ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಸ್ಥಾನಕ್ಕೆ ಶಾಸಕರ ದುಂಬಾಲು

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮೇಲೆ ಇನ್ನಿಲ್ಲದ ಒತ್ತಡ
Last Updated 15 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ಸಚಿವ ಸಂಪುಟದಲ್ಲಿ ಸ್ಥಾನ ಗಿಟ್ಟಿಸಲು ಸಾಕಷ್ಟು ಶಾಸಕರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಮೇಲೆ ಇನ್ನಿಲ್ಲದ ಒತ್ತಡ ಹೇರುತ್ತಿದ್ದಾರೆ.

ಸಂಪುಟಕ್ಕೆ ಯಾರನ್ನು ಸೇರಿಸಬೇಕು ಎಂಬ ವಿಚಾರದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ನಿರ್ಧಾರವೇ ಅಂತಿಮ. ಈ ವಿಚಾರದಲ್ಲಿ ಯಡಿಯೂರಪ್ಪ ಅವರ ಮಾತು ಬಹಳ ನಡೆಯುವುದಿಲ್ಲ ಎಂಬ ವಿಚಾರ ಗೊತ್ತಿದ್ದರೂ ಕೆಲವು ಶಾಸಕರು ಎಡತಾಕುವುದನ್ನು ಬಿಟ್ಟಿಲ್ಲ. ಕೊನೇ ಕ್ಷಣದಲ್ಲಿ ಶಾಅವರು ಯಡಿಯೂರಪ್ಪ ಮಾತಿಗೆ ಬೆಲೆಕೊಟ್ಟರೆ, ರೊಟ್ಟಿ ಜಾರಿ ತುಪ್ಪಕ್ಕೆ ಬೀಳಬಹುದು ಎಂಬುದು ಶಾಸಕರ ಲೆಕ್ಕಾಚಾರ.ಯಡಿಯೂರಪ್ಪ ಅವರು ಶುಕ್ರವಾರ ಪ್ರಧಾನಿ ನರೇಂದ್ರಮೋದಿ ಮತ್ತು ಕೇಂದ್ರದ ಇತರ ಸಚಿವರನ್ನು ಭೇಟಿ ಮಾಡಲಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಬೇಡಿಕೆಗಳನ್ನು ಇಡಲಿದ್ದಾರೆ. ಶನಿವಾರ ಅಮಿತ್‌ ಶಾ ಅವರನ್ನು ಭೇಟಿ ಮಾಡಿ ಸಚಿವ ಸಂಪುಟ ವಿಸ್ತರಣೆಗೆ ಬಗ್ಗೆ ಸಮಾಲೋಚನೆ ನಡೆಸಿ, ಒಪ್ಪಿಗೆ ಪಡೆಯಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಮೊದಲ ಹಂತದಲ್ಲಿ 15 ಸಚಿವರ ಪ್ರಮಾಣ ವಚನಕ್ಕೆ ಒಪ್ಪಿಗೆ ನೀಡಲಿದ್ದಾರೆ. ಸಚಿವ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಶಾ ಅವರೇ ತೀರ್ಮಾನ ತೆಗೆದುಕೊಳ್ಳುತ್ತಾರೆ. ಸಂಭಾವ್ಯ ಸಚಿವರ ಕುರಿತಂತೆ ಮಾಹಿತಿ ಇಟ್ಟುಕೊಂಡಿರುವ ಶಾ ಅವರು ದಕ್ಷತೆಯಿಂದ ಕೆಲಸ ಮಾಡುವ ಟೀಮ್‌ ಆಯ್ಕೆ ಮಾಡಲಿದ್ದಾರೆ ಎಂದು ಮೂಲಗಳು ಹೇಳಿವೆ.

ಯಾರಿಗೆಲ್ಲ ಬಂಪರ್‌:ಯಡಿಯೂರಪ್ಪ ಅವರ ಸಂಪುಟದಲ್ಲಿ ಯಾರಿಗೆಲ್ಲ ಬಂಪರ್‌ ಕೊಡುಗೆ ಸಿಗಬಹುದು ಎಂಬ ಲೆಕ್ಕಾಚಾರ ನಡೆದಿದೆ. ಹಿರಿಯ ನಾಯಕರಾದ ಜಗದೀಶಶೆಟ್ಟರ್‌, ಕೆ.ಎಸ್‌.ಈಶ್ವರಪ್ಪ, ಆರ್‌.ಅಶೋಕ್‌, ಗೋವಿಂದ ಕಾರಜೋಳ, ಅರವಿಂದ ಲಿಂಬಾವಳಿ, ಸಿ.ಟಿ.ರವಿ, ಸುರೇಶ್‌ ಕುಮಾರ್‌,ಉಮೇಶ್‌ ಕತ್ತಿ, ಬಸವರಾಜ ಬೊಮ್ಮಾಯಿ, ಜೆ.ಸಿ.ಮಾಧುಸ್ವಾಮಿ, ವಿ.ಸೋಮಣ್ಣ, ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಶಶಿಕಲಾ ಜೊಲ್ಲೆ ಮುಂತಾದವರ ಹೆಸರು ಚಾಲ್ತಿಯಲ್ಲಿದ್ದರೂ, ಇವರಲ್ಲಿ ಕೆಲವರು ಮಾತ್ರ ಸಂಪುಟದಲ್ಲಿ ಸ್ಥಾನ ಪಡೆಯಬಹುದು.

ಅಲ್ಲದೇ, ಒಂದೆರಡು ಅಚ್ಚರಿಯಹೆಸರುಗಳೂ ಪಟ್ಟಿಯಲ್ಲಿ ಕಾಣಿಸಿಕೊಂಡರೆ ಅಚ್ಚರಿ ಇಲ್ಲ. ಹೀಗಾಗಿ ಪಟ್ಟಿ ಹೊರಬಿದ್ದಾಗ ಕೆಲವರಿಗೆ ನಿರಾಸೆ ಆಗಲೂ ಬಹುದು. ಒಂದಿಬ್ಬರು ಹಿರಿಯರಿಗೆ ಸಚಿವ ಸ್ಥಾನ ನೀಡದೇ ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನದಂತಹ ಹುದ್ದೆಗಳನ್ನು ಅಲಂಕರಿಸಲು ಸೂಚಿಸಬಹುದು. ಇನ್ನು ಕೆಲವರಿಗೆ ಪಕ್ಷದ ಕೆಲಸಗಳಲ್ಲಿ ತೊಡಗಿಸಿಕೊಳ್ಳಲೂ ನಿರ್ದೇಶನ ನೀಡಬಹುದು ಪಕ್ಷದ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT