ಸೋಮವಾರ, ಆಗಸ್ಟ್ 2, 2021
28 °C
ವಿಶ್ವಸಂಸ್ಥೆಯ ವರದಿ

ಭಾರತದಲ್ಲಿ ಅಪೌಷ್ಟಿಕತೆ ಪ್ರಮಾಣ ಇಳಿಕೆ; ಬೊಜ್ಜು ಹೆಚ್ಚಳ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಿಶ್ವಸಂಸ್ಥೆ: 2004–2006ರಲ್ಲಿ ಶೇ 21.7ರಷ್ಟಿದ್ದ ಭಾರತದ ಅಪೌಷ್ಟಿಕ ಜನರ ಸಂಖ್ಯೆಯು 2017–19ರ ಅವಧಿಯಲ್ಲಿ ಶೇ 14ಕ್ಕೆ ಇಳಿಕೆಯಾಗಿದೆ ಎಂದು ವಿಶ್ವ ಸಂಸ್ಥೆಯ ವರದಿ ತಿಳಿಸಿದೆ.

2004–2006ರಲ್ಲಿ ದೇಶದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದ 24.94 ಕೋಟಿ ಜನರಿದ್ದರು. ಆ ಸಂಖ್ಯೆಯು 2017–19ರ ವೇಳೆಗೆ 18.92 ಕೋಟಿಗೆ ಇಳಿಕೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ (ಎಫ್‌ಎಒ), ಕೃಷಿ ಅಭಿವೃದ್ಧಿ ಕುರಿತ ಅಂತರರಾಷ್ಟ್ರೀಯ ನಿಧಿ (ಐಎಫ್‌ಎಡಿ), ಯುನಿಸೆಫ್‌, ವಿಶ್ವ ಸಂಸ್ಥೆಯ ವಿಶ್ವ ಆಹಾರ ಯೋಜನೆ (ಡಬ್ಲ್ಯುಎಫ್‌ಪಿ) ಹಾಗೂ ವಿಶ್ವ ಆರೋಗ್ಯ ಸಂಸ್ಥೆಗಳು ಜಂಟಿಯಾಗಿ ಈ ವರದಿಯನ್ನು ಸಿದ್ಧಪಡಿಸಿವೆ.

2012ರಲ್ಲಿ ದೇಶದಲ್ಲಿ ಐದುವರ್ಷದೊಳಗಿನ 6.2 ಕೋಟಿ ಮಕ್ಕಳು (ಶೇ. 47.8) ಅಪೌಷ್ಟಿಕತೆಯ ಸಮಸ್ಯೆ ಎದುರಿಸುತ್ತಿದ್ದರು. 2019ರಲ್ಲಿ ಆ ಸಂಖ್ಯೆಯು 4.03 ಕೋಟಿಗೆ (ಶೇ 34.7) ಇಳಿಕೆಯಾಗಿದೆ. 2012 ರಿಂದ 16ರ ಅವಧಿಯಲ್ಲಿ ಭಾರತೀಯ ವಯಸ್ಕರಲ್ಲಿ ಬೊಜ್ಜಿನ ಪ್ರಮಾಣ ಹೆಚ್ಚಾಗಿದೆ. 2012ರಲ್ಲಿ  ಶೇ 2.52 ಕೋಟಿ ವಯಸ್ಕರು (18 ವರ್ಷ ಮೇಲ್ಪಟ್ಟವರು) ಬೊಜ್ಜಿನ ಸಮಸ್ಯೆ ಎದುರಿಸುತ್ತಿದ್ದರೆ, 2016ರಲ್ಲಿ ಆ ಸಂಖ್ಯೆಯು 3.43 ಕೋಟಿಗೆ ಏರಿಕೆಯಾಗಿದೆ ಎಂದು ವರದಿ ಉಲ್ಲೇಖಿಸಿದೆ.

ಆದರೆ, ಜಾಗತಿಕ ಮಟ್ಟದಲ್ಲಿ ಅಪೌಷ್ಟಿಕತೆಯ ಸಮಸ್ಯೆ ಹೆಚ್ಚಾಗಿದೆ. 2018ರ ಅಂಕಿಸಂಖ್ಯೆಗೆ ಹೋಲಿಸಿದರೆ 2019ರಲ್ಲಿ ಅಪೌಷ್ಟಿಕತೆಯ ಪ್ರಮಾಣವು ಶೇ 10ರಷ್ಟು ಹೆಚ್ಚಳವಾಗಿದೆ. ಜಾಗತಿಕ ಮಟ್ಟದಲ್ಲಿ ಸುಮಾರು 69 ಕೋಟಿ ಜನರು ಅಪೌಷ್ಟಿಕತೆಯ ಸಮಸ್ಯೆ ಎದುರಿಸುತ್ತಿದ್ದಾರೆ. ಅವರಲ್ಲಿ ಹೆಚ್ಚಿನ ಸಂಖ್ಯೆಯ ಜನರು ಏಷ್ಯಾದಲ್ಲಿ ಇದ್ದಾರೆ. ಆಫ್ಯಿಕಾದಲ್ಲೂ ಈ ಸಮಸ್ಯೆ ತೀವ್ರವಾಗಿದೆ ಎಂದು ವರದಿ ತಿಳಿಸಿದೆ.‌

ಕೋವಿಡ್–19 ಸಮಸ್ಯೆಯಿಂದಾಗಿ 2020ರ ಅಂತ್ಯದ ವೇಳೆಗೆ ಹಸಿವಿನ ಸಮಸ್ಯೆಯು ಇನ್ನಷ್ಟು ತೀವ್ರಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ. ಈಗಿನ ಪರಿಸ್ಥಿತಿಯೇ ಮುಂದುವರಿದರೆ 2030ರ ವೇಳೆಗೆ ತೀವ್ರ ಹಸಿವಿನಿಂದ ಬಳಲುವ ಜಗತ್ತಿನ ಒಟ್ಟು ಜನರ ಶೇ 50ರಷ್ಟು ಮಂದಿ ಆಫ್ರಿಕಾದಲ್ಲೇ ಕಂಡುಬರಲಿದ್ದಾರೆ ಎಂದು ವರದಿ ಹೇಳಿದೆ.

ಕೋವಿಡ್‌ನಿಂದ ಉಂಟಾಗಿರುವ ಆರ್ಥಿಕ ಹಿಂಜರಿಕೆಯ ಕಾರಣದಿಂದ 2020ರ ಅಂತ್ಯದ ವೇಳೆಗೆ 13.20 ಕೋಟಿ ಜನರು ಆಹಾರದ ಸಮಸ್ಯೆ ಎದುರಿಸಲಿದ್ದಾರೆ. ಸುಮಾರು ನೂರು ಕೋಟಿ ಜನರು ಪೌಷ್ಟಿಕ ಆಹಾರದಿಂದ ವಂಚಿತರಾಗಲಿದ್ದಾರೆ ಎಂದು ವರದಿ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು