ಗುರುವಾರ , ಮೇ 28, 2020
27 °C
ನಾಲ್ವರ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯ

ಸುಳ್ವಾಡಿ ದುರಂತ: ಆರೋಪಿಗಳು ಇಂದು ಕೋರ್ಟ್‌ಗೆ ಹಾಜರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಳ್ಳೇಗಾಲ: ಹನೂರು ತಾಲ್ಲೂಕಿನ ಸುಳ್ವಾಡಿ ಮಾರಮ್ಮ ದೇವಾಲಯದ ವಿಷ ಪ್ರಸಾದ ಪ್ರಕರಣದ ನಾಲ್ವರು ಆರೋಪಿಗಳಾದ ಇಮ್ಮಡಿ ಮಹಾದೇವಸ್ವಾಮಿ, ಅಂಬಿಕಾ, ಮಾದೇಶ ಮತ್ತು ದೊಡ್ಡಯ್ಯ ಅವರ ನ್ಯಾಯಾಂಗ ಬಂಧನದ ಅವಧಿ ಗುರುವಾರ ಕೊನೆಗೊಳ್ಳಲಿದೆ.

ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ ಇರುವ ನಾಲ್ವರನ್ನು ಪೊಲೀಸರು ಗುರುವಾರ ಕೊಳ್ಳೇಗಾಲದ ಪ್ರಧಾನ ಸಿವಿಲ್‌ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

‘ಬೆಳಿಗ್ಗೆ 11ರ ನಂತರ ಆರೋಪಿಗಳನ್ನು ಹಾಜರು ಪಡಿಸಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಧರ್ಮೇಂದರ್‌ ಕುಮಾರ್‌ ಮೀನಾ ತಿಳಿಸಿದ್ದಾರೆ.

ಡಿ.14ರಂದು ನಡೆದಿದ್ದ ದುರಂತ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ನಾಲ್ವರು ಆರೋಪಿಗಳ ವಿಚಾರಣೆ ಹಾಗೂ ಸ್ಥಳ ಮಹಜರು ನಡೆಸಿದ ನಂತರ ಪೊಲೀಸರು ಡಿ.21ರ ತಡರಾತ್ರಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದರು. ನ್ಯಾಯಾಧೀಶರು ನಾಲ್ವರನ್ನೂ ಜನವರಿ 3ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

ವಕೀಲರು ವಕಾಲತ್ತು ವಹಿಸುತ್ತಾರಾ?: ಆರೋಪಿಗಳಿಗೆ ಜಾಮೀನು ಕೊಡಿಸುವ ಪ್ರಯತ್ನ ತೆರೆಮರೆಯಲ್ಲಿ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. 

ಆರೋಪಿಗಳ ಪರ ಯಾರೊಬ್ಬರೂ ವಕಾಲತ್ತು ವಹಿಸುವುದಿಲ್ಲ ಎಂದು ಜಿಲ್ಲಾ ವಕೀಲರ ಸಂಘ ಈಗಾಗಲೇ ಘೋಷಿಸಿದೆ. ಮೈಸೂರಿನ ವಕೀಲ ಮಹದೇವಸ್ವಾಮಿ ಎಂಬುವವರು ಆರೋಪಿಗಳ ಪರ ವಾದ ಮಂಡಲು ಈ ಮುಂದೆ ಬಂದಿದ್ದರು. ಡಿ.27ರಂದು ನ್ಯಾಯಾಲಯಕ್ಕೂ ಭೇಟಿ ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನೂ ಕಲೆ ಹಾಕಿದ್ದರು. ಆದರೆ, ಈ ಪ್ರಕರಣದಲ್ಲಿ ವಕಾಲತ್ತು ವಹಿಸುವುದಿಲ್ಲ ಎಂದು ಎರಡು ದಿನಗಳ ಹಿಂದೆ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಹಾಗಾಗಿ, ಆರೋಪಿಗಳ ಪರವಾಗಿ ಬೇರೆ ಯಾರಾದರೂ ಹಾಜರಾಗಲಿದ್ದಾರೆಯೇ ಎಂಬ ಪ್ರಶ್ನೆ ಎದ್ದಿದೆ. 

ಸಾರ್ವಜನಿಕ ವಲಯದಲ್ಲಿ ಈ ಬಗ್ಗೆ ಚರ್ಚೆಯೂ ನಡೆಯುತ್ತಿದೆ. ಮೈಸೂರಿನಿಂದ ವಕೀಲರು ಬರದಿದ್ದರೆ, ಬೆಂಗಳೂರಿನಿಂದ ಬರುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು