ವಿವಿಗಳಲ್ಲಿ ಸ್ವಚ್ಛ ಭಾರತ ಯೋಜನೆಗೆ ಪಠ್ಯ ಸಿದ್ಧ

7
ಯುಜಿಸಿ ನಿರ್ದೇಶನದಂತೆ ಸ್ವಚ್ಛ ಭಾರತ ಯೋಜನೆಯು ಪದವಿ, ಸ್ನಾತಕೋತ್ತರ ಕೋರ್ಸ್‌ಗಳಿಗೆ ಕಡ್ಡಾಯ

ವಿವಿಗಳಲ್ಲಿ ಸ್ವಚ್ಛ ಭಾರತ ಯೋಜನೆಗೆ ಪಠ್ಯ ಸಿದ್ಧ

Published:
Updated:

ಧಾರವಾಡ: ಪದವಿ ಹಾಗೂ ಸ್ನಾತಕೋತ್ತರ ಕೋರ್ಸ್‌ಗಳಲ್ಲಿ, ಸ್ವಚ್ಛ ಭಾರತ ಬೇಸಿಗೆ ಇಂಟರ್ನ್‌ಷಿಪ್‌ (ಎಸ್‌ಬಿಎಸ್ಐ) ಕಾರ್ಯಕ್ರಮವನ್ನು ಅಳವಡಿಸಿಕೊಳ್ಳಲು ರಾಜ್ಯದ ವಿಶ್ವವಿದ್ಯಾಲಯಗಳು ಸಿದ್ಧತೆ ನಡೆಸಿವೆ.

ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ನಿಯಮಾವಳಿಯಂತೆ ಈ ಕಾರ್ಯಕ್ರಮವನ್ನು ಪಠ್ಯಕ್ರಮದಲ್ಲಿ ಸೇರಿಸಲು ಉನ್ನತ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿತ್ತು. ಆ ಪ್ರಕಾರವಾಗಿ, ವಿಶ್ವವಿದ್ಯಾಲಯಗಳು ಯುಜಿಸಿ ನಿಯಮಾವಳಿಗೆ ಅನುಗುಣವಾಗಿ ಎಸ್‌ಬಿಎಸ್ಐ ಕೋರ್ಸ್ ಸೇರ್ಪಡೆಗೆ ಮುಂದಾಗಿವೆ. ಇದರಲ್ಲಿ ತರಗತಿ ಮತ್ತು ಕ್ಷೇತ್ರ ಭೇಟಿ ಸೇರಿದಂತೆ ನೂರು ದಿನಗಳ ಪಠ್ಯಕ್ರಮ ಸಿದ್ಧಗೊಂಡಿದೆ. 

1969ರಲ್ಲಿ ಪ್ರಾರಂಭವಾದ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್‌)ಗೆ ಈಗ 50 ವರ್ಷಗಳು ಪೂರ್ಣಗೊಂಡಿವೆ. ಈ ಯೋಜನೆ, ಆಸಕ್ತ ವಿದ್ಯಾರ್ಥಿಗಳನ್ನು ಮಾತ್ರ ಒಳಗೊಂಡು ವರ್ಷದಲ್ಲಿ ಒಂದು ಬಾರಿ ಗ್ರಾಮಗಳಲ್ಲಿ ಶ್ರಮದಾನ, ಜಾಗೃತಿ ಮೂಡಿಸುವ ಕಾರ್ಯಕ್ರಮ ಗಳನ್ನು ಆಯೋಜಿಸುವುದನ್ನು ಕಡ್ಡಾಯಗೊಳಿಸಿತ್ತು. ಈಗ ಸ್ವಚ್ಛ ಭಾರತ ಯೋಜನೆ ಅಡಿಯಲ್ಲಿ ಪ್ರತಿ ವಿದ್ಯಾರ್ಥಿಗೂ ಇದನ್ನು ಕಡ್ಡಾಯಗೊಳಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿದ ಕರ್ನಾಟಕ ವಿಶ್ವವಿದ್ಯಾಲಯದ ಎನ್‌ಎಸ್‌ಎಸ್‌ ಸಂಯೋಜನಾಧಿಕಾರಿ ಡಾ. ಮಹಾದೇವಪ್ಪ ಬಿ. ದಳಪತಿ, ‘ಸ್ವಚ್ಛ ಭಾರತ ಯೋಜನೆ ಕಾರ್ಯಕ್ರಮವನ್ನು, ನೂರು ದಿನಗಳ ಪಠ್ಯವಾಗಿ ಕಲಿಸುವುದು ಇದರ ಮುಖ್ಯ ಉದ್ದೇಶ’ ಎಂದರು.

‘ವಿದ್ಯಾರ್ಥಿಗಳು ವೈಯಕ್ತಿಕವಾಗಿ ಅಥವಾ ಹತ್ತು ಜನರು ಮೀರದಂತೆ ತಂಡವಾಗಿ ಕೆಲಸ ಮಾಡಬಹುದು. ಇವರಿಗೆ ಎನ್‌ಎಸ್‌ಎಸ್‌ ಸಂಯೋಜನಾಧಿಕಾರಿಗಳು ಮಾರ್ಗದರ್ಶನ ಮಾಡಲಿದ್ದಾರೆ. ಪ್ರತಿ ಸೆಮಿಸ್ಟರ್‌ನಲ್ಲಿ ಸದ್ಯ ಐದು ವಿಷಯಗಳಿಗೆ 500 ಅಂಕಗಳಿಗೆ ಪರೀಕ್ಷೆ ನಡೆಯುತ್ತಿದೆ. ಇದರ ಜತೆಗೆ ವಾರ್ಷಿಕ 50 ಅಂಕಕ್ಕೆ ಸ್ವಚ್ಛ ಭಾರತ ಪರೀಕ್ಷೆ ನಡೆಯಲಿದೆ’ ಎಂದು ವಿವರಿಸಿದರು.

₹ 3 ಲಕ್ಷ ಗೆಲ್ಲುವ ಅವಕಾಶ: ವಿದ್ಯಾರ್ಥಿಗಳು ತಾವು ಮಾಡಿದ ಕೆಲಸವನ್ನು ಚಿತ್ರ ಸಹಿತ ಆನ್‌ಲೈನ್ ಮೂಲಕ ಸಲ್ಲಿಸುವ ಅರ್ಜಿಯಲ್ಲಿ ದಾಖಲಿಸಬೇಕು. ಇದು ನೇರವಾಗಿ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವನ್ನು ತಲುಪಲಿದೆ. ಒಂದು ಪ್ರತಿಯನ್ನು ಕಾಲೇಜಿಗೆ ಸಲ್ಲಿಸಬೇಕು. ಉತ್ತಮ ಕೆಲಸಗಳಿಗೆ ಪ್ರತಿ ಕಾಲೇಜು ಹಂತದಲ್ಲಿ ಮೂರು ಬಹುಮಾನಗಳನ್ನು ನೀಡಲಾಗುತ್ತದೆ. ಅಲ್ಲಿ ಪ್ರಥಮ ಬಹುಮಾನ ಪಡೆದವರು ವಿಶ್ವವಿದ್ಯಾಲಯದ ಹಂತದ ಸ್ಪರ್ಧೆಗೆ ಆಯ್ಕೆ ಆಗುತ್ತಾರೆ. ಅಲ್ಲಿ ಪ್ರಥಮ ಬಹುಮಾನ ಪಡೆದವರು ರಾಜ್ಯ ಮಟ್ಟಕ್ಕೆ, ಅಲ್ಲಿಯೂ ಪ್ರಥಮ ಬಹುಮಾನ ಪಡೆದವರು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಲಿದ್ದಾರೆ. ರಾಷ್ಟ್ರಮಟ್ಟದಲ್ಲಿ ಪ್ರಥಮ ಬಹುಮಾನ ಪಡೆದ ವಿದ್ಯಾರ್ಥಿಗೆ ₹ 3 ಲಕ್ಷ, ದ್ವಿತೀಯ ₹ 2ಲಕ್ಷ ಮತ್ತು ತೃತೀಯ ಬಹುಮಾನವಾಗಿ ₹ 1 ಲಕ್ಷ ಗೆಲ್ಲುವ ಅವಕಾಶ ವಿದ್ಯಾರ್ಥಿಗಳಿಗೆ ಸಿಗಲಿದೆ’ ಎಂದು ಡಾ. ದಳಪತಿ ತಿಳಿಸಿದರು.

‘ಈ ನೂತನ ಪಠ್ಯಕ್ರಮದಂತೆ, ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಕೆಲಸ ಮಾಡುವ ವಿದ್ಯಾರ್ಥಿಗಳು ಗ್ರಾಮದಲ್ಲಿ ವಿವಿಧ ಜಾಗೃತಿ ಕಾರ್ಯಕ್ರಮ ನಡೆಸಬಹುದು. ಶ್ರಮದಾನ ಮಾಡಬಹುದು. ಆದರೆ ಯಾವ ಗ್ರಾಮ ಆಯ್ಕೆ ಮಾಡಬೇಕು ಎಂಬುದನ್ನು ಆಯಾ ಜಿಲ್ಲಾ ಪಂಚಾಯ್ತಿ ಸಿಇಒ ಸೂಚಿಸಲಿದ್ದಾರೆ. ಎನ್‌ಎಸ್‌ಎಸ್ ಸಂಯೋಜನಾಧಿಕಾರಿ, ಆಯಾ ಗ್ರಾಮ ಪಂಚಾಯ್ತಿಯ ಅಧ್ಯಕ್ಷರು, ಅಧಿಕಾರಿಗಳು ಸೇರಿ ಅಂಕ ನಿರ್ಧರಿಸಲಿದ್ದಾರೆ’ ಎಂದು ಅವರು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !