ಮಂಗಳವಾರ, ಜೂನ್ 2, 2020
27 °C

ಕೊರೊನಾ ಸೋಂಕಿತ ಯಾರೂ ವೆಂಟಿಲೇಟರ್‌ನಲ್ಲಿ ಇಲ್ಲ– ಮುಖ್ಯಮಂತ್ರಿ ಯಡಿಯೂರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕೊರೊನಾ ಸೋಂಕು ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಸೋಂಕಿತರ ಪೈಕಿ ಯಾರೂ ವೆಂಟಿಲೇಟರ್‌ ವ್ಯವಸ್ಥೆಯಲ್ಲಿ ಇಲ್ಲ‘ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಬೆಂಗಳೂರಿನ ಶಾಸಕರು, ಸಂಸದರ ಜೊತೆ ಶನಿವಾರ ಸಭೆ ನಡೆಸಿದ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಈವರೆಗೆ 128 ಮಂದಿಗೆ ಕೊರೊನಾ ಸೋಂಕು  ದೃಢಪಟ್ಟಿದ್ದು ನಾಲ್ವರು ಮೃತಪಟ್ಟಿದ್ದಾರೆ. ಕೊರೊನಾ ನಿಭಾಯಿಸಲು ಹಿರಿಯ ಸಚಿವರ ನೇತೃತ್ವದಲ್ಲಿ ಕಾರ್ಯಪಡೆ ರಚಿಸಲಾಗಿದೆ’ ಎಂದರು.

‘ಲಾಕ್‌ಡೌನ್‌ ಕಟ್ಟುನಿಟ್ಟಾಗಿ ಪಾಲಿಸಲು ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ. ಅಗತ್ಯ ವಸ್ತುಗಳಿಗೆ ಯಾವುದೇ ಕೊರತೆ ಇಲ್ಲ. 480 ಹಾಪ್ ಕಾಮ್ಸ್ ಮೂಲಕ ರೈತರಿಂದ ಹಣ್ಣು ತರಕಾರಿ ಖರೀದಿಸಿ ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗಿದೆ’ ಎಂದರು.

‘ಪಡಿತರ ಚೀಟಿದಾರರಿಗೆ ಮುಂಗಡವಾಗಿ ಪಡಿತರ ವಿತರಣೆ ಮಾಡಲಾಗುತ್ತಿದೆ. ಕಾರ್ಡ್ ಇಲ್ಲದವರಿಗೂ ಪಡಿತರ ವಿತರಿಸಲು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ‘ ಎಂದು ಮುಖ್ಯಮಂತ್ರಿ ವಿವರಿಸಿದರು.

‘ಕೊರೊನಾ ಚಿಕಿತ್ಸೆಗಾಗಿ ಬೆಂಗಳೂರಿನಲ್ಲಿ ವಿಕ್ಟೋರಿಯಾ ಮತ್ತು ಬೌರಿಂಗ್ ಆಸ್ಪತ್ರೆಯಲ್ಲಿ 650 ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. ರಾಜ್ಯದಲ್ಲಿ ಅಗತ್ಯ ವಸ್ತುಗಳಿಗೆ ಯಾವುದೇ ಕೊರತೆಯಿಲ್ಲ. ಜನರು ಅನಗತ್ಯ ಗೊಂದಲ ಮಾಡಿಕೊಂಡು ವಸ್ತುಗಳ ಖರೀದಿಗೆ ದುಂಬಾಲು ಬೀಳುವ ಅಗತ್ಯ ಇಲ್ಲ. ಕೊಳಗೇರಿ ಪ್ರದೇಶದ ಜನರಿಗೆ ಉಚಿತ ಹಾಲು ಸರಬರಾಜು ಮಾಡಲಾಗುತ್ತಿದೆ’ ಎಂದರು.

‘ಸಾರ್ವಜನಿಕರು ಅನಗತ್ಯವಾಗಿ ರಸ್ತೆಗಳಲ್ಲಿ ಓಡಾಡಬಾರದು. ರಾಜ್ಯದಲ್ಲಿ 17 ಸಹಾಯವಾಣಿ ಆರಂಭಿಸಲಾಗಿದೆ. ಅಸಂಘಟಿತ ಕಾರ್ಮಿಕರು ಹಾಗೂ ವಲಸಿಗರಿಗೆ ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ‘ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು