ಮಂಗಳವಾರ, ಸೆಪ್ಟೆಂಬರ್ 22, 2020
26 °C

ಲೆಬನಾನ್ ಬೇರುಟ್‌ನಲ್ಲಿ ಸ್ಫೋಟ: ಕನಿಷ್ಠ 73 ಮಂದಿ ಸಾವು, 3,700 ಜನರಿಗೆ ಗಾಯ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಸ್ಫೋಟದಲ್ಲಿ ಗಾಯಗೊಂಡಿರುವ ಮಹಿಳೆಗೆ ಚಿಕಿತ್ಸೆ ನೀಡುತ್ತಿರುವುದು

ಬೇರುಟ್‌: ಮಧ್ಯ ಪ್ರಾಚ್ಯದ ಲೆಬನಾನ್‌ನ ರಾಜಧಾನಿ ಬೇರುಟ್‌ನಲ್ಲಿ ಸಂಭವಿಸಿದ ದೊಡ್ಡ ಸ್ಫೋಟಗಳಿಂದ ಸಾವಿರಾರು ಮಂದಿ ಗಾಯಗೊಂಡಿದ್ದು, ಕನಿಷ್ಠ 74 ಮಂದಿ ಸಾವಿಗೀಡಾಗಿದ್ದಾರೆ.

ಮಂಗಳವಾರ ಸಂಭವಿಸಿರುವ ಸ್ಫೋಟವು ಇಡೀ ಬೇರುಟ್‌ ನಗರವನ್ನು ಅಲುಗಿಸಿದೆ. ಕಟ್ಟಡಗಳ ಗಾಜುಗಳು ಪುಡಿಯಾಗಿವೆ, ಸ್ಫೋಟ ಆಗಿರುವ ಸಮೀಪ ಒಂದು ಮೈಲಿ ಕಟ್ಟಡಗಳು ಕುಸಿದು ಅವಶೇಷಗಳ ಅಡಿಯಲ್ಲಿ ಹಲವು ಜನ ಸಿಲುಕಿದ್ದಾರೆ.

ಸ್ಫೋಟದ ಪರಿಣಾಮ ಕನಿಷ್ಠ 74 ಮಂದಿ ಮೃತಪಟ್ಟಿದ್ದು, 3,700 ಮಂದಿ ಗಾಯಗೊಂಡಿರುವುದಾಗಿ ಲೆಬನಾನ್‌ ಆರೋಗ್ಯ ಸಚಿವ ಹಮದ್ ಹಸ್ಸನ್‌ ಹೇಳಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವುದು ಹಾಗೂ ನಾಪತ್ತೆಯಾಗಿರುವವರ ಶೋಧ ಕಾರ್ಯ ಮುಂದುವರಿದಿದೆ.

ರಿಜ್ಕ್ ಎಂಬ ಹೆಸರಿನ ಒಂದೇ ಆಸ್ಪತ್ರೆಯಲ್ಲಿ 400ಕ್ಕೂ ಹೆಚ್ಚು ಜನ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವುದಾಗಿ ವರದಿಯಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೊಗಳಲ್ಲಿ ಸ್ಫೋಟದ ತೀವ್ರತೆಯನ್ನು ಗಮನಿಸಬಹುದಾಗಿದೆ. ಎರಡನೇ ಸ್ಫೋಟವು ನಗರವನ್ನು ಧೂಳ ಮತ್ತು ಹೊಗೆಯಿಂದ ಆವರಿಸುವಂತೆ ಮಾಡಿದೆ. ಕಾರುಗಳು ಮಗುಚಿ ಬಿದ್ದಿವೆ, ರಸ್ತೆಗಳಲ್ಲಿ ಕಟ್ಟಡಗಳ ಅವಶೇಷಗಳು ತುಂಬಿವೆ ಹಾಗೂ ಗಾಯಾಳುಗಳು ನಡೆಯುತ್ತಲೇ ಆಸ್ಪತ್ರೆಗೆ ಸೇರಬೇಕಾದ ಅನಿವಾರ್ಯತೆ ಉಂಟಾಗಿದೆ.

ಸರ್ಕಾರ ಕೆಲವು ವರ್ಷಗಳ ಹಿಂದೆ ವಶಪಡಿಸಿಕೊಂಡಿದ್ದ ಸ್ಫೋಟಕ ಸಾಮಾಗ್ರಿಗಳನ್ನು ಸಂಗ್ರಹಿಸಿ ಇಡಲಾಗಿದ್ದ ಸ್ಥಳದಲ್ಲಿ ಸ್ಫೋಟ ಸಂಭವಿಸಿದೆ ಎಂದು ಮೇಜರ್‌ ಜನರಲ್‌ ಅಬ್ಬಾಸ್‌ ಇಬ್ರಾಹಿಂ ಹೇಳಿದ್ದಾರೆ.

ಬೇರುಟ್‌ ಬಂದರು ಪ್ರದೇಶದ ಸಂಗ್ರಹಗಾರದಲ್ಲಿ ಕಾಣಿಸಿಕೊಂಡ ಬೆಂಕಿಯಿಂದಾಗಿ ಸಂಜೆ 6 ಗಂಟೆಗೆ ಮೊದಲ ಸ್ಫೋಟ ಸಂಭವಿಸಿರುವುದಾಗಿ ಲೆಬನನ್‌ ರಾಷ್ಟ್ರೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು