ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ಹೆಣೆದ ಸಂಘರ್ಷದ ಬಲೆ

ಪಶ್ಚಿಮದ ರಾಷ್ಟ್ರಗಳ ವಿರುದ್ಧ ಕಠಿಣ ರಾಜತಂತ್ರ; ಪಕ್ಕದ ರಾಷ್ಟ್ರಗಳನ್ನು ಮಣಿಸಲೂ ಕಾರ್ಯತಂತ್ರ
Last Updated 5 ಜುಲೈ 2020, 9:19 IST
ಅಕ್ಷರ ಗಾತ್ರ

ಬೀಜಿಂಗ್‌: ತಣ್ಣನೆಯ ಹಿಮಾಲಯದ ಕಣಿವೆಗಳಿಂದ ಉಷ್ಣವಲಯದ ದ್ವೀಪಗಳವರೆಗೆ, ಅಕ್ಕಪಕ್ಕದ ರಾಷ್ಟ್ರಗಳಿಂದ ದೂರದಲ್ಲಿರುವ ಪಶ್ಚಿಮದ ರಾಜಧಾನಿಗಳವರೆಗೆ ಚೀನಾ ಪ್ರಪಂಚದಾದ್ಯಂತ ಹಲವು ಸಂಘರ್ಷಗಳಿಗೆ ಮುಖಾಮುಖಿ ಆಗುತ್ತಿದೆ.

ಅತ್ತ ಅಮೆರಿಕವು ಅಷ್ಟಷ್ಟೇ ಹಿಂದೆ ಸರಿದಷ್ಟು ಇತ್ತ ಚೀನಾ ಅಷ್ಟೇ ದೃಢವಾದ ಹೆಜ್ಜೆಯೊಂದಿಗೆ ಮುನ್ನುಗ್ಗುತ್ತಿದೆ.

ಪಶ್ಚಿಮದ ದೇಶಗಳ ಕಟು ಟೀಕೆಗಳ ಹೊರತಾಗಿಯೂ ವಿವಾದಾತ್ಮಕ ಭದ್ರತಾ ಕಾನೂನನ್ನು ಹಾಂಗ್‌ಕಾಂಗ್‌ನಲ್ಲಿ ಜಾರಿಗೆ ತಂದಿರುವುದು, ಚೀನಾ ದೇಶವೀಗ ಜಾಗತಿಕ ‘ಸೂಪರ್‌ಪವರ್‌’ ಆಗಿ ಬೆಳೆಯುತ್ತಿರುವುದಕ್ಕೆ ಮತ್ತೊಂದು ಉದಾಹರಣೆ.

ಒಂದೊಮ್ಮೆ ದುರ್ಬಲವಾಗಿದ್ದ ಚೀನಾವನ್ನು ಮತ್ತೆ ವಿಶ್ವದ ಮುಂಚೂಣಿ ಸ್ಥಾನದಲ್ಲಿ ಪ್ರತಿಷ್ಠಾಪಿಸಲು ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರ ಕಾರ್ಯತಂತ್ರದ ಭಾಗವಾಗಿ ಈ ಘರ್ಷಣೆಗಳು ಕಂಡುಬರುತ್ತಿವೆ. ‘ಅಮೆರಿಕ ಫಸ್ಟ್‌’ ನೀತಿಯೊಂದಿಗೆ ಮಿತ್ರ ರಾಷ್ಟ್ರಗಳನ್ನೇ ದೂರ ಸರಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು, ಚೀನಾದೊಂದಿಗೆ ವಾಣಿಜ್ಯ ಸಮರಕ್ಕೂ ಇಳಿದಿರುವ ಈ ಸನ್ನಿವೇಶದಲ್ಲಿ ಘರ್ಷಣೆಗಳು ತೀವ್ರ ಸ್ವರೂಪ ಪಡೆಯುತ್ತಿವೆ.

‘ಚೀನಾ ಮತ್ತೆ ಹೊಳೆಯುವಂತಹ ದಿನಗಳು ಬರುತ್ತಿವೆ’ ಎನ್ನುತ್ತಾರೆ ಲಂಡನ್ನಿನ ಓರಿಯಂಟಲ್‌ ಅಂಡ್‌ ಆಫ್ರಿಕನ್‌ ಸ್ಟಡೀಸ್‌ ಸ್ಕೂಲ್‌ನ ಚೀನಾ ವಿಭಾಗದ ನಿರ್ದೇಶಕ ಸ್ಟೀವ್‌ ತ್ಸಾಂಗ್‌. ‘ಇದರರ್ಥ ಖಡ್ಗವನ್ನು ಝಳಪಿಸಲು ಜಿನ್‌ಪಿಂಗ್‌ ನೀಡಿರುವ ಕರೆಯನ್ನು ಪೂರೈಸುವುದೇ ಆಗಿದೆ’ ಎಂದು ತ್ಸಾಂಗ್‌ ಹೇಳುತ್ತಾರೆ.

ಹಿಮಾಲಯದ ಕಣಿವೆಯಲ್ಲಿ ಚೀನಾ, ಭಾರತೀಯ ಸೈನಿಕರೊಂದಿಗೆ ಹಿಂಸಾತ್ಮಕವಾದ ಸಂಘರ್ಷ ನಡೆಸಿದೆ. ಕಳೆದ ತಿಂಗಳು ನಡೆದ ಈ ಸಂಘರ್ಷದಲ್ಲಿ ಭಾರತದ 20 ಸೈನಿಕರು ಮೃತಪಟ್ಟಿದ್ದರು. ಘಟನೆ ಕುರಿತಂತೆ ಎರಡೂ ದೇಶಗಳು ಪರಸ್ಪರ ಆರೋಪ ಮಾಡುತ್ತಿದ್ದು, ರಾಜತಾಂತ್ರಿಕ ಸಂಬಂಧ ಸಹ ಕುಸಿಯುತ್ತಿದೆ.

ದಕ್ಷಿಣ ಚೀನಾ ಸಮುದ್ರದಲ್ಲಿ ಕೃತಕ ದ್ವೀಪಗಳನ್ನು ಸೃಷ್ಟಿಸುತ್ತಾ, ಅಲ್ಲಿ ಮಿಲಿಟರಿ ನೆಲೆಗಳನ್ನು ಸ್ಥಾಪಿಸುತ್ತಿರುವುದು ಚೀನಾ ಇತ್ತೀಚಿನ ವರ್ಷಗಳಲ್ಲಿ ತೋರಿದ ಹೊಸ ವರಸೆ. ಚೀನಾದ ನೌಕಾಪಡೆ ಇದೇ ವಾರ ಪಾರೆಸೆಲ್ಸ್‌ ದ್ವೀಪಸಮೂಹದಲ್ಲಿ ಮಿಲಿಟರಿ ಕವಾಯತು ನಡೆಸಿದೆ. ವಿಯಟ್ನಾಂ ಮತ್ತು ತೈವಾನ್‌ ದೇಶಗಳು, ಈ ದ್ವೀಪ ಸಮೂಹವು ತಮ್ಮ ಸರಹದ್ದಿನಲ್ಲಿದೆ ಎಂದು ವಾದಿಸುತ್ತಿವೆ.

‘ಗುರುವಾರ ನಡೆಸಲಾದ ಮಿಲಿಟರಿ ಕವಾಯತು ಏಷ್ಯಾ ವಲಯದ ಪರಿಸ್ಥಿತಿಯನ್ನು ಇನ್ನಷ್ಟು ಅಸ್ಥಿರಗೊಳಿಸಲಿದೆ’ ಎಂದು ಅಮೆರಿಕ ಸೇನೆ ಧ್ವನಿ ಎತ್ತಿದೆ. ವಿಯಟ್ನಾಂ ಅಂತೂ ಚೀನಾ ವಿರುದ್ಧ ರಾಜತಾಂತ್ರಿಕ ಪ್ರತಿಭಟನೆಯನ್ನೂ ದಾಖಲಿಸಿದೆ.

ಅತ್ತ ಪೂರ್ವ ಚೀನಾ ಸಮುದ್ರದಲ್ಲೂ ವಿವಾದದ ಸುಳಿಗಳು ಎದ್ದಿವೆ. ಚೀನಾದ ಬಾಂಬರ್‌ಗಳು ಅಲ್ಲಿನ ನಿರ್ಜನ ದ್ವೀಪಗಳಲ್ಲಿ ಹಾರಾಟ ನಡೆಸುತ್ತಿವೆ ಎಂದು ಜಪಾನ್‌ ದೂರಿದೆ. ಆ ದ್ವೀಪಗಳ ಮೇಲೆ ಎರಡೂ ದೇಶಗಳು ಹಕ್ಕು ಸ್ಥಾಪನೆಗಾಗಿ ಜಿದ್ದಿಗೆ ಬಿದ್ದಿವೆ.

ಪಶ್ಚಿಮದ ದೇಶಗಳೊಂದಿಗೆ ಚೀನಾದ ಸಂಬಂಧ ಕುಸಿಯುತ್ತಿದೆ. ಹೀಗಿದ್ದೂ ಆ ದೇಶ ಕಠಿಣ ರಾಜತಾಂತ್ರಿಕ ತಂತ್ರಗಳನ್ನೇ ಅನುಸರಿಸುತ್ತಿದೆ. ಕೊರೊನಾ ಸೋಂಕಿನ ಕಾರಣದಿಂದ ಆರಂಭದಲ್ಲಿ ಚೀನಾ ರಾಜತಾಂತ್ರಿಕವಾಗಿ ಮೂಲೆಗೆ ತಳ್ಳಲ್ಪಟ್ಟಂತೆ ತೋರಿತ್ತು. ತನ್ನ ದೇಶದ ವುಹಾನ್‌ನಲ್ಲಿ ಈ ಸೋಂಕು ಮೊದಲ ಬಾರಿಗೆ ಕಾಣಿಸಿಕೊಂಡಿದ್ದರಿಂದ ಎದುರಾದ ಆಪಾದನೆಗಳ ವಿರುದ್ಧ ಅದು ಹೋರಾಟವನ್ನೂ ನಡೆಸಬೇಕಾಯಿತು.

ದಿನಗಳು ಕಳೆದಂತೆ ಪಶ್ಚಿಮದ ದೇಶಗಳು ಸೋಂಕನ್ನು ನಿಯಂತ್ರಿಸುವಲ್ಲಿ ವಿಫಲವಾಗಿ, ಅದರ ವಿರುದ್ಧ ಹೋರಾಟ ನಡೆಸುವಲ್ಲಿಯೇ ಹೈರಾಣಾದವು. ಆ ವೇಳೆಗೆ ರಕ್ಷಣಾತ್ಮಕ ‘ಆಟ’ ಆರಂಭಿಸಿದ ಚೀನಾ, ಆಸ್ಟ್ರೇಲಿಯಾವನ್ನು ತನ್ನ ಆಕ್ರೋಶದ ಮುಖ್ಯ ಗುರಿಯನ್ನಾಗಿಸಿಕೊಂಡಿತು.

ಸೋಂಕಿನ ಮೂಲದ ಕುರಿತು ತನಿಖೆ ನಡೆಸುವಂತೆ ಅಮೆರಿಕದ ಬೆಂಬಲದೊಂದಿಗೆ ಆಸ್ಟ್ರೇಲಿಯಾವು ಪಟ್ಟು ಹಿಡಿದಿದ್ದುದು, ತನ್ನ ವಿಶ್ವಾಸಾರ್ಹತೆಗೆ ಕುಂದು ತರುವ ಪ್ರಯತ್ನವಾಗಿ ಬೀಜಿಂಗ್‌ಗೆ ಗೋಚರಿಸಿತು. ಪ್ರತಿಯಾಗಿ, ಆಸ್ಟ್ರೇಲಿಯಾದ ಸರಕುಗಳ ಮೇಲೆ ಚೀನಾ ವ್ಯಾಪಾರ ನಿರ್ಬಂಧಗಳನ್ನು ವಿಧಿಸಿತು.

ಕೆನಡಾದ ಇಬ್ಬರು ಪ್ರಜೆಗಳನ್ನು ವಶಕ್ಕೆ ಪಡೆದು ಒಂದು ವರ್ಷದ ಬಳಿಕ ಅವರ ಮೇಲೆ ಗೂಢಚರ್ಯೆಯ ಆರೋಪವನ್ನು ಹೊರಿಸಿದೆ ಚೀನಾ. ತನ್ನ ದೇಶದ ಟೆಲಿಕಾಮ್‌ ದೈತ್ಯ ಹುವೈನ ಹಿರಿಯ ಅಧಿಕಾರಿಯನ್ನು ವ್ಯಾಂಕೋವರ್‌ನಲ್ಲಿ ಬಂಧಿಸಿದ್ದಕ್ಕೆ ಪ್ರತೀಕಾರವಾಗಿ ಚೀನಾ ಈ ಕ್ರಮ ಕೈಗೊಂಡಿರುವುದು ಮೇಲ್ನೋಟಕ್ಕೆ ಗೋಚರವಾಗುತ್ತದೆ.

ಹಾಂಗ್‌ಕಾಂಗ್‌ನಲ್ಲಿ ಮಾನವ ಹಕ್ಕುಗಳ ದಮನವಾಗುತ್ತಿದೆ ಎಂದು ಅಮೆರಿಕ, ಇಂಗ್ಲೆಂಡ್‌ ಸೇರಿದಂತೆ ಹಲವು ದೇಶಗಳು ದೂರುತ್ತಿವೆ. ಆದರೆ, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಪರಿಷತ್ತಿನಲ್ಲಿ 50 ದೇಶಗಳ ಬೆಂಬಲ ಪಡೆಯುವಲ್ಲಿ ಚೀನಾ ಯಶಸ್ವಿಯಾಗಿದೆ. ಅದರ ವಿರುದ್ಧ ನಿಂತಿದ್ದು 27 ದೇಶಗಳು ಮಾತ್ರ.

ಕಳೆದ ವರ್ಷ, ಷಿನ್‌ ಜಿಯಾಂಗ್ ಪ್ರದೇಶದಲ್ಲಿ ಮುಸ್ಲಿಮರಿಗೆ ಪ್ರವೇಶ ನಿರ್ಬಂಧಿಸಿದ್ದನ್ನು 22 ರಾಷ್ಟ್ರಗಳು ಕಟುವಾಗಿ ಟೀಕಿಸಿದ್ದವು. ತನ್ನ ‘ಭಯೋತ್ಪಾದನಾ-ವಿರೋಧಿ’ ಕಾರ್ಯತಂತ್ರವನ್ನು ಬೆಂಬಲಿಸುವ 37 ದೇಶಗಳ ಪಟ್ಟಿಯೊಂದಿಗೆ ಬೀಜಿಂಗ್ ಪ್ರತಿಕ್ರಿಯಿಸಿತ್ತು.

‘ಚೀನಿಯರು ತಮ್ಮ ಬದುಕಿಗಾಗಿ ಇತರರ ಆಶಯಗಳನ್ನು ಅವಲಂಬಿಸುವ ದಿನಗಳು ಮುಗಿದಿವೆ’ ಎನ್ನುತ್ತಾರೆ ಹಾಂಗ್‌ಕಾಂಗ್‌ ವ್ಯವಹಾರಗಳ ಉಪ ನಿರ್ದೇಶಕ ಝಾಂಗ್‌ ಷಿಯಾಮಿಂಗ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT