ಮಂಗಳವಾರ, 28 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭೆಯಿದ್ದರೂ ಇಲ್ಲ ಟೂರ್ನಿಯಲ್ಲಿ ಸ್ಥಾನ

ರಾಷ್ಟ್ರೀಯ ಓಪನ್‌ ಸೀನಿಯರ್‌ ಅಥ್ಲೆಟಿಕ್ಸ್‌: ಹ್ಯಾಮರ್‌ ಥ್ರೋ ಸ್ಪರ್ಧಿಗಳಿಗಿಲ್ಲ ಅವಕಾಶ
Published 3 ಅಕ್ಟೋಬರ್ 2023, 18:07 IST
Last Updated 3 ಅಕ್ಟೋಬರ್ 2023, 18:07 IST
ಅಕ್ಷರ ಗಾತ್ರ

ಕೊಪ್ಪಳ: ಕಳೆದ ತಿಂಗಳು ಬೆಂಗಳೂರಿನಲ್ಲಿ ನಡೆದ ರಾಜ್ಯ ಓಪನ್‌ ಸೀನಿಯರ್‌ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನ ಹ್ಯಾಮರ್ ಥ್ರೋ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದರೂ ಕೊಪ್ಪಳದ ಅಥ್ಲೀಟ್‌ ಸಚಿನ್ ಅವರಿಗೆ ರಾಷ್ಟ್ರೀಯ ಮಟ್ಟದ ಟೂರ್ನಿಯಲ್ಲಿ ಪಾಲ್ಗೊಳ್ಳಲು ಅವಕಾಶವಿಲ್ಲ. ತಮ್ಮಲ್ಲಿ ಪ್ರತಿಭೆಯಿದ್ದರೂ ಸಾಬೀತು ಮಾಡಲು ರಾಷ್ಟ್ರೀಯ ಮಟ್ಟದಲ್ಲಿ ವೇದಿಕೆ ಸಿಗದೇ ಅವರು ಪರದಾಡುವಂತಾಗಿದೆ.

ರಾಜ್ಯ ಓಪನ್‌ ಅಥ್ಲೆಟಿಕ್ಸ್‌ನ ಹ್ಯಾಮರ್‌ ಥ್ರೋ ಸ್ಪರ್ಧೆಯಲ್ಲಿ ಸಚಿನ್‌ 56.24 ಮೀಟರ್‌ ಎಸೆದು ಅಗ್ರಸ್ಥಾನ ಸಂಪಾದಿಸಿದ್ದರು. ಈ ವಿಭಾಗದಲ್ಲಿ 52 ಮೀ. ಕನಿಷ್ಠ ಅರ್ಹತಾ ಗುರಿ ನಿಗದಿ ಮಾಡಲಾಗಿತ್ತು. ಈ ಗುರಿ ಮೀರಿ ಸಾಧನೆ ಮಾಡಿದರೂ ಸಚಿನ್‌ಗೆ ರಾಜ್ಯ ತಂಡವನ್ನು ಪ್ರತಿನಿಧಿಸುವ ಅವಕಾಶ ಕೊಟ್ಟಿಲ್ಲ. ರಾಜ್ಯ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಕೆಲ ಅಥ್ಲೀಟ್‌ಗಳನ್ನು ಇದೇ ತಿಂಗಳು 11ರಿಂದ 14ರ ವರೆಗೆ ಜೆಮ್‌ಷೆಡ್‌ಪುರದಲ್ಲಿ ನಡೆಯಲಿರುವ 62ನೇ ರಾಷ್ಟ್ರೀಯ ಓಪನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ಗೆ ಆಯ್ಕೆ ಮಾಡಲಾಗಿದೆ.

ಈ ಚಾಂಪಿಯನ್‌ಷಿಪ್‌ ಬಗ್ಗೆ ಸೆಪ್ಟೆಂಬರ್‌ 1ರಂದು ಭಾರತ ಅಥ್ಲೆಟಿಕ್‌ ಫೆಡರೇಷನ್‌ ಹೊರಡಿಸಿರುವ ಸುತ್ತೋಲೆಯಲ್ಲಿ ಕ್ರೀಡೆಯ ಪ್ರತಿ ವಿಭಾಗದಿಂದ ಗರಿಷ್ಠ ಮೂವರು ಕ್ರೀಡಾಪಟುಗಳನ್ನು ರಾಷ್ಟ್ರೀಯ ಟೂರ್ನಿಗೆ ಕಳುಹಿಸಬಹುದು ಎಂದು ಹೇಳಿದೆ. ಆದರೂ ರಾಜ್ಯ ಅಥ್ಲೆಟಿಕ್‌ ಸಂಸ್ಥೆ ಹ್ಯಾಮರ್‌ ಥ್ರೋ ಹಾಗೂ ಡೆಕಾಥ್ಲಾನ್‌ ತಂಡಗಳನ್ನು ಕಳುಹಿಸಿಲ್ಲ.

ಕ್ರೀಡೆಯ ಕನಿಷ್ಠ ಮೂಲ ಸೌಲಭ್ಯಗಳೂ ಇಲ್ಲದ ಕೊಪ್ಪಳದಂಥ ಊರಿನಲ್ಲಿ ದಾನಿಗಳ ನೆರವಿನಿಂದ ಆರ್ಥಿಕ ನೆರವು ಪಡೆದು ಸಚಿನ್‌ ಹಗಲಿರುಳು ಅಭ್ಯಾಸ ಮಾಡುತ್ತಿದ್ದಾರೆ. ಹ್ಯಾಮರ್‌ ಥ್ರೋ ಸ್ಪರ್ಧೆಯಲ್ಲಿ ಮೇಲಿಂದ ಮೇಲೆ ಪದಕಗಳನ್ನು ಗೆಲ್ಲುತ್ತಿದ್ದಾರೆ. 2021ರಲ್ಲಿ ದಕ್ಷಿಣ ವಲಯದ ರಾಷ್ಟ್ರೀಯ ಜೂನಿಯರ್‌ ಟೂರ್ನಿಯಲ್ಲಿ ಚಿನ್ನದ ಪದಕವನ್ನೂ ಜಯಿಸಿದ್ದರು.

ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ರಾಜ್ಯ ಜೂನಿಯರ್‌, ಯೂತ್‌ ಅಥ್ಲೆಟಿಕ್ಸ್‌ನಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನ ತಮ್ಮದಾಗಿಸಿಕೊಂಡಿದ್ದರು. 23 ವರ್ಷದ ಒಳಗಿನವರ ವಿಭಾಗದಲ್ಲಿ ಅವರು 55.33 ಮೀಟರ್‌ ಎಸೆದು 2022ರಲ್ಲಿ ಆಳ್ವಾಸ್‌ ಸಂಸ್ಥೆಯ ವಿದ್ಯಾರ್ಥಿ ರಾಹುಲ್‌ ಬಿ.ರಾಮ್‌ (52.55 ಮೀ.) ನಿರ್ಮಿಸಿದ್ದ ದಾಖಲೆ ಅಳಿಸಿ ಹಾಕಿದ್ದರು.

ರಾಷ್ಟ್ರೀಯ ಓಪನ್‌ ಅಥ್ಲೆಟಿಕ್ಸ್‌ನ ಡೆಕಾಥ್ಲಾನ್‌ನಲ್ಲಿ ಕನಿಷ್ಠ ಅರ್ಹತಾ ಅಂಕ 5,000 ಪಾಯಿಂಟ್ಸ್‌ ಇತ್ತು. ಯಾದಗಿರಿಯ ಲೋಕೇಶ್‌ ರಾಠೋಡ್‌ ಇದೇ ಸ್ಪರ್ಧೆಯಲ್ಲಿ 6,162 ಅಂಕಗಳನ್ನು ಪಡೆದು ಅಗ್ರಸ್ಥಾನ ಸಂಪಾದಿಸಿದರೂ ರಾಷ್ಟ್ರೀಯ ಟೂರ್ನಿಗೆ ಈ ವಿಭಾಗದಿಂದ ಯಾವ ಕ್ರೀಡಾಪಟುಗಳನ್ನೂ ಆಯ್ಕೆ ಮಾಡಿಲ್ಲ. ಲೋಕೇಶ್ ಕಳೆದ ವರ್ಷ ಬೆಂಗಳೂರಿನಲ್ಲಿಯೇ ನಡೆದಿದ್ದ ರಾಷ್ಟ್ರೀಯ ಸೀನಿಯರ್‌ ಓಪನ್‌ ಟೂರ್ನಿಯಲ್ಲಿ ಎಂಟನೇ ಸ್ಥಾನ ಗಳಿಸಿದ್ದರು.

‘ಕೊಪ್ಪಳದಂಥ ಸಣ್ಣ ಊರುಗಳಲ್ಲಿ ಅಭ್ಯಾಸ ಮಾಡುವ ಕ್ರೀಡಾಪಟುಗಳಿಗೆ ರಾಷ್ಟ್ರೀಯ ಟೂರ್ನಿಯಲ್ಲಿ ಆಡುವುದೇ ದೊಡ್ಡ ಭಾಗ್ಯ. ರಾಜ್ಯ ಸೀನಿಯರ್‌ ಓಪನ್‌ ಅಥ್ಲೆಟಿಕ್ಸ್‌ನಲ್ಲಿ ಮೊದಲ ಸ್ಥಾನ ಗಳಿಸಿದರೂ ರಾಜ್ಯ ಅಥ್ಲೆಟಿಕ್ಸ್‌ ಸಂಸ್ಥೆ ಹ್ಯಾಮರ್‌ ಥ್ರೋ ತಂಡವನ್ನೇ ಕಳುಹಿಸಿಲ್ಲ. ರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಅವಕಾಶವೇ ಸಿಗದಿದ್ದರೆ ನಮ್ಮ ಸಾಮರ್ಥ್ಯ ತೋರಿಸುವುದಾದರೂ ಹೇಗೆ’ ಎಂದು ಸಚಿನ್‌ ಪ್ರಶ್ನಿಸಿದರು.

[object Object]
ಲೋಕೇಶ್‌ ರಾಠೋಡ್‌

‘ಆಯ್ಕೆ ಸಮಿತಿ ತೀರ್ಮಾನದಂತೆ ತಂಡ’

ಕಳೆದ ವರ್ಷದ ರಾಷ್ಟ್ರೀಯ ಸೀನಿಯರ್‌ ಓಪನ್‌ ಅಥ್ಲೆಟಿಕ್ಸ್‌ನಲ್ಲಿ ಮೊದಲ ಏಳು ಸ್ಥಾನಗಳ ಒಳಗಿನ ಕ್ರೀಡಾಪಟು ಮಾಡಿದ ಸಾಧನೆಯಷ್ಟನ್ನು ರಾಜ್ಯದ ಕ್ರೀಡಾಪಟು ಈ ಬಾರಿ ರಾಜ್ಯ ಓಪನ್‌ ಸೀನಿಯರ್‌ ಟೂರ್ನಿಯಲ್ಲಿ ಮಾಡಿದ್ದರೆ ಅವರನ್ನು ತಂಡಕ್ಕೆ ಪರಿಗಣಿಸಲಾಗಿದೆ. ಅದಕ್ಕಿಂತಲೂ ಕಡಿಮೆ ಸಾಧನೆ ಮಾಡಿ ರಾಜ್ಯ ಟೂರ್ನಿಯಲ್ಲಿ ಅಗ್ರಸ್ಥಾನ ಪಡೆದರೂ ಆಯ್ಕೆ ಮಾಡಿಲ್ಲ. ಆಯ್ಕೆ ಸಮಿತಿ ಸೂಚಿಸಿದ ಹೆಸರುಗಳನ್ನು ರಾಷ್ಟ್ರೀಯ ಟೂರ್ನಿಗೆ ಕಳುಹಿಸಲಾಗುತ್ತಿದೆ ಎಂದು ರಾಜ್ಯ ಅಥ್ಲೆಟಿಕ್‌ ಸಂಸ್ಥೆ ಗೌರವ ಕಾರ್ಯದರ್ಶಿ ಎ. ರಾಜವೇಲು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT