ಬುಧವಾರ, ಆಗಸ್ಟ್ 4, 2021
21 °C
ಕೋವಿಡ್‌: 200ಕ್ಕೂ ಅಧಿಕ ವಿಜ್ಞಾನಿಗಳ ವಾದಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಸಮ್ಮತಿ

ಒಳ ಆವರಣದ ಗಾಳಿ ಮೂಲಕ ಕೊರೊನಾ ವೈರಸ್ ಸೋಂಕು ಪ್ರಸರಣ

ಎಪಿ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: ಸೋಂಕಿತರು ಇರುವಂಥ ಪ್ರದೇಶ ಅಥವಾ ಕಟ್ಟಡಗಳ ಒಳ ಆವರಣದಲ್ಲಿ ಗಾಳಿ ಮೂಲಕ ಕೋವಿಡ್‌–19 ಪ್ರಸರಣ ಸಾಧ್ಯ ಎಂದು ವಿಶ್ವದ 200ಕ್ಕೂ ಅಧಿಕ ವಿಜ್ಞಾನಿಗಳು ಕೈಗೊಂಡಿದ್ದ ಸಂಶೋಧನೆಗಳು ಪ್ರತಿಪಾದಿಸಿದ್ದು, ವಿಶ್ವ ಆರೋಗ್ಯ ಸಂಸ್ಥೆ ಈ ವಾದವನ್ನು ಒಪ್ಪಿಕೊಂಡಿದೆ.

ಸೋಂಕು ಪ್ರಸರಣ ತಡೆಗಟ್ಟುವ ಸಂಬಂಧ ಮತ್ತಷ್ಟು ಕಠಿಣ ಕ್ರಮಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ವಿಜ್ಞಾನಿಗಳು, ಸಂಶೋಧಕರು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಇತರ ಅಂತರರಾಷ್ಟ್ರೀಯ ಸಂಘಟನೆಗಳನ್ನು ಒತ್ತಾಯಿಸಿದ್ದಾರೆ.

ಅಮೆರಿಕ ಮತ್ತು ಆಸ್ಟ್ರೇಲಿಯಾದ ಇಬ್ಬರು ವಿಜ್ಞಾನಿಗಳು ಈ ಸಂಬಂಧ ವೈಜ್ಞಾನಿಕ ನಿಯತಕಾಲಿಕವೊಂದರಲ್ಲಿ ಪ್ರಕಟಿಸಿರುವ ಅಧ್ಯಯನ ವರದಿಯು, ನಿರ್ದಿಷ್ಟ ಸ್ಥಳಗಳಲ್ಲಿ ಗಾಳಿ ಮೂಲಕ ಸೋಂಕು ಪ್ರಸರಣವಾಗುವುದರ ಮೇಲೆ ಬೆಳಕು ಚೆಲ್ಲಿದೆ.

‘ಸೋಂಕಿತರು ಉಸಿರು ಬಿಟ್ಟಾಗ, ಮಾತನಾಡುವಾಗ ಮತ್ತು ಕೆಮ್ಮಿದಾಗ ವೈರಸ್‌ಗಳು ಗಾಳಿಯಲ್ಲಿ ಸೇರಿಕೊಳ್ಳುತ್ತವೆ. ಕೊರೊನಾ ವೈರಸ್‌ಗಳ ಪ್ರಸರಣಕ್ಕೆ, ಇಂಥ ಸಂದರ್ಭದಲ್ಲಿ ಬಾಯಿಯಿಂದ ಹೊರಬೀಳುವ ಸಣ್ಣ ಹನಿಗಳೇ ಸಾಕು’ ಎಂದು ವಿಜ್ಞಾನಿಗಳು ಈ ವರದಿಯಲ್ಲಿ ವಿವರಿಸಿದ್ದಾರೆ. 

ಸಂಶೋಧನೆಯ ವಿವರಗಳು ಹೊರಬಿದ್ದ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆ ಸಹ ತನ್ನ ನಿಲುವನ್ನು ಬದಲಾಯಿಸಿದೆ. ‘ಜನಜಂಗುಳಿ ಇರುವ ಪ್ರದೇಶ, ಸಾಕಷ್ಟು ಗಾಳಿಯಾಡದ ಪ್ರದೇಶ, ಫಿಟ್‌ನೆಸ್‌ ಕೇಂದ್ರಗಳು, ರೆಸ್ಟೋರೆಂಟ್‌ಗಳಲ್ಲಿ ಕೊರೊನಾ ವೈರಸ್‌ ಪ್ರಸರಣ ಸಾಧ್ಯ ಎಂದು ಇತ್ತೀಚಿನ ಅಧ್ಯಯನಗಳು ದೃಢಪಡಿಸುತ್ತವೆ’ ಎಂದು ಸಂಸ್ಥೆ ಹೇಳಿದೆ. 

ಇದನ್ನೂ ಓದಿ: 'ಗಾಳಿಯಿಂದ ಹರಡುತ್ತಿದೆ ಕೊರೊನಾ ಸೋಂಕು': ಮಾರ್ಗಸೂಚಿ ಬದಲಿಸಲು ವಿಜ್ಞಾನಿಗಳ ಮನವಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು