ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಾಯಾಮ ಶಾಲೆಯ ಸಾಮು ಅಭಿನಯದಲ್ಲಿ ‘ಫೇಮು’!

Last Updated 31 ಡಿಸೆಂಬರ್ 2018, 8:16 IST
ಅಕ್ಷರ ಗಾತ್ರ

ಹೆಸರು ಲೋಕನಾಥ್ ಆದರೂ ಅವರ ಹಣೆಮೇಲಿನ ಕುಂಕುಮದ ಹಿಂದೆ ಸಂಪ್ರದಾಯದ ಕಥೆಗಳಿದ್ದವು. 800ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರೂ ಚಿತ್ರರಂಗದ ಕುರಿತು ಒಂದು ಅಸಮಾಧಾನವನ್ನು ಪದೇಪದೇ ಅವರ ನಿಟ್ಟುಸಿರು ಹೊರಹಾಕುತ್ತಿತ್ತು. 38ನೇ ವಯಸ್ಸಿನಲ್ಲಿ ಮೊದಲ ಸಲ ಹೋಟೆಲ್ ಊಟ ಮಾಡಿದ ಜೀವ ಅದು.

ಒಂದು ಡಜನ್ ವರ್ಷಗಳ ಹಿಂದೆ ಅವರನ್ನು ಭೇಟಿ ಮಾಡಲೆಂದು ಬೆಂಗಳೂರಿನ ಪದ್ಮನಾಭನಗರದ ಅವರ ಮನೆಗೆ ಹೋಗಬೇಕಿತ್ತು. ಮೊಬೈಲ್ ಎತ್ತಿಕೊಂಡು ಫೋನ್ ಮಾಡಿದಾಗ ಅವರು ಹೇಳಿದ್ದು: ‘ಇಲ್ಲಿ ಯಾರನ್ನೂ ಲೋಕನಾಥ್ ಮನೆ ಎಲ್ಲಿದೆ ಅಂತ ಕೇಳಬೇಡಿ. ಎಲ್ಲರಿಗೂ ಇಲ್ಲಿ ನಾನೇ ಹೊಸಬ’!

ಅಂದೂ ಲೋಕನಾಥ್ ಹಣೆಮೇಲೆ ಕುಂಕುಮವಿತ್ತು. ಅದರ ಮೇಲೆ ಅವೇ ನಿರಿಗೆಗಳು. ಫೋಟೊ ತೆಗೆಯಲು ಮುಂದಾದಾಗ ಒಂದೆರಡು ಭಾವ ತುಳುಕಿಸಿ, ‘ಸಾಕಪ್ಪಾ… ಈ ಮುದುಕನದ್ದು ಇನ್ನೆಷ್ಟು ತೆಗೆಯುವಿರಿ…ಯಾರು ನೋಡುತ್ತಾರೆ’ ಎಂಬ ಪ್ರೀತಿಯ ತಕರಾರು.

ಲೋಕನಾಥ್ ಹುಟ್ಟಾ ಕಟ್ಟುಮಸ್ತು ಆಳು. ಕೆ.ವಿ. ಅಯ್ಯರ್ ಜತೆ ಸಾಮು ಮಾಡುತ್ತಿದ್ದ ಕಟ್ಟಾಳುಗಳಲ್ಲಿ ಒಬ್ಬರು. ಅದಕ್ಕೇ ಅವರ ಭುಜಗಳು ಸದಾ ಕಟೆದಂತೆಯೇ ಇದ್ದವು. ಮುಪ್ಪಿನಲ್ಲೂ ಅವರ ನಿಲುವು ಖಡಕ್ಕಾಗಿ ಇದ್ದುದು ಬಾಲ್ಯಕಾಲದಿಂದಲೂ ಅವರು ಮಾಡಿಕೊಂಡು ಬಂದಿದ್ದ ವ್ಯಾಯಾಮದಿಂದಲೇ. ಬರೀ ದೇಹ ಹುರಿಗಟ್ಟಿಸಿಕೊಂಡು ಓಡಾಡಿದ ಪಡ್ಡೆ ಅವರಲ್ಲ. ಹುಡುಗು ಬುದ್ಧಿ ಇದ್ದಾಗ ಸಹಜ ತುಂಟತನ ಕಂಡು ಮನೆಯವರು ಬೆಚ್ಚಿದ್ದರೂ ಅಯ್ಯರ್ ಗರಡಿ ದೇಹದ ಜತೆಗೆ ಬುದ್ಧಿಗೂ ಸಾಮು ಮಾಡಿಸಿತು.

ಹಾಕಿ, ಫುಟ್ ಬಾಲ್, ಕ್ರಿಕೆಟ್ ಎಂದೆಲ್ಲ ಆಟ ಹಚ್ಚಿಕೊಂಡಿದ್ದ ಈ ಅಪ್ಪಟ ಬೆಂಗಳೂರು ಹುಡುಗ ಮಹತ್ವದ ಸಂದರ್ಭಗಳಲ್ಲಿ ಹೊಡೆದದ್ದು, ಹೊಡೆಸಿಕೊಂಡದ್ದು ಇದೆ. ಆದರೆ ಟಿ.ಪಿ. ಕೈಲಾಸಂ ತರಹದವರ ಸಹವಾಸ ಸಿಗರೇಟು ಹೊಗೆಯ ಮೋಡಿಗಷ್ಟೇ ಸೀಮಿತವಾಗದೆ ರಂಗನಂಟನ್ನೂ ಅಂಟಿಸಿತು. ಚಿಕ್ಕಪೇಟೆಯಲ್ಲಿ ಕುಟುಂಬದ ಬಟ್ಟೆ ಅಂಗಡಿ ಇದ್ದಿದ್ದರಿಂದ ಲೋಕನಾಥ್ ಬೆಳ್ಳಿ ಚಮಚವನ್ನು ಬಾಯಲ್ಲಿ ಇಟ್ಟುಕೊಂಡಿದ್ದವರೇ ಹೌದು.

1950ರ ದಶಕದ ನಡುಘಟ್ಟದಲ್ಲಿ ‘ರವಿ ಕಲಾವಿದರು’ ತಂಡ ಸೇರಿಕೊಂಡ ಲೋಕನಾಥ್, ‘ಬಂಡ್ವಾಳವಿಲ್ಲದ ಬಡಾಯಿ’, ‘ವಿಗಡ ವಿಕ್ರಮರಾಯ’, ‘ಬಹದ್ದೂರ್ ಗಂಡು’, ‘ಚಂದ್ರಹಾಸ’ ತರಹದ ನಾಟಕಗಳಲ್ಲಿ ಸಾಣೆಗೆ ಒಡ್ಡಿಕೊಂಡರು. ನಾಟಕವಾಗಿ ಜನಪ್ರಿಯವಾಗಿದ್ದ ‘ಸಂಸ್ಕಾರ’ಕ್ಕೆ ಗಿರೀಶ ಕಾರ್ನಾಡರು ಸಿನಿಮಾ ರೂಪ ಕೊಟ್ಟಾಗ ಸಹಜವಾಗಿಯೇ ಅಭಿನಯದ ಅವಕಾಶ ಹುಡುಕಿಕೊಂಡು ಬಂತು. ಲೋಕನಾಥ್ ಅಭಿನಯದ ಸೆಟ್ಟೇರಿದ ಮೊದಲ ಸಿನಿಮಾ ‘ಸಂಸ್ಕಾರ’ ಆದರೂ ಬಿಡುಗಡೆ ಕಂಡಿದ್ದು ‘ಗೆಜ್ಜೆಪೂಜೆ’.

ರಂಗಪ್ರೀತಿಯನ್ನು ಕಣ ಕಣದಲ್ಲೂ ಇಟ್ಟುಕೊಂಡಿದ್ದ ಲೋಕನಾಥ್ ಅವರಿಗೆ ಮೊದಲು ಸಿನಿಮಾ ಅಷ್ಟಕ್ಕಷ್ಟೆ. ಪುಟ್ಟಣ್ಣ ಕಣಗಾಲ್ ಅವರಂಥ ನಿರ್ದೇಶಕರು ಆಹ್ವಾನ ಕೊಟ್ಟರೂ ಬಿಗುಮಾನ ತೋರಿದ್ದವರು ಅವರು. ಕೈಲಾಸಂ ಕಿವಿಮಾತು ಹೇಳಿದ ಮೇಲೆ ಆ ಜಿಗುಟುತನ ದೂರವಾಯಿತಷ್ಟೆ.

‘ಬೂತಯ್ಯನ ಮಗ ಅಯ್ಯು’ ಸಿನಿಮಾದಲ್ಲಿ ಲೋಕನಾಥ್ ಮಾಡಿದ್ದು ಮೋಚಿ ಪಾತ್ರ. ಆದರೆ, ಜನಮಾನಸದಲ್ಲಿ ಉಳಿದದ್ದು ಅವರು ಉಪ್ಪಿನಕಾಯಿ ಜಾಡಿ ಕದ್ದುಕೊಂಡು ಅದನ್ನು ಮುಕ್ಕುವ ದೃಶ್ಯ. ಆ ದೃಶ್ಯ ಎಷ್ಟು ಜನಪ್ರಿಯವಾಗಿತ್ತೆಂದರೆ, ಕಾರ್ಯಕ್ರಮವೊಂದರಲ್ಲಿ ಅಭಿಮಾನಿ ಹೆಣ್ಣುಮಗಳೊಬ್ಬಳು ಉಪ್ಪಿನಕಾಯಿ ಜಾಡಿಯನ್ನು ಲೋಕನಾಥ್ ಕೈಗಿಟ್ಟು, ‘ಎಷ್ಟು ಬೇಕೋ ತಿನ್ನು. ಇನ್ನುಮೇಲೆ ಕದಿಯಲು ಹೋಗಬೇಡ’ ಎಂದು ಹೇಳಿದ್ದಳು.

ಬಹುತೇಕ ಸಿನಿಮಾಗಳಲ್ಲಿ ಅಪ್ಪನಾಗಿ ಗದರುವ, ಮಾವನಾಗಿ ರೇಗುವ, ಖಳರೊಟ್ಟಿಗೆ ನಿಲ್ಲುವ ಪಾತ್ರಗಳನ್ನು ಮಾಡಿದ ಲೋಕನಾಥ್ ಹಲವು ಪ್ರಯೋಗಗಳಿಗೂ ಬೆಂಬಲವಾಗಿ ನಿಂತರು. ಶಂಕರ್ ನಾಗ್, ಅನಂತ ನಾಗ್ ಇಬ್ಬರೂ ಮಹತ್ವಾಕಾಂಕ್ಷೆಯಿಂದ ಮಾಡಿದ ‘ಮಿಂಚಿನ ಓಟ’ ಅಂಥ ಸಿನಿಮಾಗಳಲ್ಲಿ ಒಂದು. ಆ ಸಿನಿಮಾದಲ್ಲಿ ಎತ್ತರದ ಗೋಡೆಯಿಂದ ಜಂಪ್ ಮಾಡಿ ಜೈಲಿನಿಂದ ತಪ್ಪಿಸಿಕೊಳ್ಳುವ ದೃಶ್ಯವೊಂದಿದೆ. ಗೋಡೆಯಿಂದ ಎಗರಲು ವಯಸ್ಸಾಗಿದ್ದ ಈ ನಟ ಹಿಂದೆ ಮುಂದೆ ನೋಡುತ್ತಿದ್ದರು. ಆಗ ಹಿಂದಿನಿಂದ ಯಾರೋ ತಳ್ಳಿದ್ದಷ್ಟೆ. ಕಣ್ಣು ತೆರೆದರೆ ಅವರು ಆಸ್ಪತ್ರೆಯಲ್ಲಿದ್ದರು. ಗೋಡೆಯಿಂದ ಬಿದ್ದಮೇಲೆ ಮೂಗಿಗೇ ದೊಡ್ಡ ಪೆಟ್ಟಾಗಿತ್ತು. ಬ್ಯಾಂಡೇಜ್ ಹಾಕಿಕೊಂಡೇ ಮಗಳ ಮದುವೆಯಲ್ಲಿ ಓಡಾಡಬೇಕಾದ ಅನಿವಾರ್ಯತೆ. ಆದರೆ, ಸಿನಿಮಾ ನೋಡಿದಾಗ ಆ ನೋವೆಲ್ಲ ಅವರಿಗೆ ಮರೆತುಹೋಗಿತ್ತು.

ಐದೂವರೆ ದಶಕಗಳ ಅಭಿನಯಾವಕಾಶದಲ್ಲಿ ಲೋಕನಾಥ್ ಛಾಪು ಮೂಡಿಸಿದ ಚಿತ್ರಗಳಲ್ಲಿ ‘ನಾಗರಹಾವು’, ‘ಬೂತಯ್ಯನ ಮಗ ಅಯ್ಯು’, ‘ನೋಡಿ ಸ್ವಾಮಿ ನಾವಿರೋದೆ ಹೀಗೆ’, ‘ಬಂಗಾರದ ಮನುಷ್ಯ’, ‘ಕಥಾಸಂಗಮ’, ‘ಮನೆ ಮನೆ ಕಥೆ’, ‘ಕಿಟ್ಟು ಪುಟ್ಟು’, ‘ಕಾಕನಕೋಟೆ’, ‘ಕಾಡ ಬೆಳದಿಂಗಳು’, ‘ಹೊಸ ನೀರು’, ‘ಕಾಲೇಜು ರಂಗ’ ಕೆಲವಷ್ಟೆ. ‘ಮಾಲ್ಗುಡಿ ಡೇಸ್’ ಧಾರಾವಾಹಿಯಲ್ಲೂ ನಟಿಸಿದ್ದ ಅವರಿಗೂ ಶಂಕರ್ ನಾಗ್ ಗೂ ವಿಶೇಷ ನಂಟು ಇತ್ತು.

ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಕಮಲಹಾಸನ್, ಶಂಕರ್ ನಾಗ್, ಅನಂತ ನಾಗ್, ಶಿವರಾಜ್ ಕುಮಾರ್, ರವಿಚಂದ್ರನ್ ಎಲ್ಲ ನಟರ ಜತೆ ಅಭಿನಯಿಸಿದ ದೊಡ್ಡ ಅನುಭವಿ ಅವರು. ಈ ಕಾಲದ ನಟರ ಕುರಿತೂ ಅವರಿಗೆ ತಕರಾರುಗಳೇನೂ ಇರಲಿಲ್ಲ. ಆದರೆ ಅವರು ಚಿತ್ರಮಂದಿರಕ್ಕೆ ಹೋಗಿ ಸಿನಿಮಾಗಳನ್ನು ನೋಡುವುದನ್ನು ಬಿಟ್ಟು ಇಪ್ಪತ್ತೈದು ವರ್ಷಗಳೇ ಆಗಿದ್ದವು.

‘ಪ್ರೇಮ್ ಕಹಾನಿ’, ‘ಭೀಮಾ ತೀರದಲ್ಲಿ’, ‘ರೇ’ ಅವರು ಅತಿ ಇಳಿಯವಯಸ್ಸಿನಲ್ಲಿ ಅಭಿನಯಿಸಿದ ಸಿನಿಮಾಗಳು.ಗೆಲಿಲಿಯೋ, ‘ಆಸ್ಫೋಟ’ದ ರಾಜಾರಾಂ, ‘ತನುವು ನಿನ್ನದೆ ಮನವು ನಿನ್ನದೆ’ ನಾಟಕದ ‘ಕಾಕಾಜಿ’ ಹೀಗೆ ಹಲವು ರಂಗ ಪಾತ್ರಗಳಲ್ಲಿಯೂ ಲೋಕನಾಥ್ ನೆನಪುಗಳು ಬೆರೆತುಹೋಗಿದೆ.

ನಾಲ್ಕು ಹೆಣ್ಣು ಹಾಗೂ ಒಬ್ಬ ಮಗನ ತಂದೆಯಾಗಿ ಅವರು ತುಂಬು ಬದುಕು ಬಾಳಿದರು. ಮಗ ಅಮೆರಿಕೆಗೆ ಹೋದಾಗ ಎಲ್ಲ ತಂದೆಯರಂತೆ ಹೆಮ್ಮೆಯ ಜತೆಗೆ ಹಲುಬಿದ್ದೂ ಇದೆ. ಅವೆಲ್ಲವನ್ನೂ ಮರೆಸುವಷ್ಟು ಮೊಮ್ಮಕ್ಕಳ ನಗು ಅವರಿಗೆ ಸಿಕ್ಕಿತು.

ವ್ಯಾಯಾಮ ಶಾಲೆಯಿಂದ ರಂಗಕ್ಕೆ ಕಾಲಿಟ್ಟು, ಅಲ್ಲಿಂದ ಸಿನಿಮಾಗೆ ದಬ್ಬಿಸಿಕೊಂಡು, ಈಗ ಲೋಕವ್ಯಾಪಾರವನ್ನೇ ಮುಗಿಸಿ ಹೋಗಿರುವ ಲೋಕನಾಥ್ ಅವರನ್ನು ಅನೇಕರು ಪ್ರೀತಿಯಿಂದ ‘ಅಂಕಲ್’ ಎನ್ನುತ್ತಿದ್ದರು; 90 ವರ್ಷಗಳ ಅಜ್ಜ ಆದಾಗಲೂ. ನಟನೊಬ್ಬನಿಗೆ ಹೀಗೇ ಅಭಿಮಾನ ಯಾವುದೋ ವಿಶೇಷಣವನ್ನು ಅಂಟಿಸಿ ಕಳುಹಿಸಿಕೊಡುತ್ತದೆ. ಅವರ ನೆನಪುಗಳು ಮಾತ್ರ ಉಸಿರಾಡುತ್ತಲೇ ಇರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT