ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನೊಬ್ಬ ಗೃಹಿಣಿ, ನನ್ನ ಮೇಲೇಕೆ ರಾಜಕೀಯ ಅಸ್ತ್ರ: ಹೆಗಡೆಗೆ ತಬುರಾವ್ ಕಟು ಪ್ರಶ್ನೆ

Last Updated 28 ಜನವರಿ 2019, 11:59 IST
ಅಕ್ಷರ ಗಾತ್ರ

ಬೆಂಗಳೂರು:ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರನ್ನು ‘ಮುಸ್ಲಿಂ ಹೆಂಗಸಿನ ಹಿಂದೆ ಓಡಿ ಹೋದವನು...’ ಎಂದೆಲ್ಲ ಹೀಯಾಳಿಸಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮಾಡಿರುವ ಟ್ವೀಟ್‌ಗೆ ದಿನೇಶ್‌ ಗುಂಡೂರಾವ್‌ ಅವರ ಪತ್ನಿ ತಬು ರಾವ್‌ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

‘ಕೆಪಿಸಿಸಿ ಅಧ್ಯಕ್ಷರೂ ಆಗಿರುವ ನನ್ನ ಪತಿಯನ್ನು ರಾಜಕೀಯವಾಗಿ ಎದುರಿಸಲು ಸಾಧ್ಯವಾಗದ ಕೆಲವು ಬಿಜೆಪಿ ಮುಖಂಡರು ನನ್ನನ್ನು ಸುಲಭದ ಗುರಿಯಾಗಿಸಿಕೊಂಡಿದ್ದಾರೆ.ಬಿಜೆಪಿ ಸಂಸದರಾದ ಪ್ರತಾಪ್‌ ಸಿಂಹ ಮತ್ತು ಶೋಭಾ ಕರಂದ್ಲಾಜೆ ಅವರ ಬಳಿಕ ಇದೀಗ ಕೇಂದ್ರ ಸಚಿವ ಅನಂತ ಕುಮಾರ್‌ ಹೆಗಡೆ ಅವರ ಸರದಿ ಬಂದಂತೆ ಇದೆ.ನಾನು ರಾಜಕಾರಿಣಿ ಖಂಡಿತ ಅಲ್ಲ. ನಾನು ಒಬ್ಬ ಖಾಸಗಿ ವ್ಯಕ್ತಿ, ಮೇಲಾಗಿ ಎರಡು ಮಕ್ಕಳ ತಾಯಿ ಮತ್ತು ಗೃಹಿಣಿ. ನಾನು ಯಾವುದೇ ಪಕ್ಷ ಅಥವಾ ಸಾರ್ವಜನಿಕ ಸ್ಥಾನಗಳನ್ನು ಹೊಂದಿಲ್ಲ’ಎಂದು ತಬು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಅನಂತಕುಮಾರ ಹೆಗಡೆ ಅವರ ಕೊಡುಗೆ ಪ್ರಶ್ನಿಸಿದ ದಿನೇಶ್‌ ಗುಂಡೂರಾವ್‌ ಅವರ ಟ್ವಿಟ್‌ಗೆ ಪ್ರತಿಕ್ರಿಯಿಸಿದ್ದ ಹೆಗಡೆ, ‘ಮುಸ್ಲಿಂ ಹೆಂಗಸಿನ ಹಿಂದೆ ಓಡಿ ಹೋದವನು...’ ಎಂದೆಲ್ಲ ಹೀಯಾಳಿಸಿದ್ದರು. ಇದೀಗ ಹೆಗಡೆಗೆ ಉತ್ತರ ನೀಡಲು ಮುಂದಾಗಿರುವ ತಬು,‘ಹೌದು ನಾನು ಜನ್ಮತಃ ಮುಸ್ಲಿಂ.ಆದರೆ, ನಾವೆಲ್ಲರೂ ಹೆಮ್ಮೆಯ ಭಾರತೀಯರು ಅಲ್ವಾ?ಜಾತ್ಯತೀತದ ಅಡಿಪಾಯದಲ್ಲಿ ರೂಪಿಸಿರುವ ನಮ್ಮ ಸಂವಿಧಾನವು ಪ್ರತಿವ್ಯಕ್ತಿಯು ಚಿಂತನೆ, ಅಭಿವ್ಯಕ್ತಿ ಸ್ವಾತಂತ್ರ್ಯ, ನಂಬಿಕೆ ಮತ್ತು ಆರಾಧನೆಯನ್ನು ಖಾತ್ರಿಪಡಿಸುತ್ತದೆ’ಎಂದು ಹೇಳಿದ್ದಾರೆ.

‘ನಾನು ಬಿಜೆಪಿ ನಾಯಕರ ವಿರುದ್ಧ ವೈಯಕ್ತಿಕ ಟೀಕೆ ಮಾಡಿಲ್ಲ.ಕೀಳುಮಟ್ಟದ ರಾಜಕೀಯ ದಾಳವಾಗಿ ನನ್ನನ್ನು ಬಳಸುತ್ತಿರುವ ಬಗ್ಗೆ ಅಸಮಾಧಾವಿದೆ.ಅವರಿಗೆ ದೈರ್ಯವಿದ್ದರೆ, ರಾಜಕೀಯವಾಗಿ ನನ್ನ ಪತಿಯನ್ನು ಎದುರಿಸಬೇಕೇ ಹೊರತು, ಹೆಂಡತಿಯ ಸೆರಗಿನಲ್ಲಿ ಬಚ್ಚಿಟ್ಟುಕೊಂಡು ಕಲ್ಲು ಹೊಡೆಯಬಾರದು. ಇಂಥಪ್ರಚೋದನಾಕಾರಿ ಹೇಳಿಕೆಗಳು ಕೇಂದ್ರ ಸಚಿವರಿಗೆ ಭೂಷಣವಲ್ಲ’ ಎಂದು ಹೇಳಿದ್ದಾರೆ.

‘ನಾನು ಟ್ವೀಟರ್‌ನಲ್ಲಿ ಹೆಗಡೆ ಅವರಿಗೆ ಪ್ರತಿಕ್ರಿಯಿಸಲು ಯತ್ನಿಸಿದೆ.ನಾನು ಪ್ರತಿಕ್ರಿಯಿಸಲಾಗದಂತೆ ಅವರು ನಿರ್ಬಂಧಿಸಿಸಿದ್ದಾರೆ (ಬ್ಲಾಕ್‌ ಮಾಡಿದ್ದಾರೆ). ಕರ್ನಾಟಕದ ರಾಜಕಾರಣಿಗಳು ತಮ್ಮ ಪರಿಪಕ್ವತೆ ಮತ್ತು ಘನತೆಗೆ ಹೆಸರುವಾಸಿಯಾಗಿದ್ದಾರೆ. ಮಹಿಳೆಯರ ಘನತೆಗೆ ಧಕ್ಕೆ ತರುವ ಅವಹೇಳನಕಾರಿ ಹೇಳಿಕೆಗಳು ಮತ್ತು ಕಟುವಾದ ಟೀಕೆಗಳನ್ನು ಮಾಡುವ ಮೂಲಕ ರಾಜ್ಯಕ್ಕೆ ಅಪಖ್ಯಾತಿ ತರಬೇಡಿ ಎಂದು ನಾನು ಹೆಗಡೆ ಮತ್ತು ಅವರ ಸಹೋದ್ಯೋಗಿಗಳಲ್ಲಿ ಕೇಳಿಕೊಳ್ಳುತ್ತೇನೆ‘ ಎಂದು ತಬು ಅವರು ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT