ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವರಿಗೂ ಸಮ್ಮಿಶ್ರ ಬರೆ

₹2 ಲಕ್ಷದವರೆಗಿನ ಸಾಲ ಮನ್ನಾ; ಈಗಾಗಲೇ ಪಾವತಿಸಿದವರಿಗೆ ₹25 ಸಾವಿರದವರೆಗೆ ಇನಾಮು
Last Updated 5 ಜುಲೈ 2018, 19:44 IST
ಅಕ್ಷರ ಗಾತ್ರ

ಬೆಂಗಳೂರು: ಸುಸ್ತಿಯಾಗಿರುವ ಬೆಳೆ ಸಾಲಗಳನ್ನು ಮಾತ್ರ ಮನ್ನಾ ಮಾಡಿ ನೇಗಿಲಯೋಗಿಗಳಿಗೆ ಖುಷಿ ಕೊಟ್ಟಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಅದರ ಹೊರೆ ಹಗುರ ಮಾಡಿಕೊಳ್ಳಲು ರೈತವರ್ಗವೂ ಸೇರಿದಂತೆ ರಾಜ್ಯದ ಎಲ್ಲ ಜನರ ಮೇಲೆ ಬೆಲೆ ಏರಿಕೆಯ ಬರೆ ಎಳೆದಿದ್ದಾರೆ.

ಸರ್ಕಾರದ ಕಾರ್ಯಕ್ರಮಗಳನ್ನು ತಾಯಿ ಹೃದಯದಿಂದ ರೂಪಿಸಿ ಅನುಷ್ಠಾನಗೊಳಿಸುವ ಆಶಯ ವ್ಯಕ್ತಪಡಿಸಿರುವ ಮುಖ್ಯಮಂತ್ರಿ, ಸಂಪನ್ಮೂಲ ಕ್ರೋಡೀಕರಣದ ವಿಷಯಕ್ಕೆ ಬಂದಾಗ ಕಠಿಣ ಮನಸ್ಸಿನಿಂದ ತೆರಿಗೆಯ ಏಟು ಕೊಟ್ಟಿದ್ದಾರೆ.

ಡೀಸೆಲ್‌, ಪೆಟ್ರೋಲ್‌ ದರವನ್ನು ಕಡಿತಗೊಳಿಸದ ಕೇಂದ್ರ ಸರ್ಕಾರವನ್ನು ಈ ಹಿಂದೆ ಗೇಲಿ ಮಾಡಿದ್ದ ಅವರೇ ಈಗ ಅವುಗಳ ಮೇಲಿನ ತೆರಿಗೆಯನ್ನು ಶೇ 2ರಷ್ಟು ಹೆಚ್ಚಿಸಿದ್ದಾರೆ. ಮುಂದಿನ ದಿನಗಳಲ್ಲಿ ಅದರ ಬಿಸಿ, ಕೃಷಿಕ ಸಮುದಾಯವೂ ಸೇರಿದಂತೆ ಎಲ್ಲರಿಗೂ ತಟ್ಟಲಿದೆ.

ಡೀಸೆಲ್‌ ದರ ಹೆಚ್ಚಳದಿಂದ ಸರಕು ಸಾಗಾಟದ ವೆಚ್ಚ ಏರಿಕೆಯಾಗಿ ಅಗತ್ಯ ವಸ್ತುಗಳ ಬೆಲೆ ಗಗನಮುಖಿಯಾಗುವ ಆತಂಕ ವ್ಯಕ್ತವಾಗಿದೆ. ಖಾಸಗಿ ಸೇವಾ ವಾಹನಗಳ ತೆರಿಗೆ ದರದಲ್ಲಿ ಶೇ 50ರಷ್ಟು ಹೆಚ್ಚಳ ಮಾಡಲಾಗಿದೆ.

ರಾಜ್ಯದಲ್ಲಿ ಒಂದು ಲಕ್ಷ ಖಾಸಗಿ ಸಾರಿಗೆ ವಾಹನಗಳಿದ್ದು, ಶಾಲಾ–ಕಾಲೇಜುಗಳ ಬಸ್‌ಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ. ಅವುಗಳ ಪ್ರಯಾಣ ದರ ಏರಿಕೆಯ ಕತ್ತಿ ಸಹ ತೂಗುತ್ತಿದೆ. ವಿದ್ಯುತ್‌ ದರ ಹೆಚ್ಚಳ ಆಗಿರುವುದರಿಂದ ರಾಜ್ಯದ ಎಲ್ಲ ಜನರ ಮೇಲೂ ಅದರ ಹೊರೆ ಬೀಳಲಿದೆ. ಮದ್ಯಪ್ರಿಯರಿಗೂ ಬಜೆಟ್‌ ಬಿಸಿ ಮುಟ್ಟಿಸದೇ ಬಿಟ್ಟಿಲ್ಲ.

ಫೆಬ್ರುವರಿಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ್ದ ಬಜೆಟ್‌ನ ಮುಂದುವರಿದ ಆವೃತ್ತಿಯಾದ ಈ ಆಯ–ವ್ಯಯದಲ್ಲಿ ದೋಸ್ತಿಗಳ ಎಲ್ಲ ಯೋಜನೆಗಳನ್ನು ಯಥಾವತ್ತಾಗಿ ಮುಂದುವರಿಸಬೇಕಾದ ಒತ್ತಡ ಮುಖ್ಯಮಂತ್ರಿ ಮೇಲಿತ್ತು.

ಬೆಳೆಸಾಲ ಮನ್ನಾ ಮಾಡಲೇಬೇಕಾದ ಅನಿವಾರ್ಯವೂ ಕಾಡಿತ್ತು. ನೌಕರರ ವೇತನ ಪರಿಷ್ಕರಣೆ ಹೊರೆಯೂ ಬಿದ್ದಿತ್ತು. ತಂತಿ ಮೇಲಿನ ನಡಿಗೆಯಂತೆ ಎಲ್ಲದರಲ್ಲೂ ಸಮನ್ವಯ ಸಾಧಿಸಲು ಕುಮಾರಸ್ವಾಮಿ ಕಸರತ್ತು ನಡೆಸಿರುವುದು ಸ್ಪಷ್ಟ.

ಪ್ರಸಕ್ತ ಆರ್ಥಿಕ ವರ್ಷದ ಮೊದಲ ಮೂರು ತಿಂಗಳುಗಳು ಕಳೆದುಹೋಗಿವೆ. ಹೊಸ ಬಜೆಟ್‌ನ ಯೋಜನೆಗಳಿಗೆ ಜುಲೈನಲ್ಲಿ ಸಿದ್ಧತೆ ಮಾಡಿಕೊಂಡರೂ ಅನುಷ್ಠಾನಕ್ಕೆ ಉಳಿಯುವುದು ಎಂಟು ತಿಂಗಳುಗಳು ಮಾತ್ರ. ಈ ಅವಧಿಯಲ್ಲಿ ಕೃಷಿ ಸಂಕಟವನ್ನು ಸಾಧ್ಯವಾದ ಮಟ್ಟಿಗೆ ದೂರ ಮಾಡಬೇಕು ಎನ್ನುವ ಆಶಯ ಬಜೆಟ್‌ನಲ್ಲಿ ಎದ್ದು ಕಾಣುತ್ತಿದೆ.

ಸಾಲಮನ್ನಾ ತಾತ್ಕಾಲಿಕ ಪರಿಹಾರವಾದರೆ, ಕೃಷಿಕರ ಬದುಕನ್ನು ಹಸನುಗೊಳಿಸಲು ಶಾಶ್ವತ ಪರಿಹಾರ ರೂಪಿಸುವ ಅಗತ್ಯವಿದೆ ಎಂಬುದನ್ನೂ ಮನಗಂಡಂತಿದೆ.

ಚುನಾವಣೆಯಲ್ಲಿ ‘ತೆನೆ ಹೊತ್ತ ಮಹಿಳೆ’ಯ ಕೈಹಿಡಿದ ರಾಮನಗರ, ಮಂಡ್ಯ ಮತ್ತು ಹಾಸನ ಜಿಲ್ಲೆಗಳಿಗೆ ಕುಮಾರಸ್ವಾಮಿ ಉದಾರವಾಗಿಯೇ ಕಾಣಿಕೆ ನೀಡಿದ್ದಾರೆ. ಬೆಂಗಳೂರಿನತ್ತ ಜೆಡಿಎಸ್‌ ದೃಷ್ಟಿ ಹರಿಸುವುದು ಕಡಿಮೆ ಎನ್ನುವುದು ಮೊದಲಿನಿಂದ ಇದ್ದ ದೂರು.

ಆ ದೂರಿನಿಂದ ಮುಕ್ತವಾಗಲು ರಾಜಧಾನಿಗೂ ಭರಪೂರ ಯೋಜನೆ ಹರಿಸಿದ್ದಾರೆ. ಯೋಜನೆಗಳ ಅಬ್ಬರದ ನಡುವೆಯೇ ಪ್ರತಿ ಕುಟುಂಬಕ್ಕೆ ಸಿಗುತ್ತಿದ್ದ ‘ಅನ್ನಭಾಗ್ಯ’ದ ಅಕ್ಕಿಯಲ್ಲಿ ಸದ್ದಿಲ್ಲದೆ ಎರಡು ಕೆ.ಜಿ ಕಡಿತ ಮಾಡಿಬಿಟ್ಟಿದ್ದಾರೆ ಮುಖ್ಯಮಂತ್ರಿ.

**

ವಿದ್ಯುತ್:ಗೃಹ ಬಳಕೆ ಮೇಲಿನ ತೆರಿಗೆ 10 ಪೈಸೆಯಿಂದ 20 ಪೈಸೆಗೆ ಏರಿಕೆ (ಪ್ರತಿ ಯೂನಿಟ್‌ಗೆ)

ಪೆಟ್ರೋಲ್:30% ರಿಂದ 32%ಕ್ಕೆ ಏರಿಕೆ/₹ 1.14 ಹೆಚ್ಚಳ (ಪ್ರತಿ ಲೀಟರ್‌ಗೆ)

ಡೀಸೆಲ್:19% ರಿಂದ 21%ಕ್ಕೆ ಏರಿಕೆ/ ₹ 1.12 ಹೆಚ್ಚಳ (ಪ್ರತಿ ಲೀಟರ್‌ಗೆ)

ಮದ್ಯ:4% ಹಾಲಿ ಇರುವ ಅಬಕಾರಿ ಸುಂಕದ ಮೇಲಿನ ದರ ಏರಿಕೆ ಪ್ರಮಾಣ

ಖಾಸಗಿ ಸೇವಾ ವಾಹನ ತೆರಿಗೆ: 50% ಹೆಚ್ಚಳ

**

‘ಕಾಯಕ’

ಸ್ವಸಹಾಯ ಗುಂಪುಗಳನ್ನು ಕಟ್ಟಿಕೊಂಡು ಸ್ವಂತ ಉದ್ಯೋಗ ಕೈಗೊಳ್ಳಲು ‘ಕಾಯಕ’ ಯೋಜನೆ ರೂಪಿಸಲಾಗಿದ್ದು, ₹ 5 ಕೋಟಿ ಅನುದಾನ ಮೀಸಲಿಡಲಾಗಿದೆ. 3,000 ಗುಂಪುಗಳು ಈ ಯೋಜನೆಯ ಲಾಭ ಪಡೆಯಲಿವೆ.

**

ಪ್ರಗತಿ ಕಾಲೊನಿ

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ ಕಾಲೊನಿ ಹಾಗೂ ತಾಂಡಾಗಳ ಸಮಗ್ರ ಅಭಿವೃದ್ಧಿಗೆಕನಿಷ್ಠ ₹1 ಕೋಟಿಯಿಂದ ಗರಿಷ್ಠ₹ 5 ಕೋಟಿವರೆಗೆ ಅನುದಾನ ಒದಗಿಸಲು ಪ್ರಗತಿ ಕಾಲೊನಿ ಯೋಜನೆ ರೂಪಿಸಲಾಗಿದೆ.

**

‘ಮಾತೃಶ್ರೀ’ ಮಮತೆ

ಬಿಪಿಎಲ್‌ ಕುಟುಂಬದ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಪ್ರತಿತಿಂಗಳು ₹ 1,000ದಂತೆ ಆರು ತಿಂಗಳವರೆಗೆ ನೆರವು ನೀಡಲು ‘ಮುಖ್ಯಮಂತ್ರಿ ಮಾತೃಶ್ರೀ’ ಯೋಜನೆ ಅನುಷ್ಠಾನಕ್ಕೆ ನಿರ್ಧಾರ. ಈ ಯೋಜನೆಗಾಗಿ ₹ 350 ಕೋಟಿ ಮೀಸಲು.

**

ಬಸ್ ಪಾಸ್‌ ‘ನ’ಪಾಸ್

19.60 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ನೀಡುವ ಸಿದ್ದರಾಮಯ್ಯನವರ ಮಹತ್ವಾಕಾಂಕ್ಷಿ ಪ್ರಸ್ತಾವ ಬಜೆಟ್‌ನಲ್ಲಿ ಇಲ್ಲ.

‘ಹಿಂದಿನ ಬಜೆಟ್‌ನ ಎಲ್ಲ ಯೋಜನೆಗಳು ಮುಂದುವರಿಯಲಿವೆ’ ಎಂದು ಮುಖ್ಯಮಂತ್ರಿ ಪ್ರತಿಪಾದಿಸಿದ್ದಾರೆ. ಆದರೆ ಎರಡೂ ಬಜೆಟ್‌ನಲ್ಲಿ ಅನುದಾನ ಹಂಚಿಕೆ ಮಾಡದಿರುವುದರಿಂದ ಬಸ್‌ ಪಾಸ್ ಸಿಗುವುದೋ ಇಲ್ಲವೋ ಎಂಬುದು ಅನುಮಾನ.

**

ಚೀನಾ ಜತೆ ಸ್ಪರ್ಧೆ

‘ಚೀನಾ ದೇಶದೊಂದಿಗೆ ಸಕಾರಾತ್ಮಕ ಸ್ಪರ್ಧೆ’ ಯೋಜನೆಗೆ ನಿರ್ಧಾರ. ಈ ಯೋಜನೆ ಮೂಲಕ ಎಂಟು ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ. ಮುಂದಿನ ವರ್ಷಗಳಲ್ಲಿ ಹಂತ–ಹಂತವಾಗಿ ₹ 14 ಸಾವಿರ ಕೋಟಿ ಹೂಡಿಕೆಗೆ ತೀರ್ಮಾನ ಮಾಡಲಾಗಿದೆ.

**

ರೈತರಿಗೆ ಕುಮಾರಸ್ವಾಮಿ ದ್ರೋಹ ಬಗೆದು ಮತ್ತೊಮ್ಮೆ ವಚನಭ್ರಷ್ಟ ಎನಿಸಿಕೊಂಡಿದ್ದಾರೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಮುನ್ನೋಟವಾಗಲಿ, ಇಚ್ಛಾಶಕ್ತಿಯಾಗಲಿ ಈ ಬಜೆಟ್‌ನಲ್ಲಿ ಇಲ್ಲ.

–ಬಿ.ಎಸ್. ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ

**

ಕರ್ನಾಟಕ ಸರ್ಕಾರ ರೈತರ ಸಾಲ ಮನ್ನಾ ಮಾಡಿದೆ. ಮೋದಿ ಸರ್ಕಾರ ಶ್ರೀಮಂತರ ಸಾಲವನ್ನು ಮನ್ನಾ ಮಾಡುವುದಾದರೆ ರೈತರ ಸಾಲವನ್ನೂ ಮನ್ನಾ ಮಾಡಲಿ.

–ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT