳಿದ್ದಾರೆ.

ಅವರ ಹೇಳಿಕೆ ಸಮರ್ಥಿಸಿರುವ ಸಂತೋಷ ಹೆಗ್ಡೆ, ‘ಸಂತ್ರಸ್ತರು ಬೇಕಿದ್ದರೆ ಮೇಲ್ಮನವಿ ಸಲ್ಲಿಸಿ ನ್ಯಾಯಪಡೆಯಬಹುದು’ ಎಂದು ತಿಳಿಸಿದ್ದಾರೆ.

‘ತೀರ್ಪಿನಲ್ಲಿ ಯಾವುದೇ ಹೀಯಾಳಿಕೆ ಅಥವಾ ಕಡೆಗಣನೆಯ ಮಾತಿಲ್ಲ. ಮಹಿಳೆಯರ ಬಗ್ಗೆ ದೀಕ್ಷಿತರು ಹೊಂದಿರುವ ಗೌರವದ ಬಗ್ಗೆ ಸಂಶಯಿಸುವುದು ಸರ್ವಥಾ ಸಲ್ಲ’ ಎಂದುಆರೋಪಿ ಪರ ವಕೀಲ ಸಿ.ಎಚ್.ಹನುಮಂತರಾಯ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT